ರಾಮ ರಾಜ್ಯ ನಿರ್ಮಾಣವೇ ನಮ್ಮ ಕನಸು: ಪೇಜಾವರ ಶ್ರೀ

By Kannadaprabha News  |  First Published Mar 14, 2024, 12:05 PM IST

ರಾಮಮಂದಿರ ನಿರ್ಮಾಣ ಅಷ್ಟೇ ನಮ್ಮ ಕನಸಾಗಿಲ್ಲ. ರಾಮ ರಾಜ್ಯ ನಿರ್ಮಾಣ ನಮ್ಮ ಕನಸಾಗಿದೆ. ಅದನ್ನು ನನಸಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. 


ಹುಬ್ಬಳ್ಳಿ (ಮಾ.14): ರಾಮಮಂದಿರ ನಿರ್ಮಾಣ ಅಷ್ಟೇ ನಮ್ಮ ಕನಸಾಗಿಲ್ಲ. ರಾಮ ರಾಜ್ಯ ನಿರ್ಮಾಣ ನಮ್ಮ ಕನಸಾಗಿದೆ. ಅದನ್ನು ನನಸಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು. ದಕ್ಷಿಣ ಕನ್ನಡ ದ್ರಾವಿಡ್‌ ಬ್ರಾಹ್ಮಣ ಸಮಾಜ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ಪೇಜಾವರ ಶ್ರೀಗಳಿಗೆ ನಡೆದ ಗುರು ವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಮರಾಜ್ಯ ನಿರ್ಮಾಣ ಯಾವಾಗ ಸಾಧ್ಯ ಎಂದರೆ, ಪ್ರಜೆಗಳೆಲ್ಲರೂ ರಾಮನಾಗಬೇಕು. ಜತೆಗೆ ರಾಮನಂತಹ ಮಹಾನ್ ನಾಯಕನನ್ನು ಆಯ್ಕೆ ಮಾಡಬೇಕು. ನಾನು ಈಗ ರಾಮನ ನಾಡು ಅಯೋಧ್ಯೆಯಿಂದ ಹನುಮನ ನಾಡಿಗೆ ಬಂದಿದ್ದೇನೆ. ರಾಮ ಮಂದಿರಕ್ಕಾಗಿ ಹಲವಾರು ಸಂತರು ಹಾಗೂ ಜನರು ಶ್ರಮಿಸಿದ್ದಾರೆ, ಅವೆರೆಲ್ಲರ ಪರವಾಗಿ ನಾನು ಈ ಗುರು ವಂದನೆ ಸ್ವೀಕರಿಸಿದ್ದೇನೆ ಎಂದರು. ಹಿಂದೂ ಸಮಾಜ ಬಹು ಸಂಖ್ಯಾತ ಆಗಿರುವವರೆಗೂ ರಾಮ ಮಂದಿರ ಮಂದಿರವಾಗಿ ಉಳಿಯುತ್ತದೆ. ಇದು ಮತ್ತೆ ಪರಕೀಯರ ಕೈಯಲ್ಲಿ ಸಿಗಬಾರದು ಎಂದರೆ, ನಮ್ಮ ಮಕ್ಕಳಿಗೆ ಇಂದಿನಿಂದಲೇ ನಮ್ಮ ಸಂಸ್ಕೃತಿಯನ್ನು ಕಲಿಸಬೇಕು. 

Tap to resize

Latest Videos

ಇನ್ನೂ ಎರಡು ಲೋಕಸಭಾ ಕ್ಷೇತ್ರ ಸಿಗುತ್ತಿತ್ತು, ಬೇಡ ಎಂದೆವು: ಎಚ್‌ಡಿಕೆ

ಹಿಂದೂಗಳು ಯಾವುದೇ ಪ್ರಲೋಭನೆಗೆ ಒಳಗಾಗದಂತೆ ತಡೆಯುವ ಕೆಲಸ ಆಗಬೇಕು. ನೂರಾರು ವರ್ಷಗಳಿಂದ ಯಕ್ಷಗಾನ, ಭರತನಾಟ್ಯ, ನಾಟಕ ಸೇರಿದಂತೆ ಅನೇಕ ಕಲೆಗಳ ಮೂಲಕ ನಮ್ಮ ಹಿರಿಯರು ಶ್ರೀರಾಮನನ್ನು ಜೀವಂತ ಇಟ್ಟಿದ್ದಾರೆ. ‌ಅದರ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಭರತಖಂಡದಲ್ಲಿ ಹಿಂದೂ ಸಮಾಜ ಬಹು ಸಂಖ್ಯಾತವಾಗಿ ಒಂದಾಗಿ ಇದ್ದಾಗ ಮಾತ್ರ ಅದರ ಉಳಿವು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಶ್ರೀರಾಮನ ಮಾರ್ಗದಲ್ಲಿ ಸಾಗೋಣ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಜಗತ್ತಿನ ಹಲವಾರು ದೇಶದ ಜನರು ಅಯೋಧ್ಯೆ ರಾಮ ಮಂದಿರವನ್ನು ನೋಡಿ ಸಂಭ್ರಮಿಸಿದ್ದಾರೆ. 500 ವರ್ಷದ ಹಿಂದೂಗಳ ಕನಸು ನನಸಾಗುತ್ತದೆ ಎಂದು ಯಾರೋ ಅಂದುಕೊಂಡಿರಲಿಲ್ಲ. ಆದರೆ ದೇಶದ ಜನತೆ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಮಾಡಿದ ಫಲವಾಗಿ ರಾಮಮಂದಿರ ಸಾಧ್ಯವಾಗಿದೆ. ಇಡೀ ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪೇಜಾವರ ಶ್ರೀಗಳು ಇದ್ದದ್ದು ನಮ್ಮ ಕರ್ನಾಟಕದ ಹೆಮ್ಮೆ ಹೆಚ್ಚಿಸಿದೆ. ಒಂದು ಬದಲಾವಣೆ ಶುರು ಆದರೆ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂಬುದಕ್ಕೆ ರಾಮ ಮಂದಿರ ಉದಾಹರಣೆ ಆಗಿದೆ ಎಂದರು.

ಮೋದಿಯವರ ಆಡಳಿತದಲ್ಲಿ ಸ್ವಚ್ಛ ಗಂಗೆ, ಕಾಶಿ ವಿಶ್ವನಾಥ ದೇವಸ್ಥಾನ, ಉಜ್ಜಯಿನಿ ದೇವಸ್ಥಾನ ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳು ಬಹಳಷ್ಟು ಅಭಿವೃದ್ಧಿ ಆಗಿದ್ದು, ಅದ್ಭುತ ಬದಲಾವಣೆ ಆಗಿದೆ. ಭಯೋತ್ಪಾದಕರ ತಾಣವಾಗಿದ್ದ ಜಮ್ಮು ಕಾಶ್ಮೀರದಲ್ಲಿನ ಆರ್ಟಿಕಲ್ 370 ತೆಗೆದು ಹಾಕಿ ಶಾಂತಿ ನೆಲೆಸುವಂತೆ ಮಾಡಿದ್ದು ಮೋದಿ ಸರ್ಕಾರದವಾಗಿದೆ ಎಂದು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿಂದ ಒಬ್ಬ ಸಚಿವರ ಸ್ಪರ್ಧೆಯೂ ಇಲ್ಲ?

ದಕ್ಷಿಣ ಕನ್ನಡ ದ್ರಾವಿಡ್‌ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ ಮಾತನಾಡಿ, ಶ್ರೀಗಳು ಅಯೋಧ್ಯೆಯಿಂದ ನೇರವಾಗಿ ಹುಬ್ಬಳ್ಳಿಗೆ ಆಗಮಿಸಿದ್ದು, ನಮ್ಮೆಲ್ಲರ ಪುಣ್ಯವಾಗಿದೆ ಎಂದು ಶ್ಲಾಘಿಸಿದರು. ಸತ್ಯಮೂರ್ತಿ ಆಚಾರ್ಯ, ಎಚ್.ಎನ್. ನಂದಕುಮಾರ ವಿಎಚ್‌ಪಿ ಮುಖಂಡ ವಿನಾಯಕ ತಲಗೇರಿ, ಧಾರವಾಡ ಜೆಎಸ್ಎಸ್ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್, ಉದ್ಯಮಿ ಶ್ರೀಕಾಂತ ಕೆಂಮ್ತೂರ, ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ನಂದಕುಮಾರ ಹೆಗಡೆ ಸೇರಿದಂತೆ ಅನೇಕರು ಇದ್ದರು.

click me!