ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಇದು ಸಕಾಲ: ಹೈಕೋರ್ಟ್‌ ಕಿಡಿ

By Kannadaprabha News  |  First Published Jun 7, 2022, 9:30 AM IST

*  ತೀವ್ರವಾಗಿ ತರಾಟೆ ತೆಗೆದುಕೊಂಡ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ
* ಹೈಕೋರ್ಟ್‌ ನೀಡಿದ ಆದೇಶ ಪಾಲಿಸದೇ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರಿ ಅಧಿಕಾರಿಗಳು
* ವ್ಯವಸ್ಥೆ ಇದೇ ರೀತಿಯಲ್ಲಿರಲು ಕೋರ್ಟ್‌ ಬಿಡುವುದಿಲ್ಲ


ಬೆಂಗಳೂರು(ಜೂ.07):  ಕೋರ್ಟ್‌ ಆದೇಶ ಪಾಲಿಸದ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ನಡೆಯಿಂದ ರೋಸಿ ಹೋಗಿದ್ದೇವೆ. ಹಿರಿಯ ಐಎಎಸ್‌ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸದ ಹೊರತು ಸರ್ಕಾರ ಎಚ್ಚೆತ್ತುಕೊಳ್ಳುವುದಿಲ್ಲ. ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಇದು ಸಕಾಲವಾಗಿದೆ ಎಂದು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.

ಪ್ರಕರಣವೊಂದರ ಸಂಬಂಧ ನೀಡಿದ್ದ ಹೈಕೋರ್ಟ್‌ ನೀಡಿದ ಆದೇಶ ಪಾಲಿಸದೇ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ವ್ಯವಸ್ಥೆ ಸರಿಪಡಿಸಲು ಗಂಭೀರ ಕ್ರಮ ಅನಿವಾರ್ಯ. ಸರ್ಕಾರದ ಹಿರಿಯ ಅಧಿಕಾರಿ ಜೈಲಿಗೆ ಹೋಗುವ ದಿನ ಯಾವತ್ತು ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಯಾವುದೇ ದಿನವಾದರೂ ಈ ಘಟನೆ ನಡೆಯಬಹುದು ಎಂದು ಎಚ್ಚರಿಸಿದರು.

Tap to resize

Latest Videos

ಪರೀಕ್ಷೆ ಇಲ್ಲದೇ ಕುವೆಂಪು ವಿವಿ ವಿದ್ಯಾರ್ಥಿಗಳು ಪಾಸ್‌: ಹೈಕೋರ್ಟ್‌ ಅಸ್ತು

ರಾಜ್ಯದ ವಿವಿಧ ಪೌರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಗ್ರೂಪ್‌-ಸಿ’ ಸಿಬ್ಬಂದಿಯನ್ನು ‘ಗ್ರೂಪ್‌-ಬಿ’ಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಈ ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಕರಡು ನಿಯಮ ಪ್ರಕಟಿಸಬೇಕು ಎಂದು 2021ರ ಜು.19ರಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಕರ್ನಾಟಕ ನಗರ ಪಾಲಿಕೆಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಎಂ.ಎಸ್‌. ಅರ್ಚನಾ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.
ವಿಚಾರಣೆ ವೇಳೆ ಈ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿಗಳು, ಅಧಿಕಾರಿಗಳು ಕೋರ್ಟ್‌ ಆದೇಶಗಳ ಬಗ್ಗೆ ಹಗುರವಾದ ಭಾವನೆ ಹೊಂದಿದ್ದಾರೆ. ಇದು ದಿನನಿತ್ಯದ ಅಭ್ಯಾಸವಾಗಿ ಹೋಗಿದೆ. ವ್ಯವಸ್ಥೆ ಇದೇ ರೀತಿಯಲ್ಲಿರಲು ಕೋರ್ಚ್‌ ಬಿಡುವುದಿಲ್ಲ. ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯಡಿ ಆರೋಪ ಹೊರಿಸಲಾಗುವುದು. ಅವರು ಜೈಲಿಗೆ ಹೋಗಲಿ. ಒಬ್ಬರು ಅಥವಾ ಇಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಕ್ಕೆ ಇದು ಸಕಾಲ. ಅದರಲ್ಲೂ ಓರ್ವ ಹಿರಿಯ ಐಎಎಸ್‌ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಿದೆ ಎಂದು ನುಡಿದರು.

ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಕರಡು ನಿಯಮಗಳಿಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆಯುವುದು ತಡವಾದ ಕಾರಣ ಅಧಿಸೂಚನೆ ಹೊರಡಿಸಲಾಗಲಿಲ್ಲ. ಸದ್ಯ ಕರಡು ನಿಯಮಗಳನ್ನು ಜೂ.3ರಂದು ಪ್ರಕಟಿಸಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ತಿಳಿಸಿದರು.

ಆದರೆ ಅವರ ವಿವರಣೆಗೆ ಅತೃಪ್ತಿ ಪಟ್ಟ ಹೈಕೋರ್ಟ್‌, ಒಂದಲ್ಲಾ ಒಂದು ಕಾರಣ ನೀಡಿ ಕೋರ್ಟ್‌ ತೀರ್ಪು ಪಾಲಿಸಲು ವಿಳಂಬ ಮಾಡುತ್ತಿದ್ದೀರಿ. ಸಚಿವ ಸಂಪುಟ ಅನುಮೋದನೆ ವಿಳಂಬವಾಗಿರುವುದಕ್ಕೆ ಅಧಿಕಾರಿಗಳು ಜೈಲಿಗೆ ಹೋಗಲಿ ಬಿಡಿ. ಹಿರಿಯ ಐಎಎಸ್‌ ಅಧಿಕಾರಿ ನಡೆದುಕೊಳ್ಳುವ ವಿಧಾನ ಇದೇನಾ, ಹಿರಿಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದರೆ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಹಾಗಾಗಿ ಇನ್ನು ಮುಂದೆ ಪ್ರತಿ ದಿನ ಅಧಿಕಾರಿಗಳನ್ನು ಕೋರ್ಚ್‌ಗೆ ಕರೆಯಿಸಲಾಗುವುದು ಎಂದು ನ್ಯಾಯಪೀಠ ಖಾರವಾಗಿ ನುಡಿಯಿತು.

ರಾಜಿಯಾದರೆ ರೇಪ್‌ ಕೇಸ್‌ ಮುಕ್ತಾಯಕ್ಕೆ ಅವಕಾಶ: ಹೈಕೋರ್ಟ್‌

ಧ್ಯಾನ್‌ ಚಿನ್ನಪ್ಪ ವಿವರಣೆ ನೀಡಿ, ಕರಡು ನಿಯಮ ಹೊರಡಿಸಲಾಗಿದೆ. ಇನ್ನೂ ಗ್ರೂಪ್‌-ಬಿ ಮತ್ತು ಗ್ರೂಪ್‌-ಸಿ ಕೇಡರ್‌ನಲ್ಲಿ ಖಾಲಿಯಿರುವ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಕ್ರಮ ಜರುಗಿಸಬೇಕೆಂಬ ಏಕ ಸದಸ್ಯ ನ್ಯಾಯಪೀಠದ ಆದೇಶದ ಉಳಿದ ಭಾಗವನ್ನು ಒಂದು ತಿಂಗಳಲ್ಲಿ ಪಾಲಿಸಲಾಗುವುದು ಎಂದು ಭರವಸೆ ನೀಡಿದರು. ಅದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಪೀಠ, ಆರು ತಿಂಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. ಜತೆಗೆ, ಮುಂದಿನ ವಿಚಾರಣೆಗೂ ರಾಕೇಶ್‌ಸಿಂಗ್‌ ಮತ್ತು ಅರ್ಚನಾ ಹಾಜರಾಗಬೇಕು ಎಂದು ಸೂಚಿಸಿತು.     

ಸಿಜೆ ಚಾಟಿ

ಅಧಿಕಾರಿಗಳು ಕೋರ್ಟ್‌ ಆದೇಶಗಳ ಬಗ್ಗೆ ಹಗುರವಾದ ಭಾವನೆ ಹೊಂದಿದ್ದಾರೆ. ಇದು ದಿನನಿತ್ಯದ ಅಭ್ಯಾಸವಾಗಿ ಹೋಗಿದೆ. ವ್ಯವಸ್ಥೆ ಇದೇ ರೀತಿಯಲ್ಲಿರಲು ಕೋರ್ಟ್‌ ಬಿಡುವುದಿಲ್ಲ. ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯಡಿ ಆರೋಪ ಹೊರಿಸಲಾಗುವುದು. ಅವರು ಜೈಲಿಗೆ ಹೋಗಲಿ. ಒಬ್ಬರು ಅಥವಾ ಇಬ್ಬರು ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಕ್ಕೆ ಇದು ಸಕಾಲ ಅಂತ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ತಿಳಿಸಿದ್ದಾರೆ.
 

click me!