
ಬೆಂಗಳೂರು(ಜ.07): ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜ.8ರ ಶನಿವಾರ ರಾಜ್ಯಾದ್ಯಂತ ಶಾಲೆ, ಕಾಲೇಜುಗಳು ತೆರೆಯುವುದಿಲ್ಲ. ಈಗಾಗಲೇ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿರುವ ಬೆಂಗಳೂರಿನಲ್ಲಿ ಕೂಡ ವಿನಾಯಿತಿ ಇರುವ 10, 11, 12ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಕೋವಿಡ್ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಜ.7ರ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ಗಂಟೆವರೆಗೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಹೊರತು ಉಳಿದೆಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಅಗತ್ಯವಾಗಿ ಸಾರ್ವಜನಿಕ ಸಂಚಾರಕ್ಕೂ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ವ್ಯಾಪ್ತಿಯ ಶಾಲೆ, ಕಾಲೇಜುಗಳನ್ನೂ ತೆರೆಯದಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಅವರು ಇಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರುಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಐದೂವರೆ ತಿಂಗಳ ನಂತರ ರಾಜ್ಯದಲ್ಲಿ ಮತ್ತೆ ನಿರ್ಬಂಧ
ರಾಜ್ಯದಲ್ಲಿ ಐದೂವರೆ ತಿಂಗಳ ಬಳಿಕ ಮತ್ತೆ ವಾರಾಂತ್ಯದ ಕರ್ಫ್ಯೂ ಜಾರಿಯಾಗುತ್ತಿದೆ. ಜ.7ರ ಶುಕ್ರವಾರ ರಾತ್ರಿ 10ರಿಂದ ಜ. 10ರ ಸೋಮವಾರ ಬೆಳಿಗ್ಗೆ 5ರವರೆಗೂ ರಾಜ್ಯಾದ್ಯಂತ ಕಫä್ರ್ಯ ಇರಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಕೊರೋನಾ ಸೋಂಕು ಹತೋಟಿಗೆ ಸರ್ಕಾರ ಡಿ.28ರಿಂದ 19ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಆದರೆ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಇನ್ನಷ್ಟುಕಠಿಣ ಕ್ರಮ ಕೈಗೊಂಡಿದೆ. ಜ.19ವರೆಗೂ ನಿತ್ಯ ರಾತ್ರಿ ಕರ್ಫ್ಯೂ ಮತ್ತು ಮುಂದಿನ ಎರಡು ವಾರಾಂತ್ಯಗಳಲ್ಲಿ ಸಂಪೂರ್ಣ ಕಫä್ರ್ಯ ಜಾರಿಯಲ್ಲಿರಲಿದೆ.
*ವಿನಾಯ್ತಿ ಯಾರಿಗೆ
- ರೋಗಿಗಳು ಮತ್ತು ಅವರ ಸಹಾಯಕರು.
- ಕೈಗಾರಿಕೆ, ಖಾಸಗಿ ಕಂಪನಿಗಳ ಉದ್ಯೋಗಿಗಳು, ಇ- ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳು ಕಂಪನಿ ಐಡಿಯೊಂದಿಗೆ ಓಡಾಟ ನಡೆಸಬಹುದು.
- ಸರಕು ಸಾಗಣೆ ವಾಹನಗಳು(ಖಾಲಿ ವಾಹನವೂ ಸೇರಿದಂತೆ)
- ದಿನಸಿ, ಆಹಾರ ವ್ಯಾಪಾರ, ಬೀದಿ ವ್ಯಾಪಾರ ಚಟುವಟಿಕೆಗೆ ಅನುಮತಿ
- ಹೋಟೆಲ್, ರೆಸ್ಟೋರೆಂಟ್‌ಗಳ ಪಾರ್ಸೆಲ್ ಸೇವೆ ಮಾತ್ರ
- ವೈದ್ಯಕೀಯ, ತುರ್ತು ಹಾಗೂ ಅಗತ್ಯ ಸೇವೆಗಳು, ಔಷಧ ಮಳಿಗೆಗಳ ಸಿಬ್ಬಂದಿ
- ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 200, ಸಭಾಂಗಣದಲ್ಲಿ 100 ಮಂದಿಗೆ ಮಾತ್ರ ಅವಕಾಶ
*ಯಾವುದಕ್ಕೆ ನಿರ್ಬಂಧ?
ತುರ್ತು ಸೇವಾ ವಲಯ ಹೊರತುಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆ, ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಉದ್ಯಾನ, ಎಲ್ಲ ಮಾದರಿ ಕಚೇರಿಗಳು ಬಂದ್, ಮದುವೆ ಹೊರತುಪಡಿಸಿ ಎಲ್ಲಾ ವಿಧದ ಕಾರ್ಯಕ್ರಮ.
*ಸಾರಿಗೆ ವ್ಯವಸ್ಥೆ
- ರೈಲು, ವಿಮಾನ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಇದೆ.
- ಬಿಎಂಟಿಸಿ ಸಾರ್ವಜನಿಕ ಸೇವೆ ಇಲ್ಲ (ತುರ್ತು ಅಗತ್ಯ ಸೇವಾ ವಲಯಕ್ಕೆ ಮಾತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ