ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಸಂಚಾರ ಆರಂಭಿಸಲಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ 21 ದಿನ ಸಾಗಲಿರುವ ಈ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲು ಈಗಾಗಲೇ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ (ಸೆ.30): ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಸಂಚಾರ ಆರಂಭಿಸಲಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ 21 ದಿನ ಸಾಗಲಿರುವ ಈ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲು ಈಗಾಗಲೇ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ.
undefined
ಕೇರಳದ ಮೂಲಕ ರಾಜ್ಯಕ್ಕೆ ಆಗಮಿಸಲಿರುವ ಈ ಯಾತ್ರೆ ಶುಕ್ರವಾರ ಬೆಳಗ್ಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸಲಿದೆ. ಇಲ್ಲಿಂದಲೇ ಐಕ್ಯತಾ ಯಾತ್ರೆಯ ರಾಜ್ಯ ಸಂಚಾರಕ್ಕೆ ಚಾಲನೆ ಸಿಗಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನಾ ಕಾರ್ಯಕ್ರಮ ಹಾಗೂ ನಂತರ ನಡೆಯುವ ಪಾದಯಾತ್ರೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅವರಿಗೆ ಊಟ-ಉಪಚಾರದ ಸಿದ್ಧತೆಗಳು ಭರದಿಂದ ಸಾಗಿದೆ.
Bharat Jodo Yatra: ಇಂದಿನಿಂದ 21 ದಿನ ಕರ್ನಾಟಕದಲ್ಲಿ ರಾಹುಲ್‌ಗಾಂಧಿ ಐಕ್ಯತಾ ಯಾತ್ರೆ
ಯಾತ್ರೆಯ ಭಾಗವಾಗಿ ಗುಂಡ್ಲುಪೇಟೆ ಪಟ್ಟಣದಲ್ಲಿ ಅಲ್ಲಲ್ಲಿ ರಾಹುಲ್ ಗಾಂಧಿ ಹಾಗೂ ಪಕ್ಷದ ನಾಯಕರ ಬೃಹತ್ ಕಟೌಟ್‌ಗಳನ್ನು ಹಾಕಲಾಗಿದ್ದು, ಪಾದಯಾತ್ರೆ ಆರಂಭವಾಗುವ ಅಂಬೇಡ್ಕರ್ ಭವನದಿಂದ (ಮೈಸೂರು-ಊಟಿ ಹೆದ್ದಾರಿ) ನಂಜನಗೂಡು ತನಕ ಹೆದ್ದಾರಿಯ ಇಕ್ಕೆಲಗಳಲ್ಲಿ ರಾಹುಲ್ ಗಾಂಧಿಗೆ ಸ್ವಾಗತಕೋರುವ ಬ್ಯಾನರ್‌ಗಳು ಹಾಗೂ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ಈ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲೂ ಶುಭಾಶಯ ಕೋರುವ ಆಯಾ ಗ್ರಾಪಂನ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್‌ಗಳ ಅಬ್ಬರ ಎದ್ದು ಕಾಣುತ್ತಿದೆ. ಐಕ್ಯತಾ ಯಾತ್ರೆ ಆರಂಭವಾಗುವ ಹೆದ್ದಾರಿಯಲ್ಲಿ ಮೈಸೂರು ಅರಮನೆ ಮಾದರಿಯಲ್ಲಿ ಬೃಹತ್ ಸ್ವಾಗತ ಕಮಾನು ಅನ್ನೂ ಹಾಕಲಾಗಿದ್ದು, ಗಮನ ಸೆಳೆಯುತ್ತಿದೆ.
ಬೃಹತ್ ವೇದಿಕೆ: ಪಾದಯಾತ್ರೆಗೆ ಚಾಲನೆ ನೀಡುವ ಸ್ಥಳದಲ್ಲಿ ಬೃಹತ್ ವೇದಿಕೆ ಹಾಗೂ ಮೂರು ಸಾವಿರದಷ್ಟು ಮಂದಿ ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. ಯಾತ್ರೆಯ ಭಾಗವಾಗಿ ಬೇಗೂರು ಬಳಿಯ ಪೊಲೀಸ್ ಠಾಣೆ ಪಕ್ಕದ ಖಾಸಗಿ ಜಮೀನಿನಲ್ಲಿ ರಾಹುಲ್‌ಗಾಂಧಿ ಸೇರಿ ಹಲವು ಗಣ್ಯರು ಕ್ಯಾರವಾನ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ರೆಸಾರ್ಟ್, ಲಾಡ್ಜ್, ಛತ್ರ ಹೌಸ್‌ಫುಲ್: ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ದೂರದೂರಿನಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಹಾಗೂ ಗುಂಡ್ಲುಪೇಟೆ ಸುತ್ತಮುತ್ತಲ ರೆಸಾರ್ಟ್, ಲಾಡ್ಜ್, ಛತ್ರಗಳು ಬಹುತೇಕ ಭರ್ತಿಯಾಗಿವೆ. ಗುರುವಾರ ರಾತ್ರಿಯೇ ಹೆಚ್ಚಿನ ನಾಯಕರು ಗುಂಡ್ಲುಪೇಟೆಗೆ ಆಗಮಿಸಿದ್ದು, ದಸರಾ ರಜೆ ಕಳೆಯಲು ಇಲ್ಲಿಗೆ ಆಗಮಿಸಿರುವ ಪ್ರವಾಸಿಗರು ಪರದಾಡುವಂತಾಗಿದೆ.
ಉಪ್ಪಿಟ್ಟು, ಕೇಸರಿಬಾತ್ ವ್ಯವಸ್ಥೆ: ಭಾರತ ಐಕ್ಯತಾ ಯಾತ್ರೆಗೆ ಬರುವ ಕಾರ್ಯಕರ್ತರಿಗೆ ಗುಂಡ್ಲುಪೇಟೆಯ ನಾಲ್ಕು ಭಾಗದಲ್ಲಿ ಸುಮಾರು 20 ಸಾವಿರ ಮಂದಿಗೆ ಬೆಳಗ್ಗಿನ ಉಪಾಹಾರವಾಗಿ ಉಪ್ಪಿಟ್ಟು, ಕೇಸರಿಬಾತ್ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರ ರಸ್ತೆಯ ಬಯಲು ರಂಗಮಂದಿರ, ಹಂಗಳ ರಸ್ತೆಯ ಕನಕ ಭವನ, ಮೈಸೂರು ರಸ್ತೆ ಅರ್ಜುನ್ ಲೇಔಟ್, ಕೇರಳ ರಸ್ತೆಯ ಬಸವಭವನದ ಬಳಿ ತಿಂಡಿ ವ್ಯವಸ್ಥೆ ಇರಲಿದೆ. ಇನ್ನು ಮೈಸೂರು ರಸ್ತೆಯ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನದ ಸಮೀಪ 30 ಸಾವಿರಕ್ಕೂ ಹೆಚ್ಚು ಮಂದಿಗೆ ಮಧ್ಯಾಹ್ನ ಅನ್ನ, ಸಾಂಬಾರು, ಪಲಾವ್, ಬಜ್ಜಿ ವ್ಯವಸ್ಥೆ ಮಾಡಲಾಗಿದೆ.
ರಾಹುಲ್ ಗಾಂಧಿ ಯಾತ್ರೆ ನಾಳೆ ಕರ್ನಾಟಕ ಪ್ರವೇಶ: ಗುಂಡ್ಲುಪೇಟೆಯಲ್ಲಿ 30 ಸಾವಿರ ಜನರು ಸೇರುವ ಸಾಧ್ಯತೆ
ಪಾದಯಾತ್ರಿಕರಿಗೆ ಬಾಳೆಹಣ್ಣು, ಐಸ್‌ಕ್ರೀಂ!: ಗುಂಡ್ಲುಪೇಟೆಯಿಂದ ಬೇಗೂರು ಮಾರ್ಗ ಮಧ್ಯೆ ಪಾದಯಾತ್ರೆಯಲ್ಲಿ ಸಾಗುವವರ ಸುಸ್ತು ಕಡಿಮೆ ಮಾಡಲು ಕ್ಷೇತ್ರದ ಕಾರ್ಯಕರ್ತರು ವಿಶೇಷ ಉಪಚಾರದ ವ್ಯವಸ್ಥೆ ಮಾಡಿದ್ದಾರೆ. ಐಸ್‌ಕ್ರೀಂ, ಬಾಳೆಹಣ್ಣು, ಮಜ್ಜಿಗೆ, ಬಜ್ಜಿ, ಕಾರಬೂಂದಿ, ಹುರಿದ ಕಡ್ಲೆಕಾಯಿ, ಕಬ್ಬಿನಹಾಲು, ಕಜ್ಜಾಯ, ಪಾನಕ, ಸೇಬು, ನೀರಿನ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.