ರಾಜ್ಯದ 20%, ಬೆಂಗ್ಳೂರಿನ 48% ಮತದಾರರ ಹೆಸರು ಡಿಲೀಟ್‌! 1.10 ಕೋಟಿ ಹೆಸರು ಡಿಲೀಟ್

Published : Aug 06, 2026, 07:33 AM IST
SIR

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಬೆಂಗಳೂರಿನ ಶೇ.47.75 ರಷ್ಟು ಸೇರಿದಂತೆ ರಾಜ್ಯದ 1.10 ಕೋಟಿ ಮತದಾರರ ಹೆಸರುಗಳನ್ನು ರದ್ದುಗೊಳಿಸಲಾಗುತ್ತಿದೆ. ಸ್ಥಳಾಂತರ, ಮರಣ ಮತ್ತು ಇತರೆ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅರ್ಹ ಮತದಾರರು ಫಾರ್ಮ್ 6 ಸಲ್ಲಿಸಿ ಮತ್ತೆ ನೋಂದಾಯಿಸಿಕೊಳ್ಳಲು ಅವಕಾಶವಿದೆ.

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ 1.10 ಕೋಟಿ (ಶೇ.20.02) ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ. ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 49.34 (ಶೇ.47.75) ಲಕ್ಷ ಮತದಾರರ ಹೆಸರು ಡಿಲೀಟ್‌ ಆಗಲಿದೆ.

ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌, ಈ 1.10 ಕೋಟಿ ಎಎಸ್‌ಡಿಡಿಒ ವರ್ಗದ (ರದ್ದಾದ ವರ್ಗ) ಮತದಾರರ ಪೈಕಿ ಪತ್ತೆಯಾಗದವರು/ಗೈರು (ಎ) 16.27 ಲಕ್ಷ, ಶಾಶ್ವತ (ಎಸ್) ಸ್ಥಳಾಂತರ 66.62 ಲಕ್ಷ, ಮೃತರು (ಡಿ) 16.31 ಲಕ್ಷ, ಈಗಾಗಲೇ ಬೇರೆ ಕಡೆ ನೋಂದಣಿ ಮಾಡಿಕೊಂಡಿರುವವರು (ಡಿ) 6.90 ಲಕ್ಷ ಹಾಗೂ ಇತರೆ (ಒ) 4.85 ಲಕ್ಷ ಮತದಾರರು ಇದ್ದಾರೆ. ಇವರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ. ಅಂದರೆ, ಆ.17ರಂದು ಪ್ರಕಟಿಸಲಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ ಎಂದು ಹೇಳಿದರು.

ರಾಜ್ಯದ ಹಾಲಿ ಮತದಾರರ ಪಟ್ಟಿಯಲ್ಲಿ (2026 ಜೂ.16) 5.54 ಕೋಟಿ ಮತದಾರರು ಇದ್ದಾರೆ. ಕಳೆದ 37 ದಿನಗಳಿಂದ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರಿಗೆ 5.54 ಕೋಟಿ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ ಬುಧವಾರ ಸಂಜೆ 4 ಗಂಟೆ ವರೆಗೆ 1,10,97,426 (ಶೇ.20.02) ಎಎಸ್‌ಡಿಡಿಒ ವರ್ಗದ ಗಣತಿ ನಮೂನೆಗಳು ಹಾಗೂ ಮತದಾರರು ಭರ್ತಿ ಮಾಡಿ ವಾಪಸ್‌ ನೀಡಿದ 4.43 ಕೋಟಿ ಗಣತಿ ನಮೂನೆಗಳು ಸೇರಿ ಒಟ್ಟು 5,54,14,689 (ಶೇ.99.97) ನಮೂನೆಗಳ ಡಿಜಿಟಲೀಕರಣ ಆಗಿದೆ. 17,625 ಗಣತಿ ನಮೂನೆಗಳ ಡಿಜಿಟಲೀಕರಣ ಬಾಕಿ ಇದೆ. ಎರಡು ದಿನಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಿದ್ದೇವೆ ಎಂದರು.

ಫಾರ್ಮ್‌ 6 ಭರ್ತಿ ಮಾಡಿ:

ಈ ಎಎಸ್‌ಡಿಡಿಒ ವರ್ಗದಲ್ಲಿ ಶಾಶ್ವತ ಸ್ಥಳಾಂತರವಾಗಿರುವ ಮತದಾರರು ಆ.8ರ ಬಳಿಕ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮುಖಾಂತರ ನಿಗದಿತ 11 ದಾಖಲೆಗಳ ಪೈಕಿ ಯಾವುದಾದರೂ ಒಂದರ ಜೊತೆಗೆ ಫಾರ್ಮ್‌ 6 ಭರ್ತಿ ಮಾಡಿ ಸಲ್ಲಿಸಿ. ಬಿಎಲ್‌ಒ/ಇಆರ್‌ಒಗಳು ಆ ಅರ್ಜಿ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಿದ್ದಾರೆ. ಸೆ.16ರೊಳಗೆ ಫಾರ್ಮ್‌ 6 ಭರ್ತಿ ಮಾಡಿ ಕೊಟ್ಟಲ್ಲಿ ಅಂಥ ಮತದಾರರ ಹೆಸರು ಅ.19ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ ಎಂದು ಹೇಳಿದರು.

ಅಂತೆಯೇ 2026 ಅ.1ರೊಳಗೆ 18 ವರ್ಷ ತುಂಬಿದ ಅರ್ಹ ವ್ಯಕ್ತಿಗಳು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಫಾರ್ಮ್‌ 6 ಭರ್ತಿ ಮಾಡಲು ಸಮಯದ ಗಡುವಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕವೂ ಸಲ್ಲಿಸಬಹುದು. ಈಗಾಗಲೇ ಬಿಎಲ್‌ಒಗಳಿಗೆ ತಲಾ 30 ಫಾರ್ಮ್‌ 6 ವಿತರಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 10 ಲಕ್ಷ ಫಾರ್ಮ್‌ 6 ವಿತರಿಸಲಾಗಿದೆ ಎಂದು ತಿಳಿಸಿದರು.

34.17 ಲಕ್ಷ ಮತದಾರರಿಗೆ ನೋಟಿಸ್‌ ಖಚಿತ:

ರಾಜ್ಯದಲ್ಲಿ ಎಸ್‌ಐಆರ್‌ ಪೂರ್ವದಲ್ಲಿ 2002ರ ಮತದಾರರ ಪಟ್ಟಿ ಆಧರಿಸಿ ನಡೆದ ಮ್ಯಾಪಿಂಗ್‌ ವೇಳೆ 34.17 ಲಕ್ಷ ಮತದಾರರ ಮ್ಯಾಂಪಿಗ್‌ ಸಾಧ್ಯವಾಗಿಲ್ಲ. ಆದರೂ ಅವರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಈ ಮತದಾರರು ತಮ್ಮಲ್ಲಿರುವ ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ಗಣತಿ ನಮೂನೆಗಳನ್ನು ಬಿಎಲ್‌ಒಗಳಿಗೆ ವಾಪಸ್‌ ನೀಡಿದ್ದಾರೆ. ಇವರ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಆಕ್ಷೇಪಣೆ ಮತ್ತು ಕ್ಲೇಮು ಸಲ್ಲಿಕೆ ವೇಳೆ ಈ ಮತದಾರರಿಗೆ ನೋಟಿಸ್ ನೀಡಲಾಗುವುದು. ಆಗ ಮತದಾರರು ನಿಗದಿತ ದಾಖಲೆ ನೀಡಿದರೆ ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಲಿದೆ.

ಅಂತೆಯೇ ಮತದಾರರು ಗಣತಿ ನಮೂನೆಯಲ್ಲಿ ಭರ್ತಿ ಮಾಡಿರುವ ಮಾಹಿತಿಯಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಅಂತಹ ಮತದಾರರಿಗೂ ನೋಟಿಸ್‌ ನೀಡಲಾಗುವುದು. ಈ ವೇಳೆ ನಿಗದಿತ ದಾಖಲೆ ನೀಡಬೇಕು. ಮತದಾರರ ನೋಂದಣಿ ಅಧಿಕಾರಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿ.ಅನ್ಬುಕುಮಾರ್‌ ತಿಳಿಸಿದರು.

ಯಾರ ಹೆಸರು ಡಿಲೀಟ್?

( ಆ.5ರ ಸಂಜೆ 4ರ ವರೆಗೆ)

ಗೈರು/ ಪತ್ತೆಯಾಗದವರು: 16.27 ಲಕ್ಷ

ಶಾಶ್ವತ ಸ್ಥಳಾಂತರ: 66.62 ಲಕ್ಷ

ಮೃತರು: 16.31 ಲಕ್ಷ

ಈಗಾಗಲೇ ಬೇರೆ ಕಡೆ ನೋಂದಣಿ: 6.90 ಲಕ್ಷ

ಇತರೆ: 4.85 ಲಕ್ಷ

ಅ.8ರ ಸಂಜೆವರೆಗೂ ಅವಕಾಶ

ಅರ್ಹ ಮತದಾರರನ್ನು ತಪ್ಪಾಗಿ ಡಿಲೀಟ್‌ ಆಗಿರುವ ವರ್ಗಕ್ಕೆ ಸೇರಿಸಿದ್ದಲ್ಲಿ ಅಂತಹ ಮತದಾರರು ಆ.8ರ ಸಂಜೆ ವರೆಗೂ ಸಂಬಂಧಿತ ಬಿಎಲ್‌ಒ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು (ರೋಲ್‌ ಬ್ಯಾಕ್‌). ಅಂಥ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿದೆ.

- ವಿ.ಅನ್ಬುಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಸ್ಕೀಂ ಜಾರಿಗೆ ಮೊದಲ ತಿಂಗಳೇ ಭಾರಿ ಹಿನ್ನಡೆ; ಆರಂಭಿಕ ತೊಡಕು
Karnataka Rains: ಮಲೆನಾಡು, ಕರಾವಳಿಯಲ್ಲಿ ಮಳೆ: ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು