ಬೆಂಗಳೂರು ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ರಸ್ತೆ ಉದ್ಘಾಟನೆ ಮಾಡಿದ್ದಾರೆ. ಪ್ರಧಾನಿ ಮೋದಿ ಉದ್ಘಾಟನೆ ಹಾಗೂ ಸಮಾವೇಶ ಕಾರ್ಯಕ್ರಮದ ಕಾರಣ ದಶಪಥ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಬೆಂಗಳೂರು(ಮಾ.12): ಬೆಂಗಳೂರು ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಮೊದಲ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ಮೋದಿ ರಸ್ತೆ ಲೋಕಾರ್ಪಣೆ, ರೋಡ್ ಶೋ ಹಾಗೂ ಸಮಾವೇಶದ ಕಾರಣ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಮೋದಿ ಕಾರ್ಯಕ್ರಮ ಮುಗಿಸಿ ಧಾರವಾಡಕ್ಕೆ ತೆರಳಿದ ಬೆನ್ನಲ್ಲೇ ದಶಪಥ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಮೋದಿ ಆಗಮನದ ಹಿನ್ನಲೆಯಲ್ಲಿ ಇಂದು(ಮಾ.12) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ವರೆಗೆ ಸಂಚಾರ ನಿರ್ಬಂಧಕ್ಕೆ ಆದೇಶ ನೀಡಲಾಗಿತ್ತು. ಆದರೆ ಮೋದಿ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಬೆನ್ನಲ್ಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಕುರಿತು ವಾರ್ತಾ ಇಲಾಖೆ ಮಾಹಿತಿ ನೀಡಿದೆ.
ಮೈಸೂರಿನ ಒಡೆಯರು, ಸರ್‌ಎಂವಿ ಅವರನ್ನು ನೆನೆದ ಪ್ರಧಾನಿ ಮೋದಿ!
ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗಾಗಿ ಇಂದು ಬೆಳಗ್ಗೆ ಅಗತ್ಯಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಗ್ಗೆ 9 ಗಂಟೆಯವರೆಗೆ ಸವೀರ್‍ಸ್ ರಸ್ತೆಯಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ ಬೆಳಗ್ಗೆ 9.30 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಮೋದಿ ಕಾರ್ಯಕ್ರಮ ಮುಗಿಸಿ ಧಾರವಾಡಕ್ಕೆ ತೆರಳಿದ ಬೆನ್ನಲ್ಲೇ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ.
ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ಆಗಮಿಸಿದರು. ಬಳಿಕ ಐಬಿ ವೃತ್ತದಿಂದ ನಂದ ಚಿತ್ರಮಂಡಿರವರಗೆ ಪ್ರಧಾನಿ ಮೋದಿ 2 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ.ಮೋದಿ ರೋಡ್‌ಶೋಗಾಗಿ ರಸ್ತೆಯ ಎರಡು ಬದಿಗಳಲ್ಲಿ ಜನರು ನಿಂತು ಮೋದಿಯನ್ನು ಸ್ವಾಗತಿಸಿದರು. ಹೂಮಳೆ ಮೂಲಕ ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಿದರು.
ದಳಪತಿಗಳ ಕೋಟೆಯಲ್ಲಿ ಮೋದಿ ರೋಡ್ ಶೋ... ಪ್ರಧಾನಿ ಕೊಂಡಾಡಿದ ಸಿಎಂ
ಇಂದು ಬೆಳಗ್ಗೆಯಿಂದ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಿದ ಕಾರಣ ಪ್ರಯಾಣಿಕರಿಗೆ ಬದಲಿ ಮಾರ್ಗ ಮಾಡಲಾಗಿತ್ತು. ಮೈಸೂರು ನಗರದಿಂದ ಬೆಂಗಳೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳನ್ನು ಮೈಸೂರು ಬನ್ನೂರು ಕಿರುಗಾವಲು - ಮಳವಳ್ಳಿ -ಹಲಗೂರು - ಕನಕಪುರ - ಬೆಂಗಳೂರು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿತ್ತು. ಮೈಸೂರು ನಗರದಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸುವ ವಾಹನಗಳು ಮೈಸೂರು-ಶ್ರೀರಂಗಪಟ್ಟಣ- ಪಾಂಡವಪುರ-ನಾಗಮಂಗಲ-ಬೆಳ್ಳೂರು ಕ್ರಾಸ್ -ತುಮಕೂರು ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ವಾಹನಗಳನ್ನು ತುಮಕೂರು-ಬೆಳ್ಳೂರು ಕ್ರಾಸ್- ನಾಗಮಂಗಲ- ಪಾಂಡವಪುರ- ಶ್ರೀರಂಗಪಟ್ಟಣ- ಮೈಸೂರು ಮಾರ್ಗವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.