PSI Recruitment Scam: ಪಿಎಸ್‌ಐ ಹಗರಣ ಲೋಕಾಯುಕ್ತಕ್ಕೆ?, ಭ್ರಷ್ಟರಿಗೆ ನಡುಕ

By Kannadaprabha News  |  First Published Aug 16, 2022, 6:38 AM IST

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತ್ಯೇಕ ತನಿಖೆಗೆ ಪ್ರಸ್ತಾವನೆ ಸಲ್ಲಿಸಲು ಸಿಐಡಿ ನಿರ್ಧರಿಸಿದರೆ, ಆಗ ಎಸಿಬಿ ರದ್ದಾಗಿರುವ ಕಾರಣ ಲೋಕಾಯುಕ್ತಕ್ಕೇ ಪ್ರಕರಣ ವರ್ಗಾವಣೆ


ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.16):  ಭ್ರಷ್ಟರ ಬೇಟೆಗೆ ಲೋಕಾಯುಕ್ತ ಸಂಸ್ಥೆ ಮರುಜೀವ ಪಡೆದ ಬೆನ್ನಲ್ಲೇ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಎಡಿಜಿಪಿ ಸೇರಿ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಏಕೆಂದರೆ, ಆರೋಪಿತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಪ್ರತ್ಯೇಕ ಲೋಕಾಯುಕ್ತ ತನಿಖೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ತನಿಖೆ ನಡೆಸಿರುವ ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಬಂಧಿತ ಎಡಿಜಿಪಿ ಅಮೃತ್‌ ಪಾಲ್‌ ಸೇರಿದಂತೆ 20ಕ್ಕೂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ ಆ್ಯಕ್ಟ್) ಅಡಿ ಪ್ರಕರಣ ದಾಖಲಿಸುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ.

Tap to resize

Latest Videos

ಈ ಸಲಹೆ ಹಿನ್ನೆಲೆಯಲ್ಲಿ ಈಗ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತಾನೇ ತನಿಖೆ ನಡೆಸಬೇಕೆ ಅಥವಾ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕೆ ಎಂಬ ಬಗ್ಗೆ ಸಿಐಡಿ ಡಿಜಿಪಿ ಪಿ.ಎಸ್‌.ಸಂಧು ಹಾಗೂ ಎಡಿಜಿಪಿ ಉಮೇಶ್‌ ಕುಮಾರ್‌ ಚಿಂತನೆ ನಡೆಸಿದ್ದು, ಈ ಸಂಬಂಧ ತನಿಖಾಧಿಕಾರಿಗಳ ಜತೆ ಸಿಐಡಿ ಡಿಜಿಪಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎಸಿಬಿ ರದ್ದು ಮಾಡಿದ ಕೋರ್ಟ್‌, ಸಿದ್ಧರಾಮಯ್ಯ ಜನರ ಕ್ಷಮೆ ಕೇಳಲಿ ಎಂದ ರಾಜೀವ್‌ ಚಂದ್ರಶೇಖರ್‌!

ಒಂದು ವೇಳೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತ್ಯೇಕ ತನಿಖೆಗೆ ಪ್ರಸ್ತಾವನೆ ಸಲ್ಲಿಸಲು ಸಿಐಡಿ ನಿರ್ಧರಿಸಿದರೆ, ಆಗ ಎಸಿಬಿ ರದ್ದಾಗಿರುವ ಕಾರಣ ಲೋಕಾಯುಕ್ತಕ್ಕೇ ಪ್ರಕರಣ ವರ್ಗಾವಣೆಯಾಗಲಿದೆ. ತನ್ಮೂಲಕ ಆರು ವರ್ಷಗಳ ಬಳಿಕ ಭ್ರಷ್ಟರ ವಿರುದ್ಧ ತನಿಖೆಗೆ ಅವಕಾಶ ಪಡೆದಿರುವ ಲೋಕಾಯುಕ್ತಕ್ಕೆ ಪಿಎಸ್‌ಐ ಹಗರಣವೇ ಮೊದಲ ದೊಡ್ಡ ಪ್ರಕರಣವಾಗಲಿದೆ. ಹಾಗಾದಲ್ಲಿ ನೇಮಕಾತಿ ಅಕ್ರಮದಲ್ಲಿ ಸಿಕ್ಕಿಬಿದ್ದಿರುವ ಸರ್ಕಾರಿ ಅಧಿಕಾರಿಗಳಿಗೆ ಸಿಐಡಿ ಬಳಿಕ ಲೋಕಾಯುಕ್ತ ತನಿಖೆ ಕಂಟಕ ಎದುರಾಗಲಿದೆ.

ಲೋಕಾಯುಕ್ತ ತನಿಖೆ ಯಾಕೆ?:

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್‌ ಪಾಲ್‌, ಡಿವೈಎಸ್ಪಿ ಶಾಂತಕುಮಾರ್‌, ಡಿಐಜಿಪಿ ಪಿಎ ಶ್ರೀನಿವಾಸ್‌, ಎಎಚ್‌ಸಿ ಎಚ್‌.ಶ್ರೀಧರ್‌, ಪ್ರಥಮ ದರ್ಜೆ ಸಹಾಯಕ ಹರ್ಷ, ಮಧ್ಯವರ್ತಿಗಳಾದ ಆರ್‌ಎಸ್‌ಐ ಲೋಕೇಶಪ್ಪ, ಸಬ್‌ ಇನ್ಸ್‌ಪೆಕ್ಟರ್‌ಗಳಾದ ನವೀನ್‌ ಪ್ರಸಾದ್‌, ಹರೀಶ್‌, ಶರೀಫ್‌ ಕಳ್ಳಿಮನಿ, ಸುನೀಲ್‌, ಪೊಲೀಸ್‌ ಇಲಾಖೆಯ ಶಾಖಾಧೀಕ್ಷಕ ಆರ್‌.ಮಂಜುನಾಥ್‌, ಕೆಎಸ್‌ಆರ್‌ಪಿ ಆರ್‌ಪಿಐ ಎಸ್‌.ಮಧು ಹಾಗೂ ಕಲಬುರಗಿ ಡಿವೈಎಸ್ಪಿ ಮಲ್ಲಿಕಾರ್ಜುನ್‌ ಸಾಲಿ, ಕೆಎಸ್‌ಆರ್‌ಪಿ ಕಮಾಂಡೆಂಟ್‌ ವೈಜನಾಥ್‌ ರೇವೂರ, ಇನ್ಸ್‌ಪೆಕ್ಟರ್‌ ಆನಂದ್‌ ಮೇತ್ರೆ, ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಮೇಳಕುಂದಿ, ಪೊಲೀಸ್‌ ಕಾನ್‌ಸ್ಟೇಬಲ್‌ ರುದ್ರೇಗೌಡ, ಪುರಸಭೆ ಎಸ್‌ಡಿಎ ಜ್ಯೋತಿ ಪಾಟೀಲ್‌, ಪಿಸಿ ಐಯ್ಯಾಳಿ ದೇಸಾಯಿ, ಪೀರಪ್ಪ ಹಾಗೂ ಎಫ್‌ಡಿಎ ಸಿದ್ದುಪಾಟೀಲ್‌ ಸೇರಿದಂತೆ 20ಕ್ಕೂ ಅಧಿಕಾರಿಗಳು ಬಂಧಿತರಾಗಿದ್ದಾರೆ.

ಈ ಹಗರಣದಲ್ಲಿ ವಂಚನೆ (ಐಪಿಸಿ 420), ಅಪರಾಧ ಸಂಚು (120ಬಿ), ನಕಲು (ಐಪಿಸಿ 465) ಹಾಗೂ ನಕಲು ಸಂಚಿನಲ್ಲಿ ಪಾಲ್ಗೊಂಡಿರುವುದು (ಐಪಿಸಿ 468) ಸೇರಿದಂತೆ ಇತರೆ ಪರಿಚ್ಛೇದಗಳಡಿ ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿವೆ. ಇದರನ್ವಯವೇ ತನಿಖೆ ನಡೆಸಿದ ಸಿಐಡಿ, ಎರಡು ಕಡೆ ಮೊದಲ ಹಂತದ ದೋಷಾರೋಪ ಪಟ್ಟಿಸಲ್ಲಿಸಿದೆ. ಸರ್ಕಾರಿ ಅಧಿಕಾರಿಗಳು, ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿರುವುದು ತನಿಖೆಯಲ್ಲಿ ರುಜುವಾತಾಗಿದೆ. ಹಾಗಾಗಿ ಆರೋಪಿತ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ ಕಾಯ್ದೆ)ಯಡಿ ಕ್ರಮ ಜರುಗಿಸುವ ಬಗ್ಗೆ ಸಿಐಡಿ ಚಿಂತಿಸಿದೆ. ಈ ಸಂಬಂಧ ಕಾನೂನು ತಜ್ಞರಿಂದ ಸಿಐಡಿ ಸಲಹೆ ಪಡೆದಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ಫುಲ್ ಪವರ್, ಹೈಕೋರ್ಟ್ ಆದೇಶಕ್ಕೆ ಸಿದ್ದು ಪಂಚರ್!

ಪಿಸಿ ಕಾಯ್ದೆಯಡಿ ಸಿಐಡಿ, ಎಸಿಬಿ ಅಥವಾ ಲೋಕಾಯುಕ್ತ ಮಾತ್ರವಲ್ಲದೆ ಠಾಣಾ ಮಟ್ಟದಿಂದಲೂ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಆದರೆ ಪಿಎಸ್‌ಐ ನೇಮಕಾತಿ ಹಗರಣವು ದೊಡ್ಡ ಕೃತ್ಯವಾಗಿದ್ದು, ಇದರಲ್ಲಿ ಎಡಿಜಿಪಿ ಹಾಗೂ ಡಿವೈಎಸ್ಪಿ ಮಟ್ಟದ ಅಧಿಕಾರಿಗಳು ಬಂಧಿತರಾಗಿದ್ದಾರೆ. ಹಾಗಾಗಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಬಗ್ಗೆ ಸಹ ಚಿಂತನೆ ಇದೆ. ಅಲ್ಲದೆ ಈಗಿನ ಎಫ್‌ಐಆರ್‌ಗೆ ಪಿಸಿ ಸೆಕ್ಷನ್‌ ಅಡಕ ಮಾಡಿ ಲಂಚದ ಬಗ್ಗೆ ಮುಂದಿನ ಹಂತದ ದೋಷಾರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲೂಬಹುದು. ಈ ಬಗ್ಗೆ ಇನ್ನೆರೆಡು ದಿನಗಳಲ್ಲಿ ಅಂತಿಮ ನಿರ್ಧಾರ ಹೊರ ಬರಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಭ್ರಷ್ಟಾಚಾರ ಕೇಸ್‌ ದಾಖಲಿಸಿ ತನಿಖೆಗೆ ತಜ್ಞರಿಂದ ಸಲಹೆ

ಎಸ್‌ಐ ನೇಮಕಾತಿ ಹಗರಣದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಸಿಐಡಿಯಲ್ಲಿ ವಂಚನೆ, ಅಪರಾಧ ಸಂಚು, ನಕಲು ಮುಂತಾದ ಪ್ರಕರಣಗಳು ದಾಖಲಾಗಿವೆ. ಈಗ ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲೂ ಕೇಸ್‌ ದಾಖಲಿಸಲು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕೇಸ್‌ ದಾಖಲಿಸಿದರೆ ಅದನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ.
 

click me!