Santosh Suicide Case: ಗ್ರಾಮೀಣಾಭಿವೃದ್ಧಿ ಇಲಾಖೆಯ ಹಗರಣದ ತನಿಖೆ ಆಗಲಿ: ಆಪ್‌

By Girish GoudarFirst Published Apr 15, 2022, 8:01 AM IST
Highlights

*  ಸಂತೋಷ್‌ ಆತ್ಮಹತ್ಯೆ ಕೇಸ್‌ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಹೋರಾಟ
*  ಕೇವಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಯಾವುದೇ ಉಪಯೋಗವಿಲ್ಲ
*  ಸತ್ಯ ಹೊರಬಂದಾಗ ಮಾತ್ರ ಮೃತ ಸಂತೋಷ್‌ಗೆ ನ್ಯಾಯ ಸಿಗಲಿದೆ 
 

ಬೆಂಗಳೂರು(ಏ.14):  ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil) ಆತ್ಮಹತ್ಯೆ(Suicide) ಪ್ರಕರಣ ಸಂಬಂಧ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ನಡೆದ ಹಗರಣಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ(AAP) ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ(Prithvi Reddy) ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಕಾರಣವಾದ ಪ್ರಕರಣದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರಿಗೆ ಶಿಕ್ಷೆಯಾಗಬೇಕು. ಸಂತೋಷ್‌ ಆತ್ಮಹತ್ಯೆಗೆ ಸಾಕ್ಷಿಯಾಗಿ ಮರಣಪತ್ರ ಇದ್ದು ಹಾಗೂ ಮೃತನ ಸಂಬಂಧಿಕರು ದೂರು ನೀಡಿದ್ದರೂ ಈವರೆಗೂ ಬಂಧನವಾಗದಿರುವುದು ಖಂಡನೀಯ. ಕೇವಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಯಾವುದೇ ಉಪಯೋಗವಿಲ್ಲ. ಇಲಾಖೆಯಲ್ಲಿ ನಡೆದ ಹಗರಣಗಳ ಸಮಗ್ರ ತನಿಖೆಯಾಗಿ(Investigation) ಸತ್ಯ ಹೊರಬಂದಾಗ ಮಾತ್ರ ಮೃತ ಗುತ್ತಿಗೆದಾರ ಸಂತೋಷ್‌ಗೆ ನ್ಯಾಯ(Justice) ಸಿಗಲಿದೆ ಎಂದರು.

Latest Videos

ಸಂತೋಷ್‌ ಸೂಸೈಡ್‌ ಕೇಸ್‌: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನ

ನರೇಗಾ, ರಸ್ತೆ ಅಭಿವೃದ್ಧಿ ಸೇರಿದಂತೆ ಇಲಾಖೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿ ಬರುತ್ತಿದೆ. ನರೇಗಾ ಯೋಜನೆಯಡಿ ನಡೆದಿರುವ 2.89 ಲಕ್ಷ ಜಾಬ್‌ ಕಾರ್ಡ್‌ಗಳ ಅಸಲಿತ್ತು ಏನು ಎಂಬುದು ಬಯಲಾಗಬೇಕು. ಎಲ್ಲ ಗುತ್ತಿಗೆ ಕಾಮಗಾರಿಗಳಲ್ಲೂ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಶೇ.40ರಷ್ಟುಕಮಿಷನ್‌ ಹೋಗಿರುವ ಆರೋಪವಿದೆ. ಕೂಡಲೇ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಎಲ್ಲ ಆರೋಪಿಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಲ್ಲಿಯವರೆಗೂ ಆಮ್‌ ಆದ್ಮಿ ಪಕ್ಷ ಹೋರಾಡಲಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಪ್‌ ಪ್ರತಿಭಟನೆ

ಮೈಸೂರು(Mysuru): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವು ಪ್ರಕರಣದ ಆರೋಪಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಪಕ್ಷದ ಅಧ್ಯಕ್ಷೆ ಮಾಲವಿಕ ಗುಬ್ಬಿವಾಣಿ ನೇತೃತ್ವದಲ್ಲಿ ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಮಾಲವಿಕ, ಗುತ್ತಿಗೆದಾರ ಸಂತೋಷ್‌ ಶೇ. 40 ಕಮಿಷನ್‌(40% Commission) ಬೇಡಿಕೆ ವಿಚಾರವನ್ನು ರಾಜ್ಯ ಸರ್ಕಾರ ಮತ್ತು ಪಕ್ಷದ ಹಿರಿಯರ ಗಮನಕ್ಕೆ ಒಂದು ವರ್ಷದ ಹಿಂದೆಯೇ ತಿಳಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಗಳಿಗೆ ಬರೆದ ಪತ್ರದ ನಂತರವೂ ಕೇಂದ್ರ ಸರ್ಕಾರ ಏನೂ ಕ್ರಮ ಜರುಗಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ರೇಪ್ ಕೇಸಲ್ಲಿ ರಮೇಶ್‌ ಜಾರಕಿಹೊಳಿ, ಭ್ರಷ್ಟಾಚಾರದ ಕೇಸಲ್ಲಿ ಈಶ್ವರಪ್ಪ: 2ನೇ ಸಚಿವರ ತಲೆದಂಡ!

ಈಶ್ವರಪ್ಪ ಪ್ರಭಾವಿ ವ್ಯಕ್ತಿಯಾಗಿದ್ದು ಅವರನ್ನು ಬಂಧಿಸದಿದ್ದರೆ ಸಾಕ್ಷಾಧಾರ ನಾಶವಾಗುವ ಸಂಭವ ಇರುತ್ತದೆ. ಯಾರನ್ನು ರಕ್ಷಿಸಬೇಕೋ ಅವರ ವಿರುದ್ಧವೇ ಸರ್ಕಾರ ಶೋಷಣೆಗೆ ಮುಂದಾದರೆ ಜನರಿಗೆ ತಪ್ಪು ಸಂದೇಶ ತಲುಪಿಸುತ್ತದೆ ಹಾಗು ಇದರಿಂದ ಜನರಿಗೆ ಸರಕಾರದ ಮೇಲೆ ಭರವಸೆಯೂ ಹೋಗುತ್ತದೆ ಎಂದರು.

ಜಿಲ್ಲಾ ಮಾಧ್ಯಮ ಸಂಯೋಜಕ ಜಿ.ಆರ್‌. ವಿದ್ಯಾರಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಸಂಪತ್‌ಕುಮಾರ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೇಣುಕಾ ಪ್ರಸಾದ್‌, ಯುವ ತಂಡದ ಮುಖಂಡ ಮೊಹಮ್ಮದ್‌ ಇಸ್ಮೈಲ…, ರವಿಚಂದ್ರ, ರಂಗಯ್ಯ, ಗಿರೀಶ್‌ ಮಾಚಳ್ಳಿ ಇದ್ದರು.
 

click me!