ಶಿವಮೊಗ್ಗದಲ್ಲಿ ಬಿಜೆಪಿಯ ಜನಾಕ್ರೋಶ ರ‍್ಯಾಲಿಯಲ್ಲಿ ಭಾಷಣದ ವೇಳೆ ಮರದ ರೆಂಬೆ ಕುಸಿದು ಬಿದ್ದಿದೆ. ವೇದಿಕೆಯ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುವರ್ಣ ನ್ಯೂಸ್‌ನ ಎಕ್ಸ್‌ಕ್ಲೂಸಿವ್ ವಿಡಿಯೋದಲ್ಲಿ ಈ ಘಟನೆಯ ದೃಶ್ಯ ಲಭ್ಯವಿದೆ.
ಶಿವಮೊಗ್ಗ (ಏ.12): ಬಿಜೆಪಿಯ ಜನಾಕ್ರೋಶ ರಾಲಿಯ ವೇದಿಕೆಯಲ್ಲಿ ನಡೆದ ಭಾಷಣದ ವೇಳೆ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸುವರ್ಣ ನ್ಯೂಸ್‌ಗೆ ಈ ಘಟನೆಯ ಎಕ್ಸ್‌ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ.
ಮಳೆಯ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ದಿಡೀರ್ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ವೇದಿಕೆಯ ಹಿಂಭಾಗದಲ್ಲಿ ಭಾರಿ ಗಾತ್ರದ ಮರದ ರೆಂಬೆಯೊಂದು ಧರೆಗುರುಳಿತು. ಈ ವೇಳೆ ವೇದಿಕೆಯ ಹಿಂಭಾಗದಲ್ಲಿ ತೆರಳುತ್ತಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ಮರದ ರೆಂಬೆ ಬೀಳುವ ಶಬ್ದಕ್ಕೆ ಕಂಗಾಲಾಗಿ ಹಿಂತಿರುಗಿ ಓಡಿದರು. ಅದೃಷ್ಟವಶಾತ್, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮಾರಲು ಹೊರಟಿದೆ: ವಿಜಯೇಂದ್ರ ಆರೋಪ
ಮರದ ರೆಂಬೆ ವೇದಿಕೆಗೆ ಸಮೀಪವೇ ಬಿದ್ದಿದ್ದು, ಇದು ಸ್ವಲ್ಪ ದೊಡ್ಡದಿದ್ದರೆ ಅಥವಾ ವೇದಿಕೆಯ ಮೇಲೆ ಬಿದ್ದಿದ್ದರೆ, ಭಾಷಣ ಮಾಡುತ್ತಿದ್ದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ವೇದಿಕೆಯಲ್ಲಿದ್ದವರಿಗೆ ಗಂಭೀರ ಅಪಾಯವಾಗಬಹುದಿತ್ತು. ಘಟನೆಯು ವೇದಿಕೆಯ ಹಿಂಭಾಗದಲ್ಲಿ ನಡೆದ ಕಾರಣ, ಭಾಷಣದ ವೇಳೆ ಇದು ಯಾರ ಗಮನಕ್ಕೂ ಬಾರದೆ ತಪ್ಪಿತು.
ಈ ಘಟನೆಯಿಂದ ಯಾವುದೇ ಜೀವಹಾನಿಯಾಗಿಲ್ಲವಾದರೂ, ರಾಲಿಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುವರ್ಣ ನ್ಯೂಸ್‌ನ ಈ ಎಕ್ಸ್‌ಕ್ಲೂಸಿವ್ ವಿಡಿಯೋದಲ್ಲಿ ಘಟನೆಯ ಸಂಪೂರ್ಣ ದೃಶ್ಯದಲ್ಲಿ ಕಾಣಬಹುದು.