
ಶಿವಮೊಗ್ಗ (ಏ.27): ಇಸ್ಲಾಂ ಧರ್ಮದ ಹೆಸರು ಕೇಳಿ ನರಮೇಧ ನಡೆಸಿದ ಕೃತ್ಯದಿಂದಾಗಿ ಮುಸ್ಲಿಂ ಸಮಾಜ ತಲೆ ಎತ್ತದಂತೆ ಮಾಡಿದ್ದಾರೆ. ಇಂತಹ ಹೀನಕೃತ್ಯ ಎಸಗಿದವರನ್ನು ಜೀವಂತ ಉಳಿಸಬಾರದು ಎಂದು ಮುಸ್ಲಿಂ ಮುಖಂಡ ಚಾಬುಸಾಬ್ ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಮೇಲಿನ ನರಮೇಧವನ್ನು ಖಂಡಿಸಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಜುಮ್ಮಾ ಮಸೀದಿ ಮತ್ತು ಮಕ್ಕಾ ಮಸೀದಿಯ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ರಿಪ್ಪನ್‌ಪೇಟೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಎರಡು ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ನೂರಾರು ಮುಸ್ಲಿಂ ಬಾಂಧವರು ಹೊಸನಗರ ರಸ್ತೆಯ ಮಸೀದಿಯಿಂದ ವಿನಾಯಕ ವೃತ್ತದವರಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಿದರು. ನಂತರ ವಿನಾಯಕ ವೃತ್ತದಲ್ಲಿ ಬಂದು ಸಭೆ ನಡೆಸಿ ತಕ್ಷಣ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಂತಹ ಹೀನ ಕೃತ್ಯ ಎಸಗಿದವರನ್ನು ಬಂಧಿಸಿ, ಉಗ್ರ ಶಿಕ್ಷೆಯನ್ನು ನೀಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡ ಅರ್.ಎ. ಚಾಬುಸಾಬ್ ಮಾತನಾಡಿ, ಇಸ್ಲಾಂ ಧರ್ಮದ ಹೆಸರು ಕೇಳಿ ನರಮೇಧ ನಡೆಸಿದ ಕೃತ್ಯದಿಂದಾಗಿ ಮುಸ್ಲಿಂ ಸಮಾಜ ತಲೆ ಎತ್ತದಂತೆ ಮಾಡಿದ್ದಾರೆ. ಇಂತಹ ಹೀನಕೃತ್ಯ ಎಸಗಿದವರನ್ನು ಜೀವಂತ ಉಳಿಸಬಾರದು. ಅವರಿಗೂ ಇಂತಹದೇ ಕಠಿಣ ಶಿಕ್ಷೆಯಾಗಬೇಕು. ಇಂತಹ ನೀಚ ಕೃತ್ಯಕ್ಕೆ ಸಹಕರಿಸುವ ಪಾಕಿಸ್ಥಾನಕ್ಕೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಉತ್ತರ ನೀಡಬೇಕಾಗಿದೆ. ಹಾಗೇಯೇ ಈ ಸಂಧರ್ಭದಲ್ಲಿ ಭಾರತ ದೇಶವಾಸಿಗಳೆಲ್ಲಾ ಜಾತಿ, ಧರ್ಮ ಹಾಗೂ ರಾಜಕೀಯವನ್ನು ಬದಿಗಿಟ್ಟು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕಾಗಿದೆ ಎಂದರು.
ಇದನ್ನೂ ಓದಿ: ಸಾಯ್ತೀನಿಯೇ ವಿನಃ, ಪಾಕಿಸ್ತಾನಕ್ಕೆ ಹೋಗಲ್ಲ: ಬಿಕ್ಕಿ ಬಿಕ್ಕಿ ಅತ್ತ ಸೀಮಾ ಹೈದರ್!
ನಂತರ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಅಮೀರ್ ಹಂಜಾ ಅವರು, 'ಭಾರತ ದೇಶ ಶಾಂತಿ ಸೌಹಾರ್ದತೆಯ ದೇಶ ನಾವುಗಳೆಲ್ಲಾ ಶಾಂತಿ ಸೌಹಾರ್ದತೆಯಿಂದ ಯಾವುದೇ ಜಾತಿ ಭೇದ ಭಾವನೆಯಿಲ್ಲದೆ ಭಾವೈಕ್ಯತೆಯಿಂದ ನಡೆದು ಕೊಂಡು ಬರುತ್ತಿದ್ದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನರಮೇಧ ಎಸಗುವ ಮೂಲಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ರಾಜ್ಯದ ಇಬ್ಬರು ಕನ್ನಡಿಗರು ಸೇರಿದಂತೆ ಉಗ್ರರ ಗುಂಡೇಟಿಗೆ ಬಲಿಯಾದ ಎಲ್ಲ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಅಲ್ಲಾ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದರು.
ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ, ಆಸಿಫ್‌ಭಾಷಾ,ಅಶ್ವಕ್ , ಖಲೀಲ್‌ಷರೀಫ್, ನಿಸಾರ್‌ಸುಮಯ್ಯ, ಅಜಾದ್, ಮೆಕ್ಕಾ ಮಸೀದಿ ಧರ್ಮಗುರುಗಳು ಹಾಗೂ ಮುಸ್ಲಿಂ ಸಮಾಜದ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: ಪಾಕ್ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!
ಘಟನೆಯ ಹಿನ್ನೆಲೆಯೇನು?
ಭಾರತ ಸರ್ಕಾರದಿಂದ ಜಮ್ಮು ಕಾಶ್ಮೀರಕ್ಕೆ ಇದ್ದ 370ನೇ ವಿಶೇಷ ವಿಧಿಯನ್ನು ರದ್ದುಗೊಳಿಸಲಾಗಿದೆ. ಜೊತೆಗೆ, ದೇಶದ ಯಾವುದೇ ಪ್ರಜೆ ಬಂದು ಇಲ್ಲಿ ನೆಲೆಗೊಳ್ಳಲು, ಪ್ರವಾಸಕ್ಕೆ ಬರಲು ಹಾಗೂ ಇಲ್ಲಿ ಉದ್ಯಮವನ್ನು ಮಾಡುವುದನ್ನೂ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆದರೆ, ಭಾರತೀಯರ ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ ಎಂದಾಗ ಹಿಂದೂಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಉಗ್ರರು ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ಬಂದಿದ್ದ ಹಿಂದೂಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದುರಾದೃಷ್ಟವಶಾತ್ ಇದರಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯೂ ಸಾವಿಗೀಡಾಗಿದ್ದಾರೆ. ಭಾರತದ ಒಟ್ಟು 26 ಜನರನ್ನು ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಉಗ್ರರು ಹತ್ಯೆ ಮಾಡಿದ್ದ ಘಟನೆಯನ್ನು ದೇಶದಾದ್ಯಂತ ಎಲ್ಲ ಜಾತಿ, ಸಮುದಾಯ ಹಾಗೂ ಧರ್ಮದವರು ಖಂಡಿಸುತ್ತಾ ಉಗ್ರರ ವಿರುದ್ಧ ಸೇಡು ತೀರಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ