
ಬೆಂಗಳೂರು (ಜು.19): ವಿಧಾನಸೌಧ, ಕಬ್ಬನ್ ಉದ್ಯಾನ, ಚಿತ್ರಕಲಾ ಪರಿಷತ್ತು, ಬೆಂಗಳೂರು ಅರಮನೆ, ಕ್ವೀನ್ಸ್ ರಸ್ತೆ... ಹೀಗೆ ಬೆಂಗಳೂರಿನ ಹಲವು ಪ್ರವಾಸಿ ಐತಿಹಾಸಿಕ ಸ್ಥಳಗಳು, ಪ್ರಮುಖ ವೃತ್ತಗಳಲ್ಲಿ ಸೋಮವಾರ ಗಾಂಧೀಜಿ ವೇಷಧಾರಿಯೊಬ್ಬರು ಕಂಡು ಬಂದರು. ಅವರತ್ತ ಆಕರ್ಷಿತರಾಗಿ ಬಂದ ಜನರಿಗೆ ‘ನಿಮ್ಮೂರಿನ ಅದ್ಭುತಗಳ ಬಗ್ಗೆ ಜಗತ್ತಿಗೆ ತಿಳಿಸಿರಿ’ ಎಂಬ ಸಂದೇಶವನ್ನು ಸಾರುತ್ತಿದ್ದರು.
‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್’ನ ‘ಕರ್ನಾಟಕದ ಏಳು ಅದ್ಭುತಗಳು’ ಅಭಿಯಾನಕ್ಕೆ ಬೆಂಬಲ ಸೂಚಿಸಿ ಕಳೆದ ಒಂದು ತಿಂಗಳಿಂದ ರಾಜ್ಯದ ವಿವಿಧೆಡೆ ಸ್ವಯಂಪ್ರೇರಿತವಾಗಿ ಪ್ರಚಾರ ಕೈಗೊಂಡಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿಗ್ರಾಮದ ಮುತ್ತಣ್ಣ ಚನ್ನಬಸಪ್ಪ ತಿರ್ಲಾಪುರ (53) ಸೋಮವಾರ ಬೆಂಗಳೂರಿಗೆ ಆಗಮಿಸಿದ್ದರು. ನಗರ ಪ್ರಮುಖ ಸ್ಥಳಗಳಲ್ಲಿ ಅಭಿಯಾನದ ಜಾಗೃತಿ ಮೂಡಿಸಿದರು.
ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು, ವಿಶೇಷ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ!
ಮೈಗೆಲ್ಲಾ ಸುನೇರಿ ಬಣ್ಣ ಲೇಪಿಸಿಕೊಂಡು ಗಾಂಧಿವೇಷ ತೊಟ್ಟು ಕೈಯಲ್ಲೊಂದು ಫಲಕ ಹಿಡಿದು ಸೋಮವಾರ ಬೆಳಿಗ್ಗೆ ಗಾಂಧಿ ಭವನದಿಂದ ಜಾಗೃತಿಯಾತ್ರೆ ಆರಂಭಿಸಿದರು. ನಗರದ ವಿವಿಧೆಡೆ ಸಂಚರಿಸಿ ‘ಕರ್ನಾಟಕದ ಏಳು ಅದ್ಭುತಗಳು’ ಅಭಿಯಾನಕ್ಕೆ ಬೆಂಬಲ ಸೂಚಿಸುವಂತೆ ತಿಳಿಸಿದರು. ಗಾಂಧಿ ವೇಷಕ್ಕೆ ಹಲವು ಮಂದಿ ಮುಗಿಬಿದ್ದು ಫೋಟೊ ಕ್ಲಿಕ್ಕಿಸಿಕೊಂಡು.
ಕರ್ನಾಟಕ ವಿವಿಧೆಡೆ ಜಾಗೃತಿ: ಒಂದು ತಿಂಗಳ (ಜೂನ್ 16) ಹಿಂದೆ ಹುಬ್ಬಳ್ಳಿಯಿಂದ ಅಭಿಯಾನಕ್ಕೆ ಬೆಂಬಲ ಸೂಚಿಸಿ ಪ್ರವಾಸ ಆರಂಭಿಸಿದ್ದು, ಧಾರವಾಡ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ರಾಯಚೂರು, ಹಾವೇರಿ, ವಿಜಯಪುರ, ದಾವಣಗೆರೆ, ಮೈಸೂರು, ತುಮಕೂರು ಜಿಲ್ಲೆಗಳ ಪ್ರಮುಖ ಪ್ರವಾಸಿ ಸ್ಥಳಗಳು, ಕಾಲೇಜು ಭೇಟಿ ನೀಡಿದ್ದೇನೆ ಎಂದು ಮುತ್ತಣ್ಣ ತಿಳಿಸಿದರು.
ನೀವೂ ಭಾಗಿಯಾಗಿ, ಕರ್ನಾಟಕ ಅದ್ಬುತ ಸ್ಥಳ ಆಯ್ಕೆಗೆ ಓಟ್‌ಮಾಡಿ: ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್’ ಅಭಿಯಾನದಲ್ಲಿ ವೆಬ್‌ಸೈಟ್ ಮೂಲಕ ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ. ನಮ್ಮೂರಿನ ಅದ್ಭುತ ಸ್ಥಳಗಳ ಬಗ್ಗೆ ಜನರಿಗೆ ತಿಳಿಸಲು ನೋಂದಣಿ ಮಾಡುವ ಜತೆಗೆ ನೆಚ್ಚಿನ ಸ್ಥಳಗಳಿಗೆ ವೋಟ್ ಮಾಡಬಹುದು. ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಯಾರು ಈ ಗಾಂಧೀ ವೇಷಧಾರಿ?: ಮೂಲತಃ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಇವರು ವಿದ್ಯಾಭ್ಯಾಸ ಮಾಡಿರುವುದು 7ನೇ ತರಗತಿ ಮಾತ್ರ. ಜೀವನ ನಿರ್ವಹಣೆಗೆಂದು ಕರ್ಕಿಕಟ್ಟಿಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ. ಕರ್ಕಿಕಟ್ಟಿಯಲ್ಲಿ ಚಿಕ್ಕದೊಂದು ಹೋಟೆಲ್ ಹೊಂದಿದ್ದಾರೆ. ಕನ್ನಡ ಭಾಷೆ, ಸಾಹಿತಿಗಳ ಬಗ್ಗೆ ವಿಶೇಷ ಆಸ್ತೆಯನ್ನು ಹೊಂದಿರುವ ಇವರು, ತಮ್ಮ ಹೋಟೆಲ್‌ನ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರದ್ದು, ಸಾಹಿತಿಗಳ ಭಾವಚಿತ್ರ, ಅವರ ಪದ್ಯಗಳನ್ನು ಬರೆದು ಅಂಟಿಸಿರುವುದುಂಟು.
2015ರಿಂದಲೇ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದವರಲ್ಲಿ ಇವರು ಒಬ್ಬರು. ಪರಿಸರ ಜಾಗೃತಿ, ಮದ್ಯವ್ಯಸನ ಮುಕ್ತ ಸಮಾಜ, ಭ್ರಷ್ಟಾಚಾರ ರಹಿತ ಆಡಳಿತ ಇವರ ಹೋರಾಟದ ವಿಷಯಗಳು. ಇದಕ್ಕಾಗಿ ಇವರು ಆಗಾಗ ಜಾಗೃತಿ ಜಾಥಾ ನಡೆಸುತ್ತಿರುತ್ತಾರೆ. ಬಳಿಕ ಚಿತ್ರಕಲಾ ಪರಿಷತ್ತು, ರೇಸ್‌ಕೋರ್ಸ್ ವೃತ್ತ, ಬಸವೇಶ್ವರ ವೃತ್ತ, ವಿಧಾನಸೌಧ, ಶಾಸಕರ ಭವನ, ರಾಜಭವನ, ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಬೆಂಗಳೂರು ಅರಮನೆ, ಶೇಷಾದ್ರಿಪುರ, ಮಲ್ಲೇಶ್ವರ, ನವರಂಗ್ ವೃತ್ತ, ಬಸವೇಶ್ವರ ನಗರ ಮೂಲಕ ಸಂಜೆ ವೇಳೆ ಕಂಠೀರವ ಸ್ಟುಡಿಯೋ ತಲುಪಿ ಪುನೀತ್ ರಾಜ್‌ಕುಮಾರ್ ಸಮಾಧಿ ಮುಂಭಾಗ ಬೆಂಗಳೂರಿನ ಯಾತ್ರೆಯನ್ನು ಮುಕ್ತಾಯಗೊಳಿಸಿದರು.
ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆ
ಮಾರ್ಗ ಮಧ್ಯೆ ಪ್ರವಾಸಿಗರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಜನರನ್ನು ಉದ್ದೇಶಿಸಿ ಗಾಂಧಿ ತತ್ವ ಸಾರುವ ಜತೆಗೆ ಕರ್ನಾಟಕದಲ್ಲಿ ಸಾಕಷ್ಟುಅದ್ಭುತ ಸ್ಥಳಗಳಿವೆ. ಅವುಗಳ ಬಗ್ಗೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್’ ಮಾಡುತ್ತಿದೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಅದಕ್ಕಾಗಿ ನಾನು ನನ್ನ ಕೈಲಾದಷ್ಟುಜಾಗೃತಿ ಮೂಡಿಸುತ್ತಿದ್ದೇನೆ. ಇದರೊಂದಿಗೆ ಮದ್ಯವ್ಯಸನ ಸಮಾಜಕ್ಕೆ ಹಾನಿಕಾರಕ, ಪರಿಸರ ರಕ್ಷಣೆ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದೇನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ