ರೇಶನ್‌ ಕಾರ್ಡುದಾರರೇ ಎಚ್ಚರ..!

By Kannadaprabha NewsFirst Published Dec 13, 2020, 7:53 AM IST
Highlights

ರೇಶನ್‌ ಕಾರ್ಡುದಾರರೇ ಎಚ್ಚರ .. ರಾಜ್ಯದಲ್ಲಿ ಲಕ್ಷಾಂತರ ಸಮಖ್ಯೆಯಲ್ಲಿ ಪಡಿತರ ಪಡೆಯುವ ರೇಶನ್ ಕಾರ್ಡುದಾರರು ಇಲ್ಲೊಮ್ಮೆ ಗಮನಿಸಿ

ಬೆಂಗಳೂರು (ಡಿ.13): ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಫಲಾನುಭವಿಗಳ ಪಡಿತರ ಚೀಟಿ ಆರು ತಿಂಗಳು ಅಮಾನತು ಆಗಲಿದೆ.

ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದ್ದು, ಅಕ್ರಮವಾಗಿ ಪಡಿತರ ಆಹಾರ ಧಾನ್ಯ ಮಾರಾಟಕ್ಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಚಿತವಾಗಿ ಹಂಚಿಕೆಯಾಗುವ ಅಕ್ಕಿಯನ್ನು ಫಲಾನುಭವಿಗಳು ಹಣಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿವೆ. ಹೀಗಾಗಿ ಅನ್ನಭಾಗ್ಯದ ಅಕ್ಕಿ ಮಾರಾಟ ಮಾಡಿ ಸಿಕ್ಕಿಬೀಳುವ ಫಲಾನುಭವಿಯ ಪಡಿತರ ಚೀಟಿ ಆರು ತಿಂಗಳು ಅಮಾನತು ಮಾಡಿ ಹಾಗೂ ಮಾರುಕಟ್ಟೆದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ಹೊಸ ರೇಶನ್‌ ಕಾರ್ಡ್‌ ವಿತರಣೆ ಮತ್ತೆ ಶುರು ...

ಕೇಂದ್ರವು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಅಕ್ಕಿಗೆ 30 ರು.ನಂತೆ ಖರೀದಿಸಿ ರಾಜ್ಯಕ್ಕೆ 3 ರು.ಗೆ ಅಕ್ಕಿ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಸರಬರಾಜು ಮಾಡುತ್ತಿದೆ. ಹಾಗಾಗಿ,ಕೇಂದ್ರ ಸಹಕಾರದೊಂದಿಗೆ ಸರ್ಕಾರವು ಆಹಾರ ಧಾನ್ಯ ವಿತರಣೆ ಮಾಡುತ್ತಿದೆ. ರಾಜ್ಯದಲ್ಲಿ 1,17,01,012 ಬಿಪಿಎಲ್‌, 10,92,580 ಅಂತ್ಯೋದಯ ಹಾಗೂ 21,05,000 ಎಪಿಎಲ್‌ ಕಾರ್ಡ್‌ ಸೇರಿ ಒಟ್ಟು 1,48,98,592 ಕಾರ್ಡ್‌ಗಳಿವೆ. ಪ್ರತಿ ತಿಂಗಳು 19,972 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

click me!