
ಸಂದೀಪ್ ವಾಗ್ಲೆ
ಮಂಗಳೂರು (ಮೇ.13) : ‘1971ರ ಭಾರತ- ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಏರ್‌ಕ್ರಾಫ್ಟ್‌ಗಳನ್ನು ನಾವು ಸಜ್ಜುಗೊಳಿಸಿ ನೀಡುತ್ತಿದ್ದೆವು. ಒಂದು ಸಂದರ್ಭದಲ್ಲಂತೂ ನಮ್ಮ ವಾಯು ನೆಲೆ ಮೇಲೆ ವೈರಿ ರಾಷ್ಟ್ರದ ವೈಮಾನಿಕ ದಾಳಿ ನಡೆದಿತ್ತು. ಆದರೆ ಯಾವುದೇ ಸಾವು ನೋವಿಲ್ಲದೆ ಪಾರಾಗಿದ್ದೆವು.
ಯುದ್ಧದ ಸಂದರ್ಭವೆಂದರೆ ಕಷ್ಟದ ನಡುವೆಯೂ ವೈರಿ ರಾಷ್ಟ್ರವನ್ನು ಸದೆಬಡಿಯುವ ಉತ್ಸಾಹ ಇರುತ್ತಿತ್ತು’.
ಭಾರತೀಯ ವಾಯುಪಡೆಯಲ್ಲಿ ಏರ್‌ಕ್ರಾಫ್ಟ್ ಮೆಕ್ಯಾನಿಕ್ ಆಗಿ 1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡು ಪ್ರಸ್ತುತ ಉಡುಪಿಯ ಉಚ್ಚಿಲದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಹಸನ್ ಸಾಹೇಬ್ ಅವರ ಮಾತುಗಳಿವು. 20 ವರ್ಷ ಪ್ರಾಯದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದೆ. ಅಲ್ಲಿ ಏರ್‌ಕ್ರಾಫ್ಟ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಟ್ರೈನಿಂಗ್ ದೊರೆತು ದೇಶದ ವಿವಿಧ ವಾಯುನೆಲೆಗಳಲ್ಲಿ ಸೇವೆ ಸಲ್ಲಿಸಿದೆ. ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭ ನಮ್ಮ ತಂಡವನ್ನು ಪ್ರಮುಖ ವಾಯುನೆಲೆಗಳಲ್ಲಿ ಒಂದಾದ ಸಿರ್ಸಾಕ್ಕೆ ನಿಯೋಜಿಸಲಾಯಿತು.
ನಾವು ಯುದ್ಧ ವಿಮಾನಗಳನ್ನು ಸರ್ವ ಸನ್ನದ್ಧಗೊಳಿಸಿ ನೀಡುತ್ತಿದ್ದೆವು. ಅವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಹಿಂತಿರುಗುತ್ತಿದ್ದವು. ನಮ್ಮ ವಾಯುನೆಲೆಯನ್ನು ಕೇಂದ್ರೀಕರಿಸಿ ಪಾಕಿಸ್ತಾನದ ಏರ್‌ಕ್ರಾಫ್ಟ್‌ಗಳು ಬರುವಾಗ ಸೈರನ್ ಮೊಳಗುತ್ತಿತ್ತು. ತಕ್ಷಣ ಬಂಕರ್‌ನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೆವು. ಒಂದು ಸಲ ನಾವಿದ್ದ ವಾಯುನೆಲೆ ಮೇಲೆ ಪಾಕಿಸ್ತಾನದಿಂದ ವೈಮಾನಿಕ ದಾಳಿಯಾಗಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಸಾವು- ನೋವು ಸಂಭವಿಸಲಿಲ್ಲ. ನಮ್ಮ ಬಳಿ 303 ರೈಫಲ್ ಇತ್ತು ಎಂದು ಸ್ಮರಿಸಿದರು.
ಇದನ್ನೂ ಓದಿ: ಕದನ ವಿರಾಮ ಟ್ರಂಪ್ ಮಧ್ಯೆ ಪ್ರವೇಶಕ್ಕೆ ಕಾಂಗ್ರೆಸ್ ಅಕ್ರೋಶ; 'ಮಾತಿನ ಮೋಡಿ ಸಾಕು ಇಂದಿರಾ ನಡೆ ಬೇಕು' ಎಂದು ಪೋಸ್ಟರ್
ಪ್ರಸ್ತುತ ಹಸನ್ ಸಾಹೇಬ್ ಅವರಿಗೆ 80ರ ಇಳಿವಯಸ್ಸು. ಒಟ್ಟು 17 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅವರು ಮಸ್ಕತ್ ಸೇರಿ ವಿವಿಧೆಡೆ ಕೆಲಸ ನಿರ್ವಹಿಸಿ ಉಚ್ಚಿಲದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. 1971ರ ಅವಧಿಯಲ್ಲಿ ಸೀಮಿತ ವ್ಯವಸ್ಥೆಗಳ ನಡುವೆಯೂ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿತ್ತು. ಈಗ ಭಾರತದ ಸೇನೆ ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಅತ್ಯಂತ ಬಲಿಷ್ಠವಾಗಿದೆ. ಶತ್ರು ರಾಷ್ಟ್ರವನ್ನು ಎಂಥ ಸಂದರ್ಭದಲ್ಲೂ ಹಿಮ್ಮೆಟ್ಟಿಸುವ ಶಕ್ತಿ ಭಾರತೀಯ ಸೇನೆಗೆ ಇದೆ ಎಂಬ ಆತ್ಮವಿಶ್ವಾಸವನ್ನು ಹಸನ್ ಸಾಹೇಬ್ ವ್ಯಕ್ತಪಡಿಸಿದ್ದಾರೆ.
ಕೋಡ್ ಮೂಲಕ ಸಂವಹನ:
ಯುದ್ಧದ ವೇಳೆ ವಾಯುನೆಲೆಯಲ್ಲಿದ್ದ ಪ್ರತಿಯೊಬ್ಬರಿಗೂ ಕೋಡ್ ನೀಡಲಾಗಿತ್ತು. ನಾವು ಪರಸ್ಪರ ಕೋಡ್ ಬಳಸಿಯೇ ಮಾತನಾಡಬೇಕಿತ್ತು. ಅಪರಿಚಿತ ವ್ಯಕ್ತಿಗಳೇನಾದರೂ ನುಸುಳಿದರೆ ಪತ್ತೆ ಹಚ್ಚಲು ಈ ಕ್ರಮ ಅನುಸರಿಸಲಾಗಿತ್ತು. ಕೋಡ್ ಗೊತ್ತಿಲ್ಲದ ವ್ಯಕ್ತಿ ಒಳಗೆ ನುಸುಳಿದರೆ, ಸೂಕ್ತ ಸ್ಪಂದನೆ ನೀಡದಿದ್ದರೆ ಆತ ಶತ್ರುವೆಂದು ಪರಿಗಣಿಸಿ ಶೂಟ್ ಮಾಡಲು ಅವಕಾಶ ನೀಡಲಾಗಿತ್ತು. 1971ರ ಯುದ್ಧದ ಅಷ್ಟೂ ಸಮಯ ಹಗಲು- ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸಿದ್ದೇವೆ. ಯುದ್ಧದಲ್ಲಿ ಭಾರತ ವಿಜಯ ಸಾಧಿಸಿತ್ತು ಎಂದು ಹಸನ್ ಸಾಹೇಬ್ ಸ್ಮರಿಸಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ