3 ದಿನಗಳಿಂದ ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವೃದ್ಧೆ ದಟ್ಟ ಕಾಡಿನಲ್ಲಿ ಜೀವಂತವಾಗಿ ಪತ್ತೆ!

By Govindaraj S  |  First Published Nov 9, 2023, 12:30 AM IST

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿ, ಇಡೀ ಊರಿಗೆ ಊರೇ ಆತಂಕಕ್ಕೆ ಬೀಳಲು ಕಾರಣವಾಗಿದ್ದ ಹೊಸನಗರ ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾದಗಲ್ ಗ್ರಾಮದ ಶಾರದಮ್ಮ ನಿನ್ನೆ ರಾತ್ರಿ ವೇಳೆಯಲ್ಲಿ ಸಾವೇಹಕ್ಲು ಡ್ಯಾಮ್ ಹತ್ತಿರದ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. 


ಶಿವಮೊಗ್ಗ (ನ.09): ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿ, ಇಡೀ ಊರಿಗೆ ಊರೇ ಆತಂಕಕ್ಕೆ ಬೀಳಲು ಕಾರಣವಾಗಿದ್ದ ಹೊಸನಗರ ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾದಗಲ್ ಗ್ರಾಮದ ಶಾರದಮ್ಮ ನಿನ್ನೆ ರಾತ್ರಿ ವೇಳೆಯಲ್ಲಿ ಸಾವೇಹಕ್ಲು ಡ್ಯಾಮ್ ಹತ್ತಿರದ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಮನೆ ಪಕ್ಕದ ತೋಟಕ್ಕೆ ಹೋಗಿದ್ದ ಶಾರದಮ್ಮ ಆನಂತರ ಮನೆಗೆ ಹಿಂದಿರುಗಿರಲಿಲ್ಲ. ನಿನ್ನೆಯಿಂದಲೇ ಇಡೀ ಊರಿಗೆ ಊರೇ ಶಾರದಮ್ಮನ ಶೋಧ ಕಾರ್ಯದಲ್ಲಿ ತೊಡಗಿದ್ದರೂ ಅವರನ್ನು ಪತ್ತೆ ಹಚ್ಚಲಾಗದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಿಂದ ಪೊಲೀಸ್ ಶ್ವಾನದಳವೂ ಕೂಡಾ ಆಗಮಿಸಿದ್ದು, ಶೋಧ ಕಾರ್ಯಾಚರಣೆ ಮುಗಿಸಬೇಕೆನ್ನುವ ಸ್ವಲ್ಪ ಹೊತ್ತಿಗೆ ಮುಂಚೆ ಶಾರದಮ್ಮ ಪತ್ತೆಯಾಗಿದ್ದಾರೆ.

ಕಾಲಿಗೆ ಇಂಬಳ ಕಚ್ಚಿ ರಕ್ತ ಸುರಿಯುತ್ತಿದ್ದದ್ದು ಹೊರತು ಪಡಿಸಿ, ಮೂರು ದಿನಗಳಿಂದ ಯಾವುದೇ ರೀತಿಯ ಅನ್ನಾಹಾರ ಸೇವಿಸದೇ ಇದ್ದರೂ ಆರೋಗ್ಯದಿಂದಲೇ ಇದ್ದ ಶಾರದಮ್ಮನವರಿಗೆ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಸಿಬ್ಬಂದಿಗಳು ಹೇಳುವ ಪ್ರಕಾರ, ಬಿಪಿ ಸ್ವಲ್ಪ ಜಾಸ್ತಿ ಇದೆ. ಇದನ್ನು ಹೊರತುಪಡಿಸಿದರೆ ಶಾರದಮ್ಮನವರು ಇನ್ನೆಲ್ಲ ರೀತಿಯಲ್ಲೂ ಆರೋಗ್ಯದಿಂದಿದ್ದಾರೆ, ಮಳೆಯಲ್ಲಿ ನೆನೆದಿರುವ ಕಾರಣ ಸ್ವಲ್ಪ ಚಳಿ ಇದೆ. ಇಷ್ಟು ಬಿಟ್ಟರೆ ಇನ್ಯಾವುದೇ ರೀತಿಯಲ್ಲೂ ಅವರ ಆರೋಗ್ಯದಲ್ಲಿ ಏರುಪೇರಾಗಿಲ್ಲ.

Tap to resize

Latest Videos

ಕುರ್ಚಿ ಉಳಿಸಿಕೊಳ್ಳಲು ಸಿದ್ದು, ಕಿತ್ತುಕೊಳ್ಳಲು ಡಿಕೆಶಿ ಸಭೆ ಮೇಲೆ ಸಭೆ: ಸಿ.ಟಿ.ರವಿ

ಮೂಲಮನೆ ಹುಡುಕಿಕೊಂಡು ಹೋಗಿದ್ದರೆ ಶಾರದಮ್ಮ?: ವಯೋ ವೃದ್ಧೆ ಶಾರದಮ್ಮನವರ ಶೋಧ ಕಾರ್ಯದಲ್ಲಿ ಪೊಲೀಸ್ ಅರಣ್ಯ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು .‌ ಸ್ಥಳೀಯ ಗ್ರಾಮಸ್ಥರ ಪ್ರಕಾರ  ಮುಳುಗಡೆಯಾದ ತಮ್ಮ ಸಾವೇ ಹಕ್ಲು ನದಿ ಯೋಜನೆಯಿಂದ ಈ ಹಿಂದೆ ಮುಳುಗಡೆಯಾಗಿದ್ದ ತಮ್ಮ ಮೂಲಮನೆಯನ್ನು ಹುಡುಕಿಕೊಂಡು ಹೊರಟಿರುವಂತೆ ಕಾಣುತ್ತಿದೆ. ಯಾಕೆಂದರೆ ಈಗ ಅವರು ಪತ್ತೆಯಾಗಿರುವ ಸ್ಥಳ ಅವರ ಮೂಲ ಮನೆ ಇದ್ದ ಜಾಗದ ರೀತಿಯಲ್ಲೇ ಇದ್ದು, ಅಲ್ಲಿಗೆ ಹೋಗಬೇಕು ಎನ್ನುವ ಆಸೆಯಿಂದಲೇ ಶಾರದಮ್ಮ ಒಂಟಿಯಾಗಿ ಆರು ಕಿಲೋಮೀಟರುಗಳಷ್ಟು ದೂರ ನಡೆದು ಹೋಗಿದ್ದರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

ಎರಡು ಹಗಲು, ಎರಡು ರಾತ್ರಿಯನ್ನು ಕಾಡಿನಲ್ಲೇ ಕಳೆದ ಶಾರದಮ್ಮ ಶೋಧ ತಂಡಕ್ಕೆ ಪತ್ತೆಯಾಗುವ ಸಂದರ್ಭದಲ್ಲಿಯೂ ಲವಲವಿಕೆಯಿಂದಲೇ ಇದ್ದರು. ಇಂಬಳಗಳು ಕಚ್ಚಿ ಕಾಲಿನಿಂದ ರಕ್ತ ಸುರಿಯುತ್ತಿದ್ದದ್ದು. ಹೊರತು ಪಡಿಸಿದೆ, ನಗುಮೊಗದಿಂದಲೇ ಇದ್ದ ಶಾರದಮ್ಮನವರು ತಮ್ಮನ್ನು ಹುಡುಕಿಕೊಂಡು ಬಂದವರ ಬಳಿ 'ಆತಂಕ ಬೇಡ, ನಾನು ಆರೋಗ್ಯದಿಂದ ಇದ್ದೇನೆ' ಎಂದು ಹೇಳಿದ ರೀತಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿತ್ತು. ಯಾವುದೇ ಅವಘಡ ಸಂಭವಿಸದೇ ಶಾರದಮ್ಮನವರು ಆರೋಗ್ಯದಿಂದ ಪತ್ತೆಯಾಗಿರುವುದು ಊರಿನ ಎಲ್ಲರಲ್ಲಿ ಸಂತಸ ಮೂಡಿಸಿದೆ. 

ಎರಡು ರಾತ್ರಿ ದಟ್ಟ ಕಾಡಿನಲ್ಲಿ ಒಂಟಿಯಾಗಿ ಹಗಲು ರಾತ್ರಿ ಕಳೆದಿರುವ ಶಾರದಮ್ಮನವರಿಗೆ ಯಾವುದೇ ಕಾಡುಪ್ರಾಣಿಗಳಿಂದ ಕೂಡಾ ತೊಂದರೆಯಾಗಿಲ್ಲ. ಶಾರದಮ್ಮನವರ ಶೋಧ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಾ ಕಳೆದುಕೊಂಡ ತಮ್ಮ ಮನೆಯವರಾರೋ ಸಿಕ್ಕಿದಷ್ಟು ಖುಷಿಯಲ್ಲಿದ್ದರು. ಇಲಾಖೆಯ ಕೆಲಸ ಎನ್ನುವುದಕ್ಕಿಂತ ಹೆಚ್ಚಾಗಿ ಊರಿನ ಹಿರಿಯ ಜೀವವನ್ನು ಹುಡುಕುವುದು ನಮ್ಮೆಲ್ಲರ ಜವಾಬ್ದಾರಿ ಎಂದುಕೊಂಡೇ ತಾವು ಶೋಧ ಕಾರ್ಯದಲ್ಲಿ ತೊಡಗಿದ್ದೆವು ಎಂದು ಇಲಾಖೆಯ ಸಿಬ್ಬಂದಿ ತಮ್ಮ ಸಂತನವನ್ನು ಹಂಚಿಕೊಂಡಿದ್ದಾರೆ 

ಬಿಜೆಪಿ ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದ್ರೂ ಇಳಿಬೋದು: ಸಚಿವ ಸಂತೋಷ್‌ ಲಾಡ್‌

ನಗರ ಠಾಣೆ ಪಿಎಸ್‌ಐ ರಮೇಶ್ ಪಿ.ಎಸ್ ನೇತೃತ್ವದಲ್ಲಿ ಶ್ವಾನದಳ ಶೋಧಕಾರ್ಯ ನಡೆಸಿತು. ಶ್ವಾನ ದಳದ ಎಆರ್‌ಎಸ್‌ಐ ಚಂದ್ರಪ್ಪ, ಹೆಡ್ ಕಾನ್ಸ್ಟೆಬಲ್ ಪ್ರಸನ್ನ ಪೊಲೀಸ್ ಸಿಬ್ಬಂದಿಗಳಾದ ಹೆಚ್‌ಸಿ ವೆಂಕಟೇಶ್, ಹೆಚ್‌ಸಿ ಪ್ರವೀಣ್, ಹೆಚ್‌ಸಿ ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್‌, ಸುಜಯಕುಮಾರ್, ಅರಣ್ಯ ಇಲಾಖೆಯ ಎಆರ್‌ಎಫ್‌ಓಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದರು.  ಇವರೊಂದಿಗೆ ನಗರ ಹೋಬಳಿ ಹೆಚ್ಚಿನ ಗ್ರಾಮಗಳ ಗ್ರಾಮಸ್ಥರು ಕೂಡಾ ಶೋಧ ಕಾರ್ಯದಲ್ಲಿ ಜೊತೆಯಾಗಿದ್ದರು.

click me!