ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ಖಂಡಿಸಿ, ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಮತಾಂಧರನ್ನು ಬಂಧಿಸುವಂತೆ ಒತ್ತಾಯಿಸಿದ ಅವರು, ಗೃಹ ಸಚಿವರ ಓಲೈಕೆ ನೀತಿಯನ್ನು ಟೀಕಿಸಿದರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಟೀಕಿಸಿದರು. ಸಚಿವ ರಾಜಣ್ಣ ಹೇಳಿಕೆಯನ್ನೂ ಖಂಡಿಸಿದರು.
ಮೈಸೂರು (ಫೆ.11): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದಿರುವ ಕಲ್ಲು ತೂರಾಟ ಪ್ರಕರಣವೇ ಸಾಕ್ಷಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂಧರು ರಾತ್ರೋರಾತ್ರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದಾರೆ. ಘಟನೆ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆಯೂ ದಾಳಿ ನಡೆದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ, ಘಟನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್‌ಗೆ ಹೊತ್ತಿ ಉರಿದ ಉದಯಗಿರಿ | Udayagiri Police Station Incident | Kannada News
ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಅನ್ನೋದೇ ಇಲ್ಲ:
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಾಂಸ್ಕೃತಿಕ ರಾಜದಾನಿ ಮೈಸೂರಿನಲ್ಲಿ ನಡೆದಿರುವ ಈ ಘಟನೆ ರಾಜ್ಯವೇ ತಲೆತಗ್ಗಿಸುವಂತಾಗಿದೆ. ರಾಜ್ಯ ಸರ್ಕಾರಕ್ಕೆ ಒಂದಿಷ್ಟು ನಾಚಿಕೆ ಮಾನ ಮಾರ್ಯದೆ ಇಲ್ಲದಾಗಿದೆ. ಗಲಭೆಗೆ ಕಾರಣರಾಗಿರುವ ತಪ್ಪಿತಸ್ಥ ಮತಾಂಧರನ್ನು ಆದಷ್ಟು ಬೇಗನೆ ಬಂಧಿಸಬೇಕು ಎಂದು ಆಗ್ರಹಿಸಿದರು.
ಗೃಹ ಇಲಾಖೆ ಬಗ್ಗೆ ಪರಮೇಶ್ವರ್‌ಗೆ ಆಸಕ್ತಿ ಇಲ್ಲ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿ ಕೋಮು ಗಲಭೆಗಳು ಹೆಚ್ಚಾಗಿವೆ. ಅಪರಾಧ ಕೃತ್ಯ, ಕೊಲೆಗಳಲ್ಲಿ, ಕೋಮುಸಂಘರ್ಷಗಳಲ್ಲಿ ಭಾಗಿಯಾಗಿರುವ ಮತಾಂಧರನ್ನ ವೋಟ್‌ಬ್ಯಾಂಕ್ ಕಾರಣಕ್ಕೆ ಬಂಧಿಸುವ ಧೈರ್ಯ ತೋರುತ್ತಿಲ್ಲ. ಪ್ರತಿಯೊಂದು ಘಟನೆ ನಡೆದಾಗಲು ಗೃಹ ಸಚಿವರ ಹೇಳಿಕೆಯಲ್ಲಿ ಓಲೈಕೆ ಪರಮಾವಧಿ ಕಾಣುತ್ತದೆ. ಗೃಹ ಇಲಾಖೆಯ ಈ ನಡೆಯಿಂದಲೇ ಮತಾಂಧರಿಗೆ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ. ಅದರ ಪರಿಣಾಮ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ. ನಾಳೆ ಇಂಥದ್ದೇ ಕೃತ್ಯ ಎಸಗಬಹುದು. ಗೃಹ ಇಲಾಖೆ ಬಗ್ಗೆ ಪರಮೇಶ್ವರ್‌ಗೆ ಆಸಕ್ತಿ ಇfಲಲ. ಅವರಿಗೆ ಆ ಖಾತೆ ಬೇಕಾಗಿಲ್ಲ. ಬಹುತೇಕ ಸಚಿವರು ಅದೇ ಮನಸ್ಥಿತಿಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗುವುದನ್ನ ಬಿಟ್ಟು ಆಡಳಿತದತ್ತ ಗಮನ ಹರಿಸಬೇಕು ಹರಿಹಾಯ್ದರು.
ಸಿದ್ದರಾಮಯ್ಯ ಅಧಿಕಾರಾವಧಿ ಡೆಡ್‌ಲೈನ್:
ಸಿದ್ದರಾಮಯ್ಯ ನವೆಂಬರ್‌ವರೆಗೆ ಮಾತ್ರ ಸಿಎಂ ಆಗಿರ್ತಾರೆ. ಅಲ್ಲಿವರೆಗೆ ಆದ್ರೂ ಒಳ್ಳೆಯ ಕೆಲಸ ಮಾಡಲಿ, ಒಳಿತು ಮಾಡು ಮನುಷ್ಯ ನೀನು ಇರುವುದು ಮೂರು ದಿವಸ ಎಂದು ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ಟಾಂಗ್ ನೀಡಿದರು. ನಾವು ಇಲ್ಲಿಗೆ (ಮೈಸೂರು) ಬಂದಿರುವುದು ಕಲ್ಲು ತೂರಾಟ ಮಾಡಿದವರನ್ನ ಬಂಧಿಸುವಂತೆ ಒತ್ತಾಯಿಸಲು. ಠಾಣೆ ಮೇಲೆ ಕಲ್ಲು ತೂರಿರುವುದು ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ. ಪೊಲೀಸ್ ಠಾಣೆಯ ಮೇಲೆ ಈ ರೀತಿ ಮಾಡಿರುವುದು ಅಕ್ಷಮ್ಯ. ಇದೆಕ್ಕೆಲ್ಲಾ ಕಾರಣ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯೇ ಕಾರಣ ಈಂದರು.
ಸಚಿವ ರಾಜಣ್ಣ ಹೇಳಿಕೆ ವಿರುದ್ಧ ಗರಂ:
ಇನ್ನು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣದಲ್ಲಿ, ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪಿಯನ್ನ ಮುಸ್ಲಿಂ ಬಾಹುಳ್ಯದ ಉದಯಗಿರಿ ಪೊಲೀಸ್ ಠಾಣೆಗೆ ಯಾಕೆ ಕರೆತಂದಿದ್ದು? ಕಾಮನ್‌ಸೆನ್ಸ್ ಇಲ್ವ ಎಂದು ಪೊಲೀಸರ ವಿರುದ್ಧವೇ ಕೆಟ್ಟದಾಗಿ ಮಾತನಾಡಿರುವ ಸಚಿವ ರಾಜಣ್ಣ ಹೇಳಿಕೆ ವಿರುದ್ಧ ಆರ್ ಅಶೋಕ್ ಗರಂ ಆದರು.
ಸಚಿವ ರಾಜಣ್ಣ ಪೊಲೀಸ್ ಇಲಾಖೆಯೇ ಸರಿ ಇಲ್ಲ ಎಂದು ಬೈದಿದ್ದಾರೆ. ಹಾಗಾದರೆ ಪೊಲೀಸ್ ಠಾಣೆ ಮುಚ್ಚಿಬಿಡಿ. ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆ ತರದೆ ಕಾಂಗ್ರೆಸ್ ಅವರ ಅಪ್ಪನ ಮನೆಗಳಿಗೆ ಕರೆದು ಕೊಂಡು ಹೋಗಬೇಕಿತ್ತಾ ಉದಯಗಿರಿ ಏನು ಪಾಕಿಸ್ತಾನದಲ್ಲಿ ಇದ್ಯಾ? ಉದಯಗಿರಿಗೇ ಬೇರೆ ಕಾನೂನು ಇದೆಯೇ ಪೊಲೀಸರಿಗೆ ಕೆಟ್ಟದಾಗಿ ಬೈಯುವ ನಿಮಗೆ ಕಾಮನ್ ಸೆನ್ಸ್ ಇದೆಯೇ ಅಂಬೇಡ್ಕರ್ ಅವರ ಕಾನೂನು ಉದಯಗಿರಿಗೆ ಅನ್ವಯ ಆಗಲ್ವಾ? ಸ್ವಲ್ಪ ಯಾಮಾರಿದ್ದರೆ ಪೊಲೀಸ್ ಠಾಣೆಯೇ ಉಡೀಸ್ ಮಾಡಿ ಬಿಡುತ್ತಿದ್ದರು. ಈ ದೇಶದಲ್ಲಿ ಏನೇ ನಡೆದರೂ ಆರೆಸ್ಸೆಸ್ ಕಾರಣನಾ? ಈ ಸರ್ಕಾರ ಬದುಕಿದ್ಯಾ? ಸತ್ತಿದೆಯಾ? ರಾಜಣ್ಣ ವಿರುದ್ಧ ಹರಿಹಾಯ್ದರು.