
ಬೆಂಗಳೂರು(ಏ,15); ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಘೋಷಣೆ ಹಾಗೂ ಕಾಂಗ್ರೆಸ್ ಹೋರಾಟದಂತಹ ರಾಜಕೀಯ ಬೆಳವಣಿಗೆಗಳ ನಡುವೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಗೂ ಕಾಲ ಕೂಡಿಬಂದಿದ್ದು, ಏ.24 ಅಥವಾ 25ರಂದು ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಪುನಾರಚನೆ ದೊಡ್ಡ ಮಟ್ಟದಲ್ಲಿರುತ್ತದೆಯೋ ಅಥವಾ ಸಣ್ಣ ಬದಲಾವಣೆ ಸ್ವರೂಪ ಹೊಂದಿರುತ್ತದೆಯೋ ಎಂಬುದು ಬಿಜೆಪಿ ಕಾರ್ಯಕಾರಣಿ ಸಭೆಯ ನಂತರವೇ ಸ್ಪಷ್ಟಗೊಳ್ಳಲಿದೆ
ಇದೇ ಶನಿವಾರ ಮತ್ತು ಭಾನುವಾರ (ಏ. 16-17) ವಿಜಯನಗರ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಲಿದ್ದಾರೆ. ನಡ್ಡಾ ಅವರು ದೆಹಲಿಗೆ ಹಿಂತಿರುಗಿದ ಬಳಿಕ ಸಚಿವ ಸಂಪುಟ ಪುನಾರಚನೆ ಸ್ವರೂಪದ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.
ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇವೆ. ಗುತ್ತಿಗೆದಾರ ಸಂತೋಷ್ ಡೆತ್‌ನೋಟ್ ಪ್ರಕರಣ ಹಿನ್ನೆಲೆಯಲ್ಲಿ ಹಿರಿಯ ಸಚಿವ ಈಶ್ವರಪ್ಪ ರಾಜೀನಾಮೆಯಿಂದಾಗಿ ಸಂಪುಟದಲ್ಲಿ ಐದು ಸ್ಥಾನ ಖಾಲಿಯಾದಂತಾಗುತ್ತದೆ. ಮೂಲಗಳ ಪ್ರಕಾರ, ಸಣ್ಣ ಮಟ್ಟದ ಪುನಾರಚನೆಗೆ ಹೈಕಮಾಂಡ್ ಸೂಚಿಸಿದರೆ ಆಗ ಮುಖ್ಯಮಂತ್ರಿಯವರು ಒಬ್ಬರು ಅಥವಾ ಇಬ್ಬರು ಸಚಿವರಿಂದ ರಾಜೀನಾಮೆ ಪಡೆಯಲಿದ್ದಾರೆ. ಆಗ 6-7 ಸ್ಥಾನಗಳು ಖಾಲಿಯಾಗಲಿದೆ. ಈ 6-7 ಸ್ಥಾನಗಳಿಗೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಇದ್ದು, ಭಾರಿ ಲಾಬಿ ಸಹ ತೆರೆಮರೆಯಲ್ಲಿ ನಡೆಯುತ್ತಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್, ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನದ ಅವಕಾಶ ಸಿಗುವ ಸಾಧ್ಯತೆ ಇದೆ. ಇದಲ್ಲದೆ, ಲೈಂಗಿಕ ದೌರ್ಜನ್ಯ ಆರೋಪದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿಗೂ ಸಚಿವ ಸ್ಥಾನ ಲಭಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ. ನ್ಯಾಯಾಲಯದಿಂದ ಕ್ಲೀನ್‌ಚಿಟ್ ಲಭಿಸಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ದೊರಕುವ ಸಂಭವ ಇದೆ ಎಂದು ಹೇಳಲಾಗಿದೆ.
ಇನ್ನು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸರ್ಕಾರದ ವಿರುದ್ಧವೇ ಟೀಕಾಪ್ರಹಾರ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಸಹ ಕೇಳಿಬಂದಿದೆ. ಸಚಿವ ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು, ವರಿಷ್ಠರ ಮೂಲಕ ಲಾಬಿ ಸಹ ಮಾಡುತ್ತಿದ್ದಾರೆ. ಯಾವ ಪ್ರಮಾಣದಲ್ಲಿ ಪುನಾರಚನೆಯಾಗಲಿದೆ ಎಂಬುದರ ಮೇಲೆ ಎಷ್ಟುಹೊಸ ಮುಖಗಳಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ ಗೊತ್ತಾಗಲಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಿ ಸಚಿವ ಸಂಪುಟ ಪುನಾರಚನೆ ಕುರಿತು ಮಾತುಕತೆ ನಡೆಸಿದ್ದಾರೆ.
ಸಚಿವ ಸಂಪುಟ ಪುನಾರಚನೆಯಾದ ಬಳಿಕ ಸಚಿವರಿಗೆ ಜವಾಬ್ದಾರಿ ನೀಡಿರುವ ಹಾಲಿ ಖಾತೆಗಳಲ್ಲಿಯೂ ಭಾರೀ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಸಚಿವರಿಗೆ ನೀಡಿರುವ ಖಾತೆಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಸಂಪುಟ ಪುನಾರಚನೆ ಬಳಿಕವೇ ಖಾತೆ ಬದಲಾವಣೆ ಬಗ್ಗೆ ಸ್ಪಷ್ಟತೆ ಮೂಡಲಿದೆ ಎನ್ನಲಾಗಿದೆ.\
ಲೆಕ್ಕಾಚಾರ ಏನು?
- ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ 4 ಸ್ಥಾನಗಳು ಖಾಲಿ ಇವೆ
- ಈಶ್ವರಪ್ಪ ರಾಜೀನಾಮೆಯಿಂದ 5 ಸ್ಥಾನ ಭರ್ತಿಗೆ ಅವಕಾಶ
- ಸಣ್ಣ ಪುನಾರಚನೆಗೆ ಅನುಮತಿ ಸಿಕ್ಕರೆ ಒಂದಿಬ್ಬರ ರಾಜೀನಾಮೆ
- ಆಗ 6-7 ಮಂದಿಗೆ ಅವಕಾಶ. ಇದನ್ನು ಗಿಟ್ಟಿಸಲು ಭಾರಿ ಲಾಬಿ
- ಪುನಾರಚನೆ ವೇಳೆ ಹಾಲಿ ಸಚಿವರ ಖಾತೆ ಬದಲಾವಣೆ ಸಾಧ್ಯತೆ
- ದೊಡ್ಡ ಪ್ರಮಾಣದ ಬದಲಾವಣೆಯಾದರೆ ಹೆಚ್ಚು ಮಂದಿಗೆ ಚಾನ್ಸ್
- ನಾಳೆ, ನಾಡಿದ್ದು ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಕಾರ‍್ಯಕಾರಿಣಿ
- ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ. ನಡ್ಡಾ ಭಾಗಿ. ಸಂಪುಟ ಕುರಿತು ಚರ್ಚೆ
- ನಡ್ಡಾ ಅವರು ದೆಹಲಿಗೆ ಹಿಂತಿರುಗಿದ ಬಳಿಕ ಸಂಪುಟ ಕುರಿತು ಚಿತ್ರಣ
ರೇಸ್‌ನಲ್ಲಿ ಯಾರ್ಯಾರು?
ದತ್ತಾತ್ರೇಯ ಪಾಟೀಲ್ ರೇವೂರ್, ಪಿ.ರಾಜೀವ್, ಸಿ.ಪಿ.ಯೋಗೇಶ್ವರ್, ರಮೇಶ್ ಜಾರಕಿಹೊಳಿ, ರವಿಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯೇಂದ್ರಗೆ ಮಂತ್ರಿ ಸ್ಥಾನ ಒಲಿಯುತ್ತಾ?
ರಾಜ್ಯ ಸಚಿವ ಸಂಪುಟ ಪುನಾರಚನೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ವಿಜಯೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ