
ರಾಮನಗರ (ಏ.22): ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ ರೈ ವಿದೇಶಕ್ಕೆ ತೆರಳಿರುವುದು ಬೆಳಕಿಗೆ ಬಂದಿದೆ. ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಸಂಬಂಧ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ ರೈ ಮೇಲೂ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅನುರಾಧಾ ರೈ ಸಿಮ್ ಕಾರ್ಡ್ ವಿಳಾಸ ಆಧರಿಸಿ ನೋಟಿಸ್ ನೀಡಲು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಅವರ ಮನೆಗೆ ತೆರಳಿದ್ದರು.
ಆದರೆ, ಅನುರಾಧಾ ರೈ ಆ ಮನೆಯನ್ನು ಅಮೆರಿಕ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಅಲ್ಲದೆ, ಏಪ್ರಿಲ್ 14ರಂದೇ ಅಮೆರಿಕಗೆ ತೆರಳಿರುವುದು ಗೊತ್ತಾಗಿದೆ. ಪೊಲೀಸರು ಅನುರಾಧಾ ರೈ ಅವರ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೊನೆಯಾಗಿದೆ. ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಅನುರಾಧಾ ರೈ ಅವರ ನಡೆ ಪೊಲೀಸರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ.
ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?
ನಾಲ್ವರ ವಿರುದ್ಧ ಪ್ರಕರಣ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಏನಿದೆ?: ರಿಕ್ಕಿ ರೈ ಬೆಂಗಳೂರಿನ ಸದಾಶಿವನಗರ ಮತ್ತು ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಸದಾಶಿವನಗರದ ಮನೆಯಿಂದ ಸಂಜೆ 6ರ ಸುಮಾರಿಗೆ ಹೊರಟು ಕರಿಯಪ್ಪನದೊಡ್ಡಿ ಮನೆಗೆ ರಾತ್ರಿ 7ರ ಸುಮಾರಿಗೆ ತಲುಪಿದೆವು. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ, ರಾತ್ರಿ 11ರ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾದವು. ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ನಾನು, ರಿಕ್ಕಿ ರೈ ಹಾಗೂ ಅಂಗರಕ್ಷಕ ರಾಜ್‌ಪಾಲ್ ಮೂವರೂ ಹೊರಟೆವು. ಮನೆ ಕಾಂಪೌಂಡ್‌ನಿಂದ ಅನತಿ ದೂರಕ್ಕೆ ಬಂದಾಗ ಟಪ್ ಎಂಬ ಶಬ್ದ ಕೇಳಿತು. ಟೈಯರ್‌ನಲ್ಲಿ ಸಮಸ್ಯೆ ಇರಬೇಕೆಂದು ಕಾರು ನಿಲ್ಲಿಸಿ ಪರಿಶೀಲಿಸಿದಾಗ ಎಲ್ಲವೂ ಸರಿ ಇತ್ತು. ಬಳಿಕ ಅಲ್ಲಿಂದ ಹೊರಟು ರೈಲ್ವೆ ಕ್ರಾಸ್‌ವರೆಗೆ ಬಂದಾಗ ರಿಕ್ಕಿ ಅವರು ತನ್ನ ಪರ್ಸ್ ಮರೆತಿರುವುದಾಗಿ ಹೇಳಿದರು. ಕಾರನ್ನು ಮತ್ತೆ ಮನೆಗೆ ಹಿಂದಿರುಗಿಸಿದೆವು.
ಕರ್ನಾಟಕದಲ್ಲಿ ಗುಂಡಿನ ಮೊರೆತ: ಅಪರಾಧಿಗಳ ಸದ್ದಡಗಿಸಬಲ್ಲರೇ ಪೊಲೀಸರು?
ಮನೆಗೆ ಬಂದ ಒಂದೂವರೆ ತಾಸಿನ ಬಳಿಕ ಮಧ್ಯರಾತ್ರಿ 12.50ಕ್ಕೆ ಮತ್ತೆ ಬೆಂಗಳೂರಿಗೆ ಹೊರಟೆವು. ಕಾರು ಕಾಂಪೌಂಡ್ ದಾಟಿ ಸ್ವಲ್ಪ ಮುಂದಕ್ಕೆ ಬಂದಾಗ, ಈ ಹಿಂದೆ ಟಪ್ ಎಂದು ಶಬ್ದ ಕೇಳಿದ ಜಾಗದಲ್ಲೇ ಏಕಾಏಕಿ ಗುಂಡಿನ ದಾಳಿ ನಡೆಯಿತು. ನನಗೆ ತಪ್ಪಿದ ಗುಂಡು ಹಿಂದೆ ಕುಳಿತಿದ್ದ ರಿಕ್ಕಿ ಅವರ ಮೂಗು ಮತ್ತು ಬಲತೋಳಿಗೆ ತಗುಲಿ ರಕ್ತ ಸೋರತೊಡಗಿತು. ಕೂಡಲೇ ನಾನು ಕೆಳಕ್ಕಿಳಿದು ಕಾರಿನ ಡೋರ್ ತೆರೆದು ನೋಡಿದಾಗ, ರಿಕ್ಕಿ ಅವರ ಮೂಗು ಛಿದ್ರವಾಗಿ ಮುಖ ರಕ್ತಮಯವಾಗಿತ್ತು. ಕೂಡಲೇ ನನ್ನ ಶರ್ಟ್ ಬಿಚ್ಚಿ ರಕ್ತ ಸೋರಿಕೆಯಾಗದಂತೆ ತಡೆಯಲು ಯತ್ನಿಸಿದೆ. ಬಳಿಕ, ಅದೇ ಕಾರಿನಲ್ಲಿ ರಾಜ್‌ಪಾಲ್ ಮತ್ತು ನಾನು ರಿಕ್ಕಿ ಅವರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು. ವೈದ್ಯರ ಸೂಚನೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರಿಕ್ಕಿ ಅವರನ್ನು ಕರೆತಂದು ದಾಖಲಿಸಿದೆವು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ