ಒಂದು ಆಧಾರ್ ಸಂಖ್ಯೆ ಒಬ್ಬರಿಗೆ. ಗುರುತು ಪತ್ತೆಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಆಧಾರ್ ಕಾರ್ಡ್‌ನಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ನಂಬರ್ ನೀಡಲಾಗುತ್ತದೆ. ಆದರೆ, ಇಲ್ಲಿ ಇಬ್ಬರ ಹೆಸರಿಗೂ ಒಂದೇ ಆಧಾರ್ ನಂಬರ್ ಇದೆ!
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜು.21) : ಒಂದು ಆಧಾರ್ ಸಂಖ್ಯೆ ಒಬ್ಬರಿಗೆ. ಗುರುತು ಪತ್ತೆಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಆಧಾರ್ ಕಾರ್ಡ್‌ನಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ನಂಬರ್ ನೀಡಲಾಗುತ್ತದೆ. ಆದರೆ, ಇಲ್ಲಿ ಇಬ್ಬರ ಹೆಸರಿಗೂ ಒಂದೇ ಆಧಾರ್ ನಂಬರ್ ಇದೆ!
ಇವರ ಬ್ಯಾಂಕ್ ಖಾತೆಯ ಮೊತ್ತ ಅವರ ಖಾತೆಗೆ ವರ್ಗಾವಣೆಯಾಗುತ್ತದೆ! ಇವರ ಖಾತೆಯಿಂದ ಮತ್ತೊಬ್ಬರು (ಒಂದೇ ಆಧಾರ್ ನಂಬರ್ ಇರುವವರು) ಹಣ ಸೆಳೆದಿದ್ದಾರೆ. ಇದು ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಆಗಿರುವ ಯಡವಟ್ಟು.
ಯಾರಾರ ನನ್ ಆಧಾರ ಕಾರ್ಡ್ ತಿದ್ದಿಸಿ ಕೊಡ್ರಿ; ತಿದ್ದುಪಡಿಗೆ ವೃದ್ಧೆ ಪರದಾಟ!
ಬೆಟಗೇರಿ ಗ್ರಾಪಂ ಬಿಲ್ ಕಲೆಕ್ಟರ್ ಅಂದಪ್ಪ ತಿಗರಿ(Andappa tigari) ಅವರ ಆಧಾರ ಸಂಖ್ಯೆ 427911374329. ಹಾಗೆಯೇ ಇದೇ ಗ್ರಾಮದ ಯಲ್ಲಮ್ಮ ಹನುಮಂತಪ್ಪ(Yallamma hanamantappa) ಅವರ ಆಧಾರ್ ಸಂಖ್ಯೆ 427911374329 ಇದೆ. ಇದು, ಈಗ ಸಮಸ್ಯೆಗೆ ಕಾರಣವಾಗಿದ್ದು, ಇದನ್ನು ತಿದ್ದುಪಡಿ ಮಾಡಿಸಲು ಕಳೆದೊಂದು ವರ್ಷದಿಂದ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.
ಅಂದಪ್ಪ ತಿಗರಿ ಅವರ ಖಾತೆಯಿಂದ ಕಳೆದೊಂದು ವರ್ಷದ ಹಿಂದೆ ಏಕಾಏಕಿ .1500 ಹಣ ಸೆಳೆಯಲಾಗಿತ್ತು. ಉದ್ಯೋಗ ಖಾತ್ರಿ ಕೂಲಿ ಪಾವತಿಸಲು ಬ್ಯಾಂಕ್ ಸಿಬ್ಬಂದಿ ಹಳ್ಳಿಗೆ ಸುತ್ತಾಡುತ್ತಾರೆ. ಆಗ ಯಲ್ಲಮ್ಮ ಹನುಮಂತಪ್ಪ ಅವರು .1500 ಬ್ಯಾಂಕ್ ಖಾತೆಯಿಂದ ಸೆಳೆದಿರುತ್ತಾರೆ. ಅದು ಅಂದಪ್ಪ ತಿಗರಿ ಅವರ ಖಾತೆಯಿಂದ ಕಡಿತವಾಗಿದೆ.
ಖಾತೆಯಿಂದ .1500 ಕಡಿತವಾಗಿರುವ ಬಗ್ಗೆ ಅಂದಪ್ಪ ತಿಗರಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿದೆ. ತಕ್ಷಣ ಅವರು ಬ್ಯಾಂಕಿಗೆ ಹೋಗಿ ಕೇಳಿದರೆ ನೀವೇ ಹಣ ಪಡೆದಿದ್ದರಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ನಾನು ಪಡೆದಿಲ್ಲ ಎಂದಾಗ ಪರಿಶೀಲನೆ ಮಾಡಿದ್ದಾರೆ. ಬೇರೊಬ್ಬರು ಹಣ ಪಡೆದಿರುವುದು ಗೊತ್ತಾಗಿದೆ. ಈ ಕುರಿತು ಪರಿಶೀಲನೆ ಮಾಡಿದಾಗ ಅವರ ಆಧಾರ್ ಕಾರ್ಡ್ ಮತ್ತು ಯಲ್ಲಮ್ಮ ಹನುಮಂತಪ್ಪ ಅವರ ಆಧಾರ ಕಾರ್ಡ್ ನಂಬರ್ ಎರಡೂ ಒಂದೇ ಆಗಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲ, ಅಂದಪ್ಪ ಅವರ ಎಲ್ಲ ಬ್ಯಾಂಕ್ ಖಾತೆ ಲಿಂಕ್ ಆಗಿರುವುದು ಬೆಳಕಿಗೆ ಬಂದಿದೆ. ಇದರಿಂದ ತಬ್ಬಿಬ್ಬಾದ ಅಂದಪ್ಪ ತಕ್ಷಣ ದೂರು ನೀಡಿದ್ದಾರೆ. ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಇಬ್ಬರೂ ಸಹ ಕರ್ನಾಟಕ ಒನ್‌ಗೆ ಹೋಗಿ ತಮ್ಮ ಸಮಸ್ಯೆ ಹೇಳಿದ್ದಾರೆ. ಆದರೂ ಇದುವರೆಗೂ ಇತ್ಯರ್ಥವಾಗಿಲ್ಲ.
ಅಂದಪ್ಪ ತಿಗರಿ ಅವರು ಈಗ ತಮ್ಮ ವೇತನ ಪಾವತಿ ಮಾಡಿಕೊಳ್ಳಲು ಹೆಣಗಾಡಬೇಕಾಗಿದೆ. ತಮ್ಮ ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೇತನ ಪಾವತಿಯಾದಾಗ ಚೆಕ್ ಮೂಲಕ ಡ್ರಾ ಮಾಡಿಕೊಳ್ಳುತ್ತಾರೆ ಮತ್ತು ತಕ್ಷಣ ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿಸುತ್ತಾರೆ. ಕಳೆದೊಂದು ವರ್ಷದಿಂದ ಹೀಗೆ ನಡೆದಿದೆ.
ಇದನ್ನು ಸರಿಮಾಡಿಕೊಡಿ ಎಂದು ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿದ್ದಾರೆ. ತಿದ್ದುಪಡಿಗೆ ಅರ್ಜಿ ಹಾಕಲಾಗಿದೆಯಾದರೂ ಅದು ತಿದ್ದುಪಡಿಯಾಗಿಲ್ಲ. ಇವರು ಹೊಸ ಆಧಾರ್ ಕಾರ್ಡ್ ಪಡೆಯುವುದಕ್ಕೂ ಅರ್ಜಿ ಸ್ವೀಕರಿಸುತ್ತಿಲ್ಲ. ನನ್ನ ಸಮಸ್ಯೆ ಪರಿಹರಿಸಿಕೊಡಿ ಎಂದು ಅಂದಪ್ಪ ಮನವಿ ಮಾಡಿದ್ದಾರೆ.
ತಿದ್ದುಪಡಿಗೆ ಅರ್ಜಿ ನೀಡಿದ ಮೇಲೆ ಯಲ್ಲಮ್ಮ ಹನುಮಂತಪ್ಪ ಅವರಿಗೆ ಆ ನಂಬರ್ ನೀಡಲಾಗಿದೆ. ಅಂದಪ್ಪ ಅವರಿಗೆ ಪ್ರತ್ಯೇಕ ಆಧಾರ್ ನಂಬರ್ ಬರುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೂ ಬಂದಿಲ್ಲ.
ವೇತನ ಪಡೆಯಲು ಮತ್ತು ಆಸ್ತಿ ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಆಧಾರ್ ಸಂಖ್ಯೆ ಕೇಳುತ್ತಾರೆ. ಅದೇ ನಂಬರ್ ನೀಡಿದರೆ ಅದು ಯಲ್ಲಮ್ಮ ಹನುಮಂತಪ್ಪ ಅವರ ಹೆಸರಿನಲ್ಲಿ ಇದೆ. ಹೀಗಾಗಿ, ಅಂದಪ್ಪ ತಿಗರಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಜಾರಿ ಬೆನ್ನಲ್ಲೇ ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನರು
ನನ್ನ ಆಧಾರ್ ನಂಬರ್ ಮತ್ತು ಮತ್ತೊಬ್ಬರ ಆಧಾರ ನಂಬರ್ ಒಂದೆಯಾಗಿದ್ದು, ತೀವ್ರ ಸಮಸ್ಯೆಯಾಗಿದೆ. ಬ್ಯಾಂಕ್ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ತೊಂದರೆಯಾಗುತ್ತಿದೆ.
ಅಂದಪ್ಪ ತಿಗರಿ, ಬೆಟಗೇರಿ ಗ್ರಾಮಸ್ಥ