
ಬೆಂಗಳೂರು(ಜು.21) ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ ಅನ್ನೋ ಪಿಇಎಸ್ ಕಾಲೇಜು ಆರೋಪಕ್ಕೆ ನೊಂದು ಬದುಕು ಅಂತ್ಯಗೊಳಿಸಿದ 19ರ ಹರೆಯದ ವಿದ್ಯಾರ್ಥಿ ಸಾವಿಗೆ ತಾಯಿ ಹೋರಾಟ ಆರಂಭಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಹೇಳುತ್ತಿರುವ ಘಟನೆಗೂ, ನಡೆದಿರುವ ಘಟನೆಗೆ ವ್ಯತ್ಯಾಸ ಕಾಣಿಸುತ್ತಿದೆ. ನ್ಯಾಯಕ್ಕಾಗಿ ಹೋರಾಟ ಆರಂಭಿಸಿರುವ ಮೃತ ವಿದ್ಯಾರ್ಥಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಆರಂಭಿಸಿದ್ದಾರೆ. ಗಿರಿನಗರದ ಪಿಇಎಸ್ ಯುನಿವರ್ಸಿಟಿಯಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿರುವ ಆದಿತ್ಯಪ್ರಭು ಜುಲೈ 17 ರಂದು ಕಾಲೇಜಿನ 8ನೇ ಮಹಡಿಯಿಂದ ಹಾರಿ ಬುದಕು ಅಂತ್ಯಗೊಳಿಸಿದ್ದ. ಕಳೆದೊಂದು ವಾರದಿಂದ ಆದಿತ್ಯ ಪ್ರಭು ಪೋಷಕರು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಆದಿತ್ಯಪ್ರಭು ಅನ್ನೋ ಖಾತೆ ತೆರೆದು ಹೋರಾಟ ತೀವ್ರಗೊಳಿಸಿದ್ದಾರೆ.
ಆದಿತ್ಯ ಪ್ರಭು ತಾಯಿ ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಗನ ಸಾವಿನಲ್ಲಿ ಪಿಇಎಸ್ ಕಾಲೇಜು ನಡೆದುಕೊಂಡ ರೀತಿ, ವಿದ್ಯಾರ್ಥಿ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಪಿಇಎಸ್ ಕಾಲೇಜು ಯನಿವರ್ಸಿಟಿ ನೇರ ಕಾರಣ ಎಂದು ಮೃತ ವಿದ್ಯಾರ್ಥಿ ತಾಯಿ ಹೋರಾಟ ಶುರುಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಕೇಸ್: ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಗೆ ರಿಲೀಫ್
ಜುಲ 17 ರಂದು ಆದಿತ್ಯ ಪ್ರಭು ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ ಎಂದು ಕಾಲೇಜು ಆರೋಪಿಸಿತು. ಮಾಧ್ಯಮಕ್ಕೂ ಇದೇ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿ ಹೇಳಿದೆ. ಇತ್ತ ಈ ಘಟನೆಯಿಂದ ಮನನೊಂದು ವಿದ್ಯಾರ್ಥಿ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ. ಆದರೆ ಕಾಲೇಜಿನಲ್ಲಿ ನನ್ನ ಮುಂದೆ ನಡೆದ ಘಟನೆ ವಿವರವನ್ನು ನಾನು ನೀಡುತ್ತೇನೆ ಎಂದು ಸಂಪೂರ್ಣ ಘಟನೆ ಮಾಹಿತಿ ನೀಡಿದ್ದಾರೆ. ಈ ಘಟನೆ ಎಂತಹ ಪೋಷಕರನ್ನು ಪ್ರತಿಷ್ಠಿತ ಕಾಲೇಜಿಗೆ ಕಳುಹಿಸುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡುವಂತೆ ಮಾಡಿದೆ.
ಜುಲೈ 17ರಂದ ಬೆಳಗ್ಗೆ 11.45ಕ್ಕೆ ನನಗೆ ಮಗನಿಂದ ಕರೆ ಬಂದಿದೆ. ಪಿಇಎಸ್ ಕಾಲೇಜು ನನಗೆ ಹಿಂಸೆ ನೀಡುತ್ತಿದ್ದಾರೆ. ನಕಲು ಮಾಡಿದ್ದೇನೆ ಎಂದು ಆರೋಪಿಸಿ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಾನೆ. ಪರೀಕ್ಷೆ ಕೊಠಡಿಗೆ ತೆರಳುವಾಗ ಫೋನ್ ಬ್ಯಾಗ್‌ನಲ್ಲಿಟ್ಟು ಒಳ ಪ್ರವೇಶಿಸಿದೆ. ಪರೀಕ್ಷೆಯ ನಡುವೆ ತನ್ನ ಪ್ಯಾಂಟ್ ಜೇಬ್‌ನಲ್ಲಿ ಫೋನ್ ಇದೆ ಅನ್ನೋದು ನನಗೆ ತಿಳಿದಿದೆ. ಹೀಗಾಗಿ ಖುದ್ದು ಫೋನ್ ತೆಗೆದು ಬೆಂಚ್ ಬದಿಯಲ್ಲಿ ಇಟ್ಟಿದ್ದೆ. ಫೋನ್ ಏರ್‌ಪ್ಲೇನ್ ಮೂಡ್‌ನಲ್ಲಿತ್ತು. ಪರೀಕ್ಷೆ ಇನ್ನೇನು ಮುಗಿಯುವ ಹೊತ್ತಿಗೆ ಪರೀಕ್ಷಾ ಕೊಠಡಿಯಲ್ಲಿದ್ದ ಇನ್‌ವಿಜಿಲೇಟರ್, ಫೋನ್ ನೋಡಿ ನಕಲು ಮಾಡಿದ್ದಾನೆ ಎಂದು ಹಿಡಿದಿದ್ದಾರೆ ಎಂದು ಫೋನ್‌ನಲ್ಲಿ ನನಗೆ ಹೇಳಿದ್ದಾನೆ ಎಂದು ಅದಿತ್ಯ ಪ್ರಭು ತಾಯಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಕಾಲೇಜಿನ ಮೆಂಟರ್ ನನಗೆ ಕರೆ ಮಾಡಿ ಕಾಲೇಜಿಗೆ ಬರುವಂತೆ ಸೂಚಿಸಿದ್ದಾರೆ. ನಾನು ಕಾಲೇಜಿಗೆ ಹೋದಾಗ ಆಡಳಿತ ಮಂಡಳಿ ಸದಸ್ಯರಾಗಲಿ, ಸಿಬ್ಬಂದಿಗಳಾಗಲಿ ಯಾರೂ ಇರಲಿಲ್ಲ. ಸ್ಪಲ್ಪ ಹೊತ್ತು ಕಾಯಲು ಹೇಳಿದ್ದಾರೆ. 1 ಗಂಟಾ ಕಾಯುತ್ತ ಕುಳಿತ ಬಳಿಕ ಕಾಲೇಜಿನ ಮೆಂಟರ್ ಹಾಗೂ ಸಿಒಇ ಆಗಮಿಸಿದ್ದಾರೆ. ಬಳಿಕ ಸ್ಟಾಫ್ ರೂಂಗೆ ಕರೆಸಿದ್ದಾರೆ. ಆದರೆ ಅಲ್ಲಿ ಅದಿತ್ಯ ಪ್ರಭು ಇರಲಿಲ್ಲ. ಸಿಬ್ಬಂದಿಗಳು, ಮೆಂಟರ್ ಆದಿತ್ಯ ಪ್ರಭು ಇಲ್ಲೇ ಇದ್ದಾನೆ, ವಿದ್ಯಾರ್ಥಿಗಳ ಜೊತೆ ಸುತ್ತಾಡಲು ಹೊರಗಡೆ ತೆರಳಿದ್ದಾನೆ ಎಂದಿದ್ದಾರೆ. ಆದರೆ ಆದಿತ್ಯ ಪ್ರಭು ಸುತ್ತಾಡಲು ಯಾವತ್ತೂ ತೆರಳಿಲ್ಲ ಎಂದೆ. ನಾನು ಗಾಬರಿಗೊಂಡಿದ್ದೆ.ಸಿಸಿಟಿವಿ ಪರಿಶೀಲಿಸಿ ನೋಡಿ ಎಂದು ಸೂಚಿಸಿದೆ. ಆದರೆ ಕಾಲೇಜು ಆಡಳಿತ ಮಂಡಳಿ, ಗೆಳೆಯರ ಜೊತೆಗಿದ್ದಾನೆ. ಇನ್ನೇನು ಬರುತ್ತಾನೆ ಎಂದು ಸುಮ್ಮನಾಗಿದ್ದಾರೆ.
ಕೆಲ ಹೊತ್ತಿನ ಬಳಿಕ ಮೆಂಟರ್ ಹಾಗೂ ಸಿಒಇಗೆ ಕರೆ ಬಂದಿದೆ. ಅವರು ಹೊರಗೆ ಓಡಿದ್ದಾರೆ. ಇತ್ತ ಸಿಬ್ಬಂದಿಗಳು ಓಡಿದ್ದಾರೆ. ಅವರ ಹಿಂದೆ ನಾನೂ ಓಡಿದೆ. ಮತ್ತೊಂದು ಬದಿಯ ಕ್ಯಾಂಪಸ್ ತೆರಳಿದಾಗ, ಆ್ಯಂಬುಲೆನ್ಸ್, ಪೊಲೀಸರು ಸ್ಥಳದಲ್ಲಿದ್ದಾರೆ. ನಾನು ಅಳುತ್ತಾ ನನ್ನ ಮಗನಿಗೆ ಏನಾಯ್ತು ಎಂದು ಕೂಗಾಡುತ್ತಿದ್ದೆ. ಇದೇ ವೇಳೆ ನಿಮ್ಮ ಮಗ ಜೀವಂತವಿಲ್ಲ ಎಂದಿದ್ದಾರೆ. ಈ ಘಟನೆ ನಡೆದು ಕೆಲ ಹೊತ್ತಾಗಿದೆ. ಮಗನನ್ನು ಆಸ್ಪತ್ರೆ ದಾಖಲಿಸುವಂತೆ ಪರಿಪರಿಯಾಗಿ ಬೇಡಿಕೊಂಡೆ. ಮೊದಲು ಪೇಪರ್‌ನಲ್ಲಿ ಸಹಿ ಮಾಡಿ, ಬಳಿಕ ನಿಮ್ಮ ಮಗನೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಎಂದು ನನಗೆ ಸೂಚಿಸಿದ್ದಾರೆ. ನನ್ನನ್ನು ಇಬ್ಬರು ಹಿಡಿದುಕೊಂಡು ಮಗನ ದೇಹದ ಬಳಿ ಕರೆತಂದಿದ್ದಾರೆ. ಇದು ಯಾವ ರೀತಿಯ ಕಾನೂನು, ನನ್ನ ಮಗನೇ ನೆಲದಲ್ಲಿ ಬಿದ್ದಿದ್ದಾನೆ. ಇದು ನನ್ನ ಮಗನೇ ಎಂದು ಹೇಳಿದೆ. ಆಗಲೇ ಸಹಿ ಹಾಕಲು ಎರಡು ಪೇಪರ್ ನೀಡಿದರು. ನಾನು ಸಹಿ ಮಾಡಿದ ಬಳಿಕ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘ ಮುಖಂಡನ ಪತ್ನಿ
ಕೆಲ ಹೊತ್ತ ನನ್ನ ಮಗ ನೆಲದಲ್ಲೇ ಇದ್ದ. ಆ್ಯಂಬುಲೆನ್ಸ್ ಆಗಮಿಸಿದೆ. ಪೊಲೀಸರು ಆಗಮಿಸಿದ್ದಾರೆ. ಪೇಪರ್‌ನಲ್ಲಿ ಸಹಿ ಮಾಡಿದೆ. ಆದರೆ ತಕ್ಷಣಕ್ಕೆ ಆಸ್ಪತ್ರೆ ದಾಖಲಿಸಿಲ್ಲ. ನನ್ನ ಕುಟುಂಬಸ್ಥರು ಆಗಮಿಸಿದ ಬಳಿಕ ತನಿಖೆಗೆ ಒತ್ತಾಯ ಮಾಡಿದ್ದಾರೆ. ಈ ಪ್ರತಿಭಟನೆ ಬಳಿಕ ಫೋರೆನ್ಸಿಕ್ ತಂಡ ಆಗಮಿಸಿತು. ಪೊಲೀಸರು ಆಗಮಿಸಿ ವಿಚಾರಣೆ ಆರಂಭಿಸಿದರು. ಸಂಜೆ 7.30ರ ವರೆಗೆ ನಡೆಯಿತು. ಇಲ್ಲೀವರೆಗೆ ಕಾಲೇಜಿನ ಆಡಳಿತ ಮಂಡಳಿಯಾಗಲಿ, ಯಾರೊಬ್ಬರು ಇರಲಿಲ್ಲ. ಬಳಿಕ ಕಾಲೇಜು ಆಡಳಿತ ಮಂಡಲಿ ಸದಸ್ಯರು ಆಗಮಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿಗಳ ಮಾಹಿತಿಯಂತೆ ಪರೀಕ್ಷೆ ಮುಗಿಯುವ 5 ನಿಮಿಷಕ್ಕೆ ಮೊಬೈಲ್ ಇರುವುದು ನೋಡಿದ್ದಾರೆ. ಪರೀಕ್ಷೆ ಆರಂಭಗೊಂಡ 2 ಗಂಟೆ 56 ನಿಮಿಷ ಇಬ್ಬರು ಇನ್‌ವಿಜಿಲೇಟರ್ ಏನು ಮಾಡುತ್ತಿದ್ದರು. ಕಾಪಿ ಮಾಡುತ್ತಿದ್ದರೆ ಸಂಪೂರ್ಣ ಪರೀಕ್ಷೆ ಬರೆಯಲು ಅನುವು ಮಾಡುತ್ತಿದ್ದರೆ? ನನ್ನ ಮಗ ತಪ್ಪು ಮಾಡಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ಪರಿಹರಿಸಲು, ಪ್ರಕ್ರಿಯೆ ಮುಂದುವರಿಸಬೇಕಿತ್ತು. ಇದರ ಬದಲು ಮಾನಸಿಕ ಹಿಂಸೆ ನೀಡಿದ್ದು ಯಾಕೆ? ಗಂಭೀರ ಆರೋಪ ಹೊರಿಸಿದ ಬಳಿಕ 19 ವರ್ಷದ ವಿದ್ಯಾರ್ಥಿಯನ್ನು ಸ್ಟಾಫ್ ರೂಂನಲ್ಲೇ ಇರಿಸಬೇಕಿತ್ತು. ಮಹಡಿಯಿಂದ ಹಾರಿದ ಬಳಿಕ ಯಾಕೆ ಆಸ್ಪತ್ರೆ ಸೇರಿಸಲು ವಿಳಂಬ ಮಾಡಿದ್ದೀರಿ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಮೃತ ವಿದ್ಯಾರ್ಥಿ ತಾಯಿ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ. ಇದೀಗ ಪಿಇಎಸ್ ಕಾಲೇಜಿನ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ