
ದಕ್ಷಿಣ ಕನ್ನಡ (ಮೇ 13): ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯು ಭಾರೀ ರಾಜಕೀಯ ಕಾಳಗ ಮತ್ತು ಸಮಾಜದ ವಿವಿಧ ವರ್ಗಗಳಿಂದ ವಿವಾದವನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸ್ಥಳೀಯವಾಗಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಆಂತರಿಕ ವಿರೋಧದ ನಡುವೆಯೂ ಆಯ್ಕೆ: ಮೂಲತಃ ಕಡಬ ತಾಲೂಕಿನ ನಿವಾಸಿಯಾಗಿರುವ ಹರೀಶ್ ಇಂಜಾಡಿ ಅವರು, ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಅವರ ಆಯ್ಕೆಗೂ ಮೊದಲು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಕುಮಾರ್ ಕರಿಕ್ಕಳ ಅವರ ಹೆಸರನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಶಿಫಾರಸು ಮಾಡಿದ್ದರು. ಆದರೆ ಇವರನ್ನು ಆಯ್ಕೆ ಮಾಡುವುದಕ್ಕೆ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ ಮತ್ತು ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಹರೀಶ್ ಇಂಜಾಡಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹರೀಶ್ ಮೇಲೆ ಅಪರಾಧ ಕೃತ್ಯದ ಆರೋಪಗಳು: ಕಳೆದ ಕೆಲವು ವರ್ಷಗಳಲ್ಲಿ ಹರೀಶ್ ಇಂಜಾಡಿಯ ವಿರುದ್ಧ ಕೆಲವು ಗಂಭೀರ ಆರೋಪಗಳು ಕೂಡ ಕೇಳಿಬಂದಿವೆ. ಅವರ ಮೇಲೆ ನಕಲಿ ಚೆಕ್ ನೀಡಿದ ಪ್ರಕರಣ, ಹಣ್ಣು ಕಾಯಿ ಟೆಂಡರ್‌ನಲ್ಲಿ ದೇವಾಲಯಕ್ಕೆ ವಂಚನೆ ಮಾಡಿದ ಆರೋಪ ಹಾಗೂ ಅವರೊಬ್ಬ ಮಾಜಿ ರೌಡಿಶೀಟರ್ ಎಂದು ಆರೋಪಿಸಲಾಗಿದೆ. ಈ ಕುರಿತು ಹಲವು ಸ್ಥಳೀಯರು ಧಾರ್ಮಿಕ ದತ್ತಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ, ದೇವಾಲಯದ ಹಿತಾಸಕ್ತಿಗೆ ವಿರುದ್ಧ ನಿಂತವರನ್ನು ಆಡಳಿತ ಮಂಡಳಿಗೆ ಸೇರಿಸಬಾರದು ಎಂಬ ಕಾನೂನು ನಿಯಮವಿದ್ದರೂ ಸಹ, ಇಂತಹ ವ್ಯಕ್ತಿಯನ್ನು ವ್ಯವಸ್ಥಾಪನಾ ಮಂಡಳಿಗೆ ಅಧ್ಯಕ್ಷ ಹುದ್ದೆ ನೀಡಿರುವುದನ್ನು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಬಿಜೆಪಿ ಮುಖಂಡರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹರೀಶ್ ಇಂಜಾಡಿ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸಮಾಜದ ಶ್ರದ್ಧಾ ಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಒಬ್ಬ ರೌಡಿಶೀಟರ್ ನಿರ್ವಹಿಸುತ್ತಿರುವುದು ಅತ್ಯಂತ ಖಂಡನೀಯ' ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯ ವೇಳೆ 'ರೌಡಿಶೀಟರ್ ಮನೆಗೆ ಭೇಟಿ ನೀಡಲ್ಲ' ಎಂದಿದ್ದ ಉನ್ನತ ಕಾಂಗ್ರೆಸ್ ನಾಯಕರು, ಈಗ ಆ ವ್ಯಕ್ತಿಗೆ ದೇವಸ್ಥಾನ ಅಧ್ಯಕ್ಷ ಸ್ಥಾನ ಕೊಟ್ಟಿರುವುದನ್ನು ಬಿಜೆಪಿ ಟೀಕಿಸಿದೆ.
ಸಾರ್ವಜನಿಕರ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ದೇವಾಲಯದ ಆಡಳಿತ ಕಾರ್ಯಗಳನ್ನು ನಿರ್ವಹಣೆ ಮಾಡಲು ನಿರ್ದೋಷಿ ಮತ್ತು ಉತ್ತಮ ಚರಿತ್ರೆಯುಳ್ಳವರನ್ನು ನೇಮಿಸಬೇಕು. ಆದರೆ, ಇಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ತಿರಸ್ಕರಿಸಿ ಏಕಾಏಕಿ ಒಬ್ಬ ರೌಡಿಶೀಟರ್ ಅನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿದೆ ಎಂಬ ಆರೋಪಗಳು ಮಾತ್ರ ಇನ್ನೂ ಮುಂದುವರೆದಿವೆ. ಒದೋಗ ಸ್ಥಳೀಯರು ರಾಜ್ಯ ಮುಜರಾಯಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದು, ಹರೀಶ್ ಇಂಜಾಡಿ ನೇಮಕಾತಿಯನ್ನು ವಾಪಸ್ ಪಡೆಯುವಂತೆ ಆಗ್ರಹ ಮಾಡಿದ್ದಾರೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಹರೀಶ್ ಇಂಜಾಡಿ ಅಧ್ಯಕ್ಷರಾಗಿ ಯಾವ ರೀತಿಯಲ್ಲಿ ದೇವಸ್ಥಾನದ ಆಡಳಿತವನ್ನು ನಡೆಸುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ. ಆದರೆ ಅವರ ನೇಮಕಾತಿ ಸುತ್ತಲಿನ ವಿವಾದಗಳು, ಅವರ ಮೇಲಿರುವ ಅಪರಾಧ ಆರೋಪಗಳು ಹಾಗೂ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟ, ರಾಜ್ಯದ ಧಾರ್ಮಿಕ ನಡವಳಿಕೆ ಎಲ್ಲವೂ ಖಚಿತವಾಗಿ ಸುಧಾರಣೆ ಆಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ