ತೈಲ ಬೆಲೆ ಏರಿಕೆಯ ತತ್ತರ, KSRTC ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

By Kannadaprabha News  |  First Published Jul 19, 2022, 7:17 AM IST

ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಚಿಂತನೆ. ವರ್ಷಾಂತ್ಯಕ್ಕೆ 25 ಬಸ್‌, ಜನವರಿಯಿಂದ ಬೆಂಗಳೂರಿನಿಂದ ವಿವಿಧೆಡೆ ಬಸ್‌ ಸೇವೆ ಲಭ್ಯ


ಬೆಂಗಳೂರು (ಜು.19): ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ವಿದ್ಯುತ್‌ ಬಸ್‌ಗಳತ್ತ ಮುಖ ಮಾಡುತ್ತಿದ್ದು, ಖಾಸಗಿ ಕಂಪನಿಯಿಂದ ಒಪ್ಪಂದ ಮೇರೆಗೆ 50 ಬಸ್‌ಗಳನ್ನು ಪಡೆದುಕೊಳ್ಳಲು ಮುಂದಾಗಿದೆ. 2022ರ ಡಿಸೆಂಬರ್‌ ತಿಂಗಳಲ್ಲಿ 25 ಬಸ್‌ಗಳು ಮತ್ತು 2023ರ ಮಾರ್ಚ್‌ನಲ್ಲಿ  25 ಬಸ್‌ಗಳು ವಿದ್ಯುತ್‌ ಬಸ್‌ಗಳು ಲಭ್ಯವಾಗಲಿದೆ. 2023ರ ಜನವರಿಯಿಂದ ಬೆಂಗಳೂರು ನಗರದಿಂದ ವಿವಿಧ ಭಾಗಗಳಿಗೆ ಕೆಲ ಬಸ್‌ಗಳು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ. ಹೈದ್ರಾಬಾದ್‌ ಮೂಲದ ಒಲೆಕ್ಟ್ರಾ ಕಂಪನಿಯಿಂದ ಹವಾನಿಯಂತ್ರಿತ (ಎಸಿ) 50 ಎಲೆಕ್ಟ್ರಿಕ್‌ ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಸ್‌ಗಳು ಪ್ರತಿ ದಿನ 450 ಕಿ.ಮೀ. ಕಾರ್ಯಾಚರಣೆ ಮಾಡಲಿವೆ. ಒಮ್ಮೆ ಚಾರ್ಜಿಂಗ್‌ ಮಾಡಿದಲ್ಲಿ 250 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿವೆ. ಬಸ್‌ ಚಾಲಕರನ್ನು ಮತ್ತು ನಿರ್ವಹಣೆಯನ್ನು ಕಂಪನಿಯೇ ಮಾಡಲಿದೆ. ಜತೆಗೆ, ಎಲೆಕ್ಟ್ರಿಕ್‌ ಚಾರ್ಜಿಂಗ್‌ ವೆಚ್ಚವನ್ನು ಕಂಪನಿ ಭರಿಸಲಿದೆ. ಆದರೆ, ನಿರ್ವಾಹಕರನ್ನು ಮಾತ್ರ ಕೆಎಸ್‌ಆರ್‌ಟಿಸಿ ಒದಗಿಸಲಿದ್ದು, ಪ್ರತಿ ಕಿ.ಮೀ. 55 ರು.ಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚಾರ್ಜಿಂಗ್‌ ಘಟಕಗಳು: ಎಲೆಕ್ಟ್ರಿಕ್‌ ಬಸ್‌ಗಳನ್ನು ಒದಗಿಸುತ್ತಿರುವ ಒಲೆಕ್ಟ್ರಾ ಕಂಪೆನಿಯವರೇ ಬಸ್‌ನ ಚಾರ್ಜಿಂಗ್‌ ಘಟಕಗಳನ್ನು ಪ್ರಾರಂಭಿಸಲಿದೆ. ಆದರೆ, ಘಟಕಗಳ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಸ್ಥಳ ನೀಡಬೇಕಾಗಿದೆ. ಇದಕ್ಕಾಗಿ ಹಲವು ಭಾಗಗಳ ಡಿಪೋಗಳನ್ನು ಸ್ಥಳಾವಕಾಶ ಪರಿಶೀಲನೆ ಮಾಡಿದ್ದು, ಶೀಘ್ರದಲ್ಲಿ ಘಟಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಮಾಹಿತಿ ನೀಡಿದರು.

Tap to resize

Latest Videos

ಇತರೆ ನಗರಕ್ಕೂ ಸೇವೆ: ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಮಾಡುವ ಸಾಮರ್ಥ್ಯವನ್ನು ಪರಿಗಣಿಸಿ ಕಾರ್ಯಾಚರಣೆ ಮಾಡುವ ಸಂಬಂಧ ತೀರ್ಮಾನಿಸಲಾಗಿದೆ. ಬೆಂಗಳೂರು ನಗರದಿಂದ ಮೈಸೂರು, ಚಿಕ್ಕಮಗಳೂರು, ವಿರಾಜಪೇಟೆ, ಮಡಿಕೇರಿ, ಶಿವಮೊಗ್ಗ, ದಾವಣಗೆರೆ ನಡುವೆ ಸಂಚರಿಸಲಿವೆ. ಈ ಎಲ್ಲ ಭಾಗಗಳಲ್ಲಿ ಒಂದೊಂದು ಸ್ಥಳದಲ್ಲಿ ಚಾರ್ಜಿಂಗ್‌ ಘಟಕ ಪ್ರಾರಂಭಕ್ಕೆ ಕೆಎಸ್‌ಆರ್‌ಟಿಸಿ ಸ್ಥಳಾವಕಾಶ ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಒಲೆಕ್ಟ್ರಾ ಕಂಪನಿಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳನ್ನು ಒಪ್ಪಂದ ಮೇರೆಗೆ ಪಡೆದುಕೊಳ್ಳುತ್ತಿದ್ದೇವೆ. ಸೆಪ್ಟಂಬರ್‌ ತಿಂಗಳಲ್ಲಿ ಒಂದು ಬಸ್‌ ಬರಲಿದ್ದು, ಅದನ್ನು ಕಾರ್ಯಾಚರಣೆ ನಡೆಸಿ ಅಗತ್ಯವಿರುವ ಬದಲಾವಣೆಗಳನ್ನು ಕಂಪನಿಗೆ ತಿಳಿಸಲಾಗುವುದು. ಅದಕ್ಕೆ ತಕ್ಕಂತೆ ಸಿದ್ಧಪಡಿಸಿ ಒದಗಿಸಲಿದೆ. ಈ ಬಸ್‌ಗಳಿಗೆ ಬೇಕಾಗಿರುವ ಚಾರ್ಜಿಂಗ್‌ ಘಟಕಗಳ ನಿರ್ಮಾಣ ಶೀಘ್ರದಲ್ಲಿ ಪ್ರಾರಂಭವಾಗಲಿದೆ.

- ವಿ.ಅನ್ಬುಕುಮಾರ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

click me!