Karnataka rain Effect : ಬೆಳೆ ಕಳೆದುಕೊಂಡ ರೈತರಿಗೆ ಅತಿ ಕಡಿಮೆ ಪರಿಹಾರ!

By Kannadaprabha News  |  First Published Nov 29, 2021, 7:02 AM IST
  • ಮಳೆ ಅಥವಾ ಬರದಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ನೀಡುತ್ತಿರುವ ಪರಿಹಾರದ ಮೊತ್ತ ಅತೀ ಕಡಿಮೆ
  • ಪರಿಹಾರದ ಮೊತ್ತ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ

ವರದಿ :  ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು (ನ.29):  ಕಳೆದ ಐದಾರು ವರ್ಷಗಳಿಂದ ಬೆಳೆ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದ್ದರೂ ಮಳೆ ಅಥವಾ ಬರದಿಂದ ಬೆಳೆ ಹಾನಿಯಾದ (Crop Loss) ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌ NDRF)  ಅಡಿ ನೀಡುತ್ತಿರುವ ಪರಿಹಾರದ ಮೊತ್ತ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.  ಬೀಜ, (Seeds) ಗೊಬ್ಬರ, ಕೂಲಿ ವೆಚ್ಚ, ನಿರ್ವಹಣೆ ಸೇರಿದಂತೆ ಬೆಳೆ ಉತ್ಪಾದಿಸಲು ವೆಚ್ಚ ಮಾಡುವ ಹಣ (Money) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಕೇಂದ್ರ ಸರ್ಕಾರ (govt Of India) ಆರು ವರ್ಷಗಳ ಹಿಂದೆ ರೂಪಿಸಿದ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ನೀಡುತ್ತಿರುವ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ. ನಿಯಮಗಳನ್ನು ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೆಚ್ಚಿಸಬೇಕು, ಜೊತೆಗೆ ರಾಜ್ಯ ಸರ್ಕಾರ (Karnataka govt) ಎಸ್‌ಡಿಆರ್‌ಎಫ್‌ (STRF) ನಿಧಿಯಿಂದ ಪರಿಹಾರ ನೀಡಬೇಕೆಂದು ರೈತ ಸಂಘಟನೆಗಳು (Farmers), ಕೃಷಿ ತಜ್ಞರು ಒತ್ತಾಯಿಸಿದ್ದಾರೆ.

Latest Videos

undefined

ಸಮಸ್ಯೆ ಏನು?:  ಎನ್‌ಡಿಆರ್‌ಎಫ್‌ (NDRF) ನಿಯಮದ ಪ್ರಕಾರ ಗರಿಷ್ಠ ಎರಡು ಹೆಕ್ಟೇರ್‌ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಮಳೆಯಾಶ್ರಿತ ಬೆಳೆಗೆ 6800 ರು., ನೀರಾವರಿ ಪ್ರದೇಶದ ಬೆಳೆಗೆ 13,500 ಹಾಗೂ ತೋಟಗಾರಿಕಾ ಬೆಳೆಗಳಿಗೆ (Crops) 18,000 ರು. ಮಾತ್ರ. ಅದೂ ಶೇ.33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಮಾತ್ರ ಪರಿಹಾರ ಸಿಗಲಿದೆ. ಅಲ್ಲದೆ ಬೆಳೆದು ನಿಂತ ಬೆಳೆಗಳಿಗೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಈಗಾಗಲೇ ಕೊಯ್ಲು ಮಾಡಿರುವ ಬೆಳೆಗಳಿಗೆ ಈ ಪರಿಹಾರ ಸಿಗುವುದಿಲ್ಲ.

ಬೀಜ, ಗೊಬ್ಬರ, ಬೇಸಾಯ, ಒಕ್ಕಣಿಕೆ ಮತ್ತಿತರ ಖರ್ಚು ಲೆಕ್ಕ ಹಾಕಿದರೆ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಎನ್‌ಡಿಆರ್‌ಎಫ್‌ನಲ್ಲಿ (NDRF) ಪರಿಹಾರ ಮೊತ್ತ ಹೆಚ್ಚಳವಾಗುವವರೆಗೂ ರಾಜ್ಯ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್‌)ಯಿಂದ ಹೆಚ್ಚುವರಿ ಪರಿಹಾರ ನೀಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಬೆಳೆ ಹಾನಿ ಪರಿಹಾರವನ್ನು ಹೆಚ್ಚಳ ಮಾಡಬೇಕೆಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದಾಗ ಪ್ರಕಾಶ್‌ ಕಮ್ಮರಡಿ ಅವರು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಶಿಫಾರಸು ಮಾಡಿದ್ದರೂ ಫಲ ಮಾತ್ರ ಶೂನ್ಯವಾಗಿದೆ. ಬಳಿಕ ಆಯೋಗದ ಅಧ್ಯಕ್ಷರಾದ ಹನುಮಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraka bommai) ಅವರಿಗೂ ಮನವಿ ಸಲ್ಲಿಸಿದ್ದಾರೆ.

ಪರಿಹಾರ ಹೆಚ್ಚಳಕ್ಕೆ ಕೃಷಿ ಬೆಲೆ ಆಯೋಗ ಮನವಿ

ಹೆಕ್ಟೇರ್‌ ಒಣಭೂಮಿಯ ಪರಿಹಾರವನ್ನು 6800 ರಿಂದ 50 ಸಾವಿರ, ನೀರಾವರಿ ಜಮೀನಿಗೆ (Farm land) ನೀಡುತ್ತಿದ್ದ 13,500 ರುಪಾಯಿ ಬದಲಿಗೆ 50 ಸಾವಿರ ಹಾಗೂ ತೋಟಗಾರಿಕಾ ಬೆಳೆಗಳ ನಷ್ಟಕ್ಕೆ 18 ಸಾವಿರಕ್ಕೆ ಬದಲಾಗಿ 1 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಗಮನ ಸೆಳೆದು ಪರಿಹಾರ ಮೊತ್ತ ಹೆಚ್ಚಳ ಮಾಡಿಸಬೇಕಿದೆ.

ಹಳೆಯ ನಿಯಮದನ್ವಯ ಪರಿಹಾರ:  2015 ರಲ್ಲಿ ಕೇಂದ್ರ ಸರ್ಕಾರ 2015-20 ರ ಅವಧಿಗೆ ನಿಯಮಗಳನ್ನು ಪರಿಷ್ಕರಣೆ ಮಾಡಿ ಕ್ರಮವಾಗಿ 6800, 13,500 ಮತ್ತು 18 ಸಾವಿರ ರುಪಾಯಿಗೆ ಸೀಮಿತಗೊಳಿಸಲಾಗಿತ್ತು. ಇದೀಗ 2021 ರಲ್ಲಿಯೂ ಹಳೆಯ ನಿಯಮಗಳನ್ವಯವೇ ಪರಿಹಾರ ನೀಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಎನ್‌ಡಿಆರ್‌ಎಫ್‌ ಅಡಿ ಪರಿಹಾರ ಮೊತ್ತ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಎಸ್‌ಡಿಆರ್‌ಎಫ್‌ ಅಡಿ ಮತ್ತೊಂದಿಷ್ಟುಹಣ ಸೇರಿಸಿ ರೈತರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕವಾಗಿ ಬೆಳೆಗಳ ವೆಚ್ಚ ಲೆಕ್ಕಾಚಾರ ಮಾಡಿ ನಾವು ಈ ಹಿಂದೆ ಶಿಫಾರಸು ಮಾಡಿದ್ದರೂ ಅನುಷ್ಠಾನವಾಗಲಿಲ್ಲ.

-ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ನಿಕಟಪೂರ್ವ ಅಧ್ಯಕ್ಷರು

ಒಬಿರಾಯನ ಕಾಲದ ಲೆಕ್ಕಾಚಾರದ ಆಧಾರದಲ್ಲಿ ಕೇಂದ್ರ ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡುತ್ತಿದೆ. ಕೇಂದ್ರ ಸರ್ಕಾರ ನೀಡುವ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವೂ ರೈತರ ನೆರವಿಗೆ ಧಾವಿಸಬೇಕು. ರೈತರ ಸಮಸ್ಯೆ ಪರಿಹಾರಕ್ಕೆ ಇಚ್ಛಾ ಶಕ್ತಿ ಪ್ರದರ್ಶಿಸದ ಜನಪ್ರತಿನಿಧಿಗಳು ಅವರ ವೇತನ, ಭತ್ಯೆಗಳನ್ನು ಮಾತ್ರ ಆಗಾಗ್ಗೆ ಪರಿಷ್ಕರಣೆ ಮಾಡಿಕೊಳ್ಳುತ್ತಾರೆ.

-ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯ ರೈತ ಸಂಘದ ಅಧ್ಯಕ್ಷರು

click me!