
ಮಂಜುನಾಥ ಸಾಯಿಮನೆ
ಶಿರಸಿ (ಆ.24) ಇಲ್ಲೊಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಾವೇ ಮಂಜೂರು ಮಾಡಿದ ಆಶ್ರಯ ಮನೆಗಳಿಗೆ ಸ್ವತಃ ಗಿಲಾಯಿ ಮಾಡುವ ಕಾರ್ಮಿಕರಾಗುತ್ತಾರೆ. ಮನೆ ಕಟ್ಟುವ ಗೌಂಡಿ, ಗಾರೆ ಕೆಲಸದ ಮೇಸ್ತ್ರಿಯಾಗಿಯೂ ಆಗುತ್ತಾರೆ!
ತಾಲೂಕಿನ ನೆಗ್ಗು ಗ್ರಾಪಂ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಇಂಥದೊಂದು ಅಪರೂಪದ ಶ್ರಮಿಕ. ಮೂಲತಃ ಗಾರೆ ಕೆಲಸವನ್ನೇ ಕೈಗೊಳ್ಳುವ ಗಿಲಾಯಿ (ಪ್ಲಾಸ್ಟರಿಂಗ್)ಯನ್ನೇ ವೃತ್ತಾಯಾಗಿಸಿಕೊಂಡ ಇವರು ಗ್ರಾಪಂಗೆ ಆಕಸ್ಮಿಕವಾಗಿ ಆಯ್ಕೆಗೊಂಡವರು. ಇದೀಗ ಮೀಸಲಾತಿ ಪ್ರಕಾರ ಅಧ್ಯಕ್ಷ ಗಾದಿಯನ್ನು ಏರುವ ಅದೃಷ್ಟಇವರಿಗೆ ಸಿಕ್ಕಿದೆ.
ಉತ್ತರ ಕನ್ನಡ: ಶಿಸ್ತು ಕ್ರಮದ ನಂತರವೂ ಬಿಜೆಪಿ ನಾಯಕರಿಗೆ ಆಗಿಲ್ಲ ಸಮಾಧಾನ!
ಮೂಲ ವೃತ್ತಿ ಮರೆತಿಲ್ಲ:
ಆದರೆ ತಮ್ಮ ಮೂಲ ವೃತ್ತಿ ಮರೆತಿಲ್ಲ. ತಲೆತಲಾಂತರದಿಂದ ಕುಟುಂಬದ ಹೊಟ್ಟೆತುಂಬುವ ಕಾಯಕ ಬಿಡುವ ಮನಸ್ಸಿಲ್ಲ. ಈಗ ಅಧ್ಯಕ್ಷರಾದ ಬಳಿಕವೂ ತಮ್ಮ ಕೆಲಸ ಮುಂದುವರಿಸಿ, ಗುತ್ತಿಗೆದಾರನ ಕೈಕೆಳಗೆ ಕೂಲಿಯಾಗಿ ಕೆಲಸ ಮಾಡುತ್ತಾರೆ.
ಲಾಝರ್ ರೆಬೆಲ್ಲೋ ಗ್ರಾಪಂನ ತಿರುಗುವ ಕುರ್ಚಿಯಲ್ಲಿ ಕುಳಿತು ಮನೆ ಹಂಚಿಕೆ ಮಾಡಿ ಸುಮ್ಮನಾಗುವುದಿಲ್ಲ. ಊರೂರು ತಿರುಗಿ ತಾನೇ ಮಂಜೂರು ಮಾಡಿದ ಮನೆಗಳ ನಿರ್ಮಾಣ, ಗಿಲಾಯ ಮಾಡುತ್ತಾರೆ. ಈ ಮನೆಗಳ ನಿರ್ಮಾಣದ ಗುತ್ತಿಗೆ ಹಿಡಿದÜ ಗುತ್ತಿಗೆದಾರನಲ್ಲಿ ಕೂಲಿ ಕೆಲಸ ಮಾಡುವ ರೆಬೆಲ್ಲೋ ಗ್ರಾಪಂಗೆ ಬರುತ್ತಿದ್ದಂತೆ ಮತ್ತೆ ಅಧ್ಯಕ್ಷ ಕುರ್ಚಿಯಲ್ಲಿ ಕೂರುತ್ತಾರೆ!
ಪ್ರತಿ ಹಂತದ ಕಾಳಜಿ:
ವಾಸ್ತವವಾಗಿ ಗ್ರಾಪಂ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಅವರ ಮೂಲ ವೃತ್ತಿ ಗಾರೆ ಕೆಲಸ. ಅವರ ತಂದೆ ಸೆಲ್ವೆಸ್ಟರ್ ರೆಬೆಲ್ಲೋ ಅವರ ಕಾಲದಿಂದಲೂ ಕೊಳಗಿಬೀಸ್, ಹೇರೂರು, ಗೋಳಿ ಭಾಗದಲ್ಲಿ ಮನೆ ನಿರ್ಮಾಣ, ಸಣ್ಣ ಕಟ್ಟಡ, ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ಬಂದವರು. ಕುಟುಂಬ ವೃತ್ತಿಯನ್ನು ತನ್ನ ಸಹೋದರರಾದ ಝೆರಿ, ಗಿಬ್ ಅವರೊಂದಿಗೆ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈ ಭಾಗದ ಜನತೆ ಮನೆ, ಇನ್ನಿತರ ಸಿಮೆಂಟ್ ಕೆಲಸ ಆಗಬೇಕಿದ್ದರೆ ಮೊದಲು ಆದ್ಯತೆ ನೀಡುವುದು ಸಿಲ್ವೆಸ್ಟರ್ ಅವರ ಕುಟುಂಬಕ್ಕೆ.
ಬಾಯಲ್ಲೊಂದು ಮೋಟು ಬೀಡಿ ಕಚ್ಚಿ ಹಿಡಿದು, ಕಾಲಲ್ಲಿ ಹವಾಯಿ ಚಪ್ಪಲಿ ಹಾಕಿ ಕೈಲಿ ತಾಪಿ ಹಿಡಿದರೆ ಲಾಝೆರ್ ಮಾಡಿರುವ ಗಿಲಾಯ ಕೆಲಸ ನಿಂತು ನೋಡಬೇಕು, ಅಷ್ಟುಪರಿಣತಿ ಕೆಲಸ ಇವರದ್ದು. ನೆಗ್ಗು ಪಂಚಾಯಿತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಝರ್ ಮತ್ತು ಅವರ ಸಹೋದರರು ನಿರ್ಮಿಸಿದ ನೂರಾರು ಮನೆಗಳಿವೆ, ಶಾಲಾ ಕಾಂಪೌಂಡ್ ಇವೆ, ಬಾತ್ ರೂಂ ಇವೆ. ಲಾಝರ್ ಅವರ ಕೆಲಸದ ಝಲಕ್‌ನ್ನು ಇಲ್ಲಿಯ ಜನತೆ ಸಹಜವಾಗಿ ಒಪ್ಪಿಕೊಂಡಿದ್ದಾರೆ. ಪಕ್ಕದಮನೆ ಕೆಲಸಕ್ಕೆ ಬಂದಿದ್ದರೂ ಲಾಝರ್ ಅವರನ್ನು ಪ್ರೀತಿಯಿಂದ ಕರೆದು ಚಹಾ ಮಾಡಿಕೊಡುವವರು ಅನೇಕರಿದ್ದಾರೆ.
ಸ್ಥಳೀಯರ ಒತ್ತಾಯ:
ಮೂರು ವರ್ಷಗಳ ಹಿಂದೆ ಗ್ರಾಪಂ ಚುನಾವಣೆ ನಡೆದಾಗ ಸ್ಥಳೀಯರೇ ಅವರಿಗೆ ಸ್ಪರ್ಧಿಸುವಂತೆ ಉತ್ತೇಜನ ನೀಡಿದ್ದರು. ರಾಜಕೀಯ ಅರಿಯದ, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದ ಲಾಝರ್ ಅನಾಯಾಸವಾಗಿ ಆರಿಸಿಬಂದಿದ್ದರು.
ಒಂದು ತಿಂಗಳ ಹಿಂದೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದಾಗ ನೆಗ್ಗು ಗ್ರಾಪಂ ಅಧ್ಯಕ್ಷ ಸ್ಥಾನವೂ ಮೀಸಲಾತಿಗೆ ಒಳಪಟ್ಟಿತು. ಇದರಿಂದಾಗಿ ಲಾಝರ್ ರೆಬೆಲ್ಲೋ ಸೂಚಿತ ಕೆಟಗರಿಯ ಏಕೈಕ ವ್ಯಕ್ತಿ, ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.
ಮಗನ ನಾಮಕರಣ ಆಹ್ವಾನ ಪತ್ರಿಕೆಯಲ್ಲೂ ಸೈಬರ್ ಜಾಗೃತಿ ಮೂಡಿಸಿದ ಕಾನ್‌ಸ್ಟೇಬಲ್!
ಈ ಗ್ರಾಪಂ ಅಧ್ಯಕ್ಷರ ಕೈಲಿ ಕಾರ್ ಹಾಗಿರಲಿ, ಬೈಕ್ ಸಹ ಇಲ್ಲ. ಬಸ್ಸೇರಿ ಹಳ್ಳಿಗಳಿಗೆ ತೆರಳಿ ಗಾರೆ ಕೆಲಸ ಮಾಡಿ ಸಂಜೆ ಮನೆಗೆ ವಾಪಸಾಗುತ್ತಾರೆ. ಹೆಗ್ಡೇರೆ, ನಿಮ್ಮ ರಸ್ತೆ ತಿರುವಿನಲ್ಲಿ ಒಂದು ಸಿಮೆಂಟ್ ಪೈಪ್ ಹಾಕುವ, ನೀರು ರಸ್ತೆ ಕೊರಿತದೆ... ನಾಯ್ಕರೇ ನೀವು ಉದ್ಯೋಗ ಖಾತ್ರಿಯಲ್ಲಿ ಈ ಕೆಲಸ ಮಾಡಿಸಿಕೊಳ್ಳಿ... ಊರ ಜನಕ್ಕೂ ಪ್ರಯೋಜನ ಆಗ್ತದೆ... ಅದು ಆ ಪಕ್ಷದವರ ವಾರ್ಡ್, ಇವನು ಈ ಪಕ್ಷದ ಕಾರ್ಯಕರ್ತ ಎಂಬುದಕ್ಕೆ ಆಸ್ಪದ ನೀಡದೇ, ಗ್ರಾಮದ ಸಮಸ್ಯೆಗಳನ್ನು ಆಸ್ತೆವಹಿಸಿ ಮಾಡುತ್ತ ಜನಮೆಚ್ಚುಗೆ ಗಳಿಸಿದ್ದಾರೆæ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೊ.
ಹುದ್ದೆ ಇವತ್ತು ಬರತ್ತೆ, ನಾಳೆ ಹೋಗತ್ತೆ. ನಮ್ಮ ವೃತ್ತಿ, ಈ ವೃತ್ತಿಯೇ ತಂದುಕೊಟ್ಟಜನರ ವಿಶ್ವಾಸವೇ ನನ್ನ ಜೀವಾಳ.
ಲಾಝೆರ್ ರೆಬೆಲ್ಲೋ, ನೆಗ್ಗು ಗ್ರಾಪಂ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ