ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 19 ಜನರ ಮೇಲೆ ಬಿಜೆಪಿ ಕೈಗೊಂಡ ಶಿಸ್ತುಕ್ರಮ ಅಸಮಾಧಾನಿತರಿಗೆ ಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಯಾರೂ ಉತ್ತರ ಹೇಳದೆ ಜಾರಿಕೊಳ್ಳುತ್ತಿದ್ದಾರೆ.
ವಸಂತಕುಮಾರ ಕತಗಾಲ
ಕಾರವಾರ (ಆ.24) : ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ 19 ಜನರ ಮೇಲೆ ಬಿಜೆಪಿ ಕೈಗೊಂಡ ಶಿಸ್ತುಕ್ರಮ ಅಸಮಾಧಾನಿತರಿಗೆ ಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಯಾರೂ ಉತ್ತರ ಹೇಳದೆ ಜಾರಿಕೊಳ್ಳುತ್ತಿದ್ದಾರೆ.
undefined
ಪಕ್ಷ ವಿರೋಧ ಚಟುವಟಿಕೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅದೇ ಕಾಲಕ್ಕೆ ಹೆಬ್ಬಾರ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುದ್ದಿ ಹಬ್ಬಿತು. ಈ ನಡುವೆ ಶಿರಸಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳ ಅಭ್ಯರ್ಥಿ ಸುನೀಲ ನಾಯ್ಕ ಸಹ ದೂರು ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡ ಅಭ್ಯರ್ಥಿಗಳನ್ನು ಸಮಾಧಾನ ಪಡಿಸಲು 17 ಪದಾಧಿಕಾರಿಗಳನ್ನು ಹುದ್ದೆಯಿಂದ ವಿಮುಕ್ತಿ ಮಾಡಿ, ಇಬ್ಬರನ್ನು ಉಚ್ಛಾಟಿಸಿತು.
ಹೆಬ್ಬಾರ್ ಅತೃಪ್ತಿ ಶಮನಕ್ಕೆ 6 ಮಂದಿಗೆ ಬಿಜೆಪಿ ಕೊಕ್
ಅಸಮಾಧಾನ ಶಮನವಾಗಿಲ್ಲ:
ಆದರೆ ಈ ಕ್ರಮ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಸಮಾಧಾನ ತಂದಂತೆ ಕಾಣಿಸುವುದಿಲ್ಲ. ಶಿಸ್ತುಕ್ರಮದಿಂದ ಸಮಾಧಾನವಾಗಿದೆಯೇ ಎಂಬ ‘ಕನ್ನಡಪ್ರಭ’ದ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದರಲ್ಲದೆ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಇದರಿಂದ ಹೆಬ್ಬಾರ ಅವರಿಗೆ ಈ ಕ್ರಮ ಸಮಾಧಾನ ತಂದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅವರು ಸಾಕಷ್ಟುಜನರ ಮೇಲೆ ಆರೋಪ ಮಾಡಿದ್ದರು. ಆದರೆ ದೊಡ್ಡ ಕುಳಗಳನ್ನು ಹೊರತುಪಡಿಸಿ ಸಣ್ಣಪುಟ್ಟಪದಾಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದರಿಂದ ಅವರ ಅಸಮಾಧಾನ ಶಮನ ಆದಂತಿಲ್ಲ.
ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಿಜೆಪಿ ಜಾಣ ನಡೆ ಇಟ್ಟಿದೆ. ಹೆಬ್ಬಾರ ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಂತೆ ವರ್ತಿಸುತ್ತಿದ್ದಾರೆ. ಈ ಹಂತದಲ್ಲಿ ಬಿಜೆಪಿಯ ಪದಾಧಿಕಾರಿಗಳನ್ನು ಉಚ್ಛಾಟಿಸುತ್ತಿದ್ದಂತೆ ಹೆಬ್ಬಾರ ಅವರೂ ಕಾಂಗ್ರೆಸ್ ಅಂಗಳದಲ್ಲಿ ಕಾಲಿಟ್ಟರೆ ಕ್ಷೇತ್ರದಲ್ಲಿ ಪಕ್ಷದ ಅವಸಾನವಾದೀತು ಎಂದು ಬಿಜೆಪಿ ಹೈಕಮಾಂಡ್ ಎಲ್ಲರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಜೊತೆಗೆ ಕೇವಲ ಪದಾಧಿಕಾರಿಗಳನ್ನು ಅವರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಪಕ್ಷದಿಂದ ಉಚ್ಛಾಟಿಸಲಾಗಿಲ್ಲ. ಬಿಜೆಪಿಯ ವರಿಷ್ಠರು ಅತ್ತ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ತಂತ್ರ ಅನುಸರಿಸುತ್ತಿದ್ದಾರೆ.
ಇನ್ನಷ್ಟುಕುತೂಹಲ:
ಈ ನಡುವೆ ಉಳಿದ ಕ್ಷೇತ್ರಗಳಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ. ಈ ಬಗ್ಗೆ ಅಭ್ಯರ್ಥಿಗಳೇ ಹೇಳಿದ್ದಾರೆ. ಆದರೆ ಪಕ್ಷ ಲಿಖಿತ ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿರುವುದು ಆ ಅಭ್ಯರ್ಥಿಗಳೂ ಅಸಮಾಧಾನಗೊಳ್ಳುವಂತಾಗಿದೆ. ಕಾರವಾರ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಸಾಕಷ್ಟುಅಸಮಾಧಾನ ವ್ಯಕ್ತವಾಗಿದ್ದರೂ ಯಾರ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ. ಇದು ಮುಂಬರುವ ದಿನಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಕುಮ್ಮಕ್ಕು ನೀಡಿದಂತಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದಲ್ಲಿನ ಬೆಳವಣಿಗೆಗಳು ಇನ್ನಷ್ಟುಕುತೂಹಲಕ್ಕೆ ಕಾರಣವಾಗಿದೆ.
ಲಿಖಿತವಾಗಿ ದೂರು ನೀಡಿದ್ದನ್ನು ವಿಚಾರಿಸಿ ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ಪದಾಧಿಕಾರಿಗಳಲ್ಲದವರ ಮೇಲೆ ಕ್ರಮ ಕೈಗೊಳ್ಳುವುದು ಹೇಗೆ ಎನ್ನುವುದೂ ಪ್ರಶ್ನೆಯಾಗಿದೆ.
ವೆಂಕಟೇಶ ನಾಯಕ ಜಿಲ್ಲಾಧ್ಯಕ್ಷ, ಬಿಜೆಪಿ.