ಆರ್‌ಎಸ್‌ಎಸ್‌ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ: ಸಿಎಂ ಬೊಮ್ಮಾಯಿ

By Govindaraj S  |  First Published Aug 16, 2022, 4:15 AM IST

ಆರ್‌ಎಸ್‌ಎಸ್‌ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ. ಅದರ ತತ್ವ, ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 


ಬೆಂಗಳೂರು (ಆ.16): ಆರ್‌ಎಸ್‌ಎಸ್‌ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ. ಅದರ ತತ್ವ, ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ‘ಅಮೃತ ಭಾರತಿಗೆ ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರ್‌ಎಸ್‌ಎಸ್‌ ಬಗ್ಗೆ ನನಗೆ ಅಭಿಮಾನ ಇದೆ. ಸಂಘಟನೆಯ ತತ್ವ, ಸಿದ್ಧಾಂತಗಳನ್ನು ಗೌರವಿಸುತ್ತೇನೆ. ಆರ್‌ಎಸ್‌ಎಸ್‌ ಅಡಿಯಾಳು ಎಂದು ಯಾರೋ ನನ್ನ ಬಗ್ಗೆ ಹೇಳಿದ್ದಾರೆ. ಪೊಳ್ಳು ಮಾತಿನ ಸ್ವಾರ್ಥಿಗಳು ಬಾಯಿ ಮಾತಿನಲ್ಲಿ ದೇಶಭಕ್ತಿ ಹೊಂದಿರುವುದನ್ನು ಈ ದೇಶದ ಜನ ನೋಡಿದ್ದಾರೆ. ಇವತ್ತು ಯಾವುದಾದರೂ ದೇಶಭಕ್ತಿ ನಾಯಕರ ಪಕ್ಷ ಇದ್ದರೆ ಬಿಜೆಪಿ ಮಾತ್ರ. ನಿಜವಾದ ದೇಶಭಕ್ತ ಕಾರ್ಯಕರ್ತರ ಪಕ್ಷ. ದೇಶದಲ್ಲಿ 40 ಕೋಟಿ ಮನೆಯ ಮೇಲೆ ತಿರಂಗಾ ಧ್ವಜ ಹಾರುತ್ತಿದ್ದರೆ ಅದು ಬಿಜೆಪಿಯ ನಾಯಕತ್ವದ ಶಕ್ತಿ. ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಎಂದು ಬಣ್ಣಿಸಿದರು.

Tap to resize

Latest Videos

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

ಭಾರತಕ್ಕೆ ನಿಜವಾದ ಸಾತಂತ್ರ್ಯ ತಂದವರು ಅನಾಮಧೇಯ ಹೋರಾಟಗಾರರು. ಅವರ ಹೋರಾಟದ ನೇತೃತ್ವ ವಹಿಸಿದವರು ಬಾಲಗಂಗಾಧರ್‌ ತಿಲಕ್‌, ವೀರ ಸಾರ್ವಕರ್‌, ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್‌, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ಮಂದಿ ಇದ್ದರು. ಇವರೆಲ್ಲರ ನೇತೃತ್ವ ಭಾರತವನ್ನು ಒಂದು ಮಾಡಿದೆ. ಅಮೃತ ಮಹೋತ್ಸವದ ಬಳಿಕ ದೇಶದ ಶತಮಾನೋತ್ಸವ ಆಚರಣೆ ವೇಳೆಗೆ ರಾಷ್ಟ್ರವನ್ನು ಮತ್ತಷ್ಟುಬಲಿಷ್ಠವಾಗಿ ಕಟ್ಟಲು ಯುವಕರ ಕೊಡುಗೆ ಅಪಾರ. ಮುಂದಿನ 25 ವರ್ಷ ಭವ್ಯ ಭಾರತವನ್ನು ಕಟ್ಟುವುದು ಯುವ ಜನಾಂಗದ ಕೈಯಲ್ಲಿದೆ. ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ದೇಶವನ್ನು ನಿರ್ಮಿಸಲು ಬಿಜೆಪಿಯ ಮೇಲೆ ಗುರುತರ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಇತಿಹಾಸ ಬದಲಿಸುವ ಪ್ರಯತ್ನ: ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಇತಿಹಾಸ ಬರೆಯುವವರು ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಸತ್ಯವನ್ನು ಹೇಳುವ ಮತ್ತು ಇಂದಿನ ಜನಾಂಗ ಅದನ್ನು ಅರಿಯುವ ಕಾಲ ಬಂದಿದೆ. ಸ್ವಾತಂತ್ರ್ಯ ನಮಗೆ ಸಾವಿರಾರು ಯುವಕರು, ರೈತರು, ಕೂಲಿಕಾರ್ಮಿಕರು ತ್ಯಾಗ, ಬಲಿದಾನ ಮಾಡಿದ ಕಾರಣ ಬಂದಿತು. ಇತಿಹಾಸವನ್ನು ಬಲ್ಲವರು ಭವಿಷ್ಯವನ್ನು ಬರೆಯಲು ಸಾಧ್ಯ. ನಾರಾಯಣ್‌ ದೋಣಿ ಎಂಬ ಹುಬ್ಬಳ್ಳಿಯ 12 ವರ್ಷದ ಬಾಲಕ ವಂದೇ ಮಾತರಂ ಹೇಳಿದ್ದಕ್ಕೆ ಬ್ರಿಟಿಷರ ಗುಂಡಿಗೆ ಬಲಿಯಾದ. ಅಂಕೋಲದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹದಲ್ಲಿ ಗೋಲಿಬಾರ್‌, ಮರಣದಂಡನೆಯೂ ಆಯಿತು. ಅವರ ಹೆಸರುಗಳೇ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ ಯೋಧ ಎಂ.ಎಸ್‌.ದ್ವಾರಕಾನಾಥ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕಂದಾಯ ಸಚಿವ ಆರ್‌.ಅಶೋಕ್‌, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಅಂಗಾಂಗ ದಾನ ಮಾಡಿದ ಮೊದಲ ಸಿಎಂ ಬೊಮ್ಮಾಯಿ: ದೇಶಕ್ಕೆ ಮಾದರಿಯಾದ ನಡೆ

ನಿರೂಪಕಿ ಮೇಲೆ ಸಿಎಂ ಗರಂ: ಬಿಜೆಪಿ ವತಿಯಿಂದ ಆಯೋಜಿಸಲಾದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರೂಪಕಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು. ನಿರೂಪಕಿ ಜನರನ್ನು ಹುರಿದುಂಬಿಸುವ ಸಲುವಾಗಿ ಕಾರ್ಯಕ್ರಮದ ಮಧ್ಯೆ, ‘ಚಪ್ಪಾಳೆ ಹೊಡೆದರೆ ಆರೋಗ್ಯಕ್ಕೆ ಒಳ್ಳೆಯದು, ಹೃದಯಾಘಾತವೂ ಆಗಲ್ಲ, ಬಿಪಿ ಬರಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಬೊಮ್ಮಾಯಿ ಅವರು ತಮ್ಮ ಭಾಷಣ ಆರಂಭಿಸಲು ಬರುತ್ತಿದ್ದಂತೆ, ‘ಯಾರು ಎದ್ದು ಹೋಗಬಾರದು. ಇನ್ನೂ ಕಾರ್ಯಕ್ರಮ ಬಹಳ ಇದೆ. ಮನೋರಂಜನಾ ಕಾರ್ಯಕ್ರಮಗಳೆಲ್ಲವೂ ಇದೆ’ ಎಂದು ನಿರೂಪಕಿ ಹೇಳುತ್ತಿದ್ದಂತೆಯೇ ಕೋಪಗೊಂಡ ಮುಖ್ಯಮಂತ್ರಿಗಳು, ‘ನೀ ಈಗ ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ’ ಎಂದು ಸಿಟ್ಟಿನಿಂದ ಹೇಳಿದರು.

click me!