
ಬೆಂಗಳೂರು (ನ.7): ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕವಾದಿ, ಹಿಂದೂ ವಿರೋಧಿ. ಸ್ಮಶಾನದಲ್ಲಿ ಪೂಜೆ, ಮದುವೆ, ಊಟ ಮಾಡುವ ಇಂತಹ ನಾಸ್ತಿಕರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಮುತಾಲಿಕ್, ಕಾಂಗ್ರೆಸ್ ನವರಿಗೆ ಇನ್ನೂ ಕೂಡಾ ಬುದ್ಧಿ ಬಂದಿಲ್ಲ. ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದು, ಜನರ ಕ್ಷಮೆ ಕೇಳಬೇಕು. ಹಿಂದುತ್ವ, ಹಿಂದೂಗಳನ್ನು, ಹಿಂದೂ ಧರ್ಮ, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪು ಅವರು ಕೂಡಾ ಹಿಂದೂ, ಜೈನ, ಸಿಖ್, ಕ್ರಿಶ್ವಿಯನ್ ಎಂಬ ಶಬ್ದವನ್ನು ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಫೌಝ್ ಎಂದು ಸುಭಾಷ್ ಚಂದ್ರಬೋಸ್ ಅವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್, ಸಾವರ್ಕರ್ ಕೂಡಾ ಈ ಶಬ್ಧವನ್ನು ಬಳಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡಾ 25 ವರ್ಷಗಳ ಹಿಂದೆ ಹಿಂದೂ ಧರ್ಮ ಒಳ್ಳೆಯ ಜೀವನದ ಪದ್ದತಿ ಎಂದು ಹೇಳಿದೆ. ಹಾಗಾದ್ರೆ ಸುಪ್ರೀಂ ಕೋರ್ಟನವರು ಮೂರ್ಖರಾ? ಹಿಂದೂ ಶಬ್ಧ ಜಾತಿ ಸೂಚಕವಲ್ಲ, ಮತ ಸೂಚಕವಲ್ಲ ,ಇದು ಜೀವನ ಪದ್ಧತಿ. ಜಾರಕಿಹೊಳಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
"ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ": ಜ್ಞಾನಪ್ರಕಾಶ ಸ್ವಾಮೀಜಿಯಿಂದ ಟೀಕೆ
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಖಂಡನೆ: ಸತೀಶ್ ಜಾರಕಿಹೊಳಿ ಅವರ ಹಿಂದೂ ಹೇಳಿಕೆ ಬಗ್ಗೆ ಕರ್ನಾಟಕದ ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮ ಒಂದು ಜೀವನ ವಿಧಾನವಾಗಿದೆ. ಪ್ರತಿಯೊಂದು ಧರ್ಮ ಮತ್ತು ನಂಬಿಕೆಯನ್ನು ಗೌರವಿಸಿಕೊಂಡು ಕಾಂಗ್ರೆಸ್ ದೇಶವನ್ನು ನಿರ್ಮಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕರಿಸಲು ಅರ್ಹವಾಗಿದೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ!
ಸತೀಶ್ ಜಾರಕಿಹೊಳಿ ಹೇಳಿದ್ದೇನು?: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದವಾಗಿದ್ದು, ಅದರ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಈ ಪದದ ಅರ್ಥ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು. ಜಾರಕಿಹೊಳಿ ಅವರ ಈ ಹೇಳಿಕೆಗೆ ಈಗ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ