ಜೈಲಿನಲ್ಲಿ ದರ್ಶನ್ ಗೆಳೆಯನ ಬಳಿ ಡ್ರಗ್ಸ್ ಮತ್ತೆ ಪತ್ತೆ; ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಿಲ್ಲ ಕಡಿವಾಣ?

By Kannadaprabha News  |  First Published Sep 16, 2024, 6:11 AM IST

ದರ್ಶನ್‌ಗೆ ರಾಜಾತಿಥ್ಯ ವಿವಾದದ ಬಳಿಕ ಅಕ್ರಮ ಚುಟುವಟಿಕೆಗಳು ಬಂದ್ ಆಗಿ ಸುಧಾರಣೆಯಾಗಲಿದೆ ಎಂದು ನಿರೀಕ್ಷೆ ಮೂಡಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನೈಜವಾದ ಮುಖವಾಡ ಬಯಲಾಗಿದೆ.


ಬೆಂಗಳೂರು (ಸೆ.16) :  ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಪ್ರಕರಣ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ದಿಢೀರ್‌ ದಾಳಿ ನಡೆಸಿರುವ ಆಗ್ನೇಯ ವಿಭಾಗದ ಪೊಲೀಸರು, ಜೈಲಿನಲ್ಲಿ ದರ್ಶನ್‌ ಜತೆ ‘ಟೀ ಪಾರ್ಟಿ’ಯಲ್ಲಿ ಕಾಣಿಸಿಕೊಂಡಿದ್ದ ರೌಡಿ ವಿಲ್ಸನ್ ಗಾರ್ಡನ್‌ ನಾಗರಾಜ್‌ ಪಡೆಯಿಂದ ಮೊಬೈಲ್ ಹಾಗೂ ಡ್ರಗ್ಸ್, 25 ಸಾವಿರ ನಗದು, ಪೆನ್‌ಡ್ರೈವ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದರ್ಶನ್‌ಗೆ ರಾಜಾತಿಥ್ಯ ವಿವಾದದ ಬಳಿಕ ಅಕ್ರಮ ಚುಟುವಟಿಕೆಗಳು ಬಂದ್ ಆಗಿ ಸುಧಾರಣೆಯಾಗಲಿದೆ ಎಂದು ನಿರೀಕ್ಷೆ ಮೂಡಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನೈಜವಾದ ಮುಖವಾಡ ಬಯಲಾಗಿದೆ.

Latest Videos

undefined

ಜೈಲು ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದೇಕೆ ಈ ಪೊರ್ಕಿ?: ದರ್ಶನ್‌ಗೆ ಹಳೇ ಟಿವಿ ಬೇಡ್ವಂತೆ.. ಹೊಸದೇ ಆಗಬೇಕಂತೆ!

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ನೇತೃತ್ವದಲ್ಲಿ ಶನಿವಾರ ಸಂಜೆ ಜೈಲಿನ ಮೇಲೆ ದಿಢೀರ್ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ನಾಗ ಹಾಗೂ ಆತನ ಸಹಚರರನ್ನು ಇಡಲಾಗಿರುವ ಬ್ಯಾರಕ್‌ನಲ್ಲಿ 15 ಮೊಬೈಲ್‌ಗಳು, 3 ಜಾರ್ಜರ್, 7 ಎಲೆಕ್ಟ್ರಿಕ್ ಸ್ಟೌವ್‌ಗಳು, ಮೂರು ಲಾಂಗ್‌ಗಳು, ಬೀಡಿ-ಸಿಗರೆಟ್‌ ಪ್ಯಾಕೆಟ್‌ಗಳು ಹಾಗೂ 20 ಗ್ರಾಂ ಡ್ರಗ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ದಾಳಿ ಹಿನ್ನೆಲೆಯಲ್ಲಿ ರೌಡಿ ನಾಗ ಹಾಗೂ ಆತನಿಗೆ ಸಹಕರಿಸಿದ ಕಾರಾಗೃಹದ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ದಾಳಿಯಲ್ಲಿ ಮೊಬೈಲ್ ಹಾಗೂ ಡ್ರಗ್ಸ್ ಪತ್ತೆ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ನಾಗ ಹಾಗೂ ಆತನ ಸಹಚರರ ಮಾತ್ರವಲ್ಲದೆ ಕಾರಾಗೃಹದ ಅಧಿಕಾರಿಗಳ ವಿರುದ್ಧ ಪ್ರತ್ಯೇಕವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ರಹಸ್ಯ ಕಾಪಾಡಿದ ಪೊಲೀಸರು

ದರ್ಶನ್ ವಿಶೇಷ ಸೌಲಭ್ಯ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಕೃತ್ಯಗಳ ಸಂಬಂಧ ಜೈಲಿನಲ್ಲಿ ರೌಡಿ ನಾಗ ಸೇರಿದಂತೆ ಕೆಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದರೆ ಮೊಬೈಲ್ ಹಾಗೂ ಸಿಗರೆಟ್ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗದೆ ಪೊಲೀಸರಿಗೆ ತನಿಖೆ ಸಾಕ್ಷ್ಯ ಸಂಗ್ರಹ ಸವಾಲಾಯಿತು.

ಈ ಮಧ್ಯೆ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿಲ್ಲಿಸಲು ಬಿಗಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದರು. ಆದರೆ ದರ್ಶನ್ ಗ್ಯಾಂಗ್ ಎತ್ತಂಗಡಿಗೊಂಡ ಎರಡು ವಾರಗಳ ಬಳಿಕ ಮತ್ತೆ ಜೈಲಿನ ರಹಸ್ಯ ಚಟುವಟಿಕೆಗಳು ಶುರುವಾಗಿದ್ದವು.

ಈ ಬಗ್ಗೆ ಮಾಹಿತಿ ಪಡೆದ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಜೈಲಿನ ಮೇಲೆ ದಿಢೀರ್ ದಾಳಿ ನಡೆಸುವ ಯೋಜನೆ ರೂಪಿಸಿದರು. ಆದರೆ ಈ ಹಿಂದೆ ಜೈಲಿನ ಮೇಲೆ ಸಿಸಿಬಿ ದಾಳಿ ಮಾಹಿತಿ ಸೋರಿಕೆಯಾಗಿ ವಿಫಲವಾಗಿದ್ದರಿಂದ ಜಾಗೃತೆ ವಹಿಸಿದ್ದ ಅವರು, ಕೊನೆ ಕ್ಷಣದವರೆಗೆ ದಾಳಿಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೂ ಸಹ ಮಾಹಿತಿ ನೀಡದೆ ಗೌಪ್ಯವಾಗಿರಿಸಿದ್ದರು. ಪೂರ್ವಯೋಜಿತದಂತೆ ಜೈಲಿನ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತ ಸಹಚರರನ್ನು ಬಂಧಿಸಿಟ್ಟಿದ್ದ ಬ್ಯಾರಕ್‌ ಮೇಲೆ ಸಂಜೆ 4.30ರ ಸುಮಾರಿಗೆ ಆಗ್ನೇಯ ಪೊಲೀಸರ ತಂಡ ಹಠಾತ್ ದಾಳಿ ನಡೆಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ನಾಗನ ಸ್ಥಳಾಂತರ: ಕೋರ್ಟ್‌ಗೆ ಮಾಹಿತಿ

ರೌಡಿ ನಾಗನ ಸ್ಥಳಾಂತರ ಸಂಬಂಧ ಸಿಸಿಬಿ ಅರ್ಜಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಂದಿನ ವಾರ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆಗ ಆಗ್ನೇಯ ವಿಭಾಗದ ಪೊಲೀಸರ ದಾಳಿ ವೇಳೆ ನಾಗನ ಬ್ಯಾರಕ್‌ನಲ್ಲಿ ಪತ್ತೆಯಾಗಿರುವ ಮೊಬೈಲ್ ಹಾಗೂ ಮಾರಕಾಸ್ತ್ರಗಳ ಕುರಿತು ನ್ಯಾಯಾಲಯಕ್ಕೆ ಸಿಸಿಬಿ ಮಾಹಿತಿ ನೀಡುವ ಸಾಧ್ಯತೆಗಳಿವೆ.

ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!

ದರ್ಶನ್ ಜತೆ ನಾಗ ಪಾರ್ಟಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಹಾ-ಸಿಗರೆಟ್‌ ಪಾರ್ಟಿಯಲ್ಲಿ ವಿಲ್ಸನ್ ಗಾರ್ಡನ್ ನಾಗ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ದರ್ಶನ್‌ಗೆ ಸಿಗರೆಟ್ ಹಾಗೂ ಟೀಯನ್ನು ನಾಗ ಪೂರೈಸಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು.--

ವಿಶೇಷ ಸೌಲಭ್ಯ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿ ನಾಗ ಹಾಗೂ ಆತನ ಸಹಚರರು ಇದ್ದ ಬ್ಯಾರಕ್ ಮಾತ್ರ ಪರಿಶೀಲಿಸಲಾಗಿದೆ. ದಾಳಿ ವೇಳೆ ಮೊಬೈಲ್ ಹಾಗೂ ಅಲ್ಪ ಪ್ರಮಾಣದ ಡ್ರಗ್ಸ್ ಕೂಡ ಪತ್ತೆಯಾಗಿದ್ದು, ಈ ಬಗ್ಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.

-ಸಾರಾ ಫಾತಿಮಾ, ಡಿಸಿಪಿ, ಆಗ್ನೇಯ ವಿಭಾಗ.

click me!