ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕಿಂತ ಕೇವಲ ನಾಲ್ಕು ವರ್ಷಗಳ ಮುಂಚೆ ಆರಂಭವಾಗಿದ್ದ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಇಂದು ಆಂಧ್ರಪ್ರದೇಶ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.
ಬೆಂಗಳೂರು (ಜೂ.5): ತಮ್ಮ ರಿಯಲಿಸ್ಟಿಕ್ ಇಮೇಜ್‌ನಿಂದ ಹೊಸತರದ ರಾಜಕೀಯವನ್ನು ಹುಟ್ಟುಹಾಕುವ ಕಲ್ಪನೆಯಲ್ಲಿ ಆರಂಭವಾಗಿದ್ದ ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ರಾಜ್ಯದಲ್ಲಿ ಯಶಸ್ಸು ಅನ್ನೋದು ಈವರೆಗೂ ಸಿಕ್ಕಿಲ್ಲ. ಪ್ರಜಾಕೀಯ ಆರಂಭವಾಗಿ ಐದು ವರ್ಷಗಳಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪ್ರಜಾಕೀಯ ಸ್ಪರ್ಧೆ ಮಾಡಿತ್ತು. ಆದರೆ, ಯಾವುದರಲ್ಲೂ ಯಶಸ್ಸು ಸಿಕ್ಕಿಲ್ಲ. 2020ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಯುಪಿಪಿ ಹೆಸರಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ದಾವಣಗೆರೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ವಿಜಯಶಾಲಿಯಾಗಿದ್ದ. ಇಲ್ಲಿಯವರೆಗೂ ಪ್ರಜಾಕೀಯದ ದೊಡ್ಡ ಯಶಸ್ಸು ಇದೊಂದೇ. ಕಳೆದ ವರ್ಷದ ಚುನಾವಣೆಯಲ್ಲಿ ಪ್ರಜಾಕೀಯ ಕೊಂಚ ಮಟ್ಟಿಗೆ ವೋಟ್‌ಶೇರ್ ಆದರೂ ಪಡೆದುಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಚುನಾವಣಾ ಫಲಿತಾಂಶ ಬಂದಾಗ ಯುಪಿಪಿ ನಿರೀಕ್ಷೆಗೂ ಮೀರಿ ವಿಫಲವಾಗಿತ್ತು. ಇದಕ್ಕೆ ಸಾವಿರ ಕಾರಣಗಳಿರಬಹುದು. ಆದರೆ, ಒಬ್ಬ ಸ್ಟಾರ್ ನಟನಾಗಿ ತನ್ನದೇ ಹೊಸ ರಾಜಕೀಯ ಪಕ್ಷ ರಚನೆ ಮಾಡಿಕೊಂಡು, ರಾಜಕೀಯ ಹೇಗೆ ಮಾಡಬೇಕು ಅನ್ನೋದು ಪಕ್ಕದ ಆಂಧ್ರಪ್ರದೇಶದ ಪವನ್ ಕಲ್ಯಾಣ್ ಮಾದರಿ.
ಅದು ಕಳೆದ ವರ್ಷದ ಅಕ್ಟೋಬರ್. ಎಪಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಸ್ಕ್ಯಾಮ್‌ನಲ್ಲಿ ಚಂದ್ರಬಾಬು ನಾಯ್ಡು ಬಂಧನವಾದ ಮರುದಿನ, ನಟ ಪವನ್ ಕಲ್ಯಾಣ್ ತಮ್ಮ ರಾಜಕೀಯ ಹಾಗೂ ಸಿನಿಮಾ ಜೀವನ ಎರಡನ್ನೂ ಒತ್ತೆಯಿಟ್ಟು ಟಿಡಿಪಿಗೆ ಬೆಂಬಲ ನೀಡುವ ಘೋಷಣೆ ಮಾಡಿದ್ದರು. ಅವರು ಅಂದು ಮಾಡಿದ್ದ ಹುಚ್ಚು ಸಾಹಸಕ್ಕೆ ಇಂದು ಬೆಲೆ ಸಿಕ್ಕಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷ, ಆಂಧ್ರದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಕಮ್‌ಬ್ಯಾಕ್ ಮಾಡಿದ್ದು ಮಾತ್ರವಲ್ಲ ಪವನ್ ಕಲ್ಯಾಣ್ ಅವರ ಜನಸೇನಾ ಇಂದು ಆಂಧ್ರಪ್ರದೇಶದಲ್ಲಿ 2ನೇ ದೊಡ್ಡ ಪಾರ್ಟಿಯಾಗಿದೆ. ಮೈತ್ರಿಯೊಂದಿಗೆ ತಾನು ಸ್ಪರ್ಧೆ ಮಾಡಿದ ಎಲ್ಲಾ 21 ಕ್ಷೇತ್ರಗಳನ್ನೂ ಜನನಸೇನಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ವೈಎಸ್‌ಆರ್‌ಸಿಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಬಿಜೆಪಿ ಮೈತ್ರಿ ಹೊಂದಿರುವ ಜೆಎಸ್‌ಪಿ ಎರಡು ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿದೆ. ಸ್ವತಃ ಪವನ್ ಕಲ್ಯಾಣ್ ಪೀತಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಗೆಲುವು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಉಪೇಂದ್ರ ಅವರ ಪ್ರಜಾಕೀಯ ಸೋತಿರುವುದೇ ಇಲ್ಲಿ. ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗಳ ಸಂದರ್ಭದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಯುಪಿಪಿ ಹಾಗೂ ಅದರ ಸ್ಟಾರ್ ನಾಯಕ ಉಪೇಂದ್ರ, ಚುನಾವಣಾ ಸಮಯದಲ್ಲಿ ಮಾತ್ರ ಯುಪಿಪಿ ಬ್ರ್ಯಾಂಡ್‌ನಲ್ಲಿ ಮತ ಕೇಳುತ್ತಾರೆ. ಹಾಗಾಗಿ ಇಂದಿಗೂ ಪ್ರಜಾಕೀಯ ಜನರ ಪಕ್ಷವಾಗದೇ, ಚುನಾವಣಾ ಪಕ್ಷವಾಗಿ ಮಾತ್ರವೇ ಉಳಿದುಕೊಂಡಿದೆ.
ಸಿನಿಮಾದಲ್ಲಿ ತಮ್ಮ ಸಾಹಸಪ್ರಧಾನ ಪಾತ್ರಗಳಿಂದ 'ಪವರ್‌ಸ್ಟಾರ್' ಎಂದು ಜನಪ್ರಿಯವಾಗಿ ಕರೆಸಿಕೊಳ್ಳುವ ಪವನ್ ಕಲ್ಯಾಣ್, 2014 ರಲ್ಲಿ ಜೆಎಸ್‌ಪಿ ಅನ್ನು ಪ್ರಾರಂಭಿಸಿದರು. ಆದರೆ ಆ ವರ್ಷದ ಚುನಾವಣೆಯಿಂದ ದೂರ ಉಳಿದರು. ತಮ್ಮ ಹಿರಿಯ ಸಹೋದರ ಕೆ. ಚಿರಂಜೀವಿ ಪ್ರಜಾರಾಜ್ಯಂ ಪಾರ್ಟಿ ಆರಂಭಿಸಿ ಕಂಡಿದ್ದ ಸೋಲಿನಿಂದ ಪಾಠ ಕಲಿತಿದ್ದ ಪವನ್ ಕಲ್ಯಾಣ್ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇರಿಸಿದ್ದರು.
2019 ರ ವಿಧಾನಸಭಾ ಚುನಾವಣೆಯಲ್ಲಿ, ಕಲ್ಯಾಣ್ ಭೀಮಾವರಂ ಮತ್ತು ಗಜುವಾಕ ವಿಧಾನಸಭಾ ಕ್ಷೇತ್ರಗಳಿಂದ ಸೋತಿದ್ದರಿಂದ ಜೆಎಸ್‌ಪಿ ಕಳಪೆ ಪ್ರದರ್ಶನ ನೀಡಿತು. ಆ ಚುನಾವಣೆಯಲ್ಲಿ ಅವರ ಪಕ್ಷವು ಗೆದ್ದ ಏಕೈಕ ಸ್ಥಾನವೆಂದರೆ ಪಾಲಕೋಲ್, ಆದರೆ ಅಭ್ಯರ್ಥಿ ಗೆದ್ದ ಬೆನ್ನಲ್ಲೇ ವೈಎಸ್‌ಆರ್‌ಸಿಪಿಗೆ ಪಕ್ಷಾಂತರಗೊಂಡರು. ಈ ನಷ್ಟವು ರಾಜಕಾರಣಿಯಾಗಿ ಮಾತ್ರವಲ್ಲದೆ ನಟನಾಗಿಯೂ ಪವನ್ ಅವರ ಇಮೇಜ್ ಅನ್ನು ಹದಗೆಡಿಸಿತು. ಹಠಕ್ಕೆ ಬೀಳದ ಪವನ್ ಅವರು ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ವಿವಿಧ ವಿಷಯಗಳ ಕುರಿತು ಆಕ್ರಮಣಕಾರಿಯಾಗಿ ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದ್ದರು. ಕರ್ನಾಟಕದಲ್ಲಿ ಪ್ರಜಾಕೀಯದಿಂದ ಇಂಥದ್ದೊಂದು ಕಾರ್ಯ ಇಂದಿಗೂ ನಡೆದಿಲ್ಲ.
2022 ರ ದ್ವಿತೀಯಾರ್ಧದಲ್ಲಿ, ಕಲ್ಯಾಣ್ ಅವರು ‘ಜನ ವಾಣಿ’ಯನ್ನು ಪ್ರಾರಂಭಿಸಿದರು, ಅದರ ಭಾಗವಾಗಿ ಅವರು ಜನರ ದೂರುಗಳನ್ನು ಆಲಿಸುವ ಉದ್ದೇಶದಿಂದ ಹಲವಾರು ಸಣ್ಣ ಸಾರ್ವಜನಿಕ ಸಭೆಗಳನ್ನು ನಡೆಸಿದರು. ಅಕ್ಟೋಬರ್ 19 ರಂದು, ರಾಜ್ಯ ಸರ್ಕಾರವು ವಿಶಾಖಪಟ್ಟಣದಲ್ಲಿ ಅಂತಹ ಒಂದು ಸಭೆಯ ಮೇಲೆ ದಾಳಿ ನಡೆಸಿ JSP ಕಾರ್ಯಕರ್ತರನ್ನು ಬಂಧಿಸಿತು. ಪವನ್ ಕಲ್ಯಾಣ್ ಅವರನ್ನು ಹೋಟೆಲ್‌ನಲ್ಲಿಯೇ ಕೂಡಿಹಾಕಿತ್ತು.
ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿ: ಬೆಂಬಲದ ಬಗ್ಗೆ ಮಹತ್ವದ ಘೋಷಣೆ
ಈ ಘಟನೆಯು ಟಿಡಿಪಿ ಮುಖ್ಯಸ್ಥ ನಾಯ್ಡು ಮತ್ತು ಪವನ್ ಕಲ್ಯಾಣ್ ಅವರು ಒಂದಾಗಲು ಕಾರಣವಾಯಿತು. ನಾಯ್ಡು ಖುದ್ದು ವಿಜಯವಾಡಕ್ಕೆ ತೆರಳಿ ಕಲ್ಯಾಣ್ ಅವರನ್ನು ಭೇಟಿ ಮಾಡಿ ಜೆಎಸ್‌ಪಿ ನಾಯಕನಿಗೆ ಬೆಂಬಲ ಘೋಷಿಸಿದರು. ವೈಎಸ್‌ಆರ್‌ಸಿಪಿಗೆ ಹೋರಾಟವನ್ನು ಕೊಂಡೊಯ್ಯುವ ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿ ಕಲ್ಯಾಣ್ ಬಿಜೆಪಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿದ್ದರು. ವೈಎಸ್‌ಆರ್‌ಸಿಪಿಯನ್ನು ಸೋಲಿಸಲು ಒಗ್ಗೂಡುವುದು ನಮ್ಮ ಗುರಿಯಾಗಬೇಕು. ಟಿಡಿಪಿ, ಜೆಎಸ್‌ಪಿ ಮತ್ತು ಬಿಜೆಪಿ ಒಂದಾಗದಿದ್ದರೆ ಆಡಳಿತ ವಿರೋಧಿ ಮತಗಳು ವ್ಯರ್ಥವಾಗುತ್ತವೆ,’’ ಎಂದು ಅವರು ಹೇಳಿದ್ದರು. ಟಿಡಿಪಿ ಜೊತೆಗೆ ಮತ್ತ ಸಖ್ಯ ಬಿಜೆಪಿಗೆ ಇಷ್ಟವಿದ್ದಿರಲಿಲ್ಲ. ಆದರೂ ಪವನ್ ಕಲ್ಯಾಣ್ ಅವರು ಅಮಿತ್ ಶಾ ಮತ್ತು ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರನ್ನು ಭೇಟಿಯಾಗುತ್ತಲೇ ಇದ್ದರು ಮತ್ತು ಅಂತಿಮವಾಗಿ ಈ ವರ್ಷದ ಮಾರ್ಚ್‌ನಲ್ಲಿ ಟಿಡಿಪಿ-ಜೆಎಸ್‌ಪಿ-ಬಿಜೆಪಿ ಮೈತ್ರಿ ಖಚಿತವಾಗಿತ್ತು.
'ಕಾಮಕ್ಕೆ ಕಮಿಟ್‌ಮೆಂಟ್ ಯಾಕೆ ಬೇಕು' ಅಂದ್ಬಿಟ್ರಾ ಕೆಲಸ ಮುಗಿಸ್ಕೊಂಡ ಪವನ್ ಕಲ್ಯಾಣ್!
ಪವನ್ ಕಲ್ಯಾಣ್ ಈಗ ಶಾಸಕಾಂಗ ಸಭೆಗೆ ಪಾದಾರ್ಪಣೆ ಮಾಡುತ್ತಿರುವುದರಿಂದ, ಸಿನಿಮಾದ ಅಬ್ಬರವನ್ನು ಕಾರ್ಯರೂಪಕ್ಕೆ ತರಲು ಅನೇಕರು ನಿರೀಕ್ಷೆ ಮಾಡಿದ್ದಾರೆ. ಟಿಡಿಪಿ ತನ್ನದೇ ಆದ ಬಹುಮತವನ್ನು ಪಡೆಯಲು ಸಿದ್ಧವಾಗಿದ್ದರೂ, ಕಲ್ಯಾಣ್‌ನ ಜೆಎಸ್‌ಪಿ ಸರ್ಕಾರ ಮತ್ತು ಅದರ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.