ಉತ್ತರ ಕನ್ನಡ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಿಲ್ಲೆಯ ಹೋರಾಟಗಾರರಿಂದ ಪಾದಯಾತ್ರೆ

By Govindaraj S  |  First Published Nov 9, 2023, 11:03 PM IST

ಜಿಲ್ಲೆಯಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಲವು ವರ್ಷಗಳ ಬೇಡಿಕೆ. ಜಿಲ್ಲೆಯ ಜನರ ಈ ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ಶಿರಸಿಯಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅನಂತ ಮೂರ್ತಿ ಹೆಗಡೆ ಪಾದಯಾತ್ರೆ ಪ್ರಾರಂಭಿಸಿದ್ದು, ಇಂದು ಕಾರವಾರದಲ್ಲಿ ಸಮಾಪನಗೊಂಡಿದೆ. 
 


ಉತ್ತರ ಕನ್ನಡ (ನ.09): ಜಿಲ್ಲೆಯಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಲವು ವರ್ಷಗಳ ಬೇಡಿಕೆ. ಜಿಲ್ಲೆಯ ಜನರ ಈ ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ಶಿರಸಿಯಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅನಂತ ಮೂರ್ತಿ ಹೆಗಡೆ ಪಾದಯಾತ್ರೆ ಪ್ರಾರಂಭಿಸಿದ್ದು, ಇಂದು ಕಾರವಾರದಲ್ಲಿ ಸಮಾಪನಗೊಂಡಿದೆ. ಈ ಮೂಲಕ ಜಿಲ್ಲೆಯ ಹೋರಾಟಗಾರರು ಕಾಂಗ್ರೆಸ್ ಸರಕಾರವನ್ನು ಮತ್ತೆ ಬಡಿದೆಬ್ಬಿಸುವ ಕೆಲಸ ನಡೆಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸುಸಜ್ಜಿತ ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಜನರ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತದ ಸಮಯದಲ್ಲಂತೂ ಹೋರಾಟಗಾರರು ರಕ್ತದಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆಸ್ಪತ್ರೆಯ ಬೇಡಿಕೆಯಿಟ್ಟಿದ್ದರು. ಆದರೆ, ಇದೇ ಭರವಸೆಯೊಂದಿಗೆ ಜನರ ಒಲವನ್ನು ಪಡೆದು ಜಿಲ್ಲೆಯಲ್ಲಿ ಗೆದ್ದು ಬದ್ದ ಕಾಂಗ್ರೆಸ್ ಮುಖಂಡರು ಕೂಡಾ ಸುಮ್ಮನಿರುವುದು ನೋಡಿ ಹೋರಾಟಗಾರರು ಮತ್ತೆ ಬೀದಿಗಿಳಿದಿದ್ದಾರೆ. 

Tap to resize

Latest Videos

undefined

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಇದೇ ಬೇಡಿಕೆಯೊಂದಿಗೆ ಇತ್ತೀಚೆಗೆ ಶಿರಸಿಯಿಂದ ಪಾದಯಾತ್ರೆ ಕೈಗೊಂಡಿದ್ದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅನಂತ ಮೂರ್ತಿ ಹೆಗಡೆ ಅವರ ಹೋರಾಟ ಇಂದು ಕಾರವಾರದಲ್ಲಿ ಸಮಾರೋಪಗೊಂಡಿದೆ. ಕಾರವಾರವನ್ನು ಪ್ರವೇಶಿಸಿದ ಪಾದಯಾತ್ರೆಗೆ ಕಾರವಾರದ ಆಟೋ ಚಾಲಕ ಹಾಗೂ ಮಾಲೀಕರ ಸಂಘ, ವಿದ್ಯಾರ್ಥಿ ಒಕ್ಕೂಟ ಹಾಗೂ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದರು.  ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದ ಬಳಿ ಪಾದಯಾತ್ರೆಗೆ ಸ್ವಾಗತಿಸಲಾಗಿದ್ದು, ಬಳಿಕ ಕಾಲ್ನಡಿಗೆಯ ಮೆರವಣಿಗೆಯು ಕಾರವಾರ ನಗರದ ಬಿಲ್ಟ್ ವೃತ್ತ, ಸುಭಾಷ ವೃತ್ತ, ಗ್ರೀನ್ ಸ್ಟೀಟ್ ರಸ್ತೆಯ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ವೇದಿಕೆಯಲ್ಲಿ ಸಮಾರೋಪಗೊಂಡಿತು. 

ಪಾದಯಾತ್ರೆಯಲ್ಲಿ 250 ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಅನಂತಮೂರ್ತಿ ಹೆಗಡೆ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಒಂದು ಜಿಲ್ಲೆಗೆ ಆಸ್ಪತ್ರೆ ಬೇಕು ಎಂದು ಪಾದಯಾತ್ರೆ ಮಾಡುವ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿ. ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಇನ್ನೆಷ್ಟು ಜನರು ಸಾಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಜನರಿಗೆ ಆವುದೇ ಅಪಘಾತವಾದಲ್ಲಿ ಪಕ್ಕದ ಜಿಲ್ಲೆಗಳು ಅಥವಾ ಗೋವಾ ರಾಜ್ಯಕ್ಕೆ ತೆರಳಬೇಕಾಗಿದೆ. 

ಈ ವೇಳೆ ರಸ್ತೆ ಮಧ್ಯೆಯೇ ಅನೇಕರು ಪ್ರಾಣಿಗಳಂತೆ ಜೀವ ಕಳೆದುಕೊಂಡಿದ್ದಾರೆ. ಸರಕಾರವು ನಮ್ಮನ್ನೂ ಕೂಡಾ ಮನುಷ್ಯರೆಂದು ಭಾವಿಸಿ ಆಸ್ಪತ್ರೆಯ ನಿರ್ಮಾಣ ಮಾಡಲು ಮುಂದಾಗಬೇಕು. ಜಿಲ್ಲೆಯಲ್ಲಿ ಐದು ಬಾರಿ ಸಚಿವರಾಗಿ, ಹಲವು ಬಾರಿ ಉಸ್ತುವಾರಿಗಳಾಗಿದ್ದು, ಪ್ರಭಲ ಖಾತೆಗಳನ್ನು ನಿರ್ವಹಿಸಿದವರಿದ್ದರೂ ಒಂದು ಆಸ್ಪತ್ರೆ ಮಾಡಲು ಸಾದ್ಯವಾಗಿಲ್ಲ. ಹೀಗಾಗಿ ಇವತ್ತಿನ ವರೆಗೆ ಒಂದು ಲೆಕ್ಕ, ಇನ್ನು ಮೇಲೆ ಒಂದು ಲೆಕ್ಕ. ಜಿಲ್ಲೆಯಲ್ಲಿ ಘಟ್ಟದ ಮೇಲೆ ಹಾಗೂ ಕರಾವಳಿ ಭಾಗದಲ್ಲಿ ಪ್ರತ್ಯೇಕ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಿದೆ. ಈ ಹಿಂದೆ ಕುಮಟಾದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಯನ್ನು ಕಾಂಗ್ರೆಸ್ ತಡೆಹಿಡಿದಿದೆ. ಹೀಗೇ ಮುಂದುವರೆದರೆ ಪ್ರತಿ ಬೀದಿಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಆಸ್ಪತ್ರೆಯ ವಿಷಯದಲ್ಲಿ ಯಾವುದೇ ಸರಕಾರ ಬಂದರೂ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಸರಕಾರ ಇಲ್ಲಿನ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಕನಿಷ್ಠ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಕೊಡಬೇಕು. ಕಾರವಾರದಲ್ಲಿ ಹೆಸರಿಗಷ್ಟೇ ವೈದ್ಯಕೀಯ ಕಾಲೇಜು ಇದೆ. 

ಬರದಿಂದ ರೈತರಿಗೆ ಸಂಕಷ್ಟ, ರಾಜ್ಯ ಸರ್ಕಾರ ಕಚ್ಚಾಟ: ಮಾಜಿ ಸಿಎಂ ಸದಾನಂದಗೌಡ ತರಾಟೆ!

ಕಾರವಾರದಲ್ಲಿ ಇಸ್ರೇಲ್ ರೀತಿಯೇ ಜಿಲ್ಲೆಯಲ್ಲಿ ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಶೀಘ್ರದಲ್ಲಿಯೇ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಬೇಡಿಕೆಯ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.  ಒಟ್ಟಿನಲ್ಲಿ  ಉತ್ತರಕನ್ನಡ‌ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ಹೋರಾಟ ಮತ್ತೆ ಗರಿಗೆದರಿದ್ದು, ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ್ದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗುವುದರಲ್ಲಿ ಎರಡು ಮಾತಿಲ್ಲ.

click me!