ನಿಯಮ 69ರಡಿ ಪರಿವರ್ತಿಸಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸುವ ಮೂಲಕ ಚರ್ಚೆಗೆ ತೆರೆ ಎಳೆದ ಸಭಾಧ್ಯಕ್ಷ ಕಾಗೇರಿ
ವಿಧಾನಸಭೆ(ಡಿ.27): ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸದನದಲ್ಲಿ 69ನೆಯ ನಿಯಮದಡಿ ಚರ್ಚೆ ನಡೆಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕಲ್ಪಿಸಿದ್ದಾರೆ. ಇದರಿಂದಾಗಿ ಇನ್ನೆರಡು ದಿನಗಳಲ್ಲಿ ಶೇ.40ರಷ್ಟು ಕಮಿಷನ್ ಆರೋಪದ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಿಯಮ 60ರಡಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು’ ಎಂದು ನಿಲುವಳಿ ಸೂಚಿಸಲು ಮುಂದಾದರು.
ಆದರೆ ಸಭಾಧ್ಯಕ್ಷ ಕಾಗೇರಿ ಅವರು, ‘ವಿವಿಧ ಇಲಾಖೆಯೆಂದು ಹೇಳಿದ್ದೀರಿ. ನಿಖರವಾದ ವಿಷಯದ ಬಗ್ಗೆಯಾದರೆ ನಿಲುವಳಿ ಸೂಚಿಸಲು ಅನುಮತಿ ನೀಡಬಹುದು. ಇಲ್ಲದಿದ್ದಲ್ಲಿ ಈ ನಿಯಮದಡಿ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮ: ಮಧ್ಯವಾರ್ಷಿಕ ವರದಿ
ಈ ವೇಳೆ ಸಚಿವ ಮಾಧುಸ್ವಾಮಿ ಮಾತನಾಡಿ, ‘ನಿಯಮದ ಪ್ರಕಾರ ನೋಟಿಸ್ ನೀಡಿ. ನಾವು ಚರ್ಚೆಗೆ ಸಿದ್ಧವಿದ್ದೇವೆ. ಯಾರಾರಯರ ಕಾಲದಲ್ಲಿ ಎಷ್ಟೆಷ್ಟುಭ್ರಷ್ಟಾಚಾರವಿತ್ತು. ಎಷ್ಟೆಷ್ಟುಕಮಿಷನ್ ಇತ್ತು ಎಂಬ ಬಗ್ಗೆ ಚರ್ಚೆ ನಡೆಸಬಹುದು’ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಆಗ ಏಕೆ ಸುಮ್ಮನಿದ್ದೀರಿ?’ ಎಂದು ಮರುಪ್ರಶ್ನೆ ಮಾಡಿದರು. ಕೊನೆಗೆ ಸಭಾಧ್ಯಕ್ಷ ಕಾಗೇರಿ ಮಾತನಾಡಿ, ಈ ನೋಟಿಸ್‌ನ್ನು ನಿಯಮ 69ರಡಿ ಪರಿವರ್ತಿಸಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.