ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ

By Girish GoudarFirst Published Apr 29, 2022, 12:29 PM IST
Highlights

*  18 ದಿನಗಳಿಂದ ನಾಪತ್ತೆಯಾಗಿದ್ದ ದಿವ್ಯಾ
*  ಆ ಹದಿನೆಂಟು ದಿನಗಳಲ್ಲಿ ದಿವ್ಯಾ ಸುತ್ತಾಡಿದ್ದು ಎಲ್ಲೆಲ್ಲಿ?
*  ಕಾಟೇಗಾಂವ್ ಶ್ರೀರಕ್ಷಕ

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಲಬುರಗಿ

ಕಲಬುರಗಿ(ಏ.29):  ಪಿಎಸ್ಐ ನೇಮಕಾತಿ ಅಕ್ರಮ(PSI Recruitment Scam) ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಕೊನೆಗೂ ಅರೆಸ್ಟ್ ಆಗಿದ್ದಾರೆ. ದಿವ್ಯಾ 18 ದಿನಗಳಿಂದ ನಾಪತ್ತೆಯಾಗಿದ್ದರು.‌ ಹಾಗಾದರೆ ಆ 18 ದಿವ್ಯಾ ದಿನಗಳು ಹೇಗಿದ್ದವು? ಆ ಹದಿನೆಂಟು ದಿನಗಳಲ್ಲಿ ದಿವ್ಯಾ ಸುತ್ತಾಡಿದ್ದು ಎಲ್ಲೆಲ್ಲಿ ?ಎನ್ನುವದರ ಫುಲ್ ಡಿಟೇಲ್ಸ್ ಇಲ್ಲಿದೆ. 

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ(Divya Hagaragi)  ಕಳೆದ ರಾತ್ರಿ ಸಿಐಡಿ ಪೊಲೀಸರಿಗೆ(CID Police) ಸಿಕ್ಕು ಬಿದ್ದಿದ್ದಾಳೆ. ಮಹಾರಾಷ್ಟ್ರದ ಪುಣೆ ಹೊರವಲಯದ ಮನೆಯೊಂದರಲ್ಲಿ ಅಡಗಿದ್ದ ದಿವ್ಯಾ ಹಾಗರಗಿ ಹಾಗೂ ಆಕೆಯ ಜ್ಞಾನಜ್ಯೋತಿ ಶಾಲೆಯ ಮೇಲ್ವಿಚಾರಕರಾದ ಅರ್ಚನಾ ಮತ್ತು ಸುನಂದಾ ಅವರನ್ನು ಸಹ ಸಿಐಡಿ ಪೊಲೀಸರು ಬಂಧಿಸಿದ್ದಾರೆ(Arrest).  ಈ ದಿವ್ಯಾ ಹಾಗರಗಿ ಮತ್ತು ಟೀಮ್ ಕಳೆದ 18 ದಿನಗಳಿಂದ ಸಿಐಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದರು. ದಿವ್ಯ ತಲೆಮರೆಸಿಕೊಂಡಿದ್ದ ಹದಿನೆಂಟು ದಿನಗಳ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.

ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನ

ಏ. 10 ರಂದು ಮನೆಯಿಂದ ಪರಾರಿ

ದಿವ್ಯಾ ಹಾಗರಗಿ ಕಲಬುರಗಿಯ(Kalaburagi) ತನ್ನ ಮನೆಯಿಂದ ಪರಾರಿಯಾಗಿದ್ದು ಏ. 10 ರಂದು ಮಧ್ಯಾಹ್ನ ಕಲಬುರಗಿಯಿಂದ ಅಫಜಲಪೂರ ರಸ್ತೆ 7-8 ಕಿಲೋ ಮೀಟರ್‌ ಅವರ ವಾಹನ ಕ್ರಮಿಸಿದ ನಂತರ ದಿವ್ಯಾಳ ಮೊಬೈಲ್ ಸ್ವಿಚ್ಡ್‌ ಆಫ್ ಆಗಿತ್ತು. ಆ ನಂಬರ್ ಇದುವರೆಗೂ ಆನ್ ಆಗಿಲ್ಲ ಎನ್ನುವುದು ಗಮನಾರ್ಹ. 

ಸೊಲ್ಲಾಪೂರದಲ್ಲಿ ಎರಡು ದಿನ

ಏ. 10 ರಂದು ಕಲಬುರಗಿಯಿಂದ ಅಫಜಲಪುರ ಮಾರ್ಗವಾಗಿ ಸೊಲ್ಲಾಪೂರ(Solapur) ತಲುಪಿದ ದಿವ್ಯಾ ಹಾಗರಗಿ ಸೊಲ್ಲಾಪೂರದಲ್ಲಿ ಎರಡು ದಿನ ತಂಗಿದ್ದಳು. ಏ.11 ಮತ್ತು 12 ರಂದು ಎರಡು ದಿನ ಸೊಲ್ಲಾಪೂರದಲ್ಲಿ ಕಳೆದ ದಿವ್ಯಾ ಅಲ್ಲಿ ಸಿದ್ರಾಮೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಳು.

ಪೂನಾದಲ್ಲಿ ಐದು ದಿನ

ಆ ನಂತರ ಏ. 13 ರಂದು ಸೊಲ್ಲಾಪೂರದಿಂದ ಪೂನಾಗೆ(Pune) ತೆರಳಿತ್ತು ದಿವ್ಯಾ & ಟೀಂ. ಅಲ್ಲಿ ಐದು ದಿನಗಳ ಕಾಲ ಪೂನಾದಲ್ಲಿಯೇ ಬೀಡು ಬಿಟ್ಟಿದ್ದಳು. ಏ. 14, 15, 16,17,18 ರವರೆಗೆ ದಿವ್ಯಾ ಪೂನಾದಲ್ಲಿ ವಾಸ್ತವ್ಯ ಮಾಡಿದ್ದಳು.

ಗುಜರಾತನಲ್ಲಿ ಮೂರು ದಿನ

ಸಿಐಡಿ ತನ್ನ ಬೆನ್ನು ಬಿದ್ದಿರುವುದು ಖಚಿತವಾಗುತ್ತಿದ್ದಂತೆಯೇ ದಿವ್ಯಾ ಹಾಗರಗಿ ಗುಜರಾತ್‌ಗೆ(Gujarat) ಶಿಫ್ಟ್ ಆಗಿದ್ದಳು. ಗುಜರಾತ್‌ನಲ್ಲಿ ಮೂರು ದಿನಗಳ ಕಾಲ ತಂಗಿದ್ದ ದಿವ್ಯಾ ಹಾಗರಗಿ. ಏ. 19, 20, 21 ರಂದು ಮೂರು ದಿನ ಗುಜರಾತ್‌ನಲ್ಲಿ ತಂಗಿದ್ದ ದಿವ್ಯಾ ಮತ್ತು ಇನ್ನಿಬ್ಬರು ಪರೀಕ್ಷಾ ಮೇಲ್ವಿಚಾರಕರು. 

ಕೈಕೊಟ್ಟ ಕಾಳಿ ಮಾತೆ

ದಿವ್ಯಾ ಹಾಗರಗಿ ಮೂರು ದಿನ ಗುಜರಾತ್‌ನಲ್ಲಿ ತಂಗಿದ್ದಾಗ ಅಲ್ಲಿನ ಪ್ರಸಿದ್ಧ ದೇವಸ್ಥಾನಗಳಿಗೆ ನಿರಂತರವಾಗಿ ಹೋಗುತ್ತಿದ್ದಳು. ಗುಜರಾತನ ಕಾಳಿ ಮಾತಾ ದೇವಸ್ಥಾನಕ್ಕೆ ಮೂರು ದಿನವೂ ಹೋಗಿ ಬೇಡಿಕೊಂಡಿದ್ದಳು. ಆದ್ರೂ ಅಕ್ರಮದ ರುವಾರಿ ದಿವ್ಯಾಗೆ ಕಾಳಿ ಮಾತಾ ಕೈ ಹಿಡಿಯಲಿಲ್ಲ ಎನ್ನುವುದು ಗಮನಾರ್ಹ. 

ಮರಳಿ ಪೂನಾಕ್ಕೆ

ಏ. 21 ರಂದು ಗುಜರಾತ್‌ನಿಂದ ಹೊರಟು ಏ. 22 ರಂದು ಮರಳಿ ಪೂನಾ ಸೇರಿದ್ದಳು ದಿವ್ಯಾ ಹಾಗರಗಿ. ಅಲ್ಲದೇ ಏ. 22 ರಿಂದ ಏ.28 ರವರೆಗೆ ಪೂನಾ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಳು.
ಸಿಐಡಿ ದಾಳಿ

PSI recruitment Scam: ಮಾಸ್ಟರ್‌ ಮೈಂಡ್‌ ದಿವ್ಯಾ ಹಾಗರಗಿ ಬಂಧನವಾಗಿದ್ದು ಹೇಗೆ?

ಕಳೆದ ರಾತ್ರಿ ಸಿಐಡಿ ಪೂನಾ ಹೊರವಲಯದ ಮನೆ ಮೇಲೆ ದಾಳಿ ನಡೆಸಿದಾಗ ದಿವ್ಯಾ ಹಾಗರಗಿ ಮತ್ತು ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಮತ್ತು ಸುನಂದಾ ಅವರನ್ನೂ ಸಹ ಬಂಧಿಸಲಾಗಿದೆ. ಇದು ದಿವ್ಯಾ ನಾಪತ್ತೆಯಾಗಿದ್ದ ಅವಧಿಯ ಆ 18 ದಿವ್ಯ ದಿನಗಳ ಸಂಕ್ಷಿಪ್ತ ಮಾಹಿತಿ. 

3 ಲಕ್ಷ ನಗದು ಸಮೇತ ಪರಾರಿ

ದಿವ್ಯಾ ಹಾಗರಗಿ ಪರಾರಿಯಾಗುವ ಮುನ್ನ ಮೂರು ಲಕ್ಷ ರೂಪಾಯಿ ನಗದು ಹಣ ತೆಗೆದುಕೊಂಡು ಹೋಗಿದ್ದಳು. ಇತ್ತ ಗಂಡ ರಾಜೇಶ ಅರೆಸ್ಟ್ ಆದ್ರೂ ದೃತಿಗೆಡದ ದಿವ್ಯಾ ತನ್ನ ಪ್ರಭಾವ ಬಳಸಿ ಸಿಐಡಿ ಕೈಗೆ ಸಿಗದಂತೆ 18 ದಿನ ಕಳೆದಿದ್ದಳು.

ಕಾಟೇಗಾಂವ್ ಶ್ರೀರಕ್ಷಕ

ದಿವ್ಯಾ ಹಾಗರಗಿ ಪರಾರಿಯಾದ ದಿನದಿಂದ ಕೆಲವರು ಸಹಕಾರ ನೀಡಿದ್ದಾರೆ ಎನ್ನುವುದು ಸಿಐಡಿಗೆ ಗೊತ್ತಿದೆ. ಅದಾಗ್ಯೂ ಅತಿ ಹೆಚ್ಚಿನ ಶ್ರೀರಕ್ಷೆ ನೀಡಿದ್ದು ಮಹಾರಾಷ್ಟ್ರದ ಉದ್ಯಮಿ ಸುರೇಶ ಕಾಟೇಗಾಂವ್. ಈ ಉದ್ಯಮಿ ಕಾಟೇಗಾಂವ್ ಮೂಲಕ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಕ್ಕಲಕೋಟೆಯವನು. ಸೊಲ್ಲಾಪೂರದಲ್ಲಿ ಬಹಳಷ್ಟು ಉದ್ಯಮ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲ ಮಹಾರಾಷ್ಟ್ರದಿಂದ ಕಲಬುರಗಿವರೆಗೆ ಮರಳು ಮಾಫಿಯಾದ ಬಹುದೊಡ್ಡ ಕಿಂಗ್‌ಪಿನ್ ಈ ಸುರೇಶ ಕಾಟೆಗಾಂವ್. ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆ ನಡೆಸಲು ದಿವ್ಯಾ ಆತನಿಗೆ ಸಪೋರ್ಟ್‌ ಮಾಡುತ್ತಿದ್ದಳು ಎನ್ನಲಾಗಿದೆ. ಆ ಋಣ ತೀರಿಸಲು ಸುರೇಶ ದಿವ್ಯಾಗೆ ಶ್ರೀರಕ್ಷೆ ನೀಡಿದ್ದ. ಸದ್ಯ ಈ ಸುರೇಶ ಮತ್ತು ಆತನೊಂದಿಗೆ ಇದ್ದ ಕಾಳಿದಾಸ ಎನ್ನುವಾತನನ್ನೂ ಸಿಐಡಿ ಪೊಲೀಸರು ಹೆಡೆಮುರಿ ಕಟ್ಟಿ ತರುತ್ತಿದ್ದಾರೆ. 
 

click me!