*ಜಿಲ್ಲಾವಾರು ನಿರ್ಬಂಧಕ್ಕೆ ಸಚಿವರ ಒತ್ತಾಯ
*ಸಂಕ್ರಾಂತಿ ಬಳಿಕ ಸಿಎಂ ತೀರ್ಮಾನ
*ರಾಜ್ಯಾದ್ಯಂತ ಕೋವಿಡ್ ನಿರ್ಬಂಧ ಜಾರಿ
ಸಂಪುಟ ಸಭೆಯಲ್ಲಿ ಕೆಲವು ಸಚಿವರಿಂದ ವಿರೋಧ
ಬೆಂಗಳೂರು (ಜ. 7): ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಕೋವಿಡ್ ಹೆಚ್ಚಿರುವ ಜಿಲ್ಲೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಯಲ್ಲಿ ನಿರ್ಬಂಧಗಳು ಅಗತ್ಯ ಇಲ್ಲ ಎಂದು ಸಂಪುಟ ಸಭೆಯಲ್ಲಿ ಕೆಲವು ಸಚಿವರು ವಿರೋಧಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (K S Eshwarappa) ಸೇರಿದಂತೆ ಹಲವು ಸಚಿವರು ಮಾರ್ಗಸೂಚಿ ಹೊರಡಿಸುವ ಮೊದಲು ವಾಸ್ತವಾಂಶ ಅರಿತುಕೊಳ್ಳಬೇಕು. ಏಕಾಏಕಿ ರಾಜ್ಯಾದ್ಯಂತ ನಿರ್ಬಂಧಗಳನ್ನು ಹೇರುವ ಬದಲು ಜಿಲ್ಲಾವಾರು ನಿರ್ಬಂಧಗಳನ್ನು ವಿಧಿಸುವುದೂ ಸೂಕ್ತ. ಈಗಿರುವ ನಿಯಮಾವಳಿಗಳನ್ನು ಪರಿಷ್ಕರಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಸಚಿವರು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಇದೇ ತಿಂಗಳ 14 ಅಥವಾ 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮತ್ತೊಮ್ಮೆ ಸಭೆ ನಡೆಸಿ ಈಗಿರುವ ನಿಯಮಾವಳಿಗಳನ್ನು ಸಡಿಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರು ಸೇರಿದಂತೆ ಕೋವಿಡ್ ಹೆಚ್ಚಿರುವ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಯಲ್ಲಿ ನಿಬಂಧನೆಗಳು ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ಸಂಪುಟ ಸಭೆಯಲ್ಲಿ ಕೆಲವು ಸಚಿವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜ.14 ಅಥವಾ 15ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Covid Vaccination : 11 ಬಾರಿ ಕೋವಿಡ್-19 ಲಸಿಕೆ ಪಡೆದಿದ್ದೇನೆ ಎಂದ ಬಿಹಾರದ ವ್ಯಕ್ತಿ, ತನಿಖೆಗೆ ಆದೇಶ!
ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಹೊರಡಿಸಲಾಗಿದೆ. ಇದಕ್ಕೂ ಕಾಂಗ್ರೆಸ್ ಪಾದಯಾತ್ರೆಗೂ ಸಂಬಂಧವಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಿ ಪಾದಯಾತ್ರೆಯ ಕೈಗೊಳ್ಳಲು ಯಾವುದೇ ಅಡ್ಡಿ ಇಲ್ಲ. ಕಾಂಗ್ರೆಸ್ ಪಾದಯಾತ್ರೆಯಿಂದ ಸರ್ಕಾರಕ್ಕೇನು ಯಾವುದೇ ಗಂಡಾಂತರ ಇಲ್ಲ. ಒಮಿಕ್ರೋನ್ ಸೋಂಕು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮೊದಲನೇ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಆದ ಅವಘಡಗಳು ಘಟಿಸಬಾರದು ಎಂಬುದು ಸರ್ಕಾರದ ಉದ್ದೇಶ ಎಂದರು.
200 ದಿನ ಬಳಿಕ 5000+ ಕೇಸ್
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದು, ಗುರುವಾರ ಬರೋಬ್ಬರಿ 5,031 ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 4,324 ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪಾಸಿಟಿವಿಟಿ ದರ ಶೇ.7.5 ದಾಟಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರ ದಾಟಿದೆ. ಕೋವಿಡ್‌ನಿಂದ ಗುರುವಾರ ಒಂದು ಸಾವು ಸಂಭವಿಸಿದೆ.
ಇದನ್ನೂ ಓದಿ: Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ
ಕಳೆದ ಜೂನ್ 20ಕ್ಕೆ 5,815 ಮಂದಿಯಲ್ಲಿ ಸೋಂಕು ವರದಿಯಾದ 200 ದಿನಗಳ ಬಳಿಕ ಮೊದಲ ಬಾರಿಗೆ 5 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜೊತೆಗೆ ರಾಜ್ಯದ ಅನ್ಯ ಭಾಗಗಳಲ್ಲಿಯೂ ಹೊಸ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಒಂದಂಕಿಯಿಂದ ಎರಡಂಕಿಗೆ ಜಿಗಿದಿವೆ. 1.27 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಶೇ.3.95 ಪಾಸಿಟಿವಿಟಿ ದರ ದಾಖಲಾಗಿದೆ. ನಿನ್ನೆ ಕೂಡ 1.27 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಶೇ. 0.66 ಜಾಸ್ತಿ ವರದಿಯಾಗಿದೆ. 271 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ಏರಿದೆ.