ಚಿನ್ನಾಭರಣ ಜೇಬಲ್ಲಿಟ್ಟು ಗುತ್ತಿಗೆದಾರರು ಪ್ರತಿಭಟಿಸಿದ್ದೇಕೆ? ಭ್ರಷ್ಟ ರಾಜಕಾರಣಿಗಳಿಗೆ ರಾತ್ರಿ ಹೊತ್ತು ನಿದ್ರೆ ಬರುತ್ತಾ?!

By Kannadaprabha News  |  First Published Sep 16, 2024, 12:14 PM IST

ಇಂತಹದೊಂದು ಕುತೂಹಲಕಾರಿ ಚರ್ಚೆ ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಗಾಂಧಿ ಕುರಿತ ವಿಚಾರ ಸಂಕಿರಣದ ವೇಳೆ ನಡೆದು ನಿವೃತ್ತ ಲೋಕಾಯುಕ್ತ ನ್ಯಾ। ಸಂತೋಷ್‌ ಹೆಗ್ಡೆ ಅವರಿಗೆ ಹೊಸದೊಂದು ಹೊಳಹು ಮೂಡಲು ಪ್ರೇರಣೆಯಾದ ಪ್ರಸಂಗವಿದು.


Repoters Dairy: ಇಂತಹದೊಂದು ಕುತೂಹಲಕಾರಿ ಚರ್ಚೆ ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಗಾಂಧಿ ಕುರಿತ ವಿಚಾರ ಸಂಕಿರಣದ ವೇಳೆ ನಡೆದು ನಿವೃತ್ತ ಲೋಕಾಯುಕ್ತ ನ್ಯಾ। ಸಂತೋಷ್‌ ಹೆಗ್ಡೆ ಅವರಿಗೆ ಹೊಸದೊಂದು ಹೊಳಹು ಮೂಡಲು ಪ್ರೇರಣೆಯಾದ ಪ್ರಸಂಗವಿದು.

ವಿಚಾರ ಸಂಕಿರಣದಲ್ಲಿ ಮೊದಲು ಮಾತನಾಡಿದ ಹೆಗ್ಡೆ, ರಾಜಕಾರಣಿಗಳು, ಅಧಿಕಾರಿಗಳ ದುರಾಸೆ ಮಿತಿ ಮೀರಿದೆ. ಅವರ ಮನೆಗಳ ಮೇಲೆ ಸಿಬಿಐ, ಇ.ಡಿ. ಮುಂತಾದ ತನಿಖಾ ಸಂಸ್ಥೆಗಳು ದಾಳಿ ಮಾಡಿದಾಗ ಕಂತೆ ಕಂತೆ ನೋಟುಗಳ ನೂರಾರು ಕೋಟಿ ರು. ಹಣ, ಚಿನ್ನಾಭರಣ, ಅಪಾರ ಆಸ್ತಿ ಪತ್ತೆಯಾಗುತ್ತಿದೆ. ಆದರೂ ಅವರ ಹಣದ ಹಪಾಹಪಿ ಕಡಿಮೆಯಾಗಿಲ್ಲ. ಇಂತಹ ಅಕ್ರಮ ಹಣ ಆಸ್ತಿ ಹೊಂದಿರುವ ಈ ಭ್ರಷ್ಟರಿಗೆ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರೋದಿಲ್ಲ ಎಂದು ಬಿಟ್ಟರು.

Tap to resize

Latest Videos

Repoters Dairy: ದರ್ಶನ್‌ಗೆ ಕಾಡುತ್ತಿದೆ ‘ದುರ್ಯೋಧನ ಗ್ರಹಣ’: ಇದೇಕೆ ಹೀಗೆ ಸಾಲು ಸಾಲು ಕಂಟಕ?

ಯಾಕೆ ನಿದ್ದೆ ಬರೋಲ್ಲ ಅಂದ್ರೆ ಯಾವಾಗ ತನಿಖಾ ಸಂಸ್ಥೆಗಳು ದಾಳಿ ಮಾಡಿ ವಶಪಡಿಸಿಕೊಳ್ಳುತ್ತಾರೋ ಎನ್ನುವ ಭೀತಿಯಿಂದ ನಿದ್ದೆ ಮಾಡಲ್ಲ. ನ್ಯಾಯ ಮಾರ್ಗದಲ್ಲಿ ಹಣ ಗಳಿಸಿದ್ದರೆ ಮಾತ್ರ ನೆಮ್ಮದಿ ಎಂದು ಪ್ರತಿಪಾದಿಸಿದರು.

ಇದ ಕೇಳಿ ಅನಂತರ ಮಾತಿಗೆ ನಿಂತ ಸಚಿವ ಎಚ್‌.ಕೆ. ಪಾಟೀಲ್, ಹೆಗ್ಡೆ ಅವರ ಮಾತು ಒಪ್ಪಲು ಆಗುವುದಿಲ್ಲ. ಪಾಪ... ಅವರಿನ್ನೂ ಯಾವುದೋ ಲೋಕದಲ್ಲಿದ್ದಾರೆ. ಏಕೆಂದರೆ, ‘ಕೋಟಿಗಟ್ಟಲೇ ಹಣ ಹೊಂದಿರುವ ಭ್ರಷ್ಟರು ಚೆನ್ನಾಗಿ, ಕಣ್ತುಂಬ ನಿದ್ರೆ ಮಾಡುತ್ತಾರೆ’ ಎಂದಾಗ ಸಭೆಯಲ್ಲಿ ನಗೆಗಡಲು ಮತ್ತು ಹೆಗ್ಡೆ ಸಾಹೇಬರಿಗೆ ಹೊಸ ಹೊಳಹು!

ಜೀನ್‌ ತೊಟ್ಟ ಲಕ ಲಕ ರಾಜಕಾರಣಿ!

ಒಂದೊಂದು ವೃತ್ತಿಗೆ ಒಂದೊಂದು ಉಡುಪು ಪ್ರಾತಿನಿಧಿಕವಾಗಿರುತ್ತದೆ. ಪೊಲೀಸರೆಂದರೆ ಖಾಕಿ. ಸನ್ಯಾಸಿಯೆಂದರೆ ಕಾವಿ, ರಾಜಕಾರಣಿಗಳೆಂದರೆ ಶುಭ್ರ ಬಿಳಿ... ಖಾಕಿ ಕಡ್ಡಾಯ, ಕಾವಿ ಅಲ್‌ಮೋಸ್ಟ್ ಕಡ್ಡಾಯ. ಆದರೆ, ಬಿಳಿ ಉಡುಪು ಕಡ್ಡಾಯವೇನಲ್ಲ.

ಆದಾಗ್ಯೂ, ರಾಜಕಾರಣಿಗಳು ಸದಾ ಶುಭ್ರ ಬಿಳಿ ಧರಿಸುವುದು ಸಂಪ್ರದಾಯದಂತೆ ಬೆಳೆದುಬಂದಿದೆ. ಆದರೆ, ಇಂದಿನ ಕೆಲ ಮಾಡರ್ನ್ ರಾಜಕಾರಣಿಗಳು ಕೆಲವೊಮ್ಮೆ ಬಿಳಿ ಉಡುಪು ಬಿಟ್ಟು ಬೇರೆ ವಸ್ತ್ರ ಧರಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ. ಈ ಟ್ರೆಂಡ್ ಸೃಷ್ಟಿಸುವ ಭರದಲ್ಲಿ ಕೆಲವೊಮ್ಮೆ ಪೇಚಿಗೆ ಸಿಲುಕುವ ಪ್ರಸಂಗಗಳು ಜರುಗುತ್ತವೆ. ಮೊನ್ನೆ ಹೀಗೆಯೇ ಆಯ್ತು.

ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಎಂಎಲ್ಸಿ ಪುಟ್ಟಣ್ಣ ಯಾವುದೋ ಕೆಲಸದ ನಿಮಿತ್ತ ಬೆಂಗಳೂರು ನಗರ ಪೊಲೀಸ್ ಕಮೀಷನರ್‌ ಕಚೇರಿಗೆ ಬಂದಿದ್ದರು. ಕಮೀಷನರ್ ಹಾಗೂ ಅಡಿಷನಲ್‌ ಕಮೀಷನರ್‌ ಅವರ ಚೇಂಬರ್ ಹೊರಗೆ ಇದ್ದ ಸಿಬ್ಬಂದಿಗೆ ಎಂಎಲ್ಸಿ ಪುಟ್ಟಣ್ಣ ಬಂದಿದ್ದಾರೆ ಅಂತ ಹೇಳಿ ಎಂದು ರಾಜಕಾರಣಿ ಶೈಲಿಯಲ್ಲೇ ಹೇಳಿದರು. ಜೀನ್ಸ್ ಪ್ಯಾಂಟ್‌, ಕಲರ್‌ಫುಲ್‌ ಶರ್ಟ್‌ ಹಾಗೂ ಬ್ರ್ಯಾಂಡೆಡ್‌ ಶೂ ಧರಿಸಿ ಥೇಟ್ ಫಿಸಿಕ್ಸ್ ಲೆಕ್ಚರ್‌ ರೀತಿ ಕಾಣುತ್ತಿದ್ದ ಪುಟ್ಟಣ್ಣ ಅವರನ್ನು ಸಿಬ್ಬಂದಿ ಮೇಲಿನಿಂದ ಕೆಳಗಿನವರೆಗೂ ಯಾವ... ಇವ... ಎಂಬಂತೆ ನೋಡಿದರು.

ಆದರೆ, ಪುಟ್ಟಣ್ಣ ಉಡುಪು ಹೇಗೆಯೇ ಇರಬಹುದು ಆದರೆ ಮಾತನಾಡುವ ಶೈಲಿ ಥೇಟ್ ರಾಜಕಾರಣಿಯಂತೆ ಇದ್ದಿದ್ದರಿಂದ ಒಳ ಬಿಟ್ಟರು. ಸಾಹೇಬರು ಒಳ ಹೋದ ನಂತರ ಜೀನ್ಸ್ ಪ್ಯಾಂಟ್‌ ಹಾಕ್ಕೊಂಡು ಬಂದ್ರೇ ನಮಗೆ ಹೇಗೆ ಗೊತ್ತಾಗಬೇಕು. ರಾಜಕಾರಣಿಗಳಿಗೂ ಡ್ರೆಸ್‌ ಕೋಡ್ ಮಾಡಬೇಕಪ್ಪ ಅಂತ ಗೊಣಗಿಕೊಂಡರು.

ಪ್ರತಿಭಟನೆ ಕೋಸಂ ನಾನಾ ವೇಸಂ!!!

ಜೀನ್ಸ್‌ ತೊಟ್ಟು ಲಕ ಲಕ ಹೊಳೆಯೋ ಪುಟ್ಟಣ್ಣ ಕಥೆ ಆ ರೀತಿಯಾದರೆ ಸಾಮಾನ್ಯವಾಗಿ ಮೈತುಂಬಾ ಚಿನ್ನ ಧರಿಸಿ ದುಬಾರಿ ಉಡುಪು ತೊಟ್ಟು ನಿತ್ಯ ಮಿಂಚೋ ಬಿಬಿಎಂಪಿ ಗುತ್ತಿಗೆದಾರರದ್ದು ಸ್ವಲ್ಪ ಭಿನ್ನ ಕಥೆ.

ಬಿಬಿಎಂಪಿ ಎಂದರೆ ಗೊತ್ತಲ್ಲ. ಅಲ್ಲಿ ಕೆಲಸ ಮಾಡಿ ಬಿಲ್‌ ಪಡೆಯಲು ಹರಸಾಹಸ ನಡೆಸಬೇಕು. ಈ ಚಿನ್ನಾಭರಣ ಪ್ರಿಯ ಗುತ್ತಿಗೆದಾರರು ಎಲ್ಲ ರೀತಿಯ ಸಾಹಸ ನಡೆಸಿಯೂ ಬಿಲ್‌ ಸಿಗದ ಕಾರಣ ಬೇಸತ್ತಿದ್ದರು. ಈ ಬೇಸರ ಪ್ರತಿಭಟನೆಗೆ ಕಾರಣವಾಯಿತು.

ಹೀಗೆ ಪ್ರತಿಭಟನೆಗೆ ಮುಂದಾದ ದಿನ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಲು ಸರ್ಕಾರದ ವಿರುದ್ಧ ಘೋಷಣೆ ಕೂಗಬೇಕಾದ ಟೈಮ್‌ಗೆ ಸರಿಯಾಗಿ ಕೆಲ ಗುತ್ತಿಗೆದಾರರು ಹಠಾತ್‌ ಜ್ಞಾನೋದಯವಾದಂತೆ ತಮ್ಮ ಕುತ್ತಿಗೆ, ಕೈಯಲ್ಲಿದ್ದ ಚಿನ್ನದ ಆಭರಣಗಳನ್ನೆಲ್ಲ ತೆಗೆದು ತಮ್ಮ ಜೇಬಿಗಿಳಿಸಿಕೊಳ್ಳ ತೊಡಗಿದರು. ಇದನ್ನು ನೋಡಿದ ಅಕ್ಕ-ಪಕ್ಕ ಇದ್ದ ಇತರೆ ಗುತ್ತಿಗೆದಾರರು ‘ಇದ್ಯಾಕ್ರಿ ಚಿನ್ನ ತೆಗೆಯುತ್ತಿದ್ದೀರಾ’ ಅಂದರೆ ‘ನಾವು ಕಷ್ಟದಲ್ಲಿದ್ದೇವೆ. ಬಾಕಿ ಬಿಲ್‌ ಮೊತ್ತ ಪಾವತಿಸಿ ಎಂದು ಪ್ರತಿಭಟಿಸುತ್ತಿದ್ದೇವೆ. ಹೀಗಿರುವಾಗ ಆಭರಣಗಳನ್ನು ಹಾಕಿಕೊಂಡು ಮಾಧ್ಯಮಗಳಲ್ಲಿ ಕಾಣಿಸಿಕೊಂಡರೆ ಜನರು ನಮ್ಮದು ನಾಟಕ ಎಂದುಕೊಳ್ಳುವುದಿಲ್ಲವೇ’ ಎಂಬ ಲಾಜಿಕ್‌ ಪಾಯಿಂಟ್‌ ಇಟ್ಟರು.

ಇದ ಕೇಳಿ ಹೌದಲ್ಲ. ಅನಿಸಿದರೂ ಆ ಅಕ್ಕ-ಪಕ್ಕದ ಗುತ್ತಿಗೆದಾರರು ಚಿನ್ನದ ಸರಗಳನ್ನು ಜೇಬಿಗೆ ಇಳಿಬಿಟ್ಟುಕೊಳ್ಳಲಿಲ್ಲ. ಯಾಕಪ್ಪ ಅಂದ್ರೆ ಅಷ್ಟೊತ್ತಿಗೆ ಅಲ್ಲಿಗೆ ಟಿವಿ ಕ್ಯಾಮೆರಾಗಳು ಬಂದು ಹಾಯ್‌ ಎಂದು ಬಿಟ್ಟಿದ್ದವು.

ಗಣೇಶ ಎಂದರೆ ಬೆಚ್ಚಿ ಬಿದ್ದ ಸಿಇಓ!

ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ನಾಗಮಂಗಲದಲ್ಲಿ ಉಂಟಾದ ಗಲಭೆಯಿಂದ ಮಂಡ್ಯ ಜಿಲ್ಲೆಯ ಪೊಲೀಸ್ ಪಾಳೆಯದಲ್ಲಿ ನಡುಕ ಹುಟ್ಟಿದೆ. ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಆದಷ್ಟು ಬೇಗ ವಿಸರ್ಜನೆ ಮಾಡುವಂತೆ ಖಾಕಿ ಪಡೆ ಅನಧಿಕೃತವಾಗಿ ಫರ್ಮಾನು ಹೊರಡಿಸಿದೆ.

ನಾಗಮಂಗಲ ಗಲಭೆಯಿಂದ ಈಗಾಗಲೇ ಸಬ್ ಇನ್ಸ್‌ಪೆಕ್ಟರ್‌ವೊಬ್ಬರ ತಲೆದಂಡ ಆಗಿರುವುದು ಇದಕ್ಕೆ ಕಾರಣ. ಸೋ, ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆಯಾಗಿರೋ ಗಣೇಶಮೂರ್ತಿಗಳನ್ನು ಬೇಗ ವಿಸರ್ಜನೆ ಮಾಡಿ ಎಂದು ಆಯೋಜಕರಿಗೆ ದುಂಬಾಲು ಬಿದ್ದಿದ್ದಾರೆ.

ಅಷ್ಟೆ ಅಲ್ಲ, ಗಣೇಶ ವಿಸರ್ಜನೆ ರೂಟ್‌ನಲ್ಲಿ ಸಿಕ್ಕಾ ಪಟ್ಟೆ ಪೊಲೀಸರ ದಂಡೇ ಇರುತ್ತದೆ. ಜತೆಗೆ, ಈ ಮಾರ್ಗದಲ್ಲಿ ಎಲ್ಲಿಯೂ ಮುಸ್ಲಿಂ ಬಡಾವಣೆ, ಮಸೀದಿ, ದರ್ಗಾ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ಈ ಖ್ಯಾತ ಬಾಲಿವುಡ್ ನಟರು ಹಾಲೂ ಮಾರ್ತರೆ!

ಇದು ಗಣೇಶ ಮಿತ್ರ ಮಂಡಳಿಗಳಿಗೆ ಮಾತ್ರ ಅಲ್ಲ, ಖುದ್ದು ಸರ್ಕಾರಿ ಗಣಪತಿ ಅರ್ಥಾತ್‌ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕೂರಿಸಿದ ಗಣಪತಿಗೂ ಇದೇ ಕಥೆ. ಇದೇ ಮೊದಲ ಬಾರಿಗೆ ಜಿ.ಪಂ.ನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಭಾನುವಾರ ಗಣೇಶಮೂರ್ತಿ ವಿಸರ್ಜನೆ ಮಾಡಲು ನಿರ್ಧರಿಸಿದ್ದರು. ನಾಗಮಂಗಲ ಘಟನೆ ನಡೆಯುತ್ತಿದ್ದಂತೆಯೇ ಸಿಇಓ ಅವರು ಸಿಬ್ಬಂದಿಯನ್ನು ಕರೆದು ಏನೇನು ಪೂಜೆ ಮಾಡಬೇಕೋ ಅದನ್ನೆಲ್ಲವನ್ನೂ ಮುಗಿಸಿ ಗುರುವಾರವೇ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡುವಂತೆ ಮಾಡಿ ನಿಟ್ಟುಸಿರು ಬಿಟ್ಟರು.

  • -ಮಂಜುನಾಥ್ ನಾಗಲೀಕರ್‌
  • -ಗಿರೀಶ್ ಮಾದೇನಹಳ್ಳಿ
  • -ಗಿರೀಶ್ ಗರಗ
  • -ಮಂಡ್ಯ ಮಂಜುನಾಥ
click me!