Mandya: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ

By Kannadaprabha News  |  First Published Aug 6, 2023, 8:33 PM IST

ಕೆಆರ್‌ಎಸ್‌ ಅಣೆಕಟ್ಟೆಯ ಅಚ್ಚುಕಟ್ಟು ನಾಲೆಗಳಿಗೆ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬೆಳಗ್ಗೆಯಿಂದ ಜಲಾಶಯದ ನೀರನ್ನು ತಮಿಳುನಾಡಿನತ್ತ ಹರಿಸುತ್ತಿರುವುದು ಕಂಡುಬಂದಿದೆ. 


ಮಂಡ್ಯ (ಆ.06): ಕೆಆರ್‌ಎಸ್‌ ಅಣೆಕಟ್ಟೆಯ ಅಚ್ಚುಕಟ್ಟು ನಾಲೆಗಳಿಗೆ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬೆಳಗ್ಗೆಯಿಂದ ಜಲಾಶಯದ ನೀರನ್ನು ತಮಿಳುನಾಡಿನತ್ತ ಹರಿಸುತ್ತಿರುವುದು ಕಂಡುಬಂದಿದೆ. ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ನೀರನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, 5358 ಕ್ಯುಸೆಕ್‌ ನೀರನ್ನು ನದಿಗೆ ಹರಿಯಬಿಟ್ಟಿರುವುದು ಇದಕ್ಕೆ ಪುಷ್ಟಿನೀಡಿದೆ.

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಶನಿವಾರ ಬೆಳಗ್ಗೆ 113.44 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 5270 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, 5358 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ 35.325 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 123.86 ಅಡಿ ನೀರು ಸಂಗ್ರಹವಾಗಿದ್ದು, ಅಂದು ಅಣೆಕಟ್ಟೆಗೆ 79963 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 80,013 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಆ ಸಮಯದಲ್ಲಿ ಅಣೆಕಟ್ಟೆಯೊಳಗೆ 48.144 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

Tap to resize

Latest Videos

ಕುಮಾರಸ್ವಾಮಿ ಬಿಜೆಪಿ ವಕ್ತಾರರೇ?: ಸಚಿವ ಚಲುವರಾಯಸ್ವಾಮಿ

ಕೇರಳ ಮತ್ತು ಕೊಡಗಿನಲ್ಲಿ ಮಳೆಯ ಕೊರತೆಯಾಗಿರುವುದರಿಂದ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಹೊರೆ ಕೆಆರ್‌ಎಸ್‌ ಮೇಲೆ ಬಿದ್ದಿದೆ. ಈ ವರ್ಷ ಮಳೆ ಕೊರತೆಯಿಂದ ಕಾವೇರಿ ಕಣಿವೆ ವ್ಯಾಪ್ತಿಯ ನಾಲ್ಕು ಜಲಾಶಯಗಳು ಭರ್ತಿಯಾಗಲಿಲ್ಲ. ಕೆಆರ್‌ಎಸ್‌ ಭರ್ತಿಗೆ ಇನ್ನೂ 11 ಅಡಿ ಬಾಕಿ ಇದೆ. ಕಾವೇರಿ ನ್ಯಾಯಮಂಡಳಿ ಆದೇಶದಂತೆ ತಮಿಳುನಾಡಿಗೆ ಹರಿಸಬೇಕಾದ ನೀರನ್ನು ಕೊಡುವಂತೆ ಕೇಂದ್ರದ ಮೊರೆ ಹೋಗಿದೆ. ತಮಿಳುನಾಡಿನ ನೀರಿನ ಬಹುಪಾಲನ್ನು ಪೂರೈಸುತ್ತಿದ್ದ ಕಬಿನಿ ಜಲಾಶಯದಲ್ಲೂ ನೀರಿಲ್ಲದಂತಾಗಿದೆ. ಆ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಿಂದ ನೀರು ಬಿಡುಗಡೆ ಮಾಡುವುದು ರಾಜ್ಯಸರ್ಕಾರಕ್ಕೆ ಅನಿವಾರ್ಯವಾಗಿದೆ.

ಬೆಳೆಗಳಿಗೆ ನೀರು ಕೊಡುವ ಬಗ್ಗೆ ಮೌನ: ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಬೆಳೆಯಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮುಂಗಾರು ಹಂಗಾಮಿಗೆ ನೀರು ಹರಿಸುವ ಬಗ್ಗೆ ಸರ್ಕಾರದವರು ತುಟಿ ಬಿಚ್ಚುತ್ತಿಲ್ಲ. ಮುಂದಿನ ಬುಧವಾರದ ವೇಳೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದು, ಏನು ತೀರ್ಮಾನ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.

ಗ್ಯಾರಂಟಿ ಯೋಜನೆಗಳಿಂದ ವಿಪಕ್ಷದವರಿಗೆ ಊಟ ಸೇರ್ತಿಲ್ಲ, ನಿದ್ರೆ ಬರ್ತಿಲ್ಲ: ಸಚಿವ ಚಲುವರಾಯಸ್ವಾಮಿ

ತಮಿಳುನಾಡು ಸಿಎಂ ಕೇಂದ್ರಕ್ಕೆ ಹೋಗಿ ನ್ಯಾಯಾಲಯದ ಹಂಚಿಕೆ ಪ್ರಕಾರ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ನಮ್ಮಲ್ಲೂ ಕುಡಿಯುವ ನೀರು ಮತ್ತು ವ್ಯವಸಾಯ ಎರಡಕ್ಕೂ ನೀರು ಬೇಕಾಗಿದೆ. ಕಳೆದ 15 ದಿನಗಳಿಂದ ತಮಿಳುನಾಡು ಒತ್ತಡ ಮಾಡುತ್ತಿದ್ದು, ಈಗಾಗಲೇ ನೀರಾವರಿ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿದ್ದಾರೆ. ಒಂದು ವೇಳೆ ಈಗ ನೀರು ಬಿಟ್ಟರೆ, ಮುಂದೆ ಮಳೆ ಬೀಳದಿದ್ದರೆ ಆಗ ಬೆಳೆದ ಬೆಳೆಗಳಿಗೆ ನೀರಿನ ಕೊರತೆ ಎದುರಾಗುತ್ತದೆ. ಭತ್ತಕ್ಕೆ ತೊಂದರೆಯಾಗುವ ಆತಂಕ ಇದೆ. ಈ ಬಗ್ಗೆ ನಾವೂ ಚರ್ಚೆ ಮಾಡುತ್ತಾ ಇದ್ದೇವೆ. ಈ ವಾರದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಆಗ ನೀರು ಹೇಗೆ ಕೊಡಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ತಿಂಗಳು 11ರ ಮೇಲೆ ಮಳೆ ಬೀಳುವ ಬಗ್ಗೆ ವರದಿ ಇದೆ. ಇದನ್ನೆಲ್ಲಾ ನೋಡಿಕೊಂಡು ತೀರ್ಮಾನ ಮಾಡಿಕೊಳ್ಳುತ್ತೇವೆ.
- ಎನ್‌.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

click me!