ಸೀಮೆ ಎಣ್ಣೆ ನೀಡಲಾಗದಿದ್ರೆ ತೊಲಗಿ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

By Kannadaprabha News  |  First Published Dec 27, 2022, 2:00 PM IST

ಕಳೆದ ನಾಲ್ಕು ತಿಂಗಳಿಂದ ಸೀಮೆಎಣ್ಣೆ ಪೂರೈಸದೆ ನಿದ್ದೆ ಮಾಡುತ್ತಿದ್ದೀರಾ? ನಿಮಗೆ ಕೈಲಾಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಹರಿಹಾಯ್ದ ಸಿದ್ದರಾಮಯ್ಯ


ವಿಧಾನಸಭೆ(ಡಿ.27): ರಾಜ್ಯದಲ್ಲಿ ನಾಡದೋಣಿ ಮೂಲಕ ಮೀನು ಹಿಡಿಯುವ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಳೆದ ನಾಲ್ಕು ತಿಂಗಳಿಂದ ಸೀಮೆಎಣ್ಣೆ ಪೂರೈಸದೆ ನಿದ್ದೆ ಮಾಡುತ್ತಿದ್ದೀರಾ? ನಿಮಗೆ ಕೈಲಾಗದಿದ್ದರೆ ಅಧಿಕಾರ ಬಿಟ್ಟು ಹೋಗಿ ಎಂದು ಹರಿಹಾಯ್ದರು.

ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸುಕುಮಾರ ಶೆಟ್ಟಿಪರವಾಗಿ ಸಂಜೀವ್‌ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕೆ ಸಚಿವ ಎಸ್‌. ಅಂಗಾರ, ಕೇಂದ್ರದಿಂದ 18,618 ಲೀಟರ್‌ ಸೀಮೆಎಣ್ಣೆ ಬರಬೇಕಿತ್ತು. ಆದರೆ 3 ಸಾವಿರ ಲೀಟರ್‌ ಮಾತ್ರ ಬಂದಿದ್ದು, ಇದನ್ನು ಮೀನುಗಾರರಿಗೆ ವಿತರಿಸಲಾಗಿದೆ. ಹೆಚ್ಚುವರಿ ಸೀಮೆಎಣ್ಣೆಗಾಗಿ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ತುರ್ತುಅಗತ್ಯಕ್ಕಾಗಿ ಕೈಗಾರಿಕಾ ಬಳಕೆಯ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

Tap to resize

Latest Videos

ಎಸ್ಸಿ-ಎಸ್ಟಿ ಮೀಸಲು ಕಣ್ಣೊರೆಸೋ ತಂತ್ರವೇ?: ಸಿದ್ದರಾಮಯ್ಯ

ಇದಕ್ಕೆ ಗರಂ ಆದ ಸಿದ್ದರಾಮಯ್ಯ, ‘ಮೀನುಗಾರರಿಗೆ ಮಾಸಿಕ 300 ಲೀಟರ್‌ ಸೀಮೆ ಎಣ್ಣೆ ನೀಡಬೇಕು ಎಂಬ ನಿಯಮವಿದೆ. ನಮಗಿರುವ ಮಾಹಿತಿ ಪ್ರಕಾರ 10 ತಿಂಗಳಿಂದ ಸೀಮೆಎಣ್ಣೆ ಪೂರೈಸಿಲ್ಲ. ಸಚಿವರೇ ನಾಲ್ಕು ತಿಂಗಳಿಂದ ಸೀಮೆಎಣ್ಣೆ ಪೂರೈಸಿಲ್ಲ ಎಂದಿದ್ದಾರೆ. ನಾಲ್ಕು ತಿಂಗಳಿಂದ ಸರ್ಕಾರ ನಿದ್ದೆ ಮಾಡುತ್ತಿತ್ತಾ? ನಾಲ್ಕು ತಿಂಗಳಿಂದ ಸೀಮೆಎಣ್ಣೆ ನೀಡದಿದ್ದರೆ ಅವರ ಬದುಕು ಏನಾಗಬೇಕು? ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ನಿಮ್ಮ ಕೈಲಿ ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ’ ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಪಕ್ಷದ ಯು.ಟಿ. ಖಾದರ್‌, ಆರ್‌.ವಿ. ದೇಶಪಾಂಡೆ ಕೂಡ ದನಿಗೂಡಿಸಿದರು.

ಈ ವೇಳೆ ಎಸ್‌. ಅಂಗಾರ ಉತ್ತರವನ್ನು ಪುನರಾವರ್ತಿಸಿದರು. ಇದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಿದ್ದರಾಮಯ್ಯ ಅವರೇ ನೀವು ಎಷ್ಟು ಬಾರಿ ಕೇಳಿದರೂ ಅವರ ಬಳಿ ಅದಕ್ಕಿಂತ ಹೆಚ್ಚಿನ ಉತ್ತರ ಇಲ್ಲ. ಈ ಬಗ್ಗೆ ಬೇರೊಂದು ರೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳೆ ಚರ್ಚೆಗೆ ತೆರೆ ಎಳೆದರು.

click me!