ರಾಜ್ಯದಲ್ಲಿ ಮಳೆ ತಗ್ಗಿದರೂ ನಿಲ್ಲದ ಭೂಕುಸಿತ, ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿ

By Kannadaprabha NewsFirst Published Jul 19, 2022, 8:04 AM IST
Highlights

ಮಳೆ ತಗ್ಗಿದರೂ ನಿಲ್ಲದ ಭೂಕುಸಿತ, ಪ್ರವಾಹ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿ.  ಹಂಪಿ ಸ್ಮಾರಕ, ಬೆಳಗಾವಿಯ 9 ಸೇತುವೆಗಳು ಇನ್ನೂ ಮುಳುಗಡೆ .

ಬೆಂಗಳೂರು (ಜು.19): ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರ ತೀವ್ರ ಇಳಿಮುಖವಾಗಿದ್ದರೂ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಕೆಲವೆಡೆ ಪ್ರವಾಹಾತಂಕ ಮುಂದುವರಿದಿದೆ. ಜೊತೆಗೆ ಚಾರ್ಮಾಡಿ ಘಾಟ್‌ ಸೇರಿದಂತೆ ಮಲೆನಾಡಿನ ಅಲ್ಲಲ್ಲಿ ಭೂಕುಸಿತ ಮುಂದುವರಿದಿದೆ. ಏತನ್ಮಧ್ಯೆ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಿಂದ ವರದಿಯಾಗಿವೆ. ತೀರ್ಥಹಳ್ಳಿಯ ಬುಕ್ಲಾಪುರ ಗ್ರಾಮದ ಸುಳುಗೋಡಿನ ಭವಾನಿ ಶಂಕರನಾರಾಯಣ(52) ಭಾನುವಾರ ಹಳ್ಳದಲ್ಲಿ ಕಾಲು ಜಾರಿ ನೀರುಪಾಲಾಗಿದ್ದರು. ಮಾಳೂರಿನ ಕೂಲಿ ಕಾರ್ಮಿಕ ಅನ್ಸರ್‌ (48) ತುಂಗಾನದಿಯಲ್ಲಿ ಮೂರು ದಿನದ ಹಿಂದೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಸೋಮವಾರ ಇಬ್ಬರ ಶವ ದೊರೆತಿದೆ. ಇನ್ನು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ತುಂಗಭದ್ರಾ ಜಲಾಶಯದ ಒಳಹರಿವು ಇಳಿಕೆಯಾಗುತ್ತಿಲ್ಲ. ಜಲಾಶಯದ ಒಳಹರಿವು 1.76 ಲಕ್ಷ ಕ್ಯುಸೆಕ್‌ಗೆ ಏರಿದ್ದು, 1.38 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಗಿದೆ. ಇದರಿಂದ ಹಂಪಿಯ ಕೋದಂಡರಾಮ ದೇಗುಲ, ಚಕ್ರತೀರ್ಥದ ಬಳಿಯ ಸ್ಮಾರಕಗಳು ಹಾಗೂ ಪುರಂದರದಾಸರ ಮಂಟಪ ಸೇರಿದಂತೆ ವಿವಿಧ ಮಂಟಪಗಳು, ಸ್ಮಾರಕಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣವಾಗಿ ಕ್ಷೀಣಿಸಿದ್ದರೂ ಚಿಕ್ಕೋಡಿ ತಾಲೂಕಿನಲ್ಲಿ ಮುಳುಗಡೆಯಾಗಿರುವ ಒಂಬತ್ತು ಸೇತುವೆಗಳು ಇನ್ನೂ ಯಥಾಸ್ಥಿತಿಯಲ್ಲಿವೆ. ಹೀಗಾಗಿ ಈಗಲೂ ಅಲ್ಲಿ ಸಂಚಾರ ಬಂದ್‌ ಆಗಿದೆ. ಕಳೆದ 24 ಗಂಟೆಗಳಿಂದ ಮಹಾರಾಷ್ಟ್ರದ ಘಟ್ಟಮತ್ತು ಬೆಳಗಾವಿ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯ ಪ್ರಮಾಣ ಸಂಪೂರ್ಣವಾಗಿ ಕ್ಷೀಣಿಸಿದೆ. ಆಲಮಟ್ಟಿಗೆ ಅಣೆಕಟ್ಟಿಗೆ 1.25 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲೂ ಮಳೆ ಇಳಿಕೆಯಾಗಿದ್ದು ಮಲಪ್ರಭಾ ಸೇರಿದಂತೆ ಪ್ರಮುಖ ನದಿಗಳ ಮಟ್ಟ ಯಥಾಸ್ಥಿತಿಯಲ್ಲಿ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

2175 ಹೆಕ್ಟೇರ್‌ ಬೆಳೆ ಹಾನಿ: 15 ದಿನಗಳ ಬಿರುಮಳೆಯಿಂದ ಭಾರೀ ಅನಾಹುತ 

ದ.ಕ. ಮಳೆ ಕಡಿಮೆ, ಇಂದಿನಿಂದ ಯೆಲ್ಲೋ ಅಲರ್ಟ್: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ದಿನವಿಡೀ ಮೋಡ, ಆಗಾಗ ಮಳೆ ಕಾಣಿಸಿದೆ. ಅಪರಾಹ್ನವೂ ಮಳೆ ವಾತಾವರಣ ಮುಂದುವರಿದಿದೆ. ಮಂಗಳೂರಿನಲ್ಲಿ ಸಂಜೆ ತುಸು ಬಿಸಿಲು ಕಂಡುಬಂತು. ಸೋಮವಾರ ಆರೆಂಜ್‌ ಅಲರ್ಚ್‌ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ಜು.19ರಿಂದ 21ರ ವರೆಗೂ ಯೆಲ್ಲೋ ಅಲರ್ಚ್‌ ಇರಲಿದ್ದು, ಹಗುರ ಮಳೆಯ ನಿರೀಕ್ಷೆ ಇದೆ.

ಕಡಬ ಗರಿಷ್ಠ ಮಳೆ: ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಕಡಬದಲ್ಲಿ 103 ಮಿಲಿ ಮೀಟರ್‌ ಮಳೆಯಾಗಿದೆ. ಬೆಳ್ತಂಗಡಿ 79.1 ಮಿ.ಮೀ, ಬಂಟ್ವಾಳ 67.6 ಮಿ.ಮೀ, ಮಂಗಳೂರು 39.5 ಮಿ.ಮೀ, ಪುತ್ತೂರು 79.9 ಮಿ.ಮೀ, ಸುಳ್ಯ 68.1 ಮಿ.ಮೀ, ಮೂಡುಬಿದಿರೆ 81.7 ಮಿ.ಮೀ. ಮಳೆ ವರದಿಯಾಗಿದೆ. ದಿನದ ಸರಾಸರಿ ಮಳೆ 75 ಮಿ.ಮೀ. ದಾಖಲಾಗಿದೆ.

ಕೊಟ್ಟ ಮಾತು ಈಡೇರಿಸದ ಯಡಿಯೂರಪ್ಪ, ಈಗ ಮುಳುಗಡೆ ಭೀತಿಯಲ್ಲಿ ಕೊಳ್ಳೂರು ಸೇತುವೆ

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.70 ಮೀಟರ್‌, ಬಂಟ್ವಾಳ ನೇತ್ರಾವತಿ ನದಿ 6.9 ಮೀಟರ್‌, ಗುಂಡ್ಯ ಹೊಳೆಯಲ್ಲಿ 4.2 ಮೀಟರ್‌ನಲ್ಲಿ ನೀರು ಹರಿಯುತ್ತಿದೆ. ಭಾರಿ ಮಳೆಗೆ 4 ಮನೆ ಸಂಪೂರ್ಣ ಹಾಗೂ 13 ಮನೆ ಭಾಗಶಃ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

 

click me!