
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಎಪ್ರಿಲ್ 18, 2025ರಂದು ಬೆಂಗಳೂರಿನಲ್ಲಿ ನಡೆದ ರಸ್ತೆ ಜಗಳದ ಒಂದು ಘಟನೆ ದೇಶದ ಗಮನವನ್ನು ಬೆಂಗಳೂರಿನತ್ತ ಸೆಳೆದು, ವಿವಾದಕ್ಕೂ ಕಾರಣವಾಯಿತು. ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ ಆಗಿರುವ ಶಿಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ಅವರು 20 ವರ್ಷ ವಯಸ್ಸಿನ ವಿಕಾಸ್ ಕುಮಾರ್ ಎಂಬ ಬೈಕ್ ಸವಾರನೊಡನೆ ರಸ್ತೆಯಲ್ಲಿ ಜಗಳಕ್ಕಿಳಿದರು. ಆ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ನಡೆದ ಬೆಳವಣಿಗೆಗಳು ಅನವಶ್ಯಕವಾಗಿ ಕನ್ನಡಿಗರನ್ನು ಕೆಟ್ಟವರು ಎಂದು ಬಿಂಬಿಸಿ, ಕನ್ನಡಿಗರು ಕೇವಲ 'ಡಿಆರ್‌ಡಿಒ' ಕಾರಿನ ಸ್ಟಿಕ್ಕರ್ ಕಾರಣಕ್ಕೆ ವಾಯು ಸೇನಾ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರು ಎಂದು ಕತೆ ಕಟ್ಟಿತು.
ಆದರೆ, ಈ ವಿವಾದದ ಘಟನೆ ನಡೆದು, ಪರಿಸ್ಥಿತಿ ತಿಳಿಯಾದ ನಂತರ ಇನ್ನಷ್ಟು ಸತ್ಯಗಳು ಹೊರಬಂದವು. ವಾಸ್ತವವಾಗಿ, ಈ ಘಟನೆಯಲ್ಲಿ ಜಗಳ ಯಾವುದೇ ಭಾಷೆಯ ಕಾರಣಕ್ಕಾಗಲಿ, ಗುರುತಿನ ಕಾರಣಕ್ಕಾಗಲಿ, ಅಥವಾ ಪ್ರಾದೇಶಿಕತೆಯ ವಿಚಾರಕ್ಕಾಗಲಿ ತಲೆದೋರಿರಲಿಲ್ಲ. ಬದಲಿಗೆ, ಇದೊಂದು ವೈಯಕ್ತಿಕ ಅಹಂ, ಪರಸ್ಪರ ಪ್ರಚೋದನೆ ಮತ್ತು ರೋಡ್ ರೇಜ್ ಪ್ರಕರಣ ಅಷ್ಟೇ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಸಮವಸ್ತ್ರ, ಅಥವಾ ಸಾಮಾಜಿಕ ಸ್ಥಾನಮಾನದ ವ್ಯತ್ಯಾಸವಿಲ್ಲದೆ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆಯೇ ಎಂಬ ಗಂಭೀರ ಪ್ರಶ್ನೆಯನ್ನೂ ಈ ಘಟನೆ ಹುಟ್ಟುಹಾಕಿತು.
ಸಿಯಾಚಿನ್‌ನ ರಕ್ಷಣೆಗೆ ತುಮಕೂರಿನ ಪ್ರಚಂಡರು: ಸೇನೆಗೆ ಸೇರ್ಪಡೆಯಾಗಲಿವೆ 156 ಎಚ್ಎಎಲ್ ಪ್ರಚಂಡ್ ಹೆಲಿಕಾಪ್ಟರ್‌ಗಳು
ವಾಸ್ತವವಾಗಿ ನಡೆದಿದ್ದೇನು?: ಈ ಘಟನೆ ಸಿವಿ ರಾಮನ್ ನಗರದ ಡಿಆರ್‌ಡಿಒ ಕಾಲೊನಿಯಲ್ಲಿ ಬೆಳಗಿನ ಜಾವ ನಡೆಯಿತು. ವಾಯು ಸೇನೆಯಲ್ಲಿ ಅಧಿಕಾರಿಗಳಾಗಿರುವ ದಂಪತಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದು, ಮಧುಮಿತಾ ಕಾರ್ ಚಲಾಯಿಸುತ್ತಿದ್ದರು. ಆಕೆ ಬೈಕ್ ಸವಾರ ವಿಕಾಸ್ ಕುಮಾರ್ ವೇಗವಾಗಿ ಚಲಿಸುತ್ತಿದ್ದನೆಂದು ಆತನನ್ನು ಬೈದಿದ್ದಾರೆ. ಇದರಿಂದ ಆಕ್ರೋಶಗೊಂಡ ಬೈಕ್ ಸವಾರನೂ ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಪೂರ್ವದ ಡಿಸಿಪಿ ಡಿ ದೇವರಾಜ್ ಅವರು ಎರಡೂ ಕಡೆಯೂ ವ್ಯಕ್ತಿಗಳು ತಾಳ್ಮೆ ಕಳೆದುಕೊಂಡು, ಅದರ ಪರಿಣಾಮವಾಗಿ ದೈಹಿಕ ಹಲ್ಲೆ ನಡೆಯಿತು ಎಂದಿದ್ದಾರೆ.
ಡಿಸಿಪಿ ದೇವರಾಜ್ ಅವರು ಇದೊಂದು 'ಸ್ಪಷ್ಟಚಾದ ರೋಡ್ ರೇಜ್' ಪ್ರಕರಣವಾಗಿದ್ದು, ಭಾಷಾ ಆಧಾರಿತ ಪ್ರಚೋದನೆಗೆ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ ಎಂದಿದ್ದಾರೆ. ಮಧುಮಿತಾ ಅವರು ವಿಕಾಸ್ ತನ್ನ ಪತಿಯ ಮೇಲೆ ಒಂದು ಕೀ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆದಿತ್ಯ ಬೋಸ್ ತಾನೇ ಮುಂದಾಗಿ ದೈಹಿಕ ಹಲ್ಲೆ ನಡೆಸಿದ್ದು, ಬೈಕ್ ಸವಾರನಿಗೆ ಹೊಡೆದು, ತಳ್ಳಿ, ಒದ್ದು, ಕತ್ತು ಹಿಡಿದು ದಾಳಿ ನಡೆಸಿದ್ದರು.
ವಿಂಗ್ ಕಮಾಂಡರ್ ವಿರುದ್ಧ ದಾಖಲಾದ ಎಫ್ಐಆರ್: ನಂಬಿಕಾರ್ಹ ಮೂಲಗಳ ಪ್ರಕಾರ, ವಿಂಗ್ ಕಮಾಂಡರ್ ಆದಿತ್ಯ ಬೋಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅಡಿಯಲ್ಲಿ (ಕೊಲೆ ಪ್ರಯತ್ನ) ಎಫ್ಐಆರ್ ದಾಖಲಾಗಿದೆ. ಆದರೆ, ವಿಕಾಸ್ ಕುಮಾರ್ ಯಾವುದೇ ಪ್ರತಿ ದೂರು ದಾಖಲಿಸದಿರುವುದರಿಂದ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಮೊದಲು ಹೇಳಲಾಗಿತ್ತು. ಮುಖ್ಯವಾದ ವಿಚಾರವೆಂದರೆ, ಬೋಸ್ ಡಿಆರ್‌ಡಿಒ ಸಿಬ್ಬಂದಿಯಲ್ಲ. ಅವರು ಭಾರತೀಯ ವಾಯು ಸೇನೆಯ ಸಿಬ್ಬಂದಿಯಾಗಿದ್ದಾರೆ. ಅವರ ಪತ್ನಿ ಮಧುಮಿತಾ ಮಾತ್ರವೇ ಡಿಆರ್‌ಡಿಒ ಅಧಿಕಾರಿಯಾಗಿದ್ದು, ಮಾಧ್ಯಮ ವರದಿಗಳು ಈ ಅಂಶವನ್ನು ಸರಿಯಾಗಿ ವಿವರಿಸದ್ದರಿಂದ ಒಂದಷ್ಟು ಅನುಮಾನಗಳು ಕಾಣಿಸಿಕೊಂಡವು.
ಕ್ರಮದಲ್ಲಿನ ವಿಳಂಬದ ಕುರಿತು ಪ್ರಶ್ನೆಗಳು: ಮಧುಮಿತಾ ಅವರು ದೂರು ದಾಖಲಿಸಿದ ಬೆನ್ನಲ್ಲೇ ವಿಕಾಸ್ ಕುಮಾರ್ ಅವರನ್ನು ಬಂಧಿಸಲಾಯಿತು. ಆದರೆ, ವೀಡಿಯೋ ದೃಶ್ಯಾವಳಿಗಳಲ್ಲಿ ಬೋಸ್ ಸ್ವತಃ ದಾಳಿ ನಡೆಸಿರುವುದು ಕಂಡುಬಂದಿದ್ದರೂ ಆತನ ವಿರುದ್ಧ ಯಾಕೆ ತಕ್ಷಣವೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ದೂರು ದಾಖಲಾಗುವ ಅಗತ್ಯವಿದೆ ಎಂದಿದ್ದರು. ಆದರೆ ಈಗ ಎಫ್ಐಆರ್ ದಾಖಲಾಗಿದ್ದು, ಅದು ಇನ್ನೊಂದು ಪ್ರಶ್ನೆಗೂ ಹಾದಿ ಮಾಡಿಕೊಟ್ಟಿದೆ. ಆದಿತ್ಯ ಬೋಸ್ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಸಾರ್ವಜನಿಕರು ಧ್ವನಿ ಎತ್ತುವ ತನಕ, ಮಾಧ್ಯಮಗಳು ವರದಿ ಮಾಡುವ ತನಕ ಕಾಯಬೇಕಾಯಿತು? ಈ ಘಟನೆ ನಡೆದ ತಕ್ಷಣವೇ ಬೋಸ್ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣಕ್ಕೆ ಕೋಲ್ಕತ್ತಾಗೆ ತೆರಳಿದ್ದಾರೆ ಎನ್ನಲಾಗಿದೆ. ಅವರು ಬೆಂಗಳೂರಿನಲ್ಲಿ ಇಲ್ಲದಿರುವುದರಿಂದ ಅವರನ್ನು ಪ್ರಶ್ನಿಸುವುದರಲ್ಲಿ ವಿಳಂಬ ಉಂಟಾದರೂ, ಅವರು ಮಾಡಿದ ತಪ್ಪಿಗೆ ಜವಾಬ್ದಾರರನ್ನಾಗಿಸುವುದು ವಿಳಂಬವಾಗಬಾರದಿತ್ತು.
ಆರೋಪವನ್ನು ರೂಪಿಸುವಲ್ಲಿ ಮಧುಮಿತಾ ಪಾತ್ರ: ವಿಕಾಸ್ ಕುಮಾರ್ ಜೊತೆಗಿನ ಜಗಳದಲ್ಲಿ ಮಾತ್ರವಲ್ಲದೆ, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿಯೂ ಆದಿತ್ಯ ಬೋಸ್ ಪತ್ನಿ ಮಧುಮಿತಾ ಮುಖ್ಯ ಪಾತ್ರ ವಹಿಸಿದ್ದರು. ಅವರು ಮೊದಲು ಬೈಕ್ ಸವಾರನತ್ತ ಕೂಗಾಡಿ, ಕೈ ತೋರಿಸಿ ಆತನಿಗೆ ಬೈದಿದ್ದು, ಬಳಿಕ ಆಕೆಯ ಪತಿ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಆಕೆ ವಿಕಾಸ್ ವಿರುದ್ಧ ದೂರು ದಾಖಲಿಸಿ, ಆತ ಬಂಧನಕ್ಕೊಳಗಾಗುವಂತೆ ಮಾಡಿದ್ದರು. ಮುಖ್ಯವಾಗಿ, ಮಧುಮಿತಾ ತಮ್ಮ ಕಾರ್ ಹೊಂದಿದ್ದ ಡಿಆರ್‌ಡಿಒ ಸ್ಟಿಕ್ಕರ್ ಕಾರಣಕ್ಕೆ ದಾಳಿ ನಡೆಯಿತು ಎಂದಿದ್ದು, ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯಕ್ತಿ "ಇದು ಕನ್ನಡ ನಾಡು. ನಾನು ನಿಮಗೇನು ಮಾಡುತ್ತೇನೆ ನೋಡಿ!" ಎಂದು ಬೆದರಿಸಿದ್ದ ಎಂದಿದ್ದಾರೆ. ಆದರೆ, ಪ್ರಾದೇಶಿಕತೆ ಅಥವಾ ಭಾಷೆಯ ಕುರಿತು ಪ್ರಚೋದನೆ ಮತ್ತು ಹಲ್ಲೆಯ ಆರೋಪವನ್ನು ಸಮರ್ಥಿಸುವಂತಹ ಯಾವುದೇ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿಲ್ಲ. ವಾಸ್ತವವಾಗಿ ಸಿಸಿಟಿವಿ ದೃಶ್ಯಗಳಲ್ಲಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಜಗಳವನ್ನು ನಿಲ್ಲಿಸಲು ಪ್ರಯತ್ನ ನಡೆಸುತ್ತಿದ್ದರು.
ಸತ್ಯಗಳಿಲ್ಲದೆ ಸಮುದಾಯಕ್ಕೆ ಕಳಂಕ ಹಚ್ಚುವ ಪ್ರಯತ್ನ: ಮುಖದಲ್ಲಿ ರಕ್ತ ಸುರಿಸುತ್ತಿದ್ದ ವಿಂಗ್ ಕಮಾಂಡರ್ ಚಿತ್ರಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ರಾಷ್ಟ್ರಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಬಹಳಷ್ಟು ಜನರು ಕನ್ನಡಿಗರು ಮಿಲಿಟರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಉದ್ವಿಗ್ನತೆಗೆ ಕಾರಣವಾದರು. ಆದರೆ, ವಾಸ್ತವವಾಗಿ ಮೊದಲು ಹಲ್ಲೆ ನಡೆಸಿದ್ದು ಅಧಿಕಾರಿಯೇ ಎನ್ನುವುದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿತ್ತು. ಕನ್ನಡಿಗರು ಈ ಘಟನೆಯಲ್ಲಿ ದಾಳಿಕೋರರಾಗಿರಲಿಲ್ಲ. ಬದಲಿಗೆ ಅವರು ಘಟನೆಗೆ ಸಾಕ್ಷಿಯಾಗಿ, ಸಾಧ್ಯವಾದಷ್ಟೂ ಹಲ್ಲೆಯನ್ನು ತಡೆಯಲು ಪ್ರಯತ್ನ ನಡೆಸುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಚಿತ್ರಣವನ್ನು ಸಮಸ್ತ ಕನ್ನಡಿಗರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿತ್ತು.
ನ್ಯಾಯ ಸಮವಸ್ತ್ರ ಧರಿಸಬಾರದು!: ಒಬ್ಬ ವ್ಯಕ್ತಿ ಸಮವಸ್ತ್ರ ಧರಿಸಿದ್ದಾರೆ ಎಂದರೆ ಅವರು ಕಾನೂನನ್ನು ಮೀರಿದವರಾಗುವುದಿಲ್ಲ. ವಿಕಾಸ್ ಅನ್ನು ತಕ್ಷಣವೇ ಬಂಧಿಸಿದ್ದರೂ, ವೀಡಿಯೋ ದಾಖಲೆಗಳಿದ್ದರೂ ಆದಿತ್ಯ ಬೋಸ್ ವಿರುದ್ಧದ ಕ್ರಮ ವಿಳಂಬಗೊಂಡಿತು. ಈ ವಿಳಂಬ ಜನರ ಹುದ್ದೆ, ಸ್ಥಾನಮಾನಗಳನ್ನು ಅನುಸರಿಸಿ ಕಾನೂನು ಕ್ರಮ ಕೈಗೊಳ್ಳುತ್ತದೆಯೇ? ಕಾನೂನು ಪಕ್ಷಪಾತಿಯೇ ಎಂಬಂತಹ ಪ್ರಶ್ನೆಗಳು ಮೂಡಲು ಕಾರಣವಾಯಿತು. ಕಾನೂನು ಮಿಲಿಟರಿ ಅಧಿಕಾರಿಯಾಗಲಿ, ಸಾಮಾನ್ಯ ನಾಗರಿಕನಾಗಲಿ, ಪೊಲೀಸ್ ಅಥವಾ ಅಧಿಕಾರಿಯೇ ಆಗಲಿ, ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಈಗಾಗಲೇ ವೀಡಿಯೋದಂತಹ ಸಾಕ್ಷ್ಯಗಳು ಲಭ್ಯವಿರುವಾಗ ನ್ಯಾಯ ಪ್ರಕ್ರಿಯೆಗೆ ದೂರು ದಾಖಲಾಗಲು ಕಾಯುವಂತಾಗಬಾರದು.
ಅಧಿಕಾರಕ್ಕಿಂತಲೂ ಮುಖ್ಯವಾದುದು ಸತ್ಯ: ಬೆಂಗಳೂರು ಹಿಂದಿನಿಂದಲೂ ಎಲ್ಲರನ್ನೂ ಒಳಗೊಳ್ಳುವ, ಶಾಂತಿಯುತ ನಗರ ಎಂಬ ಕೀರ್ತಿಯನ್ನು ಹೊಂದಿದ್ದು, ಎಲ್ಲೋ ನಡೆಯುವ ಸಣ್ಣಪುಟ್ಟ ಘಟನೆಗಳು ನಗರದ ಕೀರ್ತಿಗೆ ಧಕ್ಕೆ ಉಂಟುಮಾಡಬಾರದು. ನಾವು ಭಾರತೀಯ ಸೇನಾ ಪಡೆಗಳನ್ನು ಬೆಂಬಲಿಸಬೇಕು. ಆದರೆ ಅದು ಕುರುಡು ಬೆಂಬಲದಂತಾಗಬಾರದು. ದೇಶಭಕ್ತಿಯ ಭಾವ ಸತ್ಯ ವಿಚಾರವನ್ನು ಮರೆಮಾಚುವಂತಾಗಬಾರದು. ಈ ಪ್ರಕರಣದಲ್ಲಿ ನ್ಯಾಯದ ಪರವಾಗಿ ಡಿಸಿಪಿ ದೇವರಾಜ್ ಅವರು ಪ್ರದರ್ಶಿಸಿದ ಬದ್ಧತೆ ಎದ್ದು ಕಾಣುವಂತದ್ದು. ಅವರ ಸಮಾಧಾನದ, ದೃಢವಾದ ಹೇಳಿಕೆಗಳು ಸತ್ಯ ವಿಚಾರವನ್ನು ಹೊರತಂದು, ಈ ಘಟನೆಯಲ್ಲಿ ಯಾವುದೇ ಭಾಷಾ ಅಥವಾ ಪ್ರಾದೇಶಿಕ ಪ್ರಚೋದನೆಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದವು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಗಣಿಸಿ, ಸಮವಸ್ತ್ರ ಧರಿಸಿರುವ ವಾಯು ಸೇನಾ ಅಧಿಕಾರಿಯ ವಿರುದ್ಧವೂ ಕಾನೂನು ಕ್ರಮದ ಭರವಸೆ ನೀಡುವ ಮೂಲಕ ಡಿಸಿಪಿ ದೇವರಾಜ್ ಅವರು ಕಾನೂನು ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಾರೆ. ಬಹಳಷ್ಟು ಸಂದರ್ಭದಲ್ಲಿ ಅಧಿಕಾರದಲ್ಲಿರುವವರೂ ಒತ್ತಡಕ್ಕೆ ಬಾಗುವುದಿದೆ. ಆದರೆ, ದೇವರಾಜ್ ಅವರ ವೃತ್ತಿಪರತೆ ಮತ್ತು ಸ್ಪಷ್ಟತೆ ನೈಜ ದೇಶಭಕ್ತಿ ಎನ್ನುವುದು ಎಲ್ಲರಿಗೂ ಕಾನೂನನ್ನು ಸಮಾನವಾಗಿ ಒದಗಿಸುವುದರಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಕನ್ನಡಿಗರ ಮೇಲೆ ವಿನಾ ಕಾರಣ ಅಸಹಿಷ್ಣುಗಳು ಎಂಬ ಆರೋಪ ಹೊರಿಸಲಾಗಿದ್ದು, ತಪ್ಪಿತಸ್ಥರು ಕನ್ನಡಿಗರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಅದರೊಡನೆ, ಯಾವುದೇ ವ್ಯಕ್ತಿಗಳ ಸ್ಥಾನಮಾನವಲ್ಲದೆ, ಕೇವಲ ನ್ಯಾಯ ಮಾತ್ರವೇ ಗೆಲ್ಲಬೇಕು ಎಂಬ ಸಂದೇಶವನ್ನು ಈ ಪ್ರಕರಣ ನೀಡಬೇಕು.
ಅಸಾಧ್ಯವನ್ನೂ ಸಾಧ್ಯವಾಗಿಸುವ ಸಾಂಘಿಕ ಪ್ರಯತ್ನ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಯಶಸ್ಸಿನ ಕಥೆ!
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ