Raichur: ಸರ್ಕಾರಿ ಶಾಲೆ ಉಳಿವಿಗೆ ಪ್ರಯತ್ನ, 1ನೇ ಕ್ಲಾಸ್‌ಗೆ ದಾಖಲಾದ್ರೆ 500 ರೂ‌. ಠೇವಣಿ, ಶಾಲಾ ಬ್ಯಾಗ್ ಗಿಫ್ಟ್!

By Santosh Naik  |  First Published Jun 5, 2024, 10:50 PM IST

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಇತ್ತೀಚಿನ ದಿನಗಳಲ್ಲಿ ಪೋಷಕರು ಮುಂದಾಗುತ್ತಿಲ್ಲ. ಈ ಸರ್ಕಾರಿ ಶಾಲೆಗಳ ಉಳಿವಿಗೆ ರಾಯಚೂರಿನಲ್ಲಿ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.


ರಾಯಚೂರು (ಜೂ.5): ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ಸರಿಯಾಗಿ ಇಲ್ಲ ಎಂಬ ಕಾರಣಕ್ಕೆ ಶಾಲೆಗಳು ಮುಚ್ಚುತ್ತಿವೆ. ಇದನ್ನ ಗಮನಿಸಿದ ಕೆಲ ಶಾಲೆಯ ಹಳೆ ವಿದ್ಯಾರ್ಥಿಗಳು ವಿನೂತನ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಶಾಲೆಗೆ ದಾಖಲಾದ ಪ್ರತಿ ವಿದ್ಯಾರ್ಥಿಗೂ 500 ರೂಪಾಯಿ ಠೇವಣಿ ಇಟ್ಟು, ಮಗುವಿಗೆ ಹೊಸ ಬ್ಯಾಗ್ ಸಹ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ರಾಯಚೂರು ಜಿಲ್ಲೆ ಲಿಂಗಸೂಗೂರು ‌ ತಾಲೂಕಿನ ದೇವರಭೂಪುರ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಗಳು. ಅಲ್ಲದೆ ಶಾಲಾ ಪ್ರಾರಂಭೋತ್ಸವ ವೇಳೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರಕಾರಿ ಕನ್ನಡ ಶಾಲೆ ಉಳಿವಿಗೆ ವಿನೂತನ ಯೋಜನೆಗಳನ್ನು ಹಾಕಿಕೊಳ್ಳಲಾಯಿತು.

70ರ ದಶಕದಲ್ಲಿ ಸ್ಥಾಪನೆಯಾದ ದೇವರಭೂಪುರ ಸರಕಾರಿ ಕನ್ನಡ ಶಾಲೆಯಲ್ಲಿ ಆರಂಭದಲ್ಲಿ ಇದ್ದಂತಹ ಉತ್ಸಾಹ ಬಳಿಕ ಕಳೆ ಗುಂದಿತ್ತು. 1ನೇ ತರಗತಿಯಿಂದ 8ನೇ ತರಗತಿವರೆಗೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ‌ ಶಾಲೆ ಎಂದಾದರೂ ಶಿಕ್ಷಕರು ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಮತ್ತೊಂದು ಕಡೆ ಶಾಲೆಗೆ ದಾಖಲಾದರೂ ಮಕ್ಕಳು ತರಗತಿಗಳ ಕಡೆಗೆ ಮುಖ ಮಾಡುತ್ತಿರಲಿಲ್ಲ. 

ಇವುಗಳನ್ನ ಗಮನಿಸಿದ ಹಳೆಯ ವಿದ್ಯಾರ್ಥಿಗಳು ಅವನತಿಯತ್ತ ಸಾಗುತ್ತಿರುವ ಸರಕಾರಿ ಶಾಲೆ ಉಳಿವಿಗಾಗಿ ತಾವೇ ಮುಂದೆ ಬಂದು ತಾವು ಕಲಿತ ಶಾಲೆ ಉಳಿಸುವ ವಿನೂತನ ಪ್ರಯತ್ನಕ್ಕೆ ‌ಮುಂದಾಗಿದ್ದು, ಹಳೆಯ ವಿದ್ಯಾರ್ಥಿಗಳು "ಹಳೇ ಬೇರು ಹೊಸ ಚಿಗುರು" ಎಂಬ ಹೆಸರಿನಲ್ಲಿ ಸಂಘವೊಂದನ್ನ ಸ್ಥಾಪಿಸಿಕೊಂಡು ಮರಳಿ ಮಕ್ಕಳನ್ನ ಶಾಲೆಯತ್ತ ಸೆಳೆಯಲು ಮತ್ತು ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳ ಮಾಡಲು ನಾನಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. 

Latest Videos

undefined

ಅದರ ಭಾಗವಾಗಿ ಒಂದನೇ ತರಗತಿಗೆ ದಾಖಲಾತಿ ಪಡೆದ ಮಕ್ಕಳಿಗೆ ಬ್ಯಾಗ್ ಗಿಫ್ಟ್ ‌ನೀಡಿದದಾರೆ. ಅಲ್ಲದೇ ‌ದಾಖಲಾದ ಪ್ರತಿ ಮಗುವಿಗೂ 500 ರೂಪಾಯಿ ಠೇವಣಿ ಇಡುವ ಕೆಲಸಕ್ಕೆ ‌ಮುಂದಾಗಿದ್ದಾರೆ. ಅಲ್ಲದೇ ಇನ್ನು ಮುಂದೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಕಾರ್ಯಾಗಾರ ಸಂಘಟಿಸುವುದು. ಶಾಲೆಯ ಸ್ಮಾರ್ಟ್ ಕ್ಲಾಸ್ ಗೆ ಸಿದ್ಧತೆ, ಡಿಜಿಟಲ್ ಗ್ರಂಥಾಲಯ ಸೌಕರ್ಯ, ಸುಸಜ್ಜಿತ ಆಟದ ಮೈದಾನ ಸೇರಿದಂತೆ  ಯೋಜನೆಗಳನ್ನು  ಹಾಕಿಕೊಂಡಿದ್ದಾರೆ. 

ರಾಯಚೂರು: ಕಾಂಗ್ರೆಸ್ ಸೇರಿದ 2 ತಿಂಗಳಲ್ಲೇ ಸಂಸದರಾದ ನಿವೃತ್ತ ಐಎಎಸ್ ಅಧಿಕಾರಿ..!

ಆ ಮೂಲಕ ದಾನಿಗಳ ನೆರವಿನೊಂದಿಗೆ ಶಾಲೆ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಇದರೊಂದಿಗೆ ಒಂದನೇ ತರಗತಿಯಿಂದಲೇ ದಾಖಲಾತಿ ಹೆಚ್ಚಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ಇದೇ ವೇಳೆ ವಿಶ್ವ ಪರಿಸರ ದಿನಾಚರಣೆ ಹಿನ್ನಲೆ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಇನ್ನೂ ಈ ವೇಳೆ ಶ್ರೀ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರು ಸಾನಿದ್ಯ ವಹಿಸಿದ್ದರು. ಬಿಇಓ ಹುಂಬಣ್ಣ ರಾಠೋಡ, ಇಸಿಓ ಬಸವರಾಜ ಕರಡಿ, ಸಿಆರ್ ಪಿ ಮಂಜುನಾಥ ಹೂಗಾರ, ಮುಖ್ಯೋಪಾದ್ಯಾರಾದ ರೂಪಾ ಪತ್ತಾರ, ಎಸ್.ಡಿಎಂಸಿ ಅಧ್ಯಕ್ಷರಾದ ಶಂಕರಗೌಡ, ಹಿರಿಯರಾದ ಅಮರೇಗೌಡ, ಪಿಡಿಓ ಬಸವರಾಜ ವಸ್ತ್ರದ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದವರು ಉಪಸ್ಥಿತರಿದ್ದರು.

ಚಿಂದಿ ಆಯುವ ರಾಯಚೂರು ಬಾಲಕನಿಂದ ರಾಷ್ಟ್ರಗೀತೆಗೆ ಗೌರವ, ವಿಡಿಯೋ ವೈರಲ್

click me!