'ರೇಣುಕಾಸ್ವಾಮಿ ಕೇಸ್‌ ಬಗ್ಗೆ ಎಲ್ಲಾ ಸತ್ಯ ಹೇಳ್ತಿನಿ' ದರ್ಶನ್ ಆಪ್ತ ಸ್ನೇಹಿತ 14ನೇ ಆರೋಪಿ ನ್ಯಾಯಾಲಯದಲ್ಲಿ ಅರ್ಜಿ!

Published : Aug 06, 2026, 11:51 AM IST
pradosh darshan renukaswamy case

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ನಟ ದರ್ಶನ್ ಆಪ್ತ ಮತ್ತು 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಈ ಬೆಳವಣಿಗೆಯು, ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ತೀವ್ರ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ, ಇದೀಗ ನಟ ದರ್ಶನ್ ತೂಗುದೀಪ ಮತ್ತು ಆತನ ಗ್ಯಾಂಗ್‌ಗೆ ತೀವ್ರ ಕಾನೂನು ಸಂಕಷ್ಟ ಎದುರಾಗಿದೆ. ಅದು ಬೇರೆ ಯಾರಿಂದಲೂ ಅಲ್ಲ ದರ್ಶನ್ ಅತ್ಯಾಪ್ತ ಸ್ನೇಹಿತ ಈ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ (A14) ಪ್ರದೋಷ್, ಪ್ರಕರಣದ ‘ಮಾಫಿ ಸಾಕ್ಷಿ’ (Approver/Turncoat Witness) ಆಗಲು ಬಯಸಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಮೂಲಕ ಇಡೀ ಪ್ರಕರಣ ಮಹತ್ವದ ತಿರುವು ಪಡೆದಿದೆ. ಇಂದು 12 ಗಂಟೆಗೆ ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಆರೋಪಿಯು ತಾನು ಎಸಗಿದ ತಪ್ಪನ್ನು ಒಪ್ಪಿಕೊಂಡು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆಯನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಮುಂದಾದಾಗ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲಾಗುತ್ತದೆ. ಈ ಮೂಲಕ ತನಗೆ ಕ್ಷಮಾದಾನ ಅಥವಾ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಕೋರಲಾಗುತ್ತದೆ. ದರ್ಶನ್ ಅವರ ಆಪ್ತನಾಗಿದ್ದ ಪ್ರದೋಷ್ ಅವರ ಈ ಹಠಾತ್ ನಿರ್ಧಾರವು, ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೂ ನಡುಕ ಹುಟ್ಟಿಸಿದ್ದು, ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಪ್ರದೋಷ್ ಸಲ್ಲಿಸಿರುವ ಅರ್ಜಿಯಲ್ಲೇನಿದೆ?

59ನೇ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ (CCH) ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿರುವ ಪ್ರದೋಷ್, ಪ್ರಕರಣದ ಕುರಿತು ತನಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾನೆ. ಅರ್ಜಿಯಲ್ಲಿ ಪ್ರಮುಖವಾಗಿ ಮೂರು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಸತ್ಯ ಹೇಳಲು ಸಿದ್ಧ: ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ನಡೆದ ಎಲ್ಲಾ ಬೆಳವಣಿಗೆಗಳ ನೈಜ ಸಂಗತಿಯನ್ನು ಕೋರ್ಟ್ ಮುಂದೆ ಹೇಳಲು ಸಿದ್ಧನಿದ್ದೇನೆ ಮತ್ತು ಕ್ಷಮಾದಾನ ನೀಡಿ ಎಂದು ಮನವಿ ಮಾಡಿಕೊಂಡಿದ್ದಾನೆ

ದರ್ಶನ್ ಕಡೆಯಿಂದ ಒತ್ತಡದ ಭೀತಿ: ದರ್ಶನ್ ಅಥವಾ ಅವರ ಗ್ಯಾಂಗ್ ಜೊತೆ ಒಂದೇ ಜೈಲಿನಲ್ಲಿ ಇರಲು ಸಾಧ್ಯವಿಲ್ಲ. ತಮ್ಮ ಮೇಲೆ ಬೆದರಿಕೆ ಅಥವಾ ಒತ್ತಡ ಹೇರುವ ಸಾಧ್ಯತೆ ಇರುವುದರಿಂದ ತಮ್ಮನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ

ಪ್ರತ್ಯೇಕ ಹಾಜರಾತಿ: ನ್ಯಾಯಾಲಯದ ವಿಚಾರಣೆಯ ಸಮಯದಲ್ಲೂ ದರ್ಶನ್ ಗ್ಯಾಂಗ್‌ನಿಂದ ಪ್ರತ್ಯೇಕವಾಗಿಯೇ ವಿಡಿಯೋ ಕಾನ್ಫರೆನ್ಸ್ (VC) ಅಥವಾ ಪ್ರತ್ಯೇಕ ಸೆಲ್ ಮೂಲಕ ಕೋರ್ಟ್‌ಗೆ ಹಾಜರಾಗುವಂತೆ ಮಾಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ. ಈ ಅರ್ಜಿಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸೆಷನ್ಸ್ ಕೋರ್ಟ್ ಪ್ರಾಸಿಕ್ಯೂಷನ್‌ಗೆ ಸೂಚನೆ ನೀಡಿದೆ.

ಪ್ರದೋಷ್ ಮೇಲಿರುವ ಪ್ರಮುಖ ಆರೋಪಗಳು

ಚಾರ್ಜ್‌ಶೀಟ್ ಪ್ರಕಾರ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತು ಅದರ ನಂತರ ನಡೆದ ಸಾಕ್ಷ್ಯ ನಾಶ ಯತ್ನದಲ್ಲಿ ಪ್ರದೋಷ್ ಪಾತ್ರ ಅತ್ಯಂತ ಪ್ರಮುಖವಾಗಿದೆ.

  • ಸಾಕ್ಷ್ಯ ನಾಶದ ಸೂತ್ರಧಾರ: ಘಟನೆಯನ್ನು ಮುಚ್ಚಿಹಾಕಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ ಆರೋಪ.
  • ಹಣಕಾಸಿನ ವ್ಯವಹಾರ: ಕೊಲೆ ಪ್ರಕರಣದಲ್ಲಿ ಬೇರೆ ವ್ಯಕ್ತಿಗಳನ್ನು ನಕಲಿ ಆರೋಪಿಗಳಾಗಿ ಶರಣಾಗಿಸಲು ದರ್ಶನ್ ಕಡೆಯಿಂದ ₹30 ಲಕ್ಷ ಸ್ವೀಕರಿಸಿ, ಶರಣಾದವರಿಗೆ ಹಣ ತಲುಪಿಸಿದ್ದ ಆರೋಪ.
  • ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದಾಳಿ ನಡೆದಾಗ ಪ್ರದೋಷ್ ಕೂಡ ಜೊತೆಯಲ್ಲೇ ಇದ್ದ.
  • ಸಾವಿನ ಮಾಹಿತಿ ರವಾನೆ: ರೇಣುಕಾಸ್ವಾಮಿ ಅಸುನೀಗಿದ ವಿಷಯವನ್ನು ದರ್ಶನ್‌ಗೆ ಮೊದಲು ತಲುಪಿಸಿದ್ದೇ ಪ್ರದೋಷ್.
  • ಪವಿತ್ರಾ ಗೌಡ ಆಗಮನ: ಪಟ್ಟಣಗೆರೆ ಶೆಡ್‌ಗೆ ಪವಿತ್ರಾ ಗೌಡ ಅವರನ್ನು ಕರೆತರುವಲ್ಲಿಯೂ ಪ್ರದೋಷ್ ಪಾತ್ರವಿತ್ತು.

ಪ್ರದೋಷ್ ಸಾಕ್ಷ್ಯ ದರ್ಶನ್ ಗ್ಯಾಂಗ್‌ಗೆ ತಂದೊಡ್ಡುವ ಕಂಟಕವೇನು?

ಕ್ರಿಮಿನಲ್ ಕಾನೂನಿನ ಪ್ರಕಾರ, ಅಪರಾಧದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಸತ್ಯ ಹೇಳಲು ಮುಂದೆ ಬಂದಾಗ ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯದ ಅನುಮತಿಯೊಂದಿಗೆ ಆತನನ್ನು 'ಮಾಫಿ ಸಾಕ್ಷಿ'ಯನ್ನಾಗಿ ಪರಿಗಣಿಸಲಾಗುತ್ತದೆ. ಪ್ರದೋಷ್ ಕೇವಲ ಸಂಚುಕೋರನಷ್ಟೇ ಅಲ್ಲದೆ, ಘಟನಾ ಸ್ಥಳದಲ್ಲಿದ್ದ ‘ಪ್ರತ್ಯಕ್ಷ ಸಾಕ್ಷಿ’ (Eye Witness) ಕೂಡ ಹೌದು. ಶೆಡ್‌ನಲ್ಲಿ ನಡೆದ ಹಲ್ಲೆ, ಅದರಲ್ಲಿ ಭಾಗಿಯಾದವರ ಪ್ರತ್ಯೇಕ ಪಾತ್ರ, ರೇಣುಕಾಸ್ವಾಮಿ ಅನುಭವಿಸಿದ ಚಿತ್ರಹಿಂಸೆ ಹಾಗೂ ತದನಂತರ ನಡೆದ ಹಣಕಾಸಿನ ವ್ಯವಹಾರಗಳ ಕುರಿತು ಪ್ರದೋಷ್ ವಿವರವಾದ ಹೇಳಿಕೆ ನೀಡಿದರೆ, ಅದು ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಜೈಲು ಶಿಕ್ಷೆ ಖಾಯಂ ಆಗುವಂತೆ ಮಾಡುವ ಪ್ರಬಲ ಸಾಕ್ಷಿಯಾಗಲಿದೆ. ಕಾನೂನು ಪ್ರಕ್ರಿಯೆಯ ಪ್ರಕಾರ ಪ್ರದೋಷ್ ಅಪರಾಧದ ನೈಜ ಸತ್ಯವನ್ನು ಮಾತ್ರ ಮಂಡಿಸುತ್ತಿದ್ದಾರೆ ಎಂದು ಮನವರಿಕೆಯಾದರೆ ಮಾತ್ರ ಈ ಅರ್ಜಿಗೆ ಒಪ್ಪಿಗೆ ಸಿಗಲಿದೆ.

ಒಟ್ಟಾರೆಯಾಗಿ, ನಿನ್ನೆವರೆಗೆ ದರ್ಶನ್ ಪರವಾಗಿ ಸಾಕ್ಷ್ಯ ಮುಚ್ಚಿಹಾಕಲು ಯತ್ನಿಸುತ್ತಿದ್ದ ಆಪ್ತ ಸ್ನೇಹಿತ ಪ್ರದೋಷ್, ಇದೀಗ ಕಾನೂನಿನ ಭೀತಿ ಹಾಗೂ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸ್ವತಃ ದರ್ಶನ್ ವಿರುದ್ಧವೇ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದಲ್ಲಿ ಅತಿ ದೊಡ್ಡ ತಿರುವನ್ನು ತಂದಿದೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದಿಂದ ಸುಮನಹಳ್ಳಿ ಚರಂಡಿಯವರೆಗೆ

ಚಿತ್ರದುರ್ಗದ ಮೆಡಿಕಲ್ ಶಾಪ್ ಉದ್ಯೋಗಿ, 33 ವರ್ಷದ ರೇಣುಕಾಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರೆಂಬ ಕಾರಣಕ್ಕೆ ಜೂನ್ 7, 2024 ರಂದು ಅವರನ್ನು ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿತ್ತು.

ಆರ್.ಆರ್. ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಅವರ ಮೇಲೆ ಬೆಲ್ಟ್, ಕೋಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ, ವಿದ್ಯುತ್ ಶಾಕ್ (Electric Shock) ಕೊಟ್ಟು ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ತೀವ್ರ ಆಂತರಿಕ ರಕ್ತಸ್ರಾವದಿಂದ ರೇಣುಕಾಸ್ವಾಮಿ ಮೃತಪಟ್ಟ ನಂತರ, ಮೃತದೇಹವನ್ನು ಸುಮನಹಳ್ಳಿಯ ಚರಂಡಿಗೆ ಎಸೆಯಲಾಗಿತ್ತು. ಆರಂಭದಲ್ಲಿ ನಕಲಿ ಆರೋಪಿಗಳು ಶರಣಾಗತರಾಗಿದ್ದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದ ಸಿಸಿಟಿವಿ ದೃಶ್ಯಾವಳಿ ಹಾಗೂ ಟವರ್ ಲೊಕೇಶನ್ ಆಧಾರದ ಮೇಲೆ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಜನರನ್ನು ಬಂಧಿಸಿ 3,991 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಲಾಯಿತು.

ಅಕ್ಟೋಬರ್ 2024 ರಲ್ಲಿ ವೈದ್ಯಕೀಯ ಆಧಾರದ ಮೇಲೆ ನಟ ದರ್ಶನ್‌ಗೆ ಲಭಿಸಿದ್ದ ಜಾಮೀನನ್ನು, ಸಾಕ್ಷಿಗಳಿಗೆ ಬೆದರಿಕೆ ಒಡ್ಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ 2025 ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮತ್ತೆ ಜೈಲಿಗಟ್ಟಿತು. ಇದೀಗ ತನಿಖೆಯ ವಿಚಾರಣೆ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಮೇಲೆ ಕೋರ್ಟ್ ನೀಡುವ ತೀರ್ಪು ಇಡೀ ಪ್ರಕರಣಕ್ಕೆ ಅತ್ಯಂತ ನಿರ್ಣಾಯಕವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದ 20%, ಬೆಂಗ್ಳೂರಿನ 48% ಮತದಾರರ ಹೆಸರು ಡಿಲೀಟ್‌! 1.10 ಕೋಟಿ ಹೆಸರು ಡಿಲೀಟ್
ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಸ್ಕೀಂ ಜಾರಿಗೆ ಮೊದಲ ತಿಂಗಳೇ ಭಾರಿ ಹಿನ್ನಡೆ; ಆರಂಭಿಕ ತೊಡಕು