9.6 ಲಕ್ಷ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್‌ಶಿಪ್‌: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Nov 10, 2023, 4:00 AM IST

ಬಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


ಬೆಂಗಳೂರು (ನ.10): ಬಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾರ್ಮಿಕ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ‘ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ. ಶೂದ್ರ ಮತ್ತು ಮಹಿಳೆಯರನ್ನು ಶತಮಾನಗಳಿಂದಲೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. 

ಹೀಗಾಗಿ, ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶವಿದೆ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ, ನಾವು ಕಾರ್ಮಿಕರ ಮಕ್ಕಳಿಗೆ ಸಹಾಯಧನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ’ ಎಂದರು. ಶೇ.83ರಷ್ಟು ಕಾರ್ಮಿಕರು ಇಂದಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯ ಬಿಟ್ಟರೆ ಎರಡನೇ ಅತಿ ದೊಡ್ಡ ಸಮುದಾಯ ಕಾರ್ಮಿಕರು. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಸವಣ್ಣನವರು ಕಾಯಕ ಪದ್ಧತಿಯನ್ನು ಪಸರಿಸಿದರು. 

Tap to resize

Latest Videos

undefined

ಮರಾಠಿಗರು ಒಗ್ಗೂಡಿದರೆ ಎಲ್ಲ ಪಕ್ಷಗಳು ಪರಿಗಣಿಸುತ್ತೆ: ಸಚಿವ ಸಂತೋಷ್‌ ಲಾಡ್

ಈ ಕಾರ್ಯಕ್ರಮದ ಮೂಲಕ 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆಯಾಗುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಶಿಕ್ಷಿತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದು ಸಿಎಂ ನುಡಿದರು. ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು. ಈ ವಿಭಜಕರು ಶೂದ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರುವುದನ್ನು ವಿರೋಧಿಸುತ್ತಾರೆ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರನ್ನು ನಾವು ವಿರೋಧಿಸಬೇಕು. 

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಹೇಳಿದರು. ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಾರ್ಮಿಕರು ತಮ್ಮ ಸಲಹೆಗಳನ್ನು ಸಚಿವರುಗಳಿಗೆ ನೀಡಿದರೆ ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಲಾಗುತ್ತದೆ. ನಿಮ್ಮ ಮಕ್ಕಳು ದೇಶದ ಆಸ್ತಿ. ಅವರ ಭವಿಷ್ಯ ದೇಶದ ಆಸ್ತಿ. ಅಧಿಕಾರವಂತರು, ಶ್ರೀಮಂತರ ಮಕ್ಕಳು ದೊಡ್ಡವರಾಗುವುದಕ್ಕಿಂತ ನಿಮ್ಮ ಮಕ್ಕಳು ದೊಡ್ಡವರಾಗಿ ಬೆಳೆಯಬೇಕು. ಆಗ ಸಮಾಜ ಬೆಳೆಯುತ್ತದೆ ಎಂದು ನಮ್ಮ ಸರ್ಕಾರ ನಂಬಿಕೆ ಇಟ್ಟುಕೊಂಡಿದೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಊರಿಗೆ ಹಿಂದಿರುಗುವ ಕಾರ್ಮಿಕರಿಂದ ಬಿಜೆಪಿ ಸರ್ಕಾರ 3 ಪಟ್ಟು ಟಿಕೆಟ್ ದರ ವಸೂಲಿಗೆ ಮುಂದಾಗಿತ್ತು. 

ರಾಜ್ಯದಲ್ಲಿರುವುದು ಸಿದ್ದರಾಮಯ್ಯ, ಡಿಕೆಶಿಯವರ ಸಮ್ಮಿಶ್ರ ಸರ್ಕಾರ: ಗೋವಿಂದ ಕಾರಜೋಳ ಲೇವಡಿ

ಯಾದಗಿರಿಯವರು ಈ ವಿಚಾರ ತಿಳಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ಸರ್ಕಾರ ಕಾರ್ಮಿಕರನ್ನು ಉಚಿತವಾಗಿ ಕಳುಹಿಸದಿದ್ದರೆ, ನಾನೇ ಪಕ್ಷದ ಪರವಾಗಿ 1 ಕೋಟಿ ನೀಡುವುದಾಗಿ ಘೋಷಿಸಿದೆ. ಈ ತೀರ್ಮಾನ ಇಡೀ ದೇಶಕ್ಕೆ ಮಾದರಿಯಾಯಿತು. ಒಂದು ವಾರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ರೈಲ್ವೆ ಇಲಾಖೆಯು ಉಚಿತ ರೈಲು ವ್ಯವಸ್ಥೆ ನೀಡಿತು’ ಎಂದು ಡಿಸಿಎಂ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಶ್ರೀನಿವಾಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

click me!