* ದೆಹಲಿ ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗೆ ಸದ್ಗುರು ಕರೆ
* ಮಣ್ಣಿನ ನಾಶದೊಂದಿಗೆ ಪರಿಸರದ ಬೇರೆ ಎಲ್ಲ ವಿಷಯಗಳು ನಾಶ
* ಮಣ್ಣಿನ ವಿನಾಶವಾದಂತೆ ಪರಿಸರವೂ ಒಂದೊಂದಾಗೆ ನಾಶವಾಗುತ್ತದೆ
ಬೆಂಗಳೂರು(ಜೂ.07): ಮಣ್ಣಿನ ನಾಶದೊಂದಿಗೆ ಪರಿಸರದ ಬೇರೆ ಎಲ್ಲ ವಿಷಯಗಳು ನಾಶವಾಗಲಿದ್ದು, ಜನರು ಮತ್ತು ಸರ್ಕಾರ ಮಣ್ಣಿನ ವಿನಾಶವನ್ನು ಒಂದು ಮಹತ್ವದ ವಿಷಯವಾಗಿ ಪರಿಗಣಿಸಬೇಕು ಎಂದು ಈಶಾ ಪೌಂಡೇಶನ್ ಸದ್ಗುರು ತಿಳಿಸಿದರು.
ನವದೆಹಲಿಯ ಐ.ಎ. ಸಂಕೀರ್ಣದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣು ಜೀವಂತವಾಗಿರುವವರೆಗೆ ಮಾತ್ರ ಪರಿಸರದ ಬೇರೆಲ್ಲ ವಿಷಯಗಳು ಪ್ರಸ್ತುತವಾಗಿರುತ್ತದೆ. ಮಣ್ಣಿನ ವಿನಾಶವಾದಂತೆ ಪರಿಸರವೂ ಒಂದೊಂದಾಗೆ ನಾಶವಾಗುತ್ತದೆ. ಅಲ್ಲದೆ, ಮಣ್ಣು ನಮ್ಮ ಮೂಲ ಅಸ್ತಿತ್ವದ ಪ್ರಮುಖ ವಿಷಯವಾಗಿದ್ದು, ಮುಂದಿನ ನಮ್ಮ ಅಸ್ತಿತ್ವಕ್ಕೂ ಪರಿಣಾಮ ಬೀರುತ್ತದೆ. ಹೀಗಾಗಿ, ಜನರು ಮತ್ತು ಸರ್ಕಾರಗಳು ಮಣ್ಣಿನ ವಿನಾಶವನ್ನು ಒಂದು ಪ್ರತ್ಯೇಕ ವಿಷಯವಾಗಿ ಪರಿಗಣಿಸಬೇಕು. ಜಗತ್ತಿನಲ್ಲಿ ಮಣ್ಣಿನ ನಾಶ ಸಂಪೂರ್ಣ ನಿಲ್ಲುವವರೆಗೂ ಜನರು ಧ್ವನಿ ಎತ್ತಬೇಕು ಎಂದು ಎಂದು ಒತ್ತಾಯಿಸಿದರು.
ಭಾರತ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯವರಿಗಾಗಿ ಈ ಗ್ರಹವು ವಾಸಯೋಗ್ಯ ಆಗಿರಬೇಕು ಎಂದರೆ ಇಲ್ಲಿನ ಮಣ್ಣನ್ನು ಸಂರಕ್ಷಿಸುವ ಅತಿ ದೊಡ್ಡ ಜವಾಬ್ದಾರಿ ನಮ್ಮಮೇಲಿದೆ. ಇದಕ್ಕೆ ಜಾಗತಿಕ ಪ್ರಯತ್ನವು ಅತ್ಯಗತ್ಯ ಎಂದರು.
ಅಸಹಿಷ್ಣುತೆ ಕೇವಲ ಟಿವಿಯಲ್ಲಿ ಮಾತ್ರ ಇದೆ: ಸದ್ಗುರು
15 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ಇದಕ್ಕೂ ಮುನ್ನ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಸದ್ಗುರುಗಳ ಬೈಕ್ ಯಾತ್ರೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ಮಣ್ಣು ಉಳಿಸುವ ಸಲುವಾಗಿ ಸದ್ಗುರುರವರ ಏಕಾಂಗಿಯಾದ 100 ದಿನಗಳ ಬೈಕ್ ಯಾತ್ರೆ ಕೈಗೊಂಡಿದ್ದು, 27 ದೇಶಗಳ ಪ್ರವಾಸ ಮುಗಿಸಿದ್ದಾರೆ. ಯಾತ್ರೆಯ 75ನೇ ದಿನ ಹಿನ್ನೆಲೆ ಆಜಾದಿ ಕಾ ಅಮೃತ್ ಮಹೋತ್ಸವ ಸ್ಮರಣಾರ್ಥ ದೆಹಲಿ ತಲುಪಿತ್ತು. ಈವರೆಗೂ ಅಭಿಯಾನವು 250 ಕೋಟಿ ಜನರನ್ನು ಮುಟ್ಟಿದ್ದು, 74 ದೇಶಗಳು ತಮ್ಮ ಮಣ್ಣನ್ನು ಉಳಿಸಿಕೊಳ್ಳಲು ಅಭಿಯಾನದೊಂದಿಗೆ ಒಪ್ಪಂದ ಮಾಡಿಕೊಂಡಿವೆ.