ಅಸ್ತಿತ್ವಕ್ಕಾಗಿ ಮರಾಠಿ ಅಸ್ಮಿತೆ ಮಾರ್ಗ ಹಿಡಿದ ಶಿವಸೇನೆ

Suvarna News   | Asianet News
Published : Jan 07, 2020, 05:42 PM IST
ಅಸ್ತಿತ್ವಕ್ಕಾಗಿ ಮರಾಠಿ ಅಸ್ಮಿತೆ ಮಾರ್ಗ ಹಿಡಿದ ಶಿವಸೇನೆ

ಸಾರಾಂಶ

ತಾವು ಅಧಿಕಾರದಲ್ಲಿ ಇರುವಷ್ಟುದಿನಗಳ ಕಾಲ ಪ್ರಾದೇಶಿಕತೆ, ಭಾಷೆ ಮತ್ತು ಗಡಿ ಇವುಗಳನ್ನಷ್ಟೇ ಪ್ರಮುಖ ಅಸ್ತ್ರಗಳನ್ನಾಗಿ ಮಾಡಿಕೊಂಡರೆ, ಮುಂದಿನ ಚುನಾವಣೆಯಲ್ಲಿ ವರವಾಗಲಿದೆ ಎಂಬ ಶಿವಸೇನೆಯ ದೂರಾಲೋಚನೆಯೇ ಬೆಳಗಾವಿ ಗಡಿ ತಕರಾರಿಗೆ ಪ್ರಮುಖ ಕಾರಣ.

ಬೆಳಗಾವಿ ( ಜ. 07): ಗಡಿಭಾಗ ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ. ಸಪ್ತನದಿಗಳ ಸಂಪತ್ತು, ಪ್ರಕೃತಿ ಸೌಂದರ್ಯ, ಜೊತೆಗೆ ಪಶ್ಚಿಮ ಘಟ್ಟಪ್ರದೇಶವನ್ನು ಹೊದ್ದುಕೊಂಡಿದೆ. ಮಾತ್ರವಲ್ಲ, ತನ್ನ ಎಡಭಾಗಕ್ಕೆ ಗೋವಾ ಮತ್ತು ಮೇಲ್ಭಾಗಕ್ಕೆ ಮಹಾರಾಷ್ಟ್ರದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ 1956ರಲ್ಲಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲಾಯಿತು. ಅಂದಿನಿಂದ ಮಹಾರಾಷ್ಟ್ರವು ಬೆಳಗಾವಿಯಲ್ಲಿ ಮರಾಠಿ ಮಾತನಾಡುವವರ ಸಂಖ್ಯೆ ಹೆಚ್ಚಿದ್ದು, ಆ ಪ್ರದೇಶ ನಮಗೆ ಸೇರಬೇಕು ಎಂಬ ಮೊಂಡು ವಾದವನ್ನು ಮುಂದಿಡುತ್ತಲೆ ಬಂದಿದೆ.

ಇದುವರೆಗೆ ಅತೀ ಹೆಚ್ಚು ಗಡಿತಂಟೆ, ತಕರಾರು, ಈ ಕುರಿತು ಹೋರಾಟ ಮಾಡುತ್ತಾ ಬಂದಿರುವುದು ಮಹಾರಾಷ್ಟ್ರದ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌). ಈಗಲೂ ಅದು ಇದೇ ವಿವಾದವನ್ನು ಇನ್ನೂ ಹಸಿರಾಗಿಸಿದ್ದು, ಈಗ ಗಡಿಭಾಗದಲ್ಲಿ ಬಹುಚರ್ಚಿತ ವಿಷಯವಾಗಿದೆ.

ಅಂದು 'ಅವನೇ ಶ್ರೀಮನ್ನಾರಾಯಣ' ಇಂದು 'ತಾನಾಜಿ' ಮುಗಿಯದ ಗಡಿವಿವಾದ!

ಈಗೇಕೆ ಶಿವಸೇನೆ ಗಡಿ ತಂಟೆ ತೆಗೆದಿದೆ?

ಇದುವರೆಗೆ ರಾಜಕೀಯ ಉದ್ದೇಶಕ್ಕಾಗಿಯೇ ಮರಾಠಿ ಮತ್ತು ಭಾಷೆ ಎಂಬ ಅಸ್ತ್ರಗಳನ್ನು ಪ್ರಯೋಗಿಸುತ್ತಾ ಬಂದಿದ್ದ ಎಂಇಎಸ್‌ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಭಾಷಾವಾರು ಮೇಲೆಯೇ ರಾಜಕೀಯ ನಡೆಸುತ್ತಾ ಬಂದಿರುವ ಶಿವಸೇನೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಈಗ ಭಾಷಾವಾರು ಪ್ರಾಂತ್ಯದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಗಡಿ ತಂಟೆ ಶುರುವಾಗಿದೆ. ಆದರೆ, ಬಿಜೆಪಿ ಅಥವಾ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಯಾವುದೇ ರೀತಿಯ ಗಡಿ ತಂಟೆ ಮುನ್ನೆಲೆಗೆ ಬಂದಿರಲಿಲ್ಲ.

ಕಾರಣ ಎರಡೂ ರಾಷ್ಟ್ರೀಯ ಪಕ್ಷಗಳಾಗಿದ್ದರಿಂದ ರಾಷ್ಟ್ರೀಯ ವಿಚಾರಗಳಿಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಮಾತ್ರ ಗಮನ ಹರಿಸಿದ್ದವು. ಈಗ ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೆರವಿನೊಂದಿಗೆ ಮಹಾರಾಷ್ಟ್ರದಲ್ಲಿ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯ ಆರಂಭದಲ್ಲಿಯೇ ಠಾಕ್ರೆ ಸರ್ಕಾರವು ಛಗನ್‌ ಭುಜಬಲ… ಮತ್ತು ಏಕನಾಥ್‌ ಶಿಂಧೆ ಅವರನ್ನು ಗಡಿ ವಿಚಾರದ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದೆ. ಇದರ ಮೂಲ ಉದ್ದೇಶವಿಷ್ಟೇ ರಾಜಕೀಯ ಬೇಳೆ ಬೇಯಿಸಿಕೊಳ್ಳವುದು. ಇದಕ್ಕೆ ಅದರ ಪ್ರತಿರೂಪವಾಗಿರುವ ಎಂಇಎಸ್‌ ಸಾಥ್‌ ನೀಡುತ್ತಿದೆ.

ಶಿವಸೇನೆಗೆ ಗಡಿ ತಂಟೆ ಮುಖ್ಯವೇಕೆ?

ಈಗಿರುವ ಸರ್ಕಾರ ಎಷ್ಟುಮೈಲೇಜ್‌ ಕೊಡಬಲ್ಲದು ಎಂಬುವುದು ಶಿವಸೇನೆಗೆ ತಿಳಿಯದಿರುವ ವಿಚಾರವೇನಲ್ಲ. ಈ ಹಿನ್ನೆಲೆಯಲ್ಲಿ ತಾವು ಅಧಿಕಾರದಲ್ಲಿ ಇರುವಷ್ಟುದಿನಗಳ ಕಾಲ ಪ್ರಾದೇಶಿಕತೆ, ಭಾಷೆ ಮತ್ತು ಗಡಿ ಇವುಗಳನ್ನಷ್ಟೇ ಪ್ರಮುಖ ಅಸ್ತ್ರಗಳನ್ನಾಗಿ ಮಾಡಿಕೊಂಡರೆ, ಮುಂದಿನ ಚುನಾವಣೆಯಲ್ಲಿ ವರವಾಗಲಿದೆ ಎಂಬ ಶಿವಸೇನೆಯ ದೂರಾಲೋಚನೆಯೇ ಈ ತಕರಾರಿಗೆ ಪ್ರಮುಖ ಕಾರಣ.

ಜೊತೆಗೆ ಶಿವಸೇನೆಗೆ ರಾಷ್ಟ್ರಮಟ್ಟದ ಯಾವುದೇ ಅಜೆಂಡಾ ಇಲ್ಲ. ಮಾತ್ರವಲ್ಲ, ಈಗಿರುವ ಸರ್ಕಾರ ಒಂದು ಅಥವಾ ಎರಡು ವರ್ಷಗಳು ಮಾತ್ರ ಇರಬಹುದು. ನಂತರ ಮುಂದೆ ಚುನಾವಣೆ ಎದುರಾದರೆ ತನ್ನ ಅಸ್ತಿತ್ವವನ್ನು ಹೇಗೆ ಗಟ್ಟಿಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಅದು ಕಂಡುಕೊಂಡಿರುವ ಮಾರ್ಗ ಮರಾಠಿ ಅಸ್ಮಿತೆ.

ಶಿವಸೇನೆಗೆ ಇರುವುದು ಪ್ರಾದೇಶಿಕದ ಮಾನ್ಯತೆ ಮಾತ್ರ. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರೂರಲು ಮೊದಲು ತಕರಾರು ತೆಗೆಯುವುದೇ ಬೆಳಗಾವಿ ಗಡಿ ವಿಷಯದಲ್ಲಿ. ಇದರಿಂದ ಗಡಿಭಾಗ ಬೆಳಗಾವಿಗೆ ಅಂಟಿಕೊಂಡಿರುವ ಮೀರಜ್‌, ಸಾಂಗ್ಲಿ, ಕೊಲ್ಹಾಪುರ, ಸೊಲ್ಲಾಪುರ, ಇಚಲಕರಂಜಿ, ಅಕ್ಕಲಕೋಟೆ, ಜತ್ತ, ಚಂದಗಡದಂತಹ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಸಹಾಯಕವಾಗುತ್ತದೆ ಎಂಬುದು ಶಿವಸೇನೆಯ ಲೆಕ್ಕಾಚಾರ.

ಗಡಿ ತಂಟೆ, ಮರಾಠಿಗರು, ಮರಾಠಿ ಭಾಷೆಯನ್ನು ಹೆಚ್ಚು ಜೀವಂತವಾಗಿಟ್ಟುಕೊಂಡರೆ, ಲಾಭ ಜಾಸ್ತಿ ಎಂದು ಅರಿತುಕೊಂಡಿರುವ ಶಿವಸೇನೆ, ಕೊನೆಪಕ್ಷ ಗಡಿಭಾಗದ ಮಹಾರಾಷ್ಟ್ರ ಕ್ಷೇತ್ರಗಳಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಇದರಿಂದ ಏನೂ ಲಾಭ ಇಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ.

ಇದೆಲ್ಲಕ್ಕಿಂತ ಮುಖ್ಯ ವಿಚಾರವೆಂದರೆ, ಗಡಿ ತಂಟೆಯ ವಿವಾದ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಜತ್ತ ಸೇರಿದಂತೆ ಗಡಿ ಭಾಗಗಳಲ್ಲಿ ಮಾತ್ರ ಹೆಚ್ಚು ಕಾವು ಪಡೆದುಕೊಂಡಿದೆ. ಆದರೆ, ಉತ್ತರ ಮಹಾರಾಷ್ಟ್ರ ಮತ್ತು ಪೂರ್ವ ಮಹಾರಾಷ್ಟ್ರಗಳ ಭಾಗಗಳಲ್ಲಿ ಇದರ ಕಾವು ಏನಿಲ್ಲ. ಅಂದರೆ ಇಲ್ಲಿ ಶಿವಸೇನೆಗೆ ಬೇಕಿರುವುದು ಮರಾಠಿಗರ ಉದ್ದಾರವಲ್ಲ, ಮರಾಠಿ ಮತ್ತು ಕನ್ನಡಿಗರ ನಡುವಿನ ಸಾಮರಸ್ಯತೆಯೂ ಅಲ್ಲ. ಬದಲಾಗಿ ತಾನು ರಾಜಕೀಯವಾಗಿ ಗಟ್ಟಿಯಾಗಿರಬೇಕು ಎಂಬುದಷ್ಟೆ.

ಮುಂದಿನ ಲೆಕ್ಕಾಚಾರವೇನು?

ಇದುವರೆಗೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಶಿವಸೇನೆ ಉಗ್ರ ಹಿಂದುತ್ವದ ಪ್ರತಿಪಾದನೆ ಮಾಡುತ್ತಾ ಬಂದಿತ್ತು. ಆದರೆ, ಹಿಂದುತ್ವ ವಿಚಾರವು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟಿತು. ಹಾಗಾಗಿ ಶಿವಸೇನೆಗೆ ಈಗಲೂ ಹಿಂದುತ್ವದ ಜಪ ಮಾಡಿದರೆ, ಮುಂದೆ ತನ್ನ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ವಾಸನೆ ಬಡಿಯಿತು. ಮಾತ್ರವಲ್ಲ, ಬಿಜೆಪಿಯ ಹಿಂದುತ್ವದ ಮುಂದೆ ತನ್ನ ಹಿಂದುತ್ವ ಎಂಬ ಟ್ರಂಪ್‌ ಕಾರ್ಡ್‌ ಜನರ ಮುಂದೆ ಏನೂ ನಡೆಯದು ಎಂಬ ವಿಚಾರ ಕೂಡ ಅರಿವಿಗೆ ಬಂತು.

ಈ ಹಿನ್ನೆಲೆಯಲ್ಲಿ ಜನರ ಮನಸ್ಸಿನಲ್ಲಿ ಮತ್ತೆ ಗಡಿ ತಕರಾರು ಮತ್ತು ಮರಾಠಿ ಭಾಷೆಯ ಅಸ್ಮಿತೆಯ ವಿಚಾರವನ್ನು ಮುನ್ನೆಲೆಗೆ ತಂದರು. ಮಾತ್ರವಲ್ಲ, ಈಗಾಗಲೇ ಮರಾಠಿಗರಿಗೆ ಸ್ಥಳೀಯ ನೌಕರಿಯಲ್ಲಿ ಶೇ.80ರಷ್ಟುಮೀಸಲು ಘೋಷಣೆ ಮಾಡಿದೆ. ಜೊತೆಗೆ ಈಗಿರುವ ಸಮ್ಮಿಶ್ರ ಸರ್ಕಾರ ಕಾಲಾವಧಿ ಎಷ್ಟುದಿನಗಳ ಕಾಲ ಇರುತ್ತದೆ ಎಂದು ಹೇಳಲಿಕ್ಕೆ ಬರದು. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ಶಿವಸೇನೆ ಪ್ರಾದೇಶಿಕತೆಯತ್ತ ಹೆಚ್ಚು ಗಮನಹರಿಸಿದರೆ, ಜನ ನಮ್ಮನ್ನು ಕೈ ಹಿಡಿಯಲಿದ್ದಾರೆ ಎಂಬ ಆಲೋಚನೆ ಶಿವಸೇನೆ ಮನದಲ್ಲಿದೆ.

ಶಿವಸೇನೆ ಕಣ್ಣ ಕೆಂಪಗಾಗಿದೆ

1966ರಲ್ಲಿ ಆರಂಭದಲ್ಲಿ ಅಸ್ತಿತ್ವಕ್ಕೆ ಬಂದ ಶಿವಸೇನೆಗೆ ಬಾಳ್‌ ಠಾಕ್ರೆ ಮರಾಠಿಯೊಂದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದರು. ನಂತರ 1956ರಲ್ಲಿ ಭಾಷಾವಾರು ಪ್ರಾಂತ್ಯದ ಮೇಲೆ ಮರಾಠಿಗರು ಹೆಚ್ಚಿರುವ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಹಾಕಿದರು. ಆದರೆ, ಇದರಿಂದ ಏನೂ ಪ್ರಯೋಜನವಾಗಲಿಲ್ಲ. ತದನಂತರ 1966, ಅ.25ರಂದು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಸಮಸ್ಯೆ ಇತ್ಯರ್ಥಕ್ಕೆ ಮಹಾಜನ್‌ ಆಯೋಗವನ್ನು ರಚನೆ ಮಾಡಲಾಯಿತು. ಈ ಆಯೋಗವು ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದೆ.

ಆದರೆ, ಇದುವರೆಗೆ ಕೇಂದ್ರ ಸರ್ಕಾರವು ಈ ಕುರಿತು ಯಾವುದೇ ಚರ್ಚೆಯನ್ನಾಗಲಿ ಅಥವಾ ಆ ವರದಿ ಕುರಿತು ನಿರ್ಧಾರವನ್ನಾಗಲಿ ಕೈಗೊಂಡಿಲ್ಲ. ಈ ಹಿಂದೆ 1968ರಲ್ಲಿ ಮೊರಾರ್ಜಿ ದೇಸಾಯಿ ಅವರು ಮಹಾರಾಷ್ಟ್ರದವರಾಗಿದ್ದರೂ ಕೂಡ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ಹೇಳಿಕೆ ನೀಡಿದ್ದರು. ಆಗ ಅವರು ಇಂದಿರಾಗಾಂಧಿ ಅವರ ಸರ್ಕಾರದಲ್ಲೇ ಉಪಪ್ರಧಾನಿಯಾಗಿದ್ದರು. ಜೊತೆಗೆ ಬೆಳಗಾವಿ ಕರ್ನಾಟಕದ್ದೇ ಎಂದು ಪ್ರಬಲವಾಗಿ ಹೇಳಿದ ಪ್ರಧಾನಿಗಳೆಂದರೆ ಮೊರಾರ್ಜಿ ದೇಸಾಯಿ ಮತ್ತು ಎಚ್‌.ಡಿ.ದೇವೇಗೌಡರು.

ಬೆಳಗಾವಿ ಕನ್ನಡಿಗರದ್ದು. ಆದರೆ, ಪದೇ ಪದೇ ಶಿವಸೇನೆ ಗಡಿ ತಂಟೆ ಮಾಡುವುದರಿಂದ ಇಲ್ಲಿನ ಜನರಿಗೆ ಏನೂ ಲಾಭವಿಲ್ಲ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿರುವುದು ಕೂಡ ಶಿವಸೇನೆ ಕಣ್ಣು ಕೆಂಪಾಗಿಸಿದೆ. ಬೆಳಗಾವಿಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಅಭಿವೃದ್ಧಿಯನ್ನೇ ಗಮನಿಸಿ ಇತ್ತೀಚೆಗೆ ಮಹಾರಾಷ್ಟ್ರದ ಅಕ್ಕಲಕೋಟದವರು ನಮ್ಮನ್ನೂ ಕರ್ನಾಟಕಕ್ಕೆ ಸೇರಿಸಿಬಿಡಿ ಎಂದು ನೇರವಾಗಿ ಅಲ್ಲಿನ ಸರ್ಕಾರಕ್ಕೆ ಹೇಳಿದ್ದಾರೆ. ಅಂದರೆ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಸಾಮರಸ್ಯತೆ ಇದೆ ಎಂಬುವುದನ್ನು ಅಲ್ಲಿನ ಜನರು ಒಪ್ಪಿಕೊಂಡಾಗಿದೆ ಎಂಬುವುದಕ್ಕೆ ಇದೊಂದು ಸಾಕ್ಷಿ ಸಾಕು.

- ಬ್ರಹ್ಮಾನಂದ ಎನ್‌. ಹಡಗಲಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್