
ತನ್ನ ಬೆಳೆಯುತ್ತಿರುವ ತಂತ್ರಜ್ಞಾನ ವಲಯ ಮತ್ತು ಆಳವಾದ ಸಂಸ್ಕೃತಿಗೆ ಹೆಸರಾಗಿರುವ ಕರ್ನಾಟಕದಲ್ಲಿ ಈಗ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳು ಚಿಂತೆಗೆ ಹಾದಿ ಮಾಡಿಕೊಟ್ಟಿವೆ. ಇತ್ತೀಚೆಗೆ ನಡೆದ ಎರಡು ಘಟನೆಗಳು ಸಾರ್ವಜನಿಕರ ಆತ್ಮವಿಶ್ವಾಸವನ್ನೇ ನಲುಗಿಸಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಗಳ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಎಪ್ರಿಲ್ 19, 2025ರಂದು ಬೆಂಗಳೂರಿನ ಸನಿಹದ ಶಾಂತವಾದ ಬಿಡದಿ ಪ್ರದೇಶ ಗುಂಡೇಟಿನ ಸದ್ದಿನಿಂದ ಆತಂಕಗೊಂಡಿತು. ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಜಾಗರೂಕವಾಗಿ ಯೋಜಿಸಿದ ಗುಂಡಿನ ದಾಳಿ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಎಪ್ರಿಲ್ 13ರಂದು ಹುಬ್ಬಳ್ಳಿಯಲ್ಲಿ ಐದು ವರ್ಷದ ಹೆಣ್ಣು ಮಗುವಿನ ಅತ್ಯಾ*ಚಾರ ಮತ್ತು ಹತ್ಯೆ ನಡೆದಿತ್ತು. ಅದಾದ ಕೆಲ ಸಮಯದಲ್ಲಿ ಪೊಲೀಸರು ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು.
ಪರಸ್ಪರ ಭಿನ್ನವಾಗಿದ್ದರೂ, ಒಂದರ ಹಿಂದೊಂದು ಇಂತಹ ಘಟನೆಗಳು ನಡೆಯುತ್ತಿರುವುದು ಗಂಭೀರ ಪ್ರಶ್ನೆಗೆ ಹಾದಿ ಮಾಡಿಕೊಟ್ಟಿದ್ದು, ಕರ್ನಾಟಕವನ್ನು ಅಪರಾಧಗಳು ಬಾಧಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈಗ ರಾಜ್ಯದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಮರಳಿ ತರಲು ಪೊಲೀಸರು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!
ಬಿಡದಿಯಲ್ಲಿ ಮೂಡಿದ ಅನುಮಾನಗಳ ಮೋಡ
ಬಿಡದಿಯಲ್ಲಿ ನಡೆದ ಘಟನೆ ಜನರಿಗೆ ಬೆಂಗಳೂರಿನ ಗತಕಾಲದ ಭೂಗತ ಲೋಕದ ನೆನಪನ್ನು ಮರಳಿ ತಂದಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಿಕ್ಕಿ ರೈ ಮೇಲೆ ಹಲವು ಸುತ್ತಿನ ಗುಂಡಿನ ದಾಳಿಯಾಗಿದ್ದು, ಇದನ್ನು ವೃತ್ತಿಪರ ಹಂತಕರೇ ಕೈಗೊಂಡಿರುವ ಅನುಮಾನಗಳಿವೆ. ಕಾಂಪೌಂಡ್ ಗೋಡೆಯ ಹಿಂದೆ ಅವಿತುಕೊಂಡಿದ್ದ ದಾಳಿಕೋರರು ಹಿಂದಿನ ದ್ವೇಷ ಅಥವಾ ರಿಕ್ಕಿಯ ತಂದೆ ಮುತ್ತಪ್ಪ ರೈ ಜೊತೆ ಚಕಮಕಿ ಹೊಂದಿರಬಹುದು ಎಂದು ಊಹಿಸಲಾಗಿದೆ. ಪೊಲೀಸರು ಇದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ, ವಿಶೇಷ ತಂಡವನ್ನು ರಚಿಸಿ, ವಿಧಿ ವಿಜ್ಞಾನ ತಜ್ಞರನ್ನು ನಿಯೋಜಿಸಿದ್ದರೂ, ದಾಳಿಕೋರರನ್ನು ಇನ್ನೂ ಬಂಧಿಸಲಾಗಿಲ್ಲ. ಈ ಘಟನೆ ಹಿಂದಿನ ಗ್ಯಾಂಗ್ ಸಂಸ್ಕೃತಿ ಮತ್ತೊಮ್ಮೆ ಬೆಂಗಳೂರಿಗೆ ಮರಳುವ, ಹಬ್ಬುವ ಆತಂಕವನ್ನು ಸೃಷ್ಟಿಸಿದೆ.
ಹುಬ್ಬಳ್ಳಿಯ ದುರಂತ ಘಟನೆ
ಹುಬ್ಬಳ್ಳಿಯಲ್ಲಿ ಕೇವಲ ಐದು ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಆಮಿಷ ಒಡ್ಡಿ, ಬಲಾತ್ಕಾರ ನಡೆಸಿ, ಶೆಡ್ ಒಂದರಲ್ಲಿ ಆಕೆಯ ಹತ್ಯೆ ನಡೆಸಲಾಗಿತ್ತು. ಈ ಪ್ರಕರಣದ ಆರೋಪಿ ರಿತೇಶ್ ಕುಮಾರ್ ಎಂಬಾತ ಎನ್‌ಕೌಂಟರ್ ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ಬಹಳಷ್ಟು ಜನರು ಇದನ್ನು ಸೂಕ್ತವಾದ, ಕ್ರಿಪ್ರ ಕ್ರಮ ಎಂದು ಪರಿಗಣಿಸಿದರೆ, ಉಳಿದವರು ಇದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಈ ಬೆಳವಣಿಗೆ ನಿಜಕ್ಕೂ ನ್ಯಾಯ ದಾನವೇ? ಈ ಎನ್‌ಕೌಂಟರ್ ಕಾನೂನಿಗೆ ಬೆಲೆ ನೀಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ಘಟನೆಯ ಬಳಿಕ ಬಹಳಷ್ಟು ಪ್ರತಿಭಟನೆಗಳು ನಡೆದಿದ್ದು, ಸಾರ್ವಜನಿಕರು ನಮ್ಮ ಬೀದಿಗಳು ಸುರಕ್ಷಿತವಾಗಬೇಕು ಮತ್ತು ಮಕ್ಕಳಿಗೆ ರಕ್ಷಣೆ ಲಭಿಸಬೇಕು ಎಂದು ಆಗ್ರಹಿಸಿದ್ದಾರೆ. ಇವೆರಡು ಘಟನೆಗಳು ಕರ್ನಾಟಕ ಎದುರಿಸುತ್ತಿರುವ ಎರಡೆರಡು ಸವಾಲುಗಳಾದ, ಬಿಡದಿಯಂತಹ ಪ್ರದೇಶಗಳಲ್ಲಿ ಗ್ಯಾಂಗ್ ಅಪರಾಧಗಳನ್ನು ನಿಗ್ರಹಿಸುವುದು ಮತ್ತು ಹುಬ್ಬಳ್ಳಿಯಂತಹ ನಗರಗಳಲ್ಲಿ ದುರ್ಬಲರನ್ನು ರಕ್ಷಿಸುವುದರ ಅಗತ್ಯವನ್ನು ಎತ್ತಿ ತೋರಿವೆ.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಪ್ರಕರಣ; ₹2000 ಕೋಟಿ ಆಸ್ತಿ ಕಾರಣವಾಯ್ತಾ?
ಪೊಲೀಸರು ಕೈಗೊಳ್ಳಬೇಕಾದ ಕ್ರಮಗಳೇನು?
ಸದ್ಯದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹೊಸದಾದ, ಸರಿಯಾಗಿ ಯೋಜಿತವಾದ ವಿಧಾನವನ್ನು ಅನುಸರಿಸಬೇಕು:
ಸ್ಮಾರ್ಟ್ ಪೊಲೀಸಿಂಗ್ ಮೇಲೆ ಗಮನ:
ಬಿಡದಿ ದಾಳಿ ಕರ್ನಾಟಕದಲ್ಲಿ ಇರುವ ಯೋಜಿತ ಕ್ರಿಮಿನಲ್ ಜಾಲಗಳನ್ನು ಪ್ರದರ್ಶಿಸಿದೆ. ಅವುಗಳನ್ನು ಭೇದಿಸಬೇಕಾದರೆ, ಪೊಲೀಸರು ಗುಪ್ತಚರ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಿ, ಕಣ್ಗಾವಲು ಹೆಚ್ಚಿಸಿ, ಸಿಬಿಐನಂತಹ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಜೊತೆ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕು. ಸಿಸಿಟಿವಿ ಕ್ಯಾಮರಾಗಳು, ಫೇಶಿಯಲ್ ರೆಕಗ್ನಿಷನ್, ಡೇಟಾ ಅನಾಲಿಸಿಸ್ ನಂತಹ ಆಧುನಿಕ ವ್ಯವಸ್ಥೆಗಳು ಅತ್ಯವಶ್ಯಕವಾಗಿವೆ. ಅದರಲ್ಲೂ ಪೊಲೀಸ್ ಮೇಲ್ವಿಚಾರಣೆ ಕಷ್ಟಕರವಾಗಿರುವ ಬೆಂಗಳೂರಿನ ಹೊರವಲಯಗಳಲ್ಲಿ ಈ ಕ್ರಮಗಳು ನೆರವಾಗಲಿವೆ.
ಸಮುದಾಯಗಳೊಡನೆ ಸಂಪರ್ಕ:
ಹುಬ್ಬಳ್ಳಿಯಂತಹ ಪ್ರಕರಣಗಳಲ್ಲಿ ಪೊಲೀಸರು ಜನರೊಡನೆ ಬಲವಾದ ಸಂಪರ್ಕ, ಬಾಂಧವ್ಯ ಸಾಧಿಸಬೇಕು. ಪೊಲೀಸರು ಶಾಲೆಗಳು, ನಿವಾಸಿಗಳ ಸಂಘಟನೆಗಳು, ಹಾಗೂ ಎನ್‌ಜಿಒಗಳೊಡನೆ ಕಾರ್ಯಾಚರಿಸಿ, ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಕ್ಷಿಪ್ರ ಪ್ರತಿಕ್ರಿಯಾ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಬೇಕು. ಎನ್‌ಕೌಂಟರ್ ಹತ್ಯೆಯ ಬಳಿಕ ಜನರ ನಂಬಿಕೆ ಕುಸಿದಿದ್ದು, ಪೊಲೀಸರು ಸಾರ್ವಜನಿಕರೊಡನೆ ಮಾಹಿತಿಗಳನ್ನು ಹಂಚಿಕೊಂಡು, ಅವರೊಡನೆ ಮುಕ್ತವಾಗಿ ಸಂವಹನ ನಡೆಸಬೇಕು.
ಅಪರಾಧದ ಮೂಲಕ್ಕೆ ಪರಿಹಾರ:
ಹುಬ್ಬಳ್ಳಿ ಪ್ರಕರಣದಲ್ಲಿ ಕಂಡಂತೆ, ವಲಸಿಗ ಕಾರ್ಮಿಕ ಸಮುದಾಯವನ್ನು ದೂಷಿಸುವುದು ಅಪಾಯಕಾರಿ ಬೆಳವಣಿಗೆ. ಅದರ ಬದಲಿಗೆ, ಪೊಲೀಸರು ಕಾರ್ಮಿಕ ಸಂಘಟನೆಗಳೊಡನೆ ಕಾರ್ಯಾಚರಿಸಿ, ವಲಸೆ ಕಾರ್ಮಿಕರನ್ನೂ ಸಮಾಜದ ಭಾಗವಾಗಿಸಲು ಪ್ರಯತ್ನ ನಡೆಸಬೇಕು. ಇದರಿಂದಾಗಿ ಅವರು ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಡಿಮೆಯಾದೀತು. ಬಿಡದಿಯಲ್ಲಿ ಭೂ ವಿವಾದಗಳು ಆಗಾಗ ಹಿಂಸಾಚಾರಕ್ಕೆ ಹಾದಿ ಮಾಡಿಕೊಡುತ್ತವೆ. ಇಂತಹ ವಿವಾದಗಳಿಗೆ ಕ್ಷಿಪ್ರ ಪರಿಹಾರ ಮತ್ತು ಭೂ ವಿಚಾರಗಳ ಮೇಲೆ ನಿಯಂತ್ರಣ ಸಾಧಿಸುವುದರಿಂದ ವಿವಾದಗಳು ಹಿಂಸಾಚಾರಕ್ಕೆ ತಿರುಗದಂತೆ ತಡೆಯಬಹುದು.
ಪೊಲೀಸ್ ಪಡೆಯ ಪ್ರತಿಭೆಗಳ ದುರ್ಬಳಕೆ:
ಅಪರಾಧಿಗಳು ನಡುಗುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ಕರ್ನಾಟಕದ ಅತ್ಯುತ್ತಮ ಪೊಲೀಸ್ ಅಧಿಕಾರಿಗಳು ಸಣ್ಣಪುಟ್ಟ ದೈನಂದಿನ ಇಲಾಖಾ ಕಾರ್ಯಗಳಲ್ಲಿ ಬಾಕಿಯಾಗಿದ್ದಾರೆ. ಅವರಲ್ಲಿ ಹಲವರನ್ನು 'ಅಟೆನ್ಷನ್' ಮತ್ತು 'ಸ್ಟ್ಯಾಂಡ್ ಅಟ್ ಈಸ್' ವ್ಯಾಯಾಮಗಳನ್ನು ಮಾಡಲು, ವೈರ್ ಲೆಸ್ ಸಂದೇಶಗಳನ್ನು ಸ್ವೀಕರಿಸಲು, 112 ತುರ್ತು ಕರೆಗಳನ್ನು ಸ್ವೀಕರಿಸಲು ಸೀಮಿತಗೊಳಿಸಲಾಗಿದೆ. ಇಂತಹ ಅನುಭವಿ ಅಧಿಕಾರಿಗಳು ಕ್ರಿಮಿನಲ್ ವಿರೋಧಿ ಕಾರ್ಯಾಚರಣೆಗಳ ನೇತೃತ್ವ ವಹಿಸಬೇಕೇ ಹೊರತು ಇಂತಹ ಅನವಶ್ಯಕ ಕಾರ್ಯಗಳಲ್ಲಿ ಸಿಲುಕಿಕೊಳ್ಳಬಾರದು.
ಒಂದು ವೇಳೆ ಕರ್ನಾಟಕ ನಿಜಕ್ಕೂ ಹಿಂಸಾಚಾರದ ಮೇಲೆ ನಿಯಂತ್ರಣ ಸಾಧಿಸಬೇಕಾದರೆ, ಇಂತಹ ಕುಶಲ ಅಧಿಕಾರಿಗಳನ್ನು ಮೇಜಿನ ಹಿಂದಲ್ಲದೆ, ಸಮಾಜದಲ್ಲಿ ಕಾರ್ಯಾಚರಿಸಲು ಬಿಡಬೇಕು.
ಕಣ್ಮರೆಯಾದ ನಾಯಕತ್ವ ಮತ್ತು ಸುಧಾರಣೆ
ಇಲ್ಲಿಯ ತನಕ ರಾಜಕಾರಣಿಗಳು ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸುವ ವಿಚಾರದಲ್ಲಿ ಮೌನವಾಗಿಯೇ ಉಳಿದಿದ್ದಾರೆ. ಅವರು ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ, ಅಥವಾ ಪೊಲೀಸರ ಕಾರ್ಯದಲ್ಲಿ ರಾಜಕಾರಣಿಗಳ ಹಸ್ತಕ್ಷೇಪದಂತಹ ವಿಚಾರಗಳ ಕುರಿತು ಧ್ವನಿ ಎತ್ತಿಲ್ಲ. ಪೊಲೀಸ್ ಇಲಾಖೆಗೆ ಸರಿಯಾದ ನಾಯಕತ್ವ ಮತ್ತು ಸಮರ್ಥ ಸುಧಾರಣೆಗಳಿಲ್ಲದೆ, ಸಾರ್ವಜನಿಕರ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ.
ಇಲಾಖೆಯ ಇಂತಹ ಮೌನಗಳು ಜನರಲ್ಲಿ ಕರ್ನಾಟಕ ಮತ್ತೆ ಶಾಂತಿಯತ್ತ ಹೊರಳಬಹುದೇ, ಅಥವಾ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೇ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿವೆ.
ಕರ್ನಾಟಕದ ಪ್ರತಿಷ್ಠೆಯ ಪ್ರಶ್ನೆ
ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಭವಿಷ್ಯ ಇಂತಹ ಅಪರಾಧ ಕೃತ್ಯಗಳನ್ನು ಹೇಗೆ ನಿಭಾಯಿಸಲಾಗುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಆಗಿರುವ ಬೆಂಗಳೂರು ಅಪರಾಧ ಕೃತ್ಯಗಳಿಗೆ ಹೆಸರಾಗಬಾರದು. ಬೆಂಗಳೂರಿನಲ್ಲಿ ಸುರಕ್ಷತೆಯ ಭಾವ ಮೂಡದಿದ್ದರೆ ಪ್ರವಾಸಿಗರು ಮತ್ತು ಹೂಡಿಕೆದಾರರು ಬರಲು ಸಾಧ್ಯವಿಲ್ಲ. ಜನರು ಈಗಾಗಲೇ ಆತಂಕಿತರಾಗಿದ್ದು, ಪೋಷಕರು ಮಕ್ಕಳ ಸುರಕ್ಷತೆಯ ಕುರಿತು ಕಳವಳಗೊಂಡಿದ್ದಾರೆ. ಬೆಂಗಳೂರಿನಲ್ಲಿ ಗ್ಯಾಂಗ್ ವಾರ್‌ಗಳ ಹಳೆಯ ನೆನಪುಗಳು ಈಗ ಮರಳಿ ಕಾಣಿಸಿಕೊಳ್ಳುತ್ತಿವೆ. ಪೊಲೀಸರು ಕೇವಲ ಅಪರಾಧಗಳನ್ನು ತಡೆಯುವುದು ಮಾತ್ರವಲ್ಲದೆ, ಸುರಕ್ಷಿತ ಮತ್ತು ಆಶಾದಾಯಕ ಭವಿಷ್ಯವನ್ನು ನಿರ್ಮಿಸಲು ನೆರವಾಗಬೇಕು.
ಎಂತಹ ಬದಲಾವಣೆಗಳು ಬೇಕು?
ಪೊಲೀಸರನ್ನು ಅತಿಯಾಗಿ ಬಳಸಲಾಗಿರುವುದು ಹೌದು. ಅವರಿಗೆ ಅತಿಯಾದ ರಾಜಕೀಯ ಒತ್ತಡಗಳಿರುವುದೂ ಹೌದು. ಅವರಿಗೆ ಸಂಪನ್ಮೂಲಗಳ ಕೊರತೆಯೂ ಇದೆ. ಇದನ್ನು ಸುಧಾರಿಸುವ ಸಲುವಾಗಿಯೇ ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳನ್ನು ತರಬೇಕಿದೆ. ಅಧಿಕಾರಿಗಳಿಗೆ ಉದ್ವಿಗ್ನ ಪರಿಸ್ಥಿತಿಗಳನ್ನು ತಿಳಿಗೊಳಿಸುವ ತರಬೇತಿ ನೀಡಬೇಕು. ಅವರಿಗೆ ಪ್ರಾಣಾಪಾಯ ಉಂಟು ಮಾಡದಂತಹ ಉಪಕರಣಗಳು, ಆಯುಧಗಳನ್ನು ಒದಗಿಸಬೇಕು. ಪೊಲೀಸರನ್ನು ಬಾಹ್ಯ ಹಸ್ತಕ್ಷೇಪಗಳಿಂದ ರಕ್ಷಿಸಬೇಕು.
ಬಿಡದಿಯ ಪ್ರಕರಣದಲ್ಲಿ ಕ್ಷಿಪ್ರವಾಗಿ ಕ್ರಮ ಕೈಗೊಂಡರೆ ಅದು ಬಲವಾದ ಸಂದೇಶವನ್ನು ರವಾನಿಸೀತು. ಹುಬ್ಬಳ್ಳಿಯಲ್ಲಿ ದೀರ್ಘಾವಧಿಯಲ್ಲಿ ಜನರನ್ನು ತಲುಪುವ ಕಾರ್ಯಗಳನ್ನು ನಡೆಸಿದರೆ, ಅದರಿಂದಾಗಿ ಸಮಾಜದಲ್ಲಿ ಆಗಿರುವ ಗಾಯ ಕಡಿಮೆಯಾದೀತು. ಆದರೆ, ಇವೆಲ್ಲ ಪ್ರಯತ್ನಗಳಿಗೆ ಹಣ, ನೀತಿ, ಮತ್ತು ಸರ್ಕಾರದ ಬದ್ಧತೆಗಳ ಅವಶ್ಯಕತೆಯಿದೆ.
ಕರ್ನಾಟಕದಲ್ಲಿ ಗುಂಡಿನ ಮೊರೆತ ಸಹಜ ಎಂಬಂತಾಗದಿರಲಿ
ಬಿಡದಿಯಲ್ಲಿ ನಡೆದ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಲಿ. ಕರ್ನಾಟಕಕ್ಕೆ ತಕ್ಷಣವೇ ಪ್ರತಿಕ್ರಿಯಿಸುವ, ನಿಯಮಗಳನ್ನು ಪಾಲಿಸುವ, ಜನರಿಗಾಗಿ ಕಾರ್ಯಾಚರಿಸುವ ಪೊಲೀಸ್ ಇಲಾಖೆಯ ಅವಶ್ಯಕತೆಯಿದೆ. ಹಾಗಾದಾಗ ಮಾತ್ರ ಇಂತಹ ದುರ್ಘಟನೆಗಳನ್ನು ತಡೆದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಮರಳಲು ಸಾಧ್ಯ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ