
ಕೆಎಸ್ಆರ್ಟಿಸಿ ಕಂಡಕ್ಟರ್ ಮಾಡುವ ಮೋಸದಾಟಕ್ಕೆ ನಾವು ಬಲಿಯಾಗಿಯೇ ಇರುತ್ತೇವೆ. ಹತ್ತಿಪ್ಪತ್ತು ರೂಪಾಯಿಯ ಟಿಕೆಟ್ಗೆ 50 ರೂಪಾಯಿ ಕೊಟ್ಟರು ವಾಪಸ್ ಹಣ ಕೊಡದೆ ಟಿಕೆಟ್ ಹಿಂದುಗಡೆ ಬರೆದುಕೊಡುವುದು. ಕಂಡಕ್ಟರ್ ಬಳಿ ಚಿಲ್ಲರೆ ಇಲ್ಲವೆಂದಲ್ಲ, ಹೀಗೆ ಬರೆದುಕೊಟ್ಟಾಗ ಪ್ರಯಾಣಿಕರು ಅವಸರದಲ್ಲಿ ಮರೆತುಹೋದರೆ ಆ ಹಣ ಕಂಡಕ್ಟರ್ ಜೇಬಿಗೆ. ಈ ಕುತಂತ್ರದಿಂದಲೇ ಬಹುತೇಕ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ನೊಂದಿಗೆ ಹಣ ನೀಡುವ ಬದಲು ಟಿಕೆಟ್ ಹಿಂದೆ ಬರೆಯುತ್ತಾರೆ. ಇಂಥದ್ದ ಘಟನೆ ಇಲ್ಲಿ ನಡೆದಿದ್ದು, ಪ್ರಯಾಣಿಕರೊಬ್ಬರು 15 ರೂಪಾಯಿ ಬಸ್ ಟಿಕೆಟ್ಗಾಗಿ ಬರೋಬ್ಬರಿ 14 ತಿಂಗಳ ಕಾಲ ಕಾನೂನು ಹೋರಾಟ ಮಾಡಿ ಕೊನೆಗೂ ಗೆದ್ದಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ನಲ್ಲಿ ಪ್ರಯಾಣಿಸಲು ₹15 ಟಿಕೆಟ್ ಖರೀದಿಸಿದ್ದ ಪ್ರಯಾಣಿಕ. ಕಂಡಕ್ಟರ್ಗೆ ₹500 ನೋಟು ನೀಡಿದ್ರು. ಇದಕ್ಕೆ ಬಾಕಿ ₹485 ವಾಪಸ್ ನೀಡಬೇಕು ತಾನೇ? ಆದರೆ ಕಂಡಕ್ಟರ್ ಹಣ ವಾಪಸ್ ಕೊಟ್ಟಿರಲಿಲ್ಲ. ಆದರೆ ಇದೇ ವೇಳೆ ಇನ್ನೊಂದು ಬಸ್ ಹತ್ತುವ ಅವಸರದಲ್ಲಿ ಪ್ರಯಾಣಿಕ ಹಣ ಪಡೆಯುವುದು ಮರೆತುಹೋಗಿದ್ದರು. ಆ ಬಳಿಕ ತಮ್ಮ ಹಣವನ್ನು ವಾಪಸ್ ಪಡೆಯಲು ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಲೀಗಲ್ ನೋಟಿಸ್ ಕಳಿಸಿದ್ರು. ಅಷ್ಟೇ ಅಲ್ಲ, ಅವರು ನಿಜವಾಗಿಯೂ ಬಸ್ನಲ್ಲಿ ಪ್ರಯಾಣಿಸಿದ್ದಾರೆಯೇ ಎಂಬುದಕ್ಕೆ ಸಾಕ್ಷಿ ಏನು ಎಂದು ಸಾರಿಗೆ ಸಂಸ್ಥೆ ಕೇಳಿತ್ತು. ಈ ವಿಚಾರವಾಗಿ ಸುದೀರ್ಘ ವಿಚಾರಣೆ ನಡೆದು, ಇದೀಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಯಾಣಿಕರ ಪರವಾಗಿ ತೀರ್ಪು ನೀಡಿದ್ದು, ಬಾಕಿ ಹಣ ನೀಡದ KSRTCಗೆ ₹11,485 ಪಾವತಿಸುವಂತೆ ಆದೇಶಿಸಿದೆ.
ಪ್ರಕರಣದ ವಿವರ
32 ವರ್ಷದ ಮಂಜುನಾಥ್ ಆರ್.ಟಿ. ಎಂಬುವವರು ಕೆಎಸ್ಆರ್ಟಿಸಿ ವಿರುದ್ಧ ಸೇವಾ ನ್ಯೂನತೆ, ವಂಚನೆ ಸಂಬಂಧ ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಜಿ.ಟಿ. ವಿಜಯಲಕ್ಷ್ಮಿ ಹಾಗೂ ಸದಸ್ಯರಾದ ನಿವೇದಿತಾ ರವೀಶ್ ಮತ್ತು ಕುಮಾರ್ ಎನ್. ಅವರು ಈ ತೀರ್ಪು ನೀಡಿದ್ದಾರೆ.
₹15 ಟಿಕೆಟ್ಗೆ ₹500 ನೀಡಿದ್ದರೂ ಬಸ್ ಕಂಡಕ್ಟರ್ ₹485 ವಾಪಸ್ ನೀಡಿಲ್ಲ ಎಂಬುದು ಮಂಜುನಾಥ್ ಅವರ ಆರೋಪವಾಗಿತ್ತು. ಬಾಕಿ ಹಣವನ್ನು ಬಡ್ಡಿ ಸಹಿತ ವಾಪಸ್ ನೀಡಬೇಕು, ಅಲ್ಲದೆ ಮಾನಸಿಕ ಹಿಂಸೆಗೆ ₹1 ಲಕ್ಷ ಪರಿಹಾರದ ಜೊತೆಗೆ ಆರ್ಥಿಕ ನಷ್ಟಕ್ಕೆ ₹25 ಸಾವಿರ ಮತ್ತು ದೂರು ಸಲ್ಲಿಸಲು ತಗಲಿದ ವೆಚ್ಚವಾಗಿ ₹50 ಸಾವಿರ, ಕಾನೂನು ನೋಟಿಸ್ ವೆಚ್ಚವಾಗಿ ₹3,001 ನೀಡುವಂತೆ ಅವರು ಮನವಿ ಮಾಡಿದ್ದರು.
ದೂರುದಾರರು KSRTCಯ ಪ್ರಯಾಣಿಕರಾಗಿದ್ದು, ₹15 ಮೌಲ್ಯದ ಟಿಕೆಟ್ಗಾಗಿ ₹500 ಪಾವತಿಸಿದ್ದಾರೆ. ಇದಕ್ಕೆ ₹485 ಚಿಲ್ಲರೆ ಹಣವನ್ನು ವಾಪಸ್ ನೀಡಬೇಕಿತ್ತು ಎಂಬುದನ್ನು ನಿರ್ವಾಹಕರೇ ಒಪ್ಪಿಕೊಂಡಿದ್ದಾರೆ. ಆಗಿದ್ದಮೇಲೆ KSRTC ತನ್ನ ನೌಕರನ ಕೃತ್ಯಕ್ಕೆ ಹೊಣೆಗಾರನಾಗಿದ್ದರೂ, ಪ್ರಯಾಣಿಕರಿಗೆ ಬಾಕಿ ಹಣವನ್ನು ಹಿಂದಿರುಗಿಸಿಲ್ಲ. ಇದು ಸೇವಾ ನ್ಯೂನತೆಯಾಗುತ್ತದೆ. ಅಲ್ಲದೆ, ತಮ್ಮ ಹಣವನ್ನು ಪಡೆಯಲು ಪ್ರಯಾಣಿಕರು ಆಯೋಗದ ಮೊರೆ ಹೋಗುವಂತೆ KSRTC ಮಾಡಿದೆ' ಎಂದು ಅಕ್ಟೋಬರ್ 12ರಂದು ಆಯೋಗ ಹೇಳಿದೆ.
2025ರ ಆಗಸ್ಟ್ 12ರಂದು ಗುಳಿಗೆನಹಳ್ಳಿಯಿಂದ ಶಿರಾಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ₹15 ಟಿಕೆಟ್ ಖರೀದಿಸಲು ಮಂಜುನಾಥ್ ಅವರು ನಿರ್ವಾಹಕರಿಗೆ ₹500 ನೋಟು ನೀಡಿದ್ದರು. ನಿರ್ವಾಹಕರು ಟಿಕೆಟ್ ನೀಡಿ, ಬಾಕಿ ಉಳಿದ ₹485 ಮೊತ್ತವನ್ನು ಟಿಕೆಟ್ನ ಹಿಂಭಾಗದಲ್ಲಿ ಬರೆದಿದ್ದರು.
ದೂರಿನ ಪ್ರಕಾರ, ಪ್ರಯಾಣಿಕರ ಬಳಿಯೂ ₹500ಕ್ಕೆ ಚಿಲ್ಲರೆ ಇರಲಿಲ್ಲ. ನಿರ್ವಾಹಕರ ಬಳಿಯೂ ಚಿಲ್ಲರೆ ಹಣ ಇರಲಿಲ್ಲ. ಹೀಗಾಗಿ ₹15 ಟಿಕೆಟ್ ನೀಡಿದ ನಿರ್ವಾಹಕರು, ಪ್ರಯಾಣಿಕರಿಗೆ ವಾಪಸ್ ನೀಡಬೇಕಿದ್ದ ₹485 ಮೊತ್ತವನ್ನು ಟಿಕೆಟ್ನ ಹಿಂಭಾಗದಲ್ಲಿ ಬರೆದುಕೊಟ್ಟಿದ್ದರು.
ಬಸ್ ಶಿರಾ ನಿಲ್ದಾಣ ತಲುಪಿದಾಗ KSRTC ತಪಾಸಣಾ ನಿರೀಕ್ಷಕರು ಟಿಕೆಟ್ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮಂಜುನಾಥ್ ಅವರಿಗೆ ಚಿತ್ರದುರ್ಗಕ್ಕೆ ತೆರಳುವ ಮತ್ತೊಂದು ಬಸ್ ಹಿಡಿಯುವ ಆತುರವಿತ್ತು. ಹೀಗಾಗಿ ಬಾಕಿ ಹಣ ಪಡೆಯುವುದನ್ನು ಮರೆತು ಬಸ್ನಿಂದ ಇಳಿದು ಹೋಗಿದ್ದರು. ಬಳಿಕ 2025ರ ಆಗಸ್ಟ್ 16ರಂದು ಟಿಕೆಟ್ ಸಮೇತ KSRTCಗೆ ಲಿಖಿತ ಮನವಿ ಸಲ್ಲಿಸಿ, ತಮ್ಮ ಬಾಕಿ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು.
ಆದರೆ ನಿಗಮವು ಮನವಿ ಸ್ವೀಕರಿಸಿರುವುದಾಗಿ ತಿಳಿಸಿತ್ತಾದರೂ ಹಣ ವಾಪಸ್ ಬಂದಿರಲಿಲ್ಲ. ಹೀಗಾಗಿ ಪ್ರಯಾಣಿಕ ಕಾನೂನು ಹೋರಾಟಕ್ಕೆ ಮುಂದಾಗಿ 2025ರ ಸೆಪ್ಟೆಂಬರ್ 10ರಂದು ಕಾನೂನು ನೋಟಿಸ್ ಕಳುಹಿಸಿದ್ದರು. ಅದಕ್ಕೂ ಪ್ರಯೋಜನವಾಗದಾದಾಗ ಸೆಪ್ಟೆಂಬರ್ 30ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಮಂಜುನಾಥ್ ಅವರು ತಮ್ಮ ಬಸ್ನಲ್ಲಿ ಪ್ರಯಾಣಿಸಿಯೇ ಇಲ್ಲ ಎಂದು KSRTC ಮೊದಲಿಗೆ ವಾದಿಸಿತ್ತು. ಅಲ್ಲದೆ ಅವರು ನೀಡಿದ್ದ ಟಿಕೆಟ್ ನೈಜವಾದುದೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿತ್ತು. ಬಸ್ ತಪಾಸಣೆ ವೇಳೆ ನಿರ್ವಾಹಕರ ಬಳಿ ಹೆಚ್ಚುವರಿಯಾಗಿ ₹456 ಹಣ ಪತ್ತೆಯಾಗಿತ್ತು. ಈ ಸಂಬಂಧ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮ ತಿಳಿಸಿತ್ತು. ನಿರ್ವಾಹಕರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಯಾಣಿಕರು ಸುಳ್ಳು ದೂರು ನೀಡಿದ್ದಾರೆ ಎಂದೂ ಆರೋಪಿಸಿತ್ತು. ಆದರೆ ₹15 ಟಿಕೆಟ್ಗೆ ಪ್ರಯಾಣಿಕರಿಂದ ₹500 ಪಡೆದಿದ್ದು, ಬಾಕಿ ₹485 ಮೊತ್ತವನ್ನು ಟಿಕೆಟ್ನ ಹಿಂಭಾಗದಲ್ಲಿ ಬರೆದಿದ್ದನ್ನು ನಿರ್ವಾಹಕರೇ ಒಪ್ಪಿಕೊಂಡಿದ್ದರು. ತಪಾಸಣೆ ಬಳಿಕ ₹456 ಹಣವನ್ನು ಡಿಪೋಗೆ ಜಮಾ ಮಾಡಿರುವುದಾಗಿಯೂ ತಿಳಿಸಿದ್ದರು.
ಟಿಕೆಟ್ ನಕಲಿಯಾಗಿದೆ ಅಥವಾ ಬೇರೆಯವರಿಗೆ ನೀಡಲಾಗಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ KSRTC ವಿಫಲವಾಗಿದೆ ಎಂದು ಆಯೋಗ ಹೇಳಿತು. ನಿಗಮದ ಎಲೆಕ್ಟ್ರಾನಿಕ್ ದಾಖಲೆಗಳಲ್ಲೂ 2025ರ ಆಗಸ್ಟ್ 12ರಂದು ಈ ಟಿಕೆಟ್ ಮಾರಾಟವಾಗಿರುವುದು ದೃಢಪಟ್ಟಿದೆ. ನಿಗಮದ ಆಂತರಿಕ ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ ಅಥವಾ ನೌಕರರ ವಿರುದ್ಧದ ಶಿಸ್ತು ಕ್ರಮಗಳು ಪ್ರಯಾಣಿಕರ ಗ್ರಾಹಕ ಹಕ್ಕುಗಳ ಮೇಲೆ ಪರಿಣಾಮ ಬೀರಬಾರದು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ನೌಕರನ ಕರ್ತವ್ಯದ ವೇಳೆ ನಡೆದ ತಪ್ಪಿಗೆ KSRTC ಹೊಣೆಗಾರ ಎಂದು ಆಯೋಗ ತೀರ್ಮಾನಿಸಿದೆ. ಆದರೆ ನಿರ್ವಾಹಕರ ವಿರುದ್ಧದ ದೂರನ್ನು ವಜಾಗೊಳಿಸಿದ್ದು ಅವರ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
KSRTCಯು ಪ್ರಯಾಣಿಕರಿಗೆ ಬಾಕಿ ಉಳಿಸಿಕೊಂಡಿದ್ದ ₹485 ಹಣವನ್ನು 2025ರ ಸೆಪ್ಟೆಂಬರ್ 30ರಿಂದ ಹಣ ಪಾವತಿಸುವವರೆಗೆ ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಆಯೋಗ ಆದೇಶಿಸಿದೆ. ಇದರ ಜೊತೆಗೆ ಮಾನಸಿಕ ಹಿಂಸೆಗೆ ₹5,000 ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹6,000 ಪಾವತಿಸಬೇಕು. ಹೀಗೆ ಬಡ್ಡಿ ಹೊರತುಪಡಿಸಿ ಒಟ್ಟು ₹11,485 ನೀಡುವಂತೆ KSRTCಗೆ ಸೂಚಿಸಲಾಗಿದೆ. ಆದೇಶದ ಪ್ರತಿ ಸ್ವೀಕರಿಸಿದ ಅಥವಾ ಆದೇಶದ ಬಗ್ಗೆ ತಿಳಿದುಕೊಂಡ ದಿನದಿಂದ 45 ದಿನಗಳ ಒಳಗೆ ಹಣ ಪಾವತಿಸಬೇಕು ಎಂದು ಆಯೋಗ ತಿಳಿಸಿದೆ.
ಸಾರಿಗೆ ಸಂಸ್ಥೆಯ ನೌಕರರು ಕರ್ತವ್ಯ ನಿರ್ವಹಿಸುವಾಗ ಮಾಡುವ ತಪ್ಪುಗಳಿಗೆ ಸಂಸ್ಥೆಯೇ ಹೊಣೆಗಾರನಾಗಿರುತ್ತದೆ. ಆಂತರಿಕ ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ ಅಥವಾ ನೌಕರರ ವಿರುದ್ಧದ ಶಿಸ್ತು ಕ್ರಮಗಳನ್ನು ಮುಂದಿಟ್ಟುಕೊಂಡು ಪ್ರಯಾಣಿಕರಿಗೆ ಸೇರಬೇಕಾದ ಹಣವನ್ನು ನೀಡಲು ನಿರಾಕರಿಸುವಂತಿಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ.
ಗ್ರಾಹಕರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಕರ್ನಾಟಕದ ಗ್ರಾಹಕರು 1800-425-9339 ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಸಂಖ್ಯೆಯ ಮೂಲಕವೂ ದೂರು ಸಲ್ಲಿಸಿ ನೆರವು ಪಡೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ