ಐಟಿ ಕೇಸ್: ಡಿಕೆಶಿ ಅರ್ಜಿ ವಿಚಾರಣೆ ಮುಂದಕ್ಕೆ!

By Suvarna NewsFirst Published Jan 7, 2020, 10:35 AM IST
Highlights

ಐಟಿ ಕೇಸ್‌, ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ 2 ವಾರ ಮುಂದಕ್ಕೆ| ಆದಾಯ ತೆರಿಗೆ ಪ್ರಕರಣಗಳ ವಿಚಾರಣೆಗೆ ಅವಕಾಶ ನೀಡಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ

ನವದೆಹಲಿ[ಜ.07]: ತಮ್ಮ ಮೇಲಿರುವ ಆದಾಯ ತೆರಿಗೆ ಪ್ರಕರಣಗಳ ವಿಚಾರಣೆಗೆ ಅವಕಾಶ ನೀಡಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಮತ್ತವರ ಆಪ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಎರಡು ವಾರಗಳ ಕಾಲ ಮುಂದೂಡಿದೆ. ಡಿ.ಕೆ.ಶಿವಕುಮಾರ್‌, ಆಂಜನೇಯ ಹನುಮಂತಯ್ಯ ಮತ್ತು ಎನ್‌.ರಾಜೇಂದ್ರ ಅವರು ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮತ್ತು ಆದಾಯ ತೆರಿಗೆ ತಪ್ಪು ಹೇಳಿಕೆ ನೀಡಿದ್ದರು ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿತ್ತು.

ಇದನ್ನು ಪ್ರಶ್ನಿಸಿ ಈ ಮೂವರು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜನಪ್ರತಿನಿಧಿಗಳ ನ್ಯಾಯಾಲಯವು 2019ರ ಜೂನ್‌ನಲ್ಲಿ ಆರೋಪವನ್ನು ಕೈಬಿಡಲು ನಿರಾಕರಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರೂ ಹೈಕೋರ್ಟ್‌ 2019ರ ನವೆಂಬರ್‌ನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವ ತೀರ್ಪನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಇದೀಗ ಆರೋಪಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಸೋಮವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ನ್ಯಾ| ಬಿ.ಆರ್‌.ಗವಾಯಿ ಮತ್ತು ನ್ಯಾ| ಸೂರ್ಯಕಾಂತ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಾಗ ಶಿವಕುಮಾರ್‌ ಪರ ವಕೀಲ ಅಭಿಷೇಕ್‌ ಮನುಸಿಂಘ್ವಿ, ಶಿವಕುಮಾರ್‌ ಅವರ ಮೇಲೆ ಒಂದೇ ಪ್ರಕರಣಕ್ಕೆ ಸಂಬಂಧಿಸಿ ಐ.ಟಿ. ಮತ್ತು ಇ.ಡಿ. ವಿಚಾರಣೆ ನಡೆಸುತ್ತಿದೆ ಎಂದು ವಾದಿಸಿದರು. ಡಿ.ಕೆ.ಶಿವಕುಮಾರ್‌ ಮತ್ತಿತರರು ಆರೋಪಿಗಳು ಸಲ್ಲಿಸಿರುವ ವಿವಿಧ ಅರ್ಜಿಗಳು ನ್ಯಾಯಾಲಯದ ಇನ್ನೊಂದು ಪೀಠದಲ್ಲಿ ವಿಚಾರಣೆ ನಡೆಯುತ್ತಿರುವುದನ್ನು ಗಮನಿಸಿದ ನ್ಯಾಯಪೀಠ ಸಂಬಂಧಪಟ್ಟಪ್ರಕರಣಗಳನ್ನು ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿಮಾಡುವಂತೆ ಸೂಚಿಸಿತು.

13ಕ್ಕೆ ವಿಚಾರಣೆಗೆ ಹಾಜರಾಗಲು ಇ.ಡಿ. ಸಮನ್ಸ್‌

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 19 ದಿನ ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆ ಎದುರಿಸಿದ್ದ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ಗೆ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ (ಇ.ಡಿ.) ಸಮನ್ಸ್‌ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್‌ ಅವರು ದೆಹಲಿ ಹೈಕೋರ್ಟಿನಿಂದ ಜಾಮೀನು ಪಡೆದ ಬಳಿಕ ಮೊದಲ ಬಾರಿಗೆ ಇ.ಡಿ. ಸಮನ್ಸ್‌ ಪಡೆದುಕೊಂಡಿದ್ದಾರೆ. ಜ.13ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ತನ್ನ ಸಮನ್ಸ್‌ನಲ್ಲಿ ತಿಳಿಸಿದೆ.

click me!