ಕೃಷಿ ಜಮೀನಿಗೆ ರಸ್ತೆ ಇರುವಂತೆ ನೋಡಿಕೊಳ್ಳಿ: ಸಚಿವ ಕೃಷ್ಣ ಭೈರೇಗೌಡ

By Kannadaprabha News  |  First Published Nov 10, 2023, 1:20 AM IST

ಕೃಷಿ ಜಮೀನಿಗೆ ರೈತರು ಓಡಾಡಲು ರಸ್ತೆ ಕಲ್ಪಿಸಿಕೊಡಿ. ಬಾಕಿ ಇರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗಾಗಿ ಸಾಗುವಳಿ ಚೀಟಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ತಾಕೀತು ಮಾಡಿದರು. 


ಕೊಪ್ಪಳ (ನ.10): ಕೃಷಿ ಜಮೀನಿಗೆ ರೈತರು ಓಡಾಡಲು ರಸ್ತೆ ಕಲ್ಪಿಸಿಕೊಡಿ. ಬಾಕಿ ಇರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಮುಂದಿನ ಆರು ತಿಂಗಳ ಒಳಗಾಗಿ ಸಾಗುವಳಿ ಚೀಟಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ತಾಕೀತು ಮಾಡಿದರು. ಜಿಲ್ಲೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಮ್ಮದೇ ಕೃಷಿ ಭೂಮಿಗೆ ಓಡಾಡಲು ರೈತರಿಗೆ ರಸ್ತೆ ಇಲ್ಲದೇ ಸಾಕಷ್ಟು ತೊಂದರೆಗೀಡಾಗಿದ್ದರು.‌ ಈ ಸಮಸ್ಯೆ ನೀಗಿಸಲು ಕಳೆದ‌ ವಾರ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು ಎಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಎಲ್ಲ ರೈತರ ಕೃಷಿ ಭೂಮಿಗೆ ರಸ್ತೆ ಒದಗಿಸಬೇಕು. ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಮುನ್ನ ಅಂತಹ ಪ್ರದೇಶಗಳಲ್ಲೂ ಕೃಷಿ ಭೂಮಿಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಮುಂದಿನ ಆರು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Latest Videos

undefined

ಬರಗಾಲದಲ್ಲಿ ರೈತರಿಗೆ ಸಾಂತ್ವನ ಹೇಳದ ರಾಜ್ಯ ಸರ್ಕಾರ: ಕೆ.ಎಸ್.ಈಶ್ವರಪ್ಪ ಆರೋಪ

ಕುಡಿಯುವ ನೀರಿಗಾಗಿ ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದೆ.‌ ಜಿಲ್ಲಾಧಿಕಾರಿ ಖಾತೆಯಲ್ಲಿ ₹19.5 ಕೋಟಿ ಹಣ ಇದೆ. ಈ ಹಣವನ್ನು ಬಳಸಿಕೊಳ್ಳಬಹುದು. ಮುಂಜಾಗ್ರತಾ ಕ್ರಮವಾಗಿ ಇಲಾಖೆಯಿಂದಲೇ ಬೋರ್ ಕೊರೆಸಲು ಸಹ ಪಿಡಿಎಂಗಳು ಪಾಯಿಂಟ್ ಗುರುತಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಸೂಚಿಸಿದರು. ಬೆಳೆ ಪರಿಹಾರ ಆನ್‌ಲೈನ್ ಮೂಲಕವೇ ರೈತರಿಗೆ ತಲುಪಲಿದ್ದು, ಅವರ ಮಾಹಿತಿ ಬಿಟ್ಟುಹೋದರೆ ಮ್ಯಾನ್ಯುವಲ್ ಆಗಿ ಅವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ರೈತರ ಬೆಳೆ ಸಮೀಕ್ಷೆ ನಡೆಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸೂಚಿಸಿದರು.

ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ ಬಡವರಿಗೆ ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ, ಕೊಪ್ಪಳದಲ್ಲಿ ಈ ಸಂಬಂಧ ಗಮನಾರ್ಹ ಕೆಲಸ ಆಗದಿರುವುದು ವಿಷಾದನೀಯ ಎಂದು ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ಹೊರಹಾಕಿದರು. ಜಿಲ್ಲೆಯಲ್ಲಿ 36 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ 27 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ ಗ್ರಾಮಗಳನ್ನು ಕಂದಾಯ ಗ್ರಾಮಗಳು ಎಂದು ಘೋಷಿಸಿ ಹಕ್ಕುಪತ್ರ ನೀಡುವುದು ಯಾವಾಗ? ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಇ ಆಫೀಸ್ ಶೇ.100 ಬಳಕೆಗೆ ತಾಕೀತು: ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಬಹುತೇಕ ಎಲ್ಲ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಎಲ್ಲ ಕಡತಗಳೂ ಇ-ಆಫೀಸ್ ಮೂಲಕ ವಿಲೇವಾರಿಯಾಗುತ್ತಿಲ್ಲ ಎಂದು ಬೇಸರ ಹೊರಹಾಕಿದರು. ಇ-ಆಫೀಸ್ ಮೂಲಕ ಕಡತ ವಿಲೇವಾರಿಗೆ ಮುಂದಾದರೆ, ಎಲ್ಲ ಕೆಲಸಗಳೂ ವೇಗ ಪಡೆಯುತ್ತದೆ. ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತದೆ. ಹೀಗಾಗಿ ಶೀಘ್ರದಲ್ಲಿ ಕೊಪ್ಪಳದಲ್ಲಿ ಇ-ಆಫೀಸ್ ಅನ್ನು ಶೇ.100 ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇದ್ದರು.

click me!