ಪರಿಶಿಷ್ಟ ಜಾತಿ ಒಳ ಮೀಸಲು: ಇಂದಿನಿಂದ ಮನೆ ಮನೆ ಗಣತಿ ಆರಂಭ

Published : May 05, 2025, 05:37 AM IST
ಪರಿಶಿಷ್ಟ ಜಾತಿ ಒಳ ಮೀಸಲು: ಇಂದಿನಿಂದ ಮನೆ ಮನೆ ಗಣತಿ ಆರಂಭ

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಸೋಮವಾರದಿಂದ ಸಮೀಕ್ಷೆಗೆ ಚಾಲನೆ ನೀಡಲಿದ್ದು, ಗಣತಿದಾರರು ಪ್ರತಿ ಮನೆ-ಮನೆಗೂ ಆಗಮಿಸಿ ಸಮೀಕ್ಷೆ ನಡೆಸಲಿದ್ದಾರೆ.

ಬೆಂಗಳೂರು (ಮೇ.5): ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಸೋಮವಾರದಿಂದ ಸಮೀಕ್ಷೆಗೆ ಚಾಲನೆ ನೀಡಲಿದ್ದು, ಗಣತಿದಾರರು ಪ್ರತಿ ಮನೆ-ಮನೆಗೂ ಆಗಮಿಸಿ ಸಮೀಕ್ಷೆ ನಡೆಸಲಿದ್ದಾರೆ.

ಗಣತಿದಾರರು ಕೇವಲ ಪರಿಶಿಷ್ಟ ಜಾತಿಗೆ ಸೇರಿದವರ ಮನೆಗೆ ಮಾತ್ರವಲ್ಲದೆ ಎಲ್ಲ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಈ ವೇಳೆ ಪರಿಶಿಷ್ಟ ಜಾತಿ ಅಲ್ಲದ ಕುಟುಂಬಗಳಿಂದ ಮನೆ ಸಂಖ್ಯೆಯನ್ನು (ಡೋರ್‌ ನಂಬರ್) ಆ್ಯಪ್‌ನಲ್ಲಿ ನಮೂದಿಸಿ ಕುಟುಂಬದಲ್ಲಿನ ಸದಸ್ಯರ ಸಂಖ್ಯೆ ದಾಖಲಿಸಲಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದಿಂದ ಮಾತ್ರ ಪರಿಶಿಷ್ಟ ಜಾತಿ, ಉಪಜಾತಿ ಹೆಸರು, ಕುಟುಂಬ ಸದಸ್ಯರ ವಿವರ, ವೃತ್ತಿ, ಶಿಕ್ಷಣ, ಸಾರ್ವಜನಿಕ ಉದ್ಯೋಗದ ಪ್ರಾತಿನಿಧ್ಯತೆ, ಸಾಮಾಜಿಕ ಸ್ಥಿತಿಗತಿ ಕುರಿತ ವಿವಿಧ ದತ್ತಾಂಶಗಳ ಬಗ್ಗೆ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ವೇಳೆ ಯಾವುದೇ ಮನೆ ಮೇಲೂ ನಿರ್ದಿಷ್ಟವಾದ ಕಡ್ಡಾಯ ಗುರುತು ಮಾಡುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಹೇಳಿದ್ದಾರೆ.

ಇದನ್ನೂ ಓದಿ: ಎಸ್ಸಿ ಒಳ ಮೀಸಲಾತಿಗಾಗಿ ಮತ್ತೊಂದು ಸಮೀಕ್ಷೆ: ನ್ಯಾ.ನಾಗಮೋಹನದಾಸ್‌ ಆಯೋಗಕ್ಕೇ ಹೊಣೆ

ಮೊದಲು ಮನೆ-ಮನೆಗೆ ಭೇಟಿ ನೀಡುವ ಗಣತಿದಾರರು ಬಾಗಿಲ ಮೇಲೆ ಗುರುತು ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಇದು ದುರ್ಬಳಕೆ ಆಗುವ ಸಾಧ್ಯತೆ ಇತ್ತು. ಹೀಗಾಗಿ ಬೇರೆ ಬೇರೆ ಕಾರಣಗಳಿಗೆ ಪ್ರಸ್ತಾಪ ಕೈಬಿಟ್ಟಿದ್ದೇವೆ. ಮತಗಟ್ಟೆ ಮಾಹಿತಿ ಆಧಾರದ ಮೇಲೆ ಮನೆ-ಮನೆಗೂ ಭೇಟಿ ನೀಡಿಯೇ ಸಮೀಕ್ಷೆ ನಡೆಸಲು ಸ್ಪಷ್ಟ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಸಮೀಕ್ಷೆ:

ಗಣತಿದಾರರು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಸಮೀಕ್ಷೆ ನಡೆಸಬೇಕು. ರಾತ್ರಿ ವೇಳೆ ಒಂದು ಕಡೆ ಕೂತು ಎಲ್ಲಾ ಮನೆಗಳ ವಿವರ ದಾಖಲಿಸಲು ಸಾಧ್ಯವಿಲ್ಲ. ಸಂಜೆ 6 ಗಂಟೆಗೆ ಆ್ಯಪ್‌ ತನ್ನಿಂತಾನೇ ಆಫ್‌ ಆಗಲಿದೆ. ಬಳಿಕ ಮರು ದಿನ ಬೆಳಗ್ಗೆ 6ಕ್ಕೆ ಸಮೀಕ್ಷೆ ದತ್ತಾಂಶ ದಾಖಲಿಸಲು ತೆರೆದುಕೊಳ್ಳಲಿದೆ.ಇನ್ನು ಪ್ರತಿ 10 ಮಂದಿ ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅವರು ಗಣತಿದಾರರು ಸಮೀಕ್ಷೆ ನಡೆಸಿರುವ ಮನೆಗಳಿಗೆ ರ್‍ಯಾಂಡಮ್ ಆಗಿ ಭೇಟಿ ನೀಡಿ ಮರುಪರಿಶೀಲನೆ ನಡೆಸಲಿದ್ದಾರೆ. ಹೀಗಾಗಿ ಯಾವುದೇ ರೀತಿಯಲ್ಲೂ ಗಣತಿದಾರರು ನಿರ್ಲಕ್ಷ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದು ನಾಗಮೋಹನ್‌ದಾಸ್‌ ಅವರು ವಿವರಣೆ ನೀಡಿದರು.

ಇದನ್ನೂ ಓದಿ:  ಒಳ ಮೀಸಲಾತಿ ಜಾರಿತನಕ ನೇಮಕಾತಿ, ಬಡ್ತಿಗೆ ತಡೆ: ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

ಮೇ 5 ರಿಂದ ಮೇ 17ರವರೆಗೆ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತದೆ. ಈ ವೇಳೆ ತಪ್ಪಿ ಹೋಗಿರುವವರು ತಮ್ಮ ವಿವರ ಘೋಷಿಸಲು ಪಂಚಾಯಿತಿ ಮಟ್ಟದಲ್ಲಿ ಮೇ 19 ರಿಂದ 21ರವರೆಗೆ ಮೂರು ದಿನಗಳ ಕಾಲ ತಾತ್ಕಾಲಿಕ ಶಿಬಿರ ಕೇಂದ್ರಕ್ಕೆ ಭೇಟಿ ನೀಡಬಹುದು.ಇನ್ನು ಮನೆ-ಮನೆ ಸಮೀಕ್ಷೆ ಹಾಗೂ ಶಿಬಿರ ಕೇಂದ್ರಕ್ಕೂ ಭೇಟಿ ನೀಡಲಾಗದೆ ಹೊರ ಪ್ರದೇಶದಲ್ಲಿ ವಾಸವಾಗಿರುವವರ ಅನುಕೂಲಕ್ಕಾಗಿ ಆನ್‌ಲೈನ್‌ ಮೂಲಕ ದತ್ತಾಂಶ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಂಥವರು ಮೇ 19 ರಿಂದ ಮೇ 23ರವರೆಗೆ ಆನ್‌ಲೈನ್‌ ಮೂಲಕ ತಮ್ಮ ಉಪ ಜಾತಿ ಹಾಗೂ ವಿವರ ಘೋಷಿಸಿಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ