
ಬೆಂಗಳೂರು (ನ.03): ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಗಣನೀಯವಾಗಿ ಹೆಚ್ಚಳ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಕರ್ನಾಟಕ ಹಾಲು ಮಹಾಮಂಡಳ (KMF), ಇದೀಗ ಜನರ ಆಕ್ರೋಶಕ್ಕೆ ಮಣಿದು ಮೊಸರಿನ ದರದಲ್ಲಿ ಅಲ್ಪ ಇಳಿಕೆ ಮಾಡಲು ನಿರ್ಧರಿಸಿದೆ. ಪ್ರತಿ ಲೀಟರ್ ಮೊಸರಿನ ದರವನ್ನು ₹2 ರಷ್ಟು ಕಡಿಮೆ ಮಾಡಲು ಕೆಎಂಎಫ್ ತೀರ್ಮಾನಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಇತ್ತೀಚೆಗಷ್ಟೇ ಕೆಎಂಎಫ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹಾಗೂ ಮೊಸರಿನ ದರವನ್ನು ಭರ್ಜರಿ ₹14 ಏರಿಕೆ ಮಾಡಿತ್ತು. ಇದರಿಂದಾಗಿ ₹54 ಇದ್ದ ಒಂದು ಲೀಟರ್ ಮೊಸರಿನ ಬೆಲೆ ಏಕಾಏಕಿ ₹68ಕ್ಕೆ ಜಿಗಿದಿತ್ತು. ಹಾಲಿನ ದರಕ್ಕಿಂತ ಮೊಸರಿನ ದರವನ್ನು ವಿಪರೀತವಾಗಿ ಹೆಚ್ಚಳ ಮಾಡಿದ್ದಕ್ಕೆ ಮಧ್ಯಮ ಮತ್ತು ಬಡ ವರ್ಗದ ಜನರಿಂದ, ಹೋಟೆಲ್ ಮಾಲೀಕರಿಂದ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಮೊಸರಿನ ದರ ಏರಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ದರ ಇಳಿಕೆಗೆ ಸೂಚನೆ ನೀಡಿದೆ. ಕೆಎಂಎಫ್ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಭೇಟಿಯಾದ ವೇಳೆ, ಮೊಸರಿನ ಬೆಲೆ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದರು.
ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ‘ಕೊಬ್ಬಿನಾಂಶ ಹೆಚ್ಚು ಇರುವ ಹಾಲಿನ ದರ ಹೆಚ್ಚಾಗಿದೆ. ಹಾಲಿನ ದರ ಏರಿಕೆಯಿಂದ ರಾಜ್ಯದ ಸುಮಾರು 11 ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳಿಗೆ ನೇರ ನೆರವಾಗಲಿದೆ. ನೀರಿನ ಬಾಟಲಿ ಬೆಲೆ ಹೆಚ್ಚಾದರೆ ಯಾರೂ ಮಾತನಾಡುವುದಿಲ್ಲ, ಏಕೆಂದರೆ ಅದರ ಜಿಎಸ್‌ಟಿ ಕೇಂದ್ರಕ್ಕೆ ಹೋಗುತ್ತದೆ. ಆದರೆ, ಮೊಸರಿನ ಬೆಲೆ ತುಂಬಾ ದುಬಾರಿಯಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ದರ ಕಡಿಮೆ ಮಾಡಲು ಕೆಎಂಎಫ್‌ಗೆ ಸೂಚಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಸೂಚನೆಯ ಬೆನ್ನಲ್ಲೇ ಸಭೆ ನಡೆಸಿದ ಕೆಎಂಎಫ್ ಅಧಿಕಾರಿಗಳು, ಮೊಸರಿನ ದರದಲ್ಲಿ ₹2 ಕಡಿತಗೊಳಿಸಲು ತೀರ್ಮಾನಿಸಿದ್ದಾರೆ. ಪರಿಣಾಮವಾಗಿ ₹68ಕ್ಕೆ ತಲುಪಿದ್ದ ಪ್ರತಿ ಲೀಟರ್ ಮೊಸರಿನ ಬೆಲೆ ಈಗ ₹66ಕ್ಕೆ ಇಳಿಕೆಯಾಗಲಿದೆ. ಆದರೆ, ₹14 ಹೆಚ್ಚಳ ಮಾಡಿ ಕೇವಲ ₹2 ಇಳಿಸಿರುವುದು ಸಾರ್ವಜನಿಕರ ಅಸಮಾಧಾನವನ್ನು ಸಂಪೂರ್ಣವಾಗಿ ತಣಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ