3 ಅಲ್ಲ, ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಕರ ನೇಮಕ ಅಕ್ರಮ: ಹಾಲಿ, ಮಾಜಿ ಅಧಿಕಾರಿಗಳಿಗೆ ಬಂಧನ ಭೀತಿ..!

By Kannadaprabha NewsFirst Published Sep 18, 2022, 7:25 AM IST
Highlights

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣದ ಅಕ್ರಮ ಜಾಲವು ರಾಜ್ಯ ವ್ಯಾಪಿ ವಿಸ್ತರಿಸಿದೆ ಎಂಬ ಮಾಹಿತಿ ರಾಜ್ಯ ಅಪರಾಧ ತನಿಖಾ ದಳದ ತನಿಖೆಯಲ್ಲಿ ಪತ್ತೆ 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಸೆ.18):  ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣದ ಅಕ್ರಮ ಜಾಲವು ರಾಜ್ಯ ವ್ಯಾಪಿ ವಿಸ್ತರಿಸಿದೆ ಎಂಬ ಮಾಹಿತಿ ರಾಜ್ಯ ಅಪರಾಧ ತನಿಖಾ ದಳ(ಸಿಐಡಿ)ದ ತನಿಖೆಯಲ್ಲಿ ವ್ಯಕ್ತವಾಗಿದ್ದು, ಈಗ ಶಿಕ್ಷಣ ಇಲಾಖೆಯ ಹಾಲಿ ಹಾಗೂ ಮಾಜಿ ಹಿರಿಯ ಅಧಿಕಾರಿಗಳಿಗೆ ಸಿಐಡಿ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆಗಳಿವೆ.

ಮೊದಲ ಹಂತದಲ್ಲಿ ವಿಜಯಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಬಯಲಾಗಿ 12 ಶಿಕ್ಷಕರು ಸೇರಿದಂತೆ 13 ಮಂದಿ ಬಂಧನವಾಗಿದೆ. ಈಗ ತನಿಖೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೂಡ ಅಕ್ರಮ ನಡೆದಿದೆ ಎಂಬ ಮಾಹಿತಿ ಸಿಐಡಿಗೆ ಲಭ್ಯವಾಗಿದೆ. ಈ ವಿಚಾರವನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಜತೆ ಸಿಐಡಿ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಸಿಐಡಿ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ, ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಿಗೆ ಸಂಬಂಧಿಸಿದ ಆಂತರಿಕ ಮಟ್ಟದ ಇಲಾಖಾ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ ಎಂದು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕಾಂಗ್ರೆಸ್‌ ಕಾಲದ ಅಕ್ರಮ: ಮತ್ತೊಬ್ಬ ಶಿಕ್ಷಕ ಸೆರೆ

ಈ ಮಾಹಿತಿ ಹಿನ್ನೆಲೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದ ಮಾದರಿಯಲ್ಲೇ ಶಿಕ್ಷಕರ ನೇಮಕಾತಿ ಅಕ್ರಮದಲ್ಲೂ ಕೂಡ ಉನ್ನತ ಅಧಿಕಾರಿಗಳಿಗೆ ಬಂಧನ ಭೀತಿ ಶುರುವಾಗಿದ್ದು, ಸಿಐಡಿ ಮುಂದಿನ ಹಂತದ ಕಾರ್ಯಾಚರಣೆ ಭಾರಿ ಕುತೂಹಲ ಕೆರಳಿಸಿದೆ.

ವಿಚಾರಣೆಗೆ ಬರಲು ನೋಟಿಸ್‌:

2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಸಂಬಂಧ ಸಾರ್ವಜನಿಕರ ದೂರು ಆಧರಿಸಿ ಮೊದಲು ಶಿಕ್ಷಣ ಇಲಾಖೆ ಆಂತರಿಕ ವಿಚಾರಣೆ ನಡೆಸಿತ್ತು. ಆಗ ಅಕ್ರಮ ನಡೆದಿರುವುದು ಖಚಿತವಾದ ಬಳಿಕ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಯಿತು. ಅದರಂತೆ ತನಿಖೆ ನಡೆಸಿದಾಗ ಕೋಲಾರ, ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಆರೋಪಿ ಶಿಕ್ಷಕರು ಪತ್ತೆಯಾದರು. ವಿಚಾರಣೆ ವೇಳೆ ಆರೋಪಿತ 12 ಮಂದಿ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಸಹ ನಿರ್ದೇಶಕ ಕಚೇರಿ ಪ್ರಥಮ ದರ್ಜೆ ಗುಮಾಸ್ತ ಪ್ರಸಾದ್‌ ಕೆಲ ಮಾಹಿತಿಯನ್ನು ಹೊರಗೆಡವಿದ್ದಾರೆ. ಈ ಹೇಳಿಕೆ ಆಧರಿಸಿ ಜಿಲ್ಲಾ ಉಪ ನಿರ್ದೇಶಕರು (ಡಿಡಿಪಿಐ) ಸೇರಿ ಶಿಕ್ಷಣ ಇಲಾಖೆಯ ಹಾಲಿ ಮಾತ್ರವಲ್ಲದೆ ಅಕ್ರಮ ನಡೆದಾಗ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತರಾಗಿರುವ ಅಧಿಕಾರಿಗಳಿಗೆ ಕೂಡ ವಿಚಾರಣೆ ಹಾಜರಾಗುವಂತೆ ನೋಟಿಸ್‌ ನೀಡಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

2014-15ರಲ್ಲಿ ಕೋಲಾರ ಜಿಲ್ಲೆಯಲ್ಲಿ ಶಿಕ್ಷಕ ಹುದ್ದೆಗೆ ಅಕ್ರಮವಾಗಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಡ್ಡೆವಾಡಿ ಗ್ರಾಮದ ಸಿದ್ದರಾಮಪ್ಪ ಬಿರಾದಾರ್‌ ನೇಮಕಗೊಂಡಿದ್ದ. ನಂತರ ತನ್ನ ತವರು ಜಿಲ್ಲೆ ವಿಜಯಪುರಕ್ಕೆ ಆತನ ವರ್ಗವಾಗಿತ್ತು. ಹೀಗಾಗಿ ಅಕ್ರಮವಾಗಿ ನೇಮಕಗೊಂಡಿದ್ದ ಕೆಲವು ಶಿಕ್ಷಕರು ಬೇರೆಡೆ ಸೇವೆ ಸಲ್ಲಿಸುತ್ತಿರಬಹುದು. ಹೀಗಾಗಿ ಅಂದು ಶಿಕ್ಷಕ ನೇಮಕಾತಿ ಸಂಬಂಧ ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿದ್ದವರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಶಿಕ್ಷಕರ ನೇಮಕಾತಿ ಅಕ್ರಮ ಆರೋಪ; ಶಿಕ್ಷಣ ಸಚಿವರ ತವರು ಜಿಲ್ಲೆಯ 10 ಶಿಕ್ಷಕರು ಸಿಐಡಿ ವಶಕ್ಕೆ

ಎಸ್‌ಐ ಹಗರಣದ ಶಾಂತಕುಮಾರ್‌ ರೀತಿ ಎಫ್‌ಡಿಎ ಪ್ರಸಾದ್‌ ಪಾತ್ರ

ಎಫ್‌ಡಿಎ ಪ್ರಸಾದ್‌ ಸಂಪರ್ಕ ಜಾಲವನ್ನು ಶೋಧಿಸಲಾಗುತ್ತದೆ. ವಿಚಾರಣೆ ವೇಳೆ ತಾವು ಪ್ರಸಾದ್‌ ಮೂಲಕ ಡೀಲ್‌ ನಡೆಸಿದ್ದಾಗಿ ಶಿಕ್ಷಕರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಕೆಲ ಹಿರಿಯ ಅಧಿಕಾರಿಗಳಿಗೆ ಪ್ರಸಾದ್‌ ಪ್ರತಿನಿಧಿಯಾಗಿ ವ್ಯವಹಾರ ಕುದುರಿಸಬಹುದು. ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪಾಲ್‌ ಅವರಿಗೆ ಡಿವೈಎಸ್ಪಿ ಶಾಂತಕುಮಾರ್‌ ಹಾಗೂ ಎಫ್‌ಡಿಐ ಹರ್ಷನ ರೀತಿ ಪ್ರಸಾದ್‌ ಸಹ ಶಿಕ್ಷಕರ ನೇಮಕಾತಿಯಲ್ಲಿ ಪಾತ್ರವಹಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುದ್ದೆ 5-10 ಲಕ್ಷಕ್ಕೆ ಡೀಲ್‌?

ವಿಚಾರಣೆ ವೇಳೆ 5 ರಿಂದ 10 ಲಕ್ಷ ರು.ವರೆಗೆ ಶಿಕ್ಷಕರ ಹುದ್ದೆಗೆ ಡೀಲ್‌ ನಡೆದಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಆಧರಿಸಿ ಶಿಕ್ಷಕರ ಹಣಕಾಸು ವ್ಯವಹಾರದ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ. ಏಳೆಂಟು ವರ್ಷಗಳ ಹಿಂದಿನ ಕೃತ್ಯವಾಗಿರುವುದರಿಂದ ಹಣಕಾಸು ವ್ಯವಹಾರದ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಲು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!