
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಪ್ರಕರಣದ ವಿಚಾರಣೆಯಲ್ಲಿ ಈಗ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಓರ್ವ ಈಗಾಗಲೇ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿ ವಿಚಾರಣೆ ಆರಂಭವಾಗಿದ್ದು ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿಗೆ ನಿರ್ಧರಿಸಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಇದೀಗ ಬೇಲ್ ಸಿಗದೆ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ತಂದಿಟ್ಟಿದೆ. ಪ್ರಕರಣದ 14ನೇ ಆರೋಪಿಯಾಗಿ (A-14) ಜೈಲು ಸೇರಿರುವ ಪ್ರದೋಶ್, ತನ್ನನ್ನು ‘ಮಾಫಿ ಸಾಕ್ಷಿ’ (ಅಪ್ರೂವರ್) ಆಗಿ ಪರಿಗಣಿಸುವಂತೆ ಕೋರಿ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರದೋಶ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ವೇಳೆ ಪ್ರದೋಶ್ ಪರ ವಕೀಲ ದಿವಾಕರ್, "ಮೊದಲು ನಮ್ಮ ಕಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿ. ಆ ನಂತರ ಪ್ರಾಸಿಕ್ಯೂಷನ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿ" ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದೇ ವೇಳೆ ಪ್ರಕರಣದಲ್ಲಿ ಜಾಮೀನು ಸಿಗದೆ ಜೈಲಿನಲ್ಲಿರುವ ನಟ ದರ್ಶನ್ ಅವರ ಆಪ್ತ, 10ನೇ ಆರೋಪಿ (A-10) ವಿನಯ್ ರಾಘವೇಂದ್ರ ಅಲಿಯಾಸ್ ವಿನಯ್ ಹಾಗೂ 8ನೇ ಆರೋಪಿ (A-8) ರವಿಶಂಕರ್ ಕೂಡ ತಮ್ಮನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರ ಪರ ವಕೀಲರು ಮಧ್ಯಾಹ್ನದ ವೇಳೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ಪ್ರದೋಶ್ ಪರ ವಕೀಲರು ತಮ್ಮ ಅರ್ಜಿಯೊಂದಿಗೆ ಇತರ ಆರೋಪಿಗಳ ಮನವಿಯನ್ನು ಸೇರಿಸದಂತೆ ಕೋರಿದ ಕಾರಣ, ನ್ಯಾಯಾಲಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು.
ಆರ್.ಆರ್. ನಗರದ ‘ಸ್ಟೋನಿ ಬ್ರೂಕ್’ ಪಬ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ವಿನಯ್ (A-10) ಮನೆ ಹಾಗೂ ಪಬ್‌ನಲ್ಲಿ ದರ್ಶನ್ ಗ್ಯಾಂಗ್ ಸಂಚು ರೂಪಿಸಿತ್ತು ಎನ್ನಲಾಗಿದೆ. ಕೊಲೆಯ ದಿನ ಪ್ರದೋಶ್ ಕೂಡ ಈ ಪಬ್‌ನಿಂದ ದರ್ಶನ್ ಜೊತೆಗೆ ಪಟ್ಟಣಗೆರೆಯ ಶೆಡ್‌ಗೆ ಹೋಗಿದ್ದ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಪ್ರದೋಶ್ ಸ್ಥಳದಲ್ಲೇ ಇದ್ದು, ಹೊಡೆಯೋದು ಸಾಕು ನಿಲ್ಲಿಸಿ, ಸತ್ತು ಹೋಗ್ತಾನೆʼ ಎಂದು ತಡೆದಿದ್ದ ಎಂದು ಪೊಲೀಸರ ತನಿಖಾ ವರದಿಯಲ್ಲಿದೆ. ಅಲ್ಲದೆ, ಕೊಲೆಯ ನಂತರ ಶವ ಸಾಗಿಸಲು ಸಹಾಯ ಕೋರಿ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಪ್ರದೋಶ್ ಫೋನ್ ಮಾಡಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ವಿನಯ್ ಸೇರಿದಂತೆ ಎಲ್ಲಾ ಆರೋಪಿಗಳ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯ ನಡೆದ ಸ್ಥಳದಲ್ಲಿದ್ದ ದೃಶ್ಯಗಳು, ಹಲ್ಲೆ ನಡೆಸಿದ ಸಂದರ್ಭದಲ್ಲಿ ತೆಗೆದಿದ್ದ ಫೋಟೋಗಳು ಹಾಗೂ ಡಿಲೀಟ್ ಮಾಡಲಾಗಿದ್ದ ಪ್ರಮುಖ ಮಾಹಿತಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಯಶಸ್ವಿಯಾಗಿ ರಿಟ್ರೀವ್ ಮಾಡಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಗಳು ಅತೀ ಹೆಚ್ಚು ವಿನಯ್ ಫೋನ್ ನಲ್ಲಿ ಇತ್ತು ಎನ್ನಲಾಗಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-8 ಆರೋಪಿಯಾಗಿರುವ ರವಿಶಂಕರ್ (Ravi Shankar), ಚಿತ್ರದುರ್ಗದ ಮೂಲದವನಾಗಿದ್ದು, ಡಿ ಗ್ಯಾಂಗ್ ಅಭಿಮಾನಿ ಸಂಘದವನು ನಟ ದರ್ಶನ್ ಗ್ಯಾಂಗ್‌ನಿಂದ ಅಪಹರಣಕ್ಕೊಳಗಾದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ಬಳಸಲಾದ ಟೊಯೋಟಾ ಇಟಿಯೋಸ್ (Toyota Etios) ಕಾರನ್ನು ಚಾಲನೆ ಮಾಡಿದ್ದ ವ್ಯಕ್ತಿ. ಕೃತ್ಯದ ಬಳಿಕ ಕೇಸ್ ಮುಚ್ಚಿ ಹಾಕಲು ಪೊಲೀಸರಿಗೆ ಶರಣಾಗಿದ್ದವರಲ್ಲಿ ಒಬ್ಬ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ